2019ರ ವಿಶ್ವಕಪ್ ಗೆಲ್ಲಲು ಟೀಂ ಇಂಡಿಯಾಗಿರೋ ಅಡೆ ತಡೆ ಏನು?

First Published 22, Jul 2018, 5:18 PM IST
3 reasons why India are not favorites to win the 2019 World Cup
Highlights

2019ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಗೆಲುವಿಗೆ 3 ಅಂಶಗಳು ತೊಡಕಾಗಿದೆ. ಟೀಂ ಇಂಡಿಯಾ ಮುಂದಿರೋ 3 ಸವಾಲುಗಳೇನು? ಸಮಸ್ಯೆಗಳಿಗೆ ಇರೋ ಪರಿಹಾರವೇನು? ಇಲ್ಲಿದೆ ವಿವರ

ಬೆಂಗಳೂರು(ಜು.22): ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಸದ್ಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಸೋಲಿನ ಬಳಿಕ ತಂಡದ ಹಲವು ವೀಕ್ನೆಸ್‌ಗಳು ಆತಂಕ ಹೆಚ್ಚಿಸಿದೆ.

2019ರ ವಿಶ್ವಕಪ್ ಟೂರ್ನಿ ಗೆಲ್ಲೋ ನೆಚ್ಚಿನ ತಂಡಗಳಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಆದರೆ ಕೆಲ ಅಂಶಗಳು ಟೀಂ ಇಂಡಿಯಾದ ವಿಶ್ವಕಪ್ ಗೆಲುವಿಗೆ ಅಡ್ಡಿಯಾಗೋ ಸಾಧ್ಯತೆಗಳಿದೆ. ಇನ್ನುಳಿದಿರೋ ದಿನಗಳಲ್ಲಿ ಕೊಹ್ಲಿ ಸೈನ್ಯ ಸಮಸ್ಯೆಗೆ ಪರಿಹಾರ ಹುಡುಕಬೇಕಿದೆ.

ವೇಗಿಗಳ ಬ್ಯಾಕ್- ಅಪ್ ಕೊರತೆ:
ಭುವನೇಶ್ವರ್ ಕುಮಾರ್ ಹಾಗೂ ಜಸ್‌ಪ್ರೀತ್ ಬುಮ್ರಾ ಟೀಂ ಇಂಡಿಯಾದ ಪ್ರಮುಖ ವೇಗಿಗಳಾಗಿ ಗುರುತಿಸಿಕೊಂಡಿದ್ದಾರೆ. ಇವರಿಬ್ಬರಿಗೆ ಬ್ಯಾಕ್-ಅಪ್ ಬೌಲರ್‌ಗಳ ಕೊರತೆ ಕಾಡುತ್ತಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ಬುಮ್ರಾ ಹಾಗೂ ಭುವಿ ಇಂಜುರಿಯಿಂದ ಉಮೇಶ್ ಯಾದವ್ ಹಾಗೂ ಸಿದ್ದಾರ್ಥ್ ಕೌಲ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಭುವಿ,ಬುಮ್ರಾ ಸ್ಥಾನ ತುಂಬಲು ಸಾಧ್ಯವಾಗಿಲ್ಲ.

ಮೊಹಮ್ಮದ್ ಶಮಿ ಏಕದಿನ ಪಂದ್ಯದಿಂದ ದೂರ ಉಳಿದು ವರ್ಷಗಳೇ ಉರುಳಿವೆ. ಶಾರ್ದೂಲ್ ಠಾಕೂರ್ ಹಾಗೂ ದೀಪಕ್ ಚಹಾರ್‌ಗೆ ಅನುಭವದ ಕೊರತೆ ಕಾಡುತ್ತಿದೆ. ಹೀಗಾಗಿ ಈಗಿನಿಂದಲೇ ಬೌಲಿಂಗ್ ಬೆಂಚ್ ಸ್ಟ್ರೆಂಥ್ ಹೆಚ್ಚಿಸಬೇಕಿದೆ.

ಮಧ್ಯಮ ಕ್ರಮಾಂಕದ ಸಮಸ್ಯೆ:
ಟೀಂ ಇಂಡಿಯಾ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟಾಗ ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್‌ಗಳು ಆಸರೆಯಾಗಬೇಕಿದೆ. ಆದರೆ ಸದ್ಯ ಟೀಂ ಇಂಡಿಯಾ ಮಧ್ಯಮ ಕ್ರಮಾಂಕ ಕಳಪೆಯಾಗಿದೆ. 

2011ರ ವಿಶ್ವಕಪ್ ಟೂರ್ನಿ ಗೆಲುವಿಗೆ ಮುಖ್ಯ ಕಾರಣ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ. ಯುವರಾಜ್ ಸಿಂಗ್, ವಿರಾಟ್ ಕೊಹ್ಲಿ, ಎಂ ಎಸ್ ಧೋನಿ ಒಳಗೊಂಡ ಮಧ್ಯಮ ಕ್ರಮಾಂಕ ಬಲಿಷ್ಠವಾಗಿತ್ತು. ಹೀಗಾಗಿ ಪ್ರಶಸ್ತಿ ಎತ್ತಿ ಹಿಡಿಯಿತು. 

ಸದ್ಯ ನಂ.4 ಕ್ರಮಾಂಕದಲ್ಲಿ ಯಾರೂ ಕೂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿಲ್ಲ. ಕಳೆದ 18 ತಿಂಗಳುಗಳಲ್ಲಿ ಅಜಿಂಕ್ಯ ರಹಾನೆ, ಮನೀಶ್ ಪಾಂಡೆ, ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಸುರೇಶ್ ರೈನಾ ಸೇರಿದಂತೆ ಹಲವು ಬ್ಯಾಟ್ಸ್‌ಮನ್‌ಗಳು 4ನೇ ಕ್ರಮಾಂಕದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ.

ಅಂತಿಮ ಹಂತದಲ್ಲಿ ಎಡವುತ್ತಿದೆ ತಂಡ:
2013ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಭಾರತ ಅಂತಿಮ ಘಟ್ಟದಲ್ಲಿ ಎಡವುತ್ತಿದೆ. 2014 ಹಾಗೂ 2016ರ ಟಿ20 ವಿಶ್ವಕಪ್‌, 2015ರ ವಿಶ್ವಕಪ್, 2017ರ ಚಾಂಪಿಯನ್ಸ್ ಟ್ರೋಫಿಯಂತ ಪ್ರಮುಖ ಸರಣಿಗಳಲ್ಲಿ ಭಾರತ ಸೆಮಿಫೈನಲ್ ಹಾಗೂ ಫೈನಲ್ ಹಂತದಲ್ಲಿ ಮುಗ್ಗರಿಸುತ್ತಿದೆ. 

ಈ 3 ಪ್ರಮುಖ ಅಂಶಗಳನ್ನ ಸರಿಪಡಿಸಿಕೊಂಡರೆ ಟೀಂ ಇಂಡಿಯಾ 2019ರ ವಿಶ್ವಕಪ್ ಗೆಲುವು ಸಾಧಿಸೋದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಇನ್ನುಳಿದಿರೋ ದಿನಗಳಲ್ಲಿ ವಿರಾಟ್ ಕೊಹ್ಲಿ ಸೈನ್ಯ ಬಲಿಷ್ಠ ತಂಡ ಕಟ್ಟಬೇಕಿದೆ.

loader