ಬೆಂಗಳೂರು[ಮೇ.28]: 11ನೇ ಆವೃತ್ತಿಯ ಐಪಿಎಲ್ ಯಶಸ್ವಿಯಾಗಿ ಮುಕ್ತಾಯವಾಗಿದೆ. 8 ತಂಡಗಳ ಕಾದಾಟದಲ್ಲಿ ಧೋನಿ ನೇತೃತ್ವದ ಸಿಎಸ್’ಕೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. 
ಶ್ರೇಯಸ್ ಗೋಪಾಲ್, ಮಯಾಂಕ್ ಮಾರ್ಕಂಡೆ ಮುಂತಾದ ಕೆಲ ಕ್ರಿಕೆಟಿಗರು ನಿರೀಕ್ಷೆಗೂ ಮೀರಿ ಪ್ರದರ್ಶನ ತೋರುವ ಮೂಲಕ ಪ್ರಾಂಚೈಸಿಗಳ ವಿಶ್ವಾಸಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಆವೃತ್ತಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಈ ಐವರು ಆಟಗಾರರು ನೀರಸ ಪ್ರದರ್ಶನ ತೋರುವ ಮೂಲಕ ನಿರಾಸೆ ಮೂಡಿಸಿದರು. ದುಬಾರಿ ಮೊತ್ತಕ್ಕೆ ಹರಾಜಿಗಿದ್ದ ಒತ್ತಡಕ್ಕೂ ಏನೋ ಈ ಐವರು ಆಟಗಾರರು ಐಪಿಎಲ್ ಪ್ರಾಂಚೈಸಿಗಳ ನಿರೀಕ್ಷೆಗಳನ್ನು ಹುಸಿಗೊಳಿಸಿದರು.
ಅಂತಹ ಐವರು ಆಟಗಾರರ ಪಟ್ಟಿ ನಿಮ್ಮ ಮುಂದೆ...
#5. ವಾಷಿಂಗ್ಟನ್ ಸುಂದರ್:


ಐಪಿಎಲ್ ಆರಂಭಕ್ಕೂ ಮುನ್ನ ನಡೆದ ನಿದಾಸ್ ಟ್ರೋಫಿಯಲ್ಲಿ ಸರಣಿಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದ ವಾಷಿಂಗ್ಟನ್ ಸುಂದರ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ರಾಂಚೈಸಿ 3.2 ಕೋಟಿ ನೀಡಿ ಖರೀದಿಸಿತ್ತು. ಆದರೆ ಆಡಿದ 7 ಪಂದ್ಯಗಳಲ್ಲಿ 9.60ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಇನ್ನು ವಿಕೆಟ್ ಕಬಳಿಸಿದ್ದು ಕೇವಲ 4. ಬ್ಯಾಟಿಂಗ್’ನಲ್ಲಿ ಗಳಿಸಿದ್ದು ಕೇವಲ 65ರನ್ ಮಾತ್ರ.
#4. ವೃದ್ದಿಮಾನ್ ಸಾಹ:


ಈ ಬಾರಿಯ ಐಪಿಎಲ್’ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್’ಮನ್’ಗಳಾದ ಕೆ.ಎಲ್ ರಾಹುಲ್, ರಿಶಭ್ ಪಂತ್, ದಿನೇಶ್ ಕಾರ್ತಿಕ್ ಗರಿಷ್ಠ ರನ್ ಬಾರಿಸಿದವರ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಭಾರತ ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ದಿಮಾನ್ ಸಾಹ ಈ ಬಾರಿ ನೀರಸ ಪ್ರದರ್ಶನ ತೋರಿದ್ದಾರೆ. 5 ಕೋಟಿ ರುಪಾಯಿಗೆ ಸನ್’ರೈಸರ್ಸ್ ಹೈದರಾಬಾದ್ ತಂಡ ಸೇರಿದ್ದ ಸಾಹ ಆಡಿದ 11 ಪಂದ್ಯಗಳಲ್ಲಿ ಕೇವಲ 15.25 ಸರಾಸರಿಯಲ್ಲಿ 122 ರನ್ ಬಾರಿಸಿದ್ದಾರೆ. ವಿಕೆಟ್ ಹಿಂದೆ 5 ಕ್ಯಾಚ್ ಹಾಗೂ 1 ಸ್ಟಂಪಿಂಗ್ಸ್ ಮಾಡಿದ್ದಾರೆ.
#3. ಮನೀಶ್ ಪಾಂಡೆ: 


ಸನ್’ರೈಸರ್ಸ್ ಹೈದರಾಬಾದ್ ಮನೀಶ್ ಪಾಂಡೆ ಮೇಲೆ ವಿಶ್ವಾಸವಿಟ್ಟು 11 ಕೋಟಿ ನೀಡಿ ಖರೀದಿಸಿತ್ತು. ಮೂರು ಅರ್ಧಶತಕ[54, 57* ಹಾಗೂ 62*] ಹೊರತು ಪಡಿಸಿದರೆ ಉಳಿದಂತೆ ಪಾಂಡೆಯದ್ದೂ ಪ್ಲಾಫ್ ಪ್ರದರ್ಶನ. ಆಡಿದ 15 ಪಂದ್ಯಗಳಲ್ಲಿ 25.81ರ ಸರಾಸರಿಯಲ್ಲಿ ಗಳಿಸಿದ್ದು 285 ರನ್ ಮಾತ್ರ. ಹೀಗಾಗಿಯೇ ಪಾಂಡೆ ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯದಲ್ಲಿ ಸ್ಥಾನಗಿಟ್ಟಿಸಲು ಸಾಧ್ಯವಾಗಲಿಲ್ಲ.
#2. ಜಯದೇವ್ ಉನಾದ್ಕತ್:


ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದು ಜಯದೇವ್ ಉನಾದ್ಕತ್. ಬರೋಬ್ಬರಿ 11.5 ಕೋಟಿ ಮೊತ್ತಕ್ಕೆ ರಾಜಸ್ಥಾನ ರಾಯಲ್ಸ್ ತಂಡ ಕೂಡಿಕೊಂಡಿದ್ದ ಉನಾದ್ಕತ್ ಆಡಿದ 15 ಪಂದ್ಯಗಳಲ್ಲಿ ಕೇವಲ 11 ವಿಕೆಟ್ ಕಬಳಿಸಿದ್ದರು. ರನ್’ವೇಗಕ್ಕೂ ಕಡಿವಾಣ ಹಾಕಲು ವಿಫಲವಾದ ಉನಾದ್ಕತ್ 9.65ರ ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು.
#1. ಅಕ್ಷರ್ ಪಟೇಲ್: 


ಈ ಬಾರಿಯ ಹರಾಜಿಗೂ ಮುನ್ನ ಸಾಕಷ್ಟು ಅಚ್ಚರಿ ಮೂಡಿಸಿದ್ದ ನಡೆಯೆಂದರೇ ಅದು ಕಿಂಗ್ಸ್ ಇಲೆವನ್ ಪಂಜಾಬ್ ಅಕ್ಷರ್ ಪಟೇಲ್ ಅವರನ್ನು ರೀಟೈನ್ ಮಾಡಿಕೊಂಡಿದ್ದು. ಕಳೆದ ಕೆಲ ವರ್ಷಗಳಲ್ಲಿ ಟೀಂ ಇಂಡಿಯಾ ಪರ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಪಟೇಲ್ ಅವರನ್ನು 12.5 ಕೋಟಿ ನೀಡಿ ರೀಟೈನ್ ಮಾಡಿಕೊಂಡಿತ್ತು. ಆದರೆ ಪಟೇಲ್ ಕಳಪೆ ಪ್ರದರ್ಶನ ತೋರುವ ಮೂಲಕ ಪ್ರಾಂಚೈಸಿಗಳಿಗೆ ನಿರಾಸೆ ಉಂಟು ಮಾಡಿದರು ಎಂದರೆ ತಪ್ಪಾಗಲಾರದು. ಆಡಿದ 9 ಪಂದ್ಯಗಳಲ್ಲಿ 80 ರನ್ ಗಳಿಸಿದರೆ, ಬೌಲಿಂಗ್’ನಲ್ಲಿ 218 ರನ್ ನೀಡಿ ಕಬಳಿಸಿದ್ದು ಮಾತ್ರ ಕೇವಲ 3 ವಿಕೆಟ್..!!