ಮುಂಬೈನಲ್ಲಿಂದು ಪ್ರೊ ಕಬಡ್ಡಿ ಆಟಗಾರರ ಹರಾಜು

422 players to go under hammer in PKL 6 auction
Highlights

ಇಂದು, ನಾಳೆ ಮುಂಬೈನಲ್ಲಿ 6ನೇ ಆವೃತ್ತಿ ಹರಾಜು ನಡಯೆಲಿದೆ.  ಹರಾಜಿನಲ್ಲಿರುವ ಒಟ್ಟು 422 ಆಟಗಾರರಿಗಾಗಿ 12 ತಂಡಗಳು ಬಿಡ್ಡಿಂಗ್ ನಡೆಸಲಿದೆ. ಆಟಗಾರರ ಖರೀದಿಗೆ ಪ್ರತಿ ತಂಡಕ್ಕೆ ಗರಿಷ್ಠ ₹4 ಕೋಟಿ ಮಿತಿ ನಿಗಧಿಪಡಿಸಲಾಗಿದೆ.

ಮುಂಬೈ: ಬಹು ನಿರೀಕ್ಷಿತ 6ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಆಟಗಾರರ ಹರಾಜು ಪ್ರಕ್ರಿಯೆ ಬುಧವಾರ (ಮೇ 30) ಹಾಗೂ ಗುರುವಾರ (ಮೇ31) ರಂದು ರಂದು ಮುಂಬೈನಲ್ಲಿ ನಡೆಯಲಿದೆ. ಹರಾಜಿನಲ್ಲಿ ಒಟ್ಟು 422 ಆಟಗಾರರು ಭಾಗವಹಿಸಲಿದ್ದಾರೆ. ಇದರಲ್ಲಿ 58 ವಿದೇಶಿ ಆಟಗಾರರಿದ್ದರೆ, ಫ್ಯೂಚರ್ ಕಬಡ್ಡಿ ಹೀರೋಸ್ ಕಾರ್ಯಕ್ರಮ (ಎಫ್‌ಕೆಎಚ್) ಅಡಿಯಲ್ಲಿ ಬೆಳಕಿಗೆ ಬಂದ 87 ಕಿರಿಯ ಆಟಗಾರರಿಗೆ ಸ್ಥಾನ ನೀಡಲಾಗಿದೆ. 2 ದಿನಗಳ ಕಾಲ ನಡೆಯಲಿರುವ ಹರಾಜು ಪ್ರಕ್ರಿಯೆಯಲ್ಲಿ ಇರಾನ್, ಬಾಂಗ್ಲಾದೇಶ, ಜಪಾನ್, ಕೀನ್ಯಾ,ಕೊರಿಯಾ, ಮಲೇಷ್ಯಾ ಮತ್ತು ಶ್ರೀಲಂಕಾ ಸೇರಿದಂತೆ 14 ರಾಷ್ಟ್ರಗಳ ಆಟಗಾರರು ಪಾಲ್ಗೊಳ್ಳಲಿದ್ದಾರೆ. 12 ಫ್ರಾಂಚೈಸಿಗಳಲ್ಲಿ 9 ತಂಡಗಳು ಒಟ್ಟು 21 ಆಟಗಾರರನ್ನು ಉಳಿಸಿಕೊಂಡಿದೆ. ಉಳಿದ 3 ತಂಡಗಳಾದ ಯು ಮುಂಬಾ, ಯುಪಿ ಯೋಧಾ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್‌ ಯಾವುದೇ ಆಟಗಾರರನ್ನು ಉಳಿಸಿಕೊಂಡಿಲ್ಲ. ಹೀಗಾಗಿ ಈ 3 ತಂಡಗಳು ಹೊಸದಾಗಿ ತಂಡವನ್ನು ರಚಿಸಲಿವೆ. 6 ನೇ ಆವೃತ್ತಿಯ ಪ್ರೊ ಕಬಡ್ಡಿ ಟೂರ್ನಿ ಅಕ್ಟೋಬರ್ 19 ರಿಂದ ಆರಂಭವಾಗಲಿದೆ. 


‘ಫೈನಲ್ ಬಿಡ್ ಮ್ಯಾಚ್’ ಪರಿಚಯ: ಐಪಿಎಲ್‌ನ ರೈಟ್ ಟು ಮ್ಯಾಚ್ ಕಾರ್ಡ್ ರೀತಿ, ಈ ಬಾರಿ ಪ್ರೊ ಕಬಡ್ಡಿ ಹರಾಜಿ ನಲ್ಲಿ ‘ಫೈನಲ್ ಬಿಡ್ ಮ್ಯಾಚ್’ ಎನ್ನುವ ಆಯ್ಕೆ ಪರಿಚಯಿಸಲಾಗಿದೆ. 4 ಆಟಗಾರರನ್ನು ಉಳಿಸಿಕೊಂಡಿರುವ ಫ್ರಾಂಚೈಸಿಗೆ 1, 4ಕ್ಕಿಂತ ಕಡಿಮೆ ಆಟಗಾರರನ್ನು ಉಳಿಸಿಕೊಂಡಿರುವ ತಂಡಕ್ಕೆ ಗರಿಷ್ಠ 2 ‘ಫೈನಲ್ ಬಿಡ್ ಮ್ಯಾಚ್’ ಕಾರ್ಡ್ ಬಳಕೆಗೆ ಅವಕಾಶವಿದೆ. ಈ ಹಿಂದಿನ ಆವೃತ್ತಿಗಳಲ್ಲಿ ತಮ್ಮ ತಂಡದ ಪರ ಆಡಿದ್ದ ಆಟಗಾರರನ್ನು, ಬೇರೆ ತಂಡ ಖರೀದಿಸಿದ ಪಕ್ಷದಲ್ಲಿ ಆ ಆಟಗಾರರನ್ನು ತಂಡ ತಾನು ವಾಪಸ್ ಪಡೆದುಕೊಳ್ಳಬಹುದಾಗಿದೆ.


18-25 ಆಟಗಾರರ ತಂಡ: ಪ್ರತಿ ತಂಡಕ್ಕೆ ಆಟಗಾರರ ಖರೀದಿಗೆಂದು ಗರಿಷ್ಠ ₹4 ಕೋಟಿ ಮಿತಿ ಇರಿಸಲಾಗಿದೆ. ಒಂದು ತಂಡ ಸದ್ಯ ಉಳಿಸಿಕೊಂಡಿರುವ ಆಟಗಾರರನ್ನು ಸೇರಿ 18-25 ಆಟಗಾರರನ್ನು ಖರೀದಿಸಬಹುದಾಗಿದೆ. ಇದರಲ್ಲಿ 2 ರಿಂದ 4 ವಿದೇಶಿ ಆಟಗಾರರ ಖರೀದಿಗೆ ಅವಕಾಶವಿದೆ. ಪ್ರತಿ ತಂಡ 3 ಕಿರಿಯ ಆಟಗಾರರನ್ನು ಖರೀದಿಸಬಹುದಾಗಿದೆ.


4 ವಿಭಾಗಗಳಲ್ಲಿ ಆಟಗಾರರು: ಹರಾಜಿಗಿರುವ ಆಟಗಾರರನ್ನು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ‘ಎ’ ದರ್ಜೆ ಆಟಗಾರರಿಗೆ ₹20 ಲಕ್ಷ ಮೂಲ ಬೆಲೆ ನಿಗದಿಪಡಿಸಿದರೆ, ‘ಬಿ’ ದರ್ಜೆ ಆಟಗಾರರಿಗೆ ₹12  ಲಕ್ಷ, ‘ಸಿ’ ದರ್ಜೆ ಆಟಗಾರರಿಗೆ ₹ 8 ಲಕ್ಷ ಹಾಗೂ ‘ಡಿ’ ದರ್ಜೆ ಆಟಗಾರರಿಗೆ ₹5 ಲಕ್ಷ ನಿಗದಿ ಪಡಿಸಲಾಗಿದೆ. ‘ನ್ಯೂ ಯಂಗ್ ಪ್ಲೇಯರ್’ ವಿಭಾಗದಿಂದ ಆಯ್ಕೆಯಾಗುವ ಆಟಗಾರರಿಗೆ ₹6.6  ಲಕ್ಷ ನಿಗದಿ ಪಡಿಸಲಾಗಿದೆ.  


ಈ ವರ್ಷ ಕಬಡ್ಡಿಯ ತಾರಾ ಆಟಗಾರರಾರ ರಾಹುಲ್ ಚೌಧರಿ, ಅನೂಪ್ ಕುಮಾರ್, ಮಂಜೀತ್ ಚಿಲ್ಲಾರ್, ಸುಕೇಶ್ ಹೆಗ್ಡೆ, ರಿಶಾಂಕ್ ದೇವಾಡಿಗ ಸೇರಿ ಅನೇಕರು ಹರಾಜಿನಲ್ಲಿ ಪಾಲ್ಗೊಳ್ಳಲಿದ್ದಾರೆ. ತಾರಾ ಆಟಗಾರರು ಯಾವ ತಂಡದ ಪಾಲಾಗಲಿದ್ದಾರೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ. 

loader