2006ರಲ್ಲಿ ಅಂಧರ ವಿಶ್ವಕಪ್ ಕ್ರಿಕೆಟ್'ನಲ್ಲಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದ ಶೇಖರ್ ನಾಯ್ಕ್, 2012ರಲ್ಲಿ ಇವರ ನಾಯಕತ್ವದಲ್ಲಿ ಚೊಚ್ಚಲ ಅಂಧರ ಟಿ20 ವಿಶ್ವಕಪ್ ಹಾಗೂ 2014ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬೆಂಗಳೂರು(ಅ.30): ಭಾರತ ಹಾಕಿ ತಂಡದ ಸ್ಟಾರ್ ಆಟಗಾರ ವಿ. ಆರ್. ರಘುನಾಥ್, ಭಾರತ ಅಂಧರ ರಾಷ್ಟ್ರೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್ ಹಾಗೂ ಮಹಿಳಾ ಹೈಜಂಪ್ ಪಟು ಸಹನಾ ಕುಮಾರಿ ಅವರು 2017ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಈ ಮೂವರು ಆಟಗಾರರ ಕ್ರೀಡಾ ಕ್ಷೇತ್ರದಲ್ಲಿನ ಗಣನೀಯ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಲು ತೀರ್ಮಾನಿಸಿದ್ದು, ನವೆಂಬರ್ 1ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಕಿರು ಪರಿಚಯ:
ವಿ.ಆರ್ ರಘುನಾಥ್:
ಕೊಡಗು ಮೂಲದವರಾದ ರಘುನಾಥ್ 2003ರ ಏಷ್ಯಾಕಪ್'ನಲ್ಲಿ ಭಾರತ ತಂಡವನ್ನು ಮೊದಲ ಬಾರಿಗೆ ಪ್ರತಿನಿಧಿಸಿದರು. ತಮ್ಮ ಅಪರೂಪದ ಡ್ರ್ಯಾಗ್ ಫ್ಲಿಕ್ ಮೂಲಕ ಖ್ಯಾತರಾಗಿರುವ ರಘುನಾಥ್, 2007ರ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಚಿನ್ನ ಗೆಲ್ಲಲು, ಹಾಗೆಯೇ 2014ರ ಗ್ಲಾಸ್ಗೋ ಕಾಮನ್'ವೆಲ್ತ್ ಗೇಮ್ಸ್, 2016ರ ಚಾಂಪಿಯನ್ಸ್ ಟ್ರೋಫಿಯಲ್ಲಿ ತಂಡ ಬೆಳ್ಳಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಶೇಖರ್ ನಾಯ್ಕ್:
ಅಂಧರ ಭಾರತ ತಂಡದ ಮಾಜಿ ನಾಯಕರಾಗಿರುವ ಶೇಖರ್ ನಾಯ್ಕ್ ಮೂಲತಃ ಶಿವಮೊಗ್ಗದವರು. 2002ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಅವರು 2010ರಲ್ಲಿ ಭಾರತ ಅಂಧರ ಕ್ರಿಕೆಟ್ ತಂಡದ ನಾಯಕರಾದರು. 2006ರಲ್ಲಿ ಅಂಧರ ವಿಶ್ವಕಪ್ ಕ್ರಿಕೆಟ್'ನಲ್ಲಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದ ಶೇಖರ್ ನಾಯ್ಕ್, 2012ರಲ್ಲಿ ಇವರ ನಾಯಕತ್ವದಲ್ಲಿ ಚೊಚ್ಚಲ ಅಂಧರ ಟಿ20 ವಿಶ್ವಕಪ್ ಹಾಗೂ 2014ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಶೇಖರ್ ನಾಯ್ಕ್ ಸಾಧನೆಯನ್ನು ಗಮನಿಸಿ ಕೇಂದ್ರ ಸರ್ಕಾರ 2017ನೇ ಸಾಲಿನಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
ಸಹನಾ ಕುಮಾರಿ:
ದಕ್ಷಿಣ ಕನ್ನಡ ಜಿಲ್ಲೆಯವರಾದ ಸಹನಾ ಕುಮಾರಿ ಹೈಜಂಪ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಎತ್ತರ ಜಿಗಿತದಲ್ಲಿ 1.92 ಮೀಟರ್ ಎತ್ತರ ಜಿಗಿದು ರಾಷ್ಟ್ರೀಯ ದಾಖಲೆ ನಿರ್ಮಿಸಿರುವ ಸಹನಾ, 2012ರ ಲಂಡನ್ ಓಲಿಂಪಿಕ್ಸ್'ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.
ಪ್ರಸ್ತುತ ಸಹನಾ ನೈಋತ್ಯ ರೈಲ್ವೇಯಲ್ಲಿ ಹಿರಿಯ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
