ಬೆಂಗಳೂರು[ಆ.22]: ಕ್ರಿಕೆಟ್’ನಲ್ಲಿ ಸಾಕಷ್ಟು ಅನಿರೀಕ್ಷಿತ ಘಟನೆಗಳು, ದಾಖಲೆಗಳು ನಿರ್ಮಾಣವಾಗುತ್ತಲೇ ಇರುತ್ತವೆ. ಅಂತಹದ್ದೇ ಸನ್ನಿವೇಷಕ್ಕೆ ಭಾರತ-ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಸಾಕ್ಷಿಯಾಗಿದೆ. 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈಗಾಗಲೇ 2-0 ಹಿನ್ನಡೆಯಲ್ಲಿರುವ ಟೀಂ ಇಂಡಿಯಾ ಗೆಲ್ಲಲೇಬೇಕಾದ ಒತ್ತಡದಲ್ಲಿ ಕಣಕ್ಕಿಳಿದಿತ್ತು. ಸರ್ವತೋಮುಖ ಪ್ರದರ್ಶನ ತೋರಿದ ಟೀಂ ಇಂಡಿಯಾ ಗೆಲುವಿನ ಸನೀಹ ಬಂದಿದ್ದು ಇನ್ನೊಂದು ವಿಕೆಟ್ ಕಬಳಿಸಿದರೆ ವಿರಾಟ್ ಪಡೆ ಗೆಲುವಿನ ಕೇಕೆ ಹಾಕಲಿದೆ.

ಮೂರನೇ ಟೆಸ್ಟ್ ಪಂದ್ಯ 4 ಪ್ರಮುಖ ಕಾಕತಾಳಿಯವೆನಿಸುವ ಸನ್ನಿವೇಷಕ್ಕೆ ಸಾಕ್ಷಿಯಾಗಿದೆ, ಅವುಗಳಲ್ಲಿ ಪ್ರಮುಖ 4 ಸನ್ನಿವೇಷಗಳು ನಿಮ್ಮ ಮುಂದೆ..

1. ಟೀ ಇಂಡಿಯಾದ ಆರಂಭಿಕರು 2 ಇನ್ನಿಂಗ್ಸ್’ಗಳಲ್ಲಿ ಬಾರಿಸಿದ್ದು 60 ರನ್’ಗಳ ಜತೆಯಾಟ:


ಟೀಂ ಇಂಡಿಯಾ ಆಂಗ್ಲರಿಗೆ ತಿರುಗೇಟು ನೀಡಲು ಪ್ರಮುಖ ಕಾರಣ ಟೀಂ ಇಂಡಿಯಾದ ಆರಂಭಿಕ ಜೋಡಿಯ ಜತೆಯಾಟ. ಶಿಖರ್ ಧವನ್ ಹಾಗೂ ಕೆ.ಎಲ್ ರಾಹುಲ್ ಎರಡು ಇನ್ನಿಂಗ್ಸ್’ಗಳಲ್ಲೂ 60 ರನ್’ಗಳ ಜತೆಯಾಟವಾಡುವ ಮೂಲಕ ಅಚ್ಚರಿ ಮೂಡಿಸಿದರು. 

2. ಕಪಿಲ್ ದೇವ್- ಹಾರ್ದಿಕ್ ಪಾಂಡ್ಯ ನಡುವೆ ಸಾಮ್ಯತೆ:


ಈಗಾಗಲೇ ಹಲವು ದಿಗ್ಗಜ ಕ್ರಿಕೆಟಿಗರ ಜತೆ ಯುವ ಕ್ರಿಕೆಟಿಗರ ಹೋಲಿಕೆ ಮಾಡುವುದು ಸಾಮಾನ್ಯ ಎನಿಸುತ್ತಿದೆ. ಅಂತಹದ್ದೇ ಹೋಲಿಗೆ ಟೀಂ ಇಂಡಿಯಾದ ಸಾರ್ವಕಾಲಿಕ ಶ್ರೇಷ್ಠ ಆಲ್ರೌಂಡರ್ ಕಪಿಲ್ ದೇವ್ ಅವರೊಂದಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಹೋಲಿಸಲಾಗುತ್ತಿದೆ.
ಈ ಹೋಲಿಕೆಗೆ ಪುಷ್ಠಿ ಎಂಬಂತೆ ಹಾರ್ದಿಕ್ ಪಾಂಡ್ಯ ಹಾಗೂ ಕಪಿಲ್ ದೇವ್ ತಾವಾಡಿದ 10ನೇ ಟೆಸ್ಟ್ ಪಂದ್ಯದಲ್ಲಿ 500 ರನ್ ಪೂರೈಸಿ ಅಚ್ಚರಿ ಮೂಡಿಸಿದ್ದಾರೆ. ಈಗಲೇ ಕಪಿಲ್ ಅವರೊಂದಿಗೆ ಪಾಂಡ್ಯ ಹೋಲಿಕೆ ಬೇಡ ಎನ್ನುವುದು ಹಲವು ಕ್ರಿಕೆಟ್ ಪಂಡಿತರ ವಾದ.

3. ಮತ್ತೊಮ್ಮೆ ವಿರಾಟ್ ಬಾರಿಸಿದ್ರು ಭರ್ತಿ 200 ರನ್


2014ರ ಇಂಗ್ಲೆಂಡ್ ಪ್ರವಾಸದಲ್ಲಿ ನೀರಸ ಪ್ರದರ್ಶನ ತೋರಿದ್ದ ವಿರಾಟ್ ಕೊಹ್ಲಿ ಈ ಬಾರಿ ಇಂಗ್ಲೆಂಡ್ ನೆಲದಲ್ಲಿ ಭರ್ಜರಿ ರನ್ ಬೆಳೆ ತೆಗೆಯುತ್ತಿದ್ದಾರೆ. ಈ ಸರಣಿಯಲ್ಲಿ ಕೊಹ್ಲಿ ಎರಡನೇ ಬಾರಿಗೆ ಭರ್ತಿ 200 ರನ್ ದಾಖಲಿಸಿದ್ದಾರೆ. ಮೊದಲ ಟೆಸ್ಟ್’ನಲ್ಲಿ ಕೊಹ್ಲಿ 149 ಮತ್ತು 51 ರನ್ ಬಾರಿಸಿದ್ದರೆ, ಮೂರನೇ ಟೆಸ್ಟ್’ನಲ್ಲಿ 97 ಹಾಗೂ 103 ರನ್ ಸಿಡಿಸಿ 200 ರನ್ ಪೂರೈಸಿದ್ದಾರೆ.

4. ಸಚಿನ್-ವಿರಾಟ್ 58 ಅಂತರಾಷ್ಟ್ರೀಯ ಶತಕ ಪೂರೈಸಿದ್ದು ಇಂಗ್ಲೆಂಡ್ ವಿರುದ್ಧವೇ..!


ಇನ್ನು ಮಜಾ ಅಂದ್ರೆ, ಒಂದೊಂದೆ ಸಚಿನ್ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಅಚ್ಚರಿಯ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್’ನಲ್ಲಿ ಭರ್ಜರಿ ಶತಕ ಸಿಡಿಸಿದ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 58ನೇ ಶತಕ ಸಿಡಿಸಿ ಮಿಂಚಿದರು. ಕಾಕತಾಳೀಯವೆಂದರೆ ಸಚಿನ್ ಕೂಡಾ 58ನೇ ಅಂತರಾಷ್ಟ್ರೀಯ ಕ್ರಿಕೆಟ್ ಶತಕ ಸಿಡಿಸಿದ್ದು ಇಂಗ್ಲೆಂಡ್ ವಿರುದ್ದವೇ. ಇದಕ್ಕಿಂತ ವಿಚಿತ್ರವೆಂದರೆ, ಕೊಹ್ಲಿ ಹಾಗೂ ಸಚಿನ್ 58ನೇ ಅಂತರಾಷ್ಟ್ರೀಯ ಶತಕದಲ್ಲಿ ಬಾರಿಸಿದ್ದು 103 ರನ್..!