2020 ವರ್ಷಪೂರ್ತಿ ರೋಚಕತೆ ಗ್ಯಾರಂಟಿ!
2020 ಕ್ರೀಡಾಭಿಮಾನಿಗಳಿಗೆ ಭರಪೂರ ಮನರಂಜನೆ ನೀಡೋದು ಗ್ಯಾರಂಟಿ. ಮೂರು ಕ್ರಿಕೆಟ್ ವಿಶ್ವಕಪ್, ಒಲಿಂಪಿಕ್ಸ್, ಕಿರಿಯರ ಫುಟ್ಬಾಲ್ ವಿಶ್ವಕಪ್, ಟೆನಿಸ್ ಗ್ರ್ಯಾಂಡ್‌ಸ್ಲಾಂಗಳು ಕ್ರೀಡಾಪ್ರೇಮಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡುವುದು ಸುಳ್ಳಲ್ಲ. ಈ ವರ್ಷದ ಕ್ರೀಡಾ ಕ್ಯಾಲೆಂಡರ್ ಇಲ್ಲಿದೆ ನೋಡಿ...
ಬೆಂಗಳೂರು[ಜ.02] ಕ್ರೀಡಾಲೋಕದಲ್ಲಿ ಈ ವರ್ಷ ಪೂರ್ತಿ ಒಂದಿಲ್ಲೊಂದು ಮಹತ್ವದ ಸರಣಿ, ಕ್ರೀಡಾಕೂಟ ನಡೆಯಲಿವೆ. ಮೂರು ಕ್ರಿಕೆಟ್ ವಿಶ್ವಕಪ್, ಒಲಿಂಪಿಕ್ಸ್, ಕಿರಿಯರ ಫುಟ್ಬಾಲ್ ವಿಶ್ವಕಪ್, ಟೆನಿಸ್ ಗ್ರ್ಯಾಂಡ್‌ಸ್ಲಾಂಗಳು ಹೀಗೆ ಪ್ರತಿ ಕ್ರೀಡೆ ಸಹ ರೋಚಕತೆಯನ್ನು ಹೊತ್ತು ತರಲಿವೆ. ಕ್ರೀಡಾಭಿಮಾನಿಗಳಿಗೆ 2020, ಭರಪೂರ ಮನರಂಜನೆ ನೀಡೋದು ಖಚಿತ. ಈ ವರ್ಷ ಭಾರತ ಕ್ರಿಕೆಟ್ ತಂಡದ ಮುಂದಿರುವ ಸವಾಲುಗಳೇನು?, ಒಲಿಂಪಿಕ್ಸ್‌ಗೆ ಸಿದ್ಧತೆ ಹೇಗಿದೆ?, ಟೆನಿಸ್, ಫುಟ್ಬಾಲ್, ಬ್ಯಾಡ್ಮಿಂಟನ್‌ನಲ್ಲಿ ಭಾರತೀಯರಿಂದ ಏನು ನಿರೀಕ್ಷೆ ಮಾಲಾಗುತ್ತಿದೆ. ಇಲ್ಲಿದೆ 2020ರ ಮುನ್ನೋಟ.
ವಿಶ್ವಕಪ್ ಕನಸಿನಲ್ಲಿ ಕೊಹ್ಲಿ ಪಡೆ
ಭಾರತ ಕ್ರಿಕೆಟ್ ತಂಡಗಳಿಗೆ 2020ರಲ್ಲಿ ಭರ್ಜರಿ ಸವಾಲುಗಳು ಎದುರಾಗಲಿವೆ. ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಈ ವರ್ಷ ಐಸಿಸಿ ಟಿ20 ವಿಶ್ವಕಪ್ ಗೆಲ್ಲಲು ಪಣತೊಟ್ಟಿದೆ. ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೂ ಆಸ್ಪ್ರೇಲಿಯಾದಲ್ಲಿ ನಡೆಯಲಿದೆ. 2007ರಲ್ಲಿ ಟ್ರೋಫಿ ಜಯಿಸಿದ ಬಳಿಕ ಭಾರತಕ್ಕೆ ಮತ್ತೊಮ್ಮೆ ಟ್ರೋಫಿ ಎತ್ತಿಹಿಡಿಯುವ ಅವಕಾಶ ಸಿಕ್ಕಿಲ್ಲ. ಅವಕಾಶ ಈ ಬಾರಿ ಸಿಗಲಿದೆಯೇ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
ವಿಶ್ವಕಪ್‌ಗಾಗಿ ಭಾರತ ಸಿದ್ಧತೆ ಮುಂದುವರಿಸಲಿದೆ. ಇದೇ ತಿಂಗಳು 5ರಿಂದ ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಆನಂತರ 3 ಪಂದ್ಯಗಳ ಏಕದಿನ ಸರಣಿಗೆ ಆಸ್ಪ್ರೇಲಿಯಾ ತಂಡಕ್ಕೆ ಆತಿಥ್ಯ ನೀಡಲಿದೆ. ಇದಾದ ಬಳಿಕ ಬಹುನಿರೀಕ್ಷಿತ ನ್ಯೂಜಿಲೆಂಡ್ ಪ್ರವಾಸವನ್ನು ಕೈಗೊಳ್ಳಲಿದ್ದು, ಟಿ20, ಏಕದಿನ ಹಾಗೂ ಟೆಸ್ಟ್ ಸರಣಿಗಳನ್ನು ಆಡಲಿದೆ. ನ್ಯೂಜಿಲೆಂಡ್‌ನಿಂದ ವಾಪಸಾದ ಬಳಿಕ ಭಾರತೀಯ ಆಟಗಾರರು 13ನೇ ಆವೃತ್ತಿಯ ಐಪಿಎಲ್‌ನಲ್ಲಿ ನಿರತರಾಗಲಿದ್ದಾರೆ. ಐಪಿಎಲ್ ಮುಗಿಸಿ ಶ್ರೀಲಂಕಾ ಪ್ರವಾಸಕ್ಕೆ ಹೋಗಲಿರುವ ತಂಡ, ಏಷ್ಯಾಕಪ್‌ನಲ್ಲಿ ಟಿ20 ವಿಶ್ವಕಪ್‌ಗೆ ಅಂತಿಮ ಸುತ್ತಿನ ಸಿದ್ಧತೆ ನಡೆಸಲಿದೆ.
2019ರಲ್ಲಿ ವಿರಾಟ್ ಪಡೆ ಗೆದ್ದಿದ್ದೆಷ್ಟು? ಸೋತಿದ್ದೆಷ್ಟು? ಇಲ್ಲಿವೆ ಹೆಜ್ಜೆ ಗುರುತುಗಳು
ವಿಶ್ವಕಪ್‌ಗೂ ಮುನ್ನ ಆಸ್ಪ್ರೇಲಿಯಾದಲ್ಲಿ ಸರಣಿಯನ್ನು ಆಡುವ ಸಾಧ್ಯತೆ ಇದೆ. ವಿಶ್ವಕಪ್ ಮುಗಿದ ಬಳಿಕ ತಂಡ ಆಸ್ಪ್ರೇಲಿಯಾದಲ್ಲೇ ಉಳಿಯಲಿದ್ದು, ವರ್ಷಾಂತ್ಯದಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ವರ್ಷ ಪೂರ್ತಿ ಭಾರತ ತಂಡ ಬಿಡುವಿಲ್ಲದೆ ಕ್ರಿಕೆಟ್ ಆಡಲಿದೆ. ರನ್ ಮಷಿನ್ ವಿರಾಟ್ ಕೊಹ್ಲಿ ಈ ವರ್ಷ ಸಚಿನ್ ತೆಂಡುಲ್ಕರ್‌ರ 49 ಏಕದಿನ ಶತಕಗಳ ದಾಖಲೆ ಮುರಿಯುವ ನಿರೀಕ್ಷೆ ಇದೆ. ರೋಹಿತ್ ಶರ್ಮಾರಿಂದಲೂ ಕೆಲ ಮಹತ್ವದ ದಾಖಲೆಗಳನ್ನು ನಿರೀಕ್ಷೆ ಮಾಡಲಾಗಿದೆ.
ನಿವೃತ್ತಿ ಘೋಷಿಸುತ್ತಾರಾ ಧೋನಿ?
2019ರಲ್ಲೇ ಎಂ.ಎಸ್.ಧೋನಿ ನಿವೃತ್ತಿ ಘೋಷಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಧೋನಿಯ ಲೆಕ್ಕಾಚಾರವನ್ನು ಯಾರೂ ಅಂದಾಜಿಸಲು ಸಾಧ್ಯವಿಲ್ಲ. 2020ರಲ್ಲೂ ಅವರ ನಿವೃತ್ತಿ ಕುರಿತ ಕುತೂಹಲ ಮುಂದುವರಿಯಲಿದೆ. ಟಿ20 ವಿಶ್ವಕಪ್‌ನಲ್ಲಿ ಅವರು ಆಡಲಿದ್ದಾರೆಯೇ ಎನ್ನುವ ಪ್ರಶ್ನೆಗೂ ಸದ್ಯಕ್ಕೆ ಉತ್ತರವಿಲ್ಲ.
ಐಸಿಸಿ ಅಂಡರ್-19, ಮಹಿಳಾ ಟಿ20 ವಿಶ್ವಕಪ್
ಇದೇ ತಿಂಗಳು 17ರಿಂದ ಫೆ.9ರ ವರೆಗೂ ದಕ್ಷಿಣ ಆಫ್ರಿಕಾದಲ್ಲಿ ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್ ನಡೆಯಲಿದೆ. 4 ಬಾರಿ ಚಾಂಪಿಯನ್ ಭಾರತ ಮತ್ತೊಂದು ಟ್ರೋಫಿ ಗೆಲ್ಲಲು ತವಕಿಸುತ್ತಿದೆ. ಫೆ.21ರಿಂದ ಮಾ.8ರ ವರೆಗೂ ಆಸ್ಪ್ರೇಲಿಯಾದಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ನಡೆಯಲಿದೆ. ಭಾರತ ಚೊಚ್ಚಲ ಬಾರಿಗೆ ವಿಶ್ವ ಕಿರೀಟ ಮುಡಿಗೇರಿಸಿಕೊಳ್ಳುವ ಗುರಿ ಹೊಂದಿದೆ.
ಜಪಾನ್‌ನಲ್ಲಿ ಒಲಿಂಪಿಕ್ಸ್ ಕಲರವ
2020 ಒಲಿಂಪಿಕ್ಸ್ ವರ್ಷ ಎನ್ನುವುದು ವಿಶೇಷ. 32ನೇ ಒಲಿಂಪಿಕ್ ಕ್ರೀಡಾಕೂಟಕ್ಕೆ ಜಪಾನ್‌ನ ಟೋಕಿಯೋ ಆತಿಥ್ಯ ವಹಿಸಲಿದೆ. ಜು.24ರಿಂದ ಆ.9ರ ವರೆಗೂ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡಾಕೂಟ ನಡೆಯಲಿದೆ. ಒಲಿಂಪಿಕ್ಸ್ ಆಯೋಜನೆಗೆ ಬರೋಬ್ಬರಿ 90000 ಕೋಟಿ ರು. ವೆಚ್ಚವಾಗುತ್ತಿದೆ. 206 ರಾಷ್ಟ್ರಗಳು ಸ್ಪರ್ಧಿಸಲಿದ್ದು, ಈ ಬಾರಿಯೂ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಚೀನಾ ಹಾಗೂ ಅಮೆರಿಕ ನಡುವೆ ಪೈಪೋಟಿ ಏರ್ಪಡಲಿದೆ. 33 ಕ್ರೀಡೆಗಳ 339 ಸ್ಪರ್ಧೆಗಳು ನಡೆಯಲಿವೆ. 2012ರಲ್ಲಿ 6 ಪದಕ ಗೆದ್ದಿದ್ದು ಭಾರತದ ಈ ವರೆಗಿನ ಶ್ರೇಷ್ಠ ಸಾಧನೆ. 2016ರಲ್ಲಿ ಕೇವಲ 2 ಪದಕಗಳಿಗೆ ತೃಪ್ತಿಪಟ್ಟಿತ್ತು. ಈ ಒಲಿಂಪಿಕ್ಸ್‌ನಲ್ಲಿ ದಾಖಲೆಯ ಪದಕಗಳನ್ನು ಗೆಲ್ಲುವುದು ಭಾರತದ ಗುರಿಯಾಗಿದೆ.
ನಡಾಲ್ vs ಫೆಡರರ್!
2020ರ ಗ್ರ್ಯಾಂಡ್‌ಸ್ಲಾಂ ಟೂರ್ನಿಗಳ ಮೇಲೆ ಎಲ್ಲರ ಕಣ್ಣಿದೆ. 20 ಪ್ರಶಸ್ತಿಗಳೊಂದಿಗೆ ಅತಿಹೆಚ್ಚು ಗ್ರ್ಯಾಂಡ್‌ಸ್ಲಾಂಗಳನ್ನು ಗೆದ್ದ ಟೆನಿಸಿಗರ ಪಟ್ಟಿಯಲ್ಲಿ ಸ್ವಿಜರ್‌ಲೆಂಡ್‌ನ ರೋಜರ್ ಫೆಡರರ್ ಮೊದಲ ಸ್ಥಾನದಲ್ಲಿದ್ದಾರೆ. ಸ್ಪೇನ್‌ನ ರಾಫೆಲ್ ನಡಾಲ್ ತುಂಬ ದೂರದಲ್ಲೇನಿಲ್ಲ. ನಡಾಲ್ 19 ಗ್ರ್ಯಾಂಡ್‌ಸ್ಲಾಂ ಟ್ರೋಫಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಇಬ್ಬರ ನಡುವೆ ಗ್ರ್ಯಾಂಡ್‌ಸ್ಲಾಂಗಳಿಗಾಗಿ ಪೈಪೋಟಿ ನಡೆಯಲಿದೆ. 16 ಪ್ರಶಸ್ತಿಗಳನ್ನು ಗೆದ್ದಿರುವ ಸರ್ಬಿಯಾದ ನೋವಾಕ್ ಜೋಕೋವಿಚ್ ಸಹ ರೇಸ್‌ನಲ್ಲಿದ್ದಾರೆ.
ಗುಡ್ ಬೈ 2019: ಒನ್‌ಡೇ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಟಾಪ್ 5 ಕ್ರಿಕೆಟಿಗರಿವರು
ಇದರ ಜತೆ ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್ ಈ ವರ್ಷ ವೃತ್ತಿಬದುಕಿಗೆ ವಿದಾಯ ಹೇಳಲಿದ್ದಾರೆ. ಸಾನಿಯಾ ಮಿರ್ಜಾ ಸ್ಪರ್ಧಾತ್ಮಕ ಟೆನಿಸ್‌ಗೆ ವಾಪಸಾಗಲಿದ್ದಾರೆ.
ಹೇಗಿರಲಿದೆ ಭಾರತದ ಆಟ?
2017ರಲ್ಲಿ ಫಿಫಾ ಅಂಡರ್-17 ಪುರುಷರ ಫುಟ್ಬಾಲ್ ವಿಶ್ವಕಪ್‌ಗೆ ಆತಿಥ್ಯ ನೀಡಿದ್ದ ಭಾರತ, ಈ ವರ್ಷ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್‌ಗೆ ವೇದಿಕೆಯಾಗಲಿದೆ. ನ.2ರಿಂದ 21ರ ವರೆಗೂ ಪಂದ್ಯಾವಳಿ 4 ನಗರಗಳಲ್ಲಿ ನಡೆಯಲಿದೆ. ಭಾರತ ತಂಡ ಸಹ ಚೊಚ್ಚಲ ಬಾರಿಗೆ ಟೂರ್ನಿಯಲ್ಲಿ ಆಡಲಿದೆ. ಉಳಿದಂತೆ ಐಎಸ್‌ಎಲ್‌ನಲ್ಲಿ ಬೆಂಗಳೂರು ಎಫ್‌ಸಿ ಸತತ 2ನೇ ಬಾರಿಗೆ ಟ್ರೋಫಿ ಎತ್ತಿಹಿಡಿಯಲು ಹೋರಾಡಲಿದೆ.
2019ರಲ್ಲಿ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ ಆಗಿದ್ದ ಪಿ.ವಿ.ಸಿಂಧು, ಪ್ರಶಸ್ತಿ ಉಳಿಸಿಕೊಳ್ಳಲು ಹೋರಾಡಲಿದ್ದಾರೆ. ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್ ಪ್ರಶಸ್ತಿ ಬರ ನೀಗಿಸಿಕೊಳ್ಳಲು ಹೋರಾಡಲಿದ್ದಾರೆ. ಪ್ರೊ ಕಬಡ್ಡಿ ಲೀಗ್‌ನಲ್ಲಿ ಬೆಂಗಳೂರು ಬುಲ್ಸ್ ಪ್ರದರ್ಶನ ಹೇಗಿರಲಿದೆ?, ಎಫ್‌ಐಎಚ್ ಪ್ರೊ ಲೀಗ್ ಹಾಕಿಯಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲುತ್ತಾ ಎನ್ನುವ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ.