ಬೆಂಗಳೂರು[ಜೂ.11]: ವಿಶ್ವಕಪ್ ಟೂರ್ನಿಗೆ ದಿನಗಣನೆ ಆರಂಭವಾಗಿದ್ದು, ಭಾರತ ತಂಡ ಕೂಡಾ ಈಗಿನಿಂದಲೇ ರೆಡಿಯಾಗುತ್ತಿದೆ. 2019ರ ವಿಶ್ವಕಪ್’ಗೆ ಬಿಸಿಸಿಐ ಬಲಿಷ್ಠ ತಂಡವನ್ನು ಕಟ್ಟಲು ಮುಂದಾಗಿದ್ದು, ಆಟಗಾರರಿಗೆ ಯೋ ಯೋ ಎಂಬ ಫಿಟ್ನೆಸ್ ಪರೀಕ್ಷೆ ಪಾಸಾಗುವ ಸವಾಲು ನೀಡುತ್ತಾ ಬಂದಿದೆ.
ಇಂಡೋ-ಆಫ್ಘಾನ್ ಟೆಸ್ಟ್’ಗೆ ಇನ್ನೆರಡು ದಿನ ಬಾಕಿಯಿರುವಾಗಲೇ ಯೋ ಯೋ ಟೆಸ್ಟ್ ನಡೆದಿದ್ದು ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಈ ಪರೀಕ್ಷೆ ಪಾಸಾಗಲು ವಿಫಲರಾಗಿದ್ದಾರೆ. ಹೀಗಾಗಿ ಶಮಿ ಬದಲಿಗೆ ಡೆಲ್ಲಿ ವೇಗಿ ನವದೀಪ್ ಶೈನಿಗೆ ಅವಕಾಶ ಕಲ್ಪಿಸಲಾಗಿದೆ. ಯೋ ಯೋ ಪರೀಕ್ಷೆ ಫೇಲ್ ಆದ ಟೀಂ ಇಂಡಿಯಾದ ಟಾಪ್ 5 ಆಟಗಾರರ ಪಟ್ಟಿ ನಿಮ್ಮ ಮುಂದೆ...
1. ಮೊಹಮ್ಮದ್ ಶಮಿ: 


ಟೀಂ ಇಂಡಿಯಾದ ಪ್ರಮುಖ ವೇಗಿ ಮೊಹಮ್ಮದ್ ಶಮಿ ಆಫ್ಘಾನ್ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದರು. ಈ ಬಾರಿ ಐಪಿಎಲ್’ನಲ್ಲಿ ಡೆಲ್ಲಿ ಡೇರ್’ಡೆವಿಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಶಮಿ 3 ಪಂದ್ಯವನ್ನಾಡಿದ್ದರು. ಫಿಟ್ನೆಸ್ ಸಮಸ್ಯೆಯಿಂದಾಗಿ ಇದೀಗ ಶಮಿ ತಂಡದಿಂದ ಹೊರಬಿದ್ದಿದ್ದಾರೆ.
2. ಸಂಜು ಸ್ಯಾಮ್ಸನ್:


ಈ ಬಾರಿಯ ರಾಜಸ್ಥಾನ ತಂಡವನ್ನು ಪ್ರತಿನಿಧಿಸಿದ್ದ ಸಂಜು ಸ್ಯಾಮ್ಸನ್ ಆಡಿದ 15 ಪಂದ್ಯಗಳಲ್ಲಿ 441 ರನ್ ಸಿಡಿಸಿ ಗಮನ ಸೆಳೆದಿದ್ದರು. 23 ವರ್ಷದ ಸ್ಯಾಮ್ಸನ್ ಇಂಗ್ಲೆಂಡ್ ವಿರುದ್ಧದ ಸರಣಿಗೆ ಭಾರತ ’ಎ’ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಯೋ ಯೋ ಟೆಸ್ಟ್’ನಲ್ಲಿ 16.1 ಅಂಕ ಗಳಿಸದ ಹಿನ್ನಲೆಯಲ್ಲಿ ಸಂಜು ಸ್ಯಾಮ್ಸನ್ ಇಂಗ್ಲೆಂಡ್ ಪ್ರವಾಸದಿಂದ ವಂಚಿತರಾಗಿದ್ದಾರೆ.
3. ವಾಷಿಂಗ್ಟನ್ ಸುಂದರ್:


ಶ್ರೀಲಂಕಾದಲ್ಲಿ ನಡೆದಿದ್ದ ನಿದಾಸ್ ಟ್ರೋಫಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದು ಸಾಧನೆ ಮಾಡಿದ್ದ ತಮಿಳುನಾಡಿನ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಬೆಂಗಳೂರಿನ ಎನ್’ಸಿಎ ಮೈದಾನದಲ್ಲಿ ಯೋ ಯೋ ಟೆಸ್ಟ್ ಪಾಸಾಗಲು ವಿಫಲರಾಗಿದ್ದಾರೆ. ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಯೋ ಯೋ ಟೆಸ್ಟ್ ಪಾಸ್ ಮಾಡಿ ಆರ್’ಸಿಬಿ ತಂಡ ಕೂಡಿಕೊಂಡಿದ್ದ ಸುಂದರ್ ಮತ್ತೊಮ್ಮೆ ಅದೇ ಸಾಧನೆ ಮಾಡಲು ವಿಫಲರಾಗಿದ್ದಾರೆ.
4. ಸುರೇಶ್ ರೈನಾ: 


ಚೆನ್ನೈ ಸೂಪರ್’ಕಿಂಗ್ಸ್ ತಂಡದ ಸ್ಟಾರ್ ಕ್ರಿಕೆಟಿಗ ಸುರೇಶ್ ರೈನಾ ಮತ್ತೊಮ್ಮೆ ಯೋ ಯೋ ಟೆಸ್ಟ್ ಪರೀಕ್ಷೆ ಪಾಸ್ ಮಾಡಲು ವಿಫಲರಾಗಿದ್ದಾರೆ. ಸಾಕಷ್ಟು ಕಠಿಣ ಶ್ರಮದ ಬಳಿಕ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ಇದೀಗ ಮತ್ತೊಮ್ಮೆ ಯೋ ಯೋ ಟೆಸ್ಟ್ ಪರೀಕ್ಷೆ ಪಾಸ್ ಮಾಡಲು ವಿಫಲರಾಗಿದ್ದಾರೆ.
5. ಯುವರಾಜ್ ಸಿಂಗ್:


ಟೀಂ ಇಂಡಿಯಾದ ಹಿರಿಯ ಆಲ್ರೌಂಡರ್ ಯುವರಾಜ್ ಮತ್ತೆ ಯೋ ಯೋ ಟೆಸ್ಟ್ ಪಾಸಾಗಲು ವಿಫಲರಾಗಿದ್ದಾರೆ. ಕ್ಯಾನ್ಸರ್ ವಿರುದ್ಧ ಹೋರಾಡಿ ಟೀಂ ಇಂಡಿಯಾಗೆ ಕಮ್’ಬ್ಯಾಕ್ ಮಾಡಿದ್ದ ಯುವಿ ಈಗ ಮತ್ತೆ ಯೋ ಯೋ ಟೆಸ್ಟ್ ಪಾಸ್ ಮಾಡಲು ವಿಫಲರಾಗಿದ್ದು, ಬಹುತೇಕ ಯುವರಾಜ್ ಅಂತರಾಷ್ಟ್ರೀಯ ಕ್ರಿಕೆಟ್ ಬದುಕು ಅಂತ್ಯವಾಯಿತಾ ಎಂಬ ಅನುಮಾನ ದಟ್ಟವಾಗತೊಡಗಿದೆ.  

 ವಿಶ್ವಕಪ್ ಟೂರ್ನಿ ಕನಸು ಕಾಣುತ್ತಿರುವ ಸುರೇಶ್ ರೈನಾ ಹಾಗೂ ಯುವರಾಜ್ ಸಿಂಗ್ ಕ್ರಿಕೆಟ್ ಬದುಕು ಅಂತ್ಯವಾಯಿತಾ ಎನ್ನುವುದು ಕ್ರಿಕೆಟ್ ಪಂಡಿತರ ಲೆಕ್ಕಾಚಾರವಾಗಿದೆ.