ಅಬುಧಾಬಿ(ಜ.10): ಎಎಫ್‌ಸಿ ಏಷ್ಯಾಕಪ್ ಫುಟ್ಬಾಲ್ ಟೂರ್ನಿಯಲ್ಲಿ ನಾಕೌಟ್ ಕನಸು ಕಾಣುತ್ತಿರುವ ಭಾರತ ಫುಟ್ಬಾಲ್ ತಂಡ ಟೂರ್ನಿಯಲ್ಲಿ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.

ಗುರುವಾರ ಇಲ್ಲಿ ನಡೆಯಲಿರುವ ಪಂದ್ಯದಲ್ಲಿ ಭಾರತ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡವನ್ನು ಎದುರಿಸಲಿದೆ. ಅಲ್ಲದೆ ಭಾರತ ನಾಕೌಟ್ ಹಂತಕ್ಕೇರಬೇಕಾದರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕು ಅಥವಾ ಕೊನೆ ಪಕ್ಷ ಪಂದ್ಯವನ್ನು ಡ್ರಾ ಮಾಡಿಕೊಂಡರೂ ನಾಕೌಟ್ ಹಂತಕ್ಕೇರುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಗೆದ್ದು ನಾಕೌಟ್ ಸ್ಥಾನ ಖಚಿತ ಪಡಿಸಿಕೊಂಡರೆ, 50 ವರ್ಷಗಳ ಬಳಿಕ ಮೊದಲ ಬಾರಿಗೆ ನಾಕೌಟ್ ಹಂತಕ್ಕೇರಿದ ಗೌರವಕ್ಕೆ ಭಾರತ ತಂಡ ಪಾತ್ರವಾಗಲಿದೆ.

ಭಾರತ ತಂಡ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಬಲಿಷ್ಠ ಥಾಯ್ಲೆಂಡ್ ತಂಡವನ್ನು 4-1 ಗೋಲುಗಳ ಅಂತರದಿಂದ ಮಣಿಸಿತ್ತು. ಈ ಗೆಲುವಿನೊಂದಿಗೆ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಭಾರತ ತಂಡ ಫಿಫಾ ವಿಶ್ವ ರ‍್ಯಾಂಕಿಂಗ್‌ನಲ್ಲಿ 97ನೇ ಸ್ಥಾನದಲ್ಲಿದ್ದರೆ, ಯುಎಇ 79ನೇ ರ‍್ಯಾಂಕಿಂಗ್‌ ಹೊಂದಿದೆ. ಭಾರತಕ್ಕಿಂತ ಯುಎಇ ತಂಡ ಉತ್ತಮ ರ‍್ಯಾಂಕಿಂಗ್‌ ಹೊಂದಿದ್ದು, ಸುನಿಲ್ ಚೆಟ್ರಿ ಪಡೆಗೆ ಪ್ರಬಲ ಪೈಪೋಟಿ ನೀಡಲಿದೆ. ಹೀಗಾಗಿ ಭಾರತ ತಂಡ, ಯಾವುದೇ ತಪ್ಪುಗಳನ್ನು ಮಾಡದೆ ಉತ್ತಮ ಪ್ರದರ್ಶನ ತೋರಬೇಕಿದೆ. ಆತಿಥೇಯ ಯುಎಇ ತಂಡ ಅತ್ಯುತ್ತಮವಾಗಿದ್ದು, ಪಂದ್ಯ ರೋಚಕವಾಗಿರಲಿದೆ. ಇತರ ತಂಡಗಳಂತೆ ಯುಎಇ ಕೂಡ ಒಂದು ಉತ್ತಮ ತಂಡವಾಗಿದೆ’ ಎಂದು ಭಾರತದ ಕೋಚ್ ಸ್ಟೀಫನ್ ಕಾನ್‌ಸ್ಟಂಟೈನ್ ಹೇಳಿದ್ದಾರೆ.