ಜಿಂಬಾಬ್ವೆಯಲ್ಲಿ ನಡೆದ ತ್ರಿಕೋನ ಟಿ20 ಸರಣಿ ಗೆದ್ದು ದಾಖಲೆ ಬರದೆ ಪಾಕಿಸ್ತಾನ ತಂಡಕ್ಕೆ ದಢೀರ್ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿ ಬಿದ್ದಿರೋದು ತಂಡದ ಆತಂಕಕ್ಕೆ ಕಾರಣವಾಗಿದೆ. ಹಾಗಾದರೆ ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದು, ನಿಷೇಧದ ಭೀತಿ ಎದುರಿಸುತ್ತಿರುವ ಕ್ರಿಕೆಟರ್ ಯಾರು? ಇಲ್ಲಿದೆ ವಿವರ
ಲಾಹೋರ್(ಜು.10): ಪಾಕಿಸ್ತಾನ ಕ್ರಿಕೆಟಿಗ ಅಹಮ್ಮದ್ ಶೆಹಝಾದ್ ಡೋಪಿಂಗ್ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಹೀಗಾಗಿ ಇದೀಗ ಅಹಮ್ಮದ್ ಶೆಹಝಾದ್ ನಿಷೇಧದ ಭೀತಿ ಎದುರಿಸುತ್ತಿದ್ದಾರೆ.

ಪಾಕಿಸ್ತಾನದ ಸ್ವತಂತ್ರ ಪರಿಶೀಲನಾ ಸಮಿತಿ ನಡೆಸಿದ ಪರೀಕ್ಷೆಯಲ್ಲಿ ಅಹಮ್ಮದ್ ಶೆಹಝಾದ್ ಸಿಕ್ಕಿಬಿದ್ದಿದ್ದಾರೆ. ಶೆಹಝಾದ್ ವರದಿ ಧನಾತ್ಮಕವಾಗಿದ್ದು, ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಶೀಘ್ರದಲ್ಲೇ ಶಿಕ್ಷೆ ಪ್ರಕಟಿಸಲಿದೆ.
ಸ್ವತಂತ್ರ ಪರಿಶೀಲನಾ ಸಮಿತಿಯ ವರದಿ ಕೈಸೇರಿದೆ. ಇದರಲ್ಲಿ ಅಹಮ್ಮದ್ ಶೆಹಝಾದ್ ವರದಿ ಧನಾತ್ಮಕವಾಗಿದ್ದು, ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಸಲಿದ್ದೇವೆ ಎಂದು ಪಿಸಿಬಿ ಹೇಳಿದೆ.
ಕಳೆದ ಮೇ ತಿಂಗಳಿನಲ್ಲಿ ಪಾಕಿಸ್ತಾನ ಕಪ್ ದೇಶಿ ಟೂರ್ನಿ ವೇಳೆ ಪಾಕ್ ಕ್ರಿಕೆಟಿಗರ ಡೋಪ್ ಟೆಸ್ಟ್ ನಡೆಸಲಾಗಿತ್ತು. ಈ ಟೂರ್ನಿಯಲ್ಲಿ ಶೆಹಝಾದ್ 372 ರನ್ ಸಿಡಿಸೋ ಮೂಲಕ ಗರಿಷ್ಠ ರನ್ ಸಿಡಿಸಿದ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
