ಅಬುಧಾಬಿ(ಜ.11): ಎಎಫ್‌ಸಿ ಏಷ್ಯಾಕಪ್ ಫುಟ್ಬಾಲ್ ಟೂರ್ನಿಯಲ್ಲಿ ಭಾರತ ತಂಡದ ನಾಕೌಟ್ ಹಾದಿ ಮತ್ತಷ್ಟು ಕಠಿಣಗೊಂಡಿದೆ. ಗುರುವಾರ ನಡೆದ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಎದುರು ಪಂದ್ಯದಲ್ಲಿ ಭಾರತ ತಂಡ 2-0 ಗೋಲು ಗಳಿಂದ ಸೋಲನುಭವಿಸಿದೆ. ಹೀಗಾಗಿ ನಾಕೌಟ್ ಹಂತಕ್ಕೇರಬೇಕಾದರೆ ಜ.14ರಂದು ಬಹರೇನ್ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾಗಿದೆ. ಈ ಸೋಲಿನೊಂದಿಗೆ ಭಾರತ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕಿಳಿಯಿತು.

ಯುಎಇ ಪರ ಮಿಡ್‌ಫೀಲ್ಡರ್ ಖಲ್ಫಾನ್ ಮುಬಾರಕ್ ಮತ್ತು ಅಲಿ ಮಬ್‌ಖೌತ್ ತಲಾ ಒಂದು ಗೋಲು ದಾಖಲಿಸಿದರು. ಪಂದ್ಯದ ಆರಂಭದಿಂದಲೂ ಭಾರತ ಗೋಲು ಗಳಿಸಲು ಪರದಾಡಿತು. ಪಂದ್ಯದ 41ನೇ ನಿಮಿಷದಲ್ಲಿ ಗೋಲು ಗಳಿಸಿದ ಮುಬಾರಕ್ ಮೊದಲಾರ್ಧದ ಮುಕ್ತಾಯದ ವೇಳೆಗೆ ಯುಎಇಗೆ 1-0 ಗೋಲಿನ ಮುನ್ನಡೆ ಒದಗಿಸಿದರು. 

ದ್ವಿತೀಯಾರ್ಧದಲ್ಲಿ ತಿರುಗೇಟು ನೀಡುವ ವಿಶ್ವಾಸದಿಂದ ಕಣಕ್ಕಿಳಿದ ಭಾರತ, ಯುಎಇ ಆಟದ ಎದುರು ಮಂಕಾಯಿತು. 88ನೇ ನಿಮಿಷದಲ್ಲಿ ಅಲಿ ಮಬ್‌ಖೌತ್ 2ನೇ ಗೋಲು ಬಾರಿಸಿ, ತಂಡವನ್ನು ಗೆಲ್ಲಿಸಿದರು.