ಸಾವಿನ ನಂತರ ಉಳಿಯುವ ವಸ್ತುಗಳು, ನೆನಪುಗಳು ಮತ್ತು ಮಮಕಾರದ ನಡುವಿನ ಸಂಬಂಧವೇನು? ಶಾಂತಾಮಣಿ ಮತ್ತು ಅಪರ್ಣೆಯ ಬದುಕಿನ ಘಟನೆಗಳ ಮೂಲಕ ಬಿಟ್ಟುಕೊಡುವುದರ ಮಹತ್ವ ತೆರೆದಿಡುವ ಭಾವನಾತ್ಮಕ ಲೇಖನ.

ಹೇ ಅಪರ್ಣೆ ಕೃತಿಯ ಆಯ್ದಭಾಗ

ಇಳಿವಯಸ್ಸಾದರೂ ಇದ್ದಕ್ಕಿದ್ದಂತೆನ್ನುವ ಹಾಗೆ ಮೂರು ವರ್ಷಗಳ ಹಿಂದೆ ಇಲ್ಲವಾದ ನನ್ನಮ್ಮ ಶಾಂತಾಮಣಿ ತರುವಾಯಕ್ಕೆಂದು ಹೆಚ್ಚೇನೂ ಮಿಗಿಸಲಿಲ್ಲ. ಒಂದಷ್ಟು ಹತ್ತಿಯ ಎರಡು ರೇಶಿಮೆಯ ಸೀರೆಗಳ ಹೊರತಾಗಿ ಅವಳು ತನ್ನ ಕಪಾಟಿನಲ್ಲೇನೂ ಬಿಟ್ಟು ಹೊರಡಲಿಲ್ಲ. ಸಾವಿಗೆ ಮುನ್ನದ ಐದಾರು ವರ್ಷಗಳಿಂದ ಮೈಯಲ್ಲೇನೂ ಬಂಗಾರ ತೊಡಲಿಲ್ಲ. ಸರ ಬಳೆ ಓಲೆಗಳನ್ನಿರಲಿ, ಬುದ್ಧಿ ಬಂದಾಗಿನಿಂದಲಿಟ್ಟಿದ್ದ ಮೂಗುತಿಯನ್ನೂ ಕಳಚಿ- ಶಿಶಿರಕ್ಕೀಡಾದ ಮರಗಳಂತೆ ನಿರಾಭರಣವಿದ್ದುದೇ ಅವಳ ಪಾಲಿನ ಶೋಭೆ. ಹೀಗಾಗಿ, ಅವಳಿಲ್ಲದ ಸಂದರ್ಭವು ಯಾರಿಗೂ ಯಾವ ಪರಿಯಲ್ಲೂ ತೊಡಕಾಗಲಿಲ್ಲ.

ಯಾರಲ್ಲೂ ಇರುಸುಮುರುಸು ಹುಟ್ಟಿಸಲಿಲ್ಲ. ಬಟವಾಡೆಗೆ ತಕ್ಕ ಆಸ್ತಿಪಾಸ್ತಿಯೇ ಇಲ್ಲದ ಮೇಲೆ ಉತ್ತರೋತ್ತರದ ಕಿತ್ತಾಟಕ್ಕೆ ಕಾರಣವುಂಟೆಲ್ಲಿ? ನಾನಿರಲಿ ನನ್ನ ಅಕ್ಕತಂಗಿಯರೂ ಈ ಕುರಿತು ತಲೆಕೆಡಿಸಿಕೊಳ್ಳಲಿಲ್ಲ. ಇನ್ನು ನಮ್ಮೀ ಶಾಂತಾಮಣಿಯೋ, ಹತ್ತಾ ನಿರ್ಲಿಪ್ತಿಯನ್ನೇ ಮೈವೆತ್ತಿಕೊಂಡುಂಟಾದ ಹೆಣ್ಣು. ಒನ್ನಮೂನೆ ನಿರ್ಮಮ ನಿರ್ಮೋಹವನ್ನೇ ಸದಾ ಉಟ್ಟುತೊಟ್ಟಾಕೆ. ಎಂತಲೇ ಹಂಚಬೇಕಾದ್ದನ್ನೆಲ್ಲ ತಾನೇ ತಾನಾಗಿ ತಾನಿರುವಾಗಲೇ ಹಂಚಿ ನಿರುಮ್ಮಳವಾಗಿದ್ದಳು.

ಎಷ್ಟರ ಮಟ್ಟಿಗೆಂದರೆ, ಈ ಮಹಾತಾಯಿ, ತನ್ನ ಗಂಡರಾಯನ ಕೆಲಸದ ಮಾಲೀಕತ್ವದಿಂದ ಬರುತ್ತಿದ್ದ ಪೆನ್ಷನನ್ನೂ ಸಹ ಅವರಿವರಿಗೆ ಕೊಟ್ಟು ಲೋಕದ ಗೊಡವೆಯಿಂದ ಸದಾ ದೂರವಿದ್ದಳೆಂಬುದು ನನ್ನರಿವಿಗೊದಗಿದ್ದು- ಅವಳ ಹೆಸರಿನ ಉಳಿತಾಯ ಖಾತೆಯಲ್ಲಿದ್ದ ಕೇವಲ ಮೂರೂ ಚಿಲ್ಲರೆ ಸಾವಿರ ದುಡ್ಡನ್ನು ಕಂಡ ಮೇಲೆಯೇ. ಒಟ್ಟಿನಲ್ಲಿ, ಶಾಂತಾಮಣಿ ಧರೆಗೆ ದಕ್ಕಿಬಂದಷ್ಟೇ ಸಲೀಸಾಗಿ ಧರೆ ತೊರೆದು ಸರಿದಿದ್ದಳು. ಧರೆಯು ದಕ್ಕಿಸಿದ್ದನ್ನೆಲ್ಲ ಅವರಿವರಿಗೆ ದಾಟಿಸಿ ನಮ್ಮ ಸುತ್ತಲಿನ ಎಂಟೂ ಮತ್ತೆರಡು ದಿಕ್ಕು ದಾಟಿದ್ದಳು.

ಕಳೆದೊಂದು ತಿಂಗಳಿನಿಂದ ನಾನು ಅಪರ್ಣೆಯ ಅಣ್ಣ ಚೈತನ್ಯರ ಅಸ್ತಿತ್ವಕ್ಕೊಂದು ಇತಿಯನ್ನರುಹುವ ನಡುವಿದ್ದೇನೆ. ಹೇಳಿದ್ದಾದರೆ ಗಡಿಬಿಡಿಯೆನ್ನಲಾಗದ ಗಲಿಬಿಲಿಯಲ್ಲಿದ್ದೇನೆ. ಜನವರಿ ಎಂಟರ ಇಳಿರಾತ್ರಿಯಲ್ಲಿ ಇಹತೊರೆದು ಇಲ್ಲವಾದ ಅವರ ಜನುಮಕ್ಕೊಂದು ‘ತಕ್ಕ’ (ಮರಣೋತ್ತರ) ‘ಮುಚ್ಚಳಿಕೆ’ಯೊಪ್ಪಿಸುವ ಪಾಡಿನಲ್ಲಿದ್ದೇನೆ. ನಿಖರವಾಗಿ ಹೇಳಿದ್ದಾದರೆ, ಜನವರಿಯ ಇಪ್ಪತ್ತನೇ ತಾರೀಖಿನಿಂದ ಇವೊತ್ತಿನವರೆಗೆ ಚೈತನ್ಯರಿದ್ದ ಮನೆಯನ್ನು ತೆರಹುಗೊಳಿಸುವ ಕೆಲಸದಲ್ಲಿ ತೊಡಗಿದ್ದೇನೆ. ಇಟ್ಟುಕೊಳ್ಳುವುದೇನನ್ನು ಬಿಟ್ಟುಕೊಡುವುದೇನನ್ನು ಎಂಬೆರಡರ ಮಧ್ಯೆ ಜೀಕಿದ್ದೇನೆ. ಹಾಗೇ ಮನಸ್ಸು ಜೀಕಿಸಿದ್ದೇನೆ.

ಮೂವತ್ತೊಂದನೇ ತಾರೀಖಿನೊಳಗೆ ಖಾಲಿ ಮಾಡಿದ ಪಕ್ಷಕ್ಕೆ ಅನವಶ್ಯಕವಾಗಿ ಬಾಡಿಗೆಯ ಮೀಟರೋಡದೆನ್ನುವ ಎಣಿಕೆಯಲ್ಲಿ, ಫೆಬ್ರುವರಿ ಸುರುಗೊಳ್ಳುವ ಮುನ್ನವೇ ಮನೆಯಲ್ಲಿದ್ದ ಫರ್ನೀಚರು, ಬಟ್ಟೆಬರೆ, ಪಾತ್ರೆಪಡಗವನ್ನೆಲ್ಲ ತರಾತುರಿಯಲ್ಲಿ ಸಾಗಿಸಿದ್ದಾಗಿದೆ. ನನ್ನ ಮನೆಯಲ್ಲಿ ಇಟ್ಟುಕೊಳ್ಳಲಿಕ್ಕೆ ತಕ್ಕ ಅನುಕೂಲವಾಗಲೀ ಅಗತ್ಯವಾಗಲೀ ಇಲ್ಲವಾದ್ದರಿಂದ, ಎಲ್ಲವನ್ನೂ ಬಳಸತಕ್ಕವರಿಗೆ ಕ್ರಯವಿಲ್ಲದೆ ಪ್ರತಿಫಲವಿಲ್ಲದೆ ಕೊಟ್ಟಿದ್ದಾಗಿದೆ. ವ್ಯವಸ್ಥೆಯೋ ಅವಸ್ಥೆಯೋ, ಒಟ್ಟಿನಲ್ಲಿ, ಎಲ್ಲೆಂದರಲ್ಲಿ ಭರ್ತಿ ಭರ್ತಿ ತುಂಬಿಕೊಂಡಿದ್ದ ಮನೆಯು ಕಣ್ಣೆದುರೇ ಬತ್ತಿ ಬರಿದಾದುದನ್ನು ಕಂಡು ಮನಸ್ಸು ಹಿಂಡಿತಾದರೂ, ನಿವ್ವಳದಲ್ಲಿ ನಿರಾಳವೆನ್ನಿಸಿ ತುಸು ಹಗುರಾಗಿದ್ದೂ ಆಗಿದೆ.

ಇಷ್ಟಿದ್ದೂ ಈ ನಡುವೊಂದು ಸಂದಿಗ್ಧದಲ್ಲಿದ್ದೇನೆ. ಚೈತನ್ಯರು ವಾಸವಿದ್ದ ಸದರಿ ಬಾಡಿಗೆಮನೆಯಲ್ಲಿರುವ ಎರಡು ಅಲಮಾರಿಗಳನ್ನು ತುಂಬಿ ತುಳುಕಿರುವ ಸರಕನ್ನು ಏನು ಮಾಡುವುದೆಂದು ತೋಚದೆ ನಿಜಕ್ಕೂ ಕಂಗಾಲಾಗಿದ್ದೇನೆ. ಈವರೆಗೂ ಕಣ್ಕಣ್ಣು ಬಿಡುತ್ತ ತಬ್ಬಿಬ್ಬಾಗಿದ್ದೇನೆ. ಏನೇನೋ ಕಾಗದಪತ್ರಗಳಿವೆ. ಕಡತಗಳಿವೆ. ಕೋರ್ಟುಕಛೇರಿಯ ದಾಖಲೆಗಳಿವೆ. ಚೈತನ್ಯರ ಅಪ್ಪ-ಅಮ್ಮನ ಅಂದರೆ ನನಗೆ ಹೆಣ್ಣಿತ್ತ ಅತ್ತೆಮಾವರ ಅಷ್ಟೂ ಅಸ್ತಿತ್ವದ ಸಕಲಸರುವ ಕುರುಹುಗಳಿವೆ. ಪದ್ಮಾ ಕೆ ಎನ್, ಕೆ ಎಸ್ ನಾರಾಯಣಸ್ವಾಮಿ, ಚೈತನ್ಯ ಎನ್ ಮತ್ತು ಅಪರ್ಣಾ ಎನ್ -ಅಂತೆಂಬ ನಾಲ್ಕು ಸಾತ್ತ್ವಿಕ ಜೀವಗಳಿದ್ದ ವಿನಮ್ರ ಸಂಸಾರವೊಂದರ ನಿರಾಡಂಬರ ಒಳಚಿತ್ರಿಕೆಯ ಮಜಲು ಮಗ್ಗುಲುಗಳೆಲ್ಲ ಅಷ್ಟೂ ಸಮಸ್ತವಾಗಿ ಮತ್ತು ಹ್ರಸ್ವವಾಗಿ ನನಗೆ ಕಾಣಸಿಕ್ಕಿವೆ.

ಸಂಗೀತಪಾಠದ ಪುಸ್ತಕಗಳಿವೆ. ಕಸೂತಿ ಮಾಡಿದ ಹಾಸುಗಳಿವೆ. ಬಟನ್ನಿನಲ್ಲಿ ಮಾಡಿದ ಮೊಲ, ನವಿಲು, ಬಾತುಕೋಳಿಗಳಿವೆ. ತೋರಣದೊಡನೆ ಇಳಿಬಿಡಬಹುದಾದ ತೂಗಿಕೆಗಳಿವೆ. ಶಾಲಾಕಾಲೇಜಿನ ಸರ್ಟಿಫಿಕೇಟುಗಳಿವೆ. ಪ್ರಶಸ್ತಿಗಳ ಬಿನ್ನವತ್ತಳೆಗಳಿವೆ. ಆಸ್ಪತ್ರೆಯ ಕೇಸ್-ಶೀಟುಗಳಿವೆ. ವಾಚು, ಕನ್ನಡಕ, ವಿಸಿಟಿಂಗ್ ಕಾರ್ಡು, ಗ್ರೀಟಿಂಗ್ ಕಾರ್ಡು, ರೇಶನ್ ಕಾರ್ಡು... ಹತ್ತಾರು ದೇಶಗಳ ವೀಸಾವುಳ್ಳ ಪಾಸ್ಪೋರ್ಟು... ಕಟ್ಟುಹಾಕಿದ ಫೋಟೋಗಳು, ಪುಸ್ತಕದಂತೆ ತೆರೆದು ತಿರುವಬಹುದಾದ ಕಪ್ಪುಬಿಳುಪಿನ ಆಲ್ಬಮುಗಳು... ರಾಜಕುಮಾರ್, ವಿಷ್ಣುವರ್ಧನ್, ಶಂಕರನಾಗ್, ಅನಂತನಾಗ್, ಅಂಬರೀಷ್, ಕಲ್ಪನಾ, ಆರತಿ, ಲೋಕೇಶ್ ದಂಪತಿ, ಪುಟ್ಟಣ್ಣ ಕಣಗಾಲ್, ಎನ್ ಲಕ್ಷ್ಮೀನಾರಾಯಣ್, ಅಶ್ವಥ್, ಲೀಲಾವತಿ...

ಹೀಗೆ ಒಂದಾನೊಂದು ಕಾಲಕ್ಕೆ ನನ್ನೊಳಗೆ ಕನ್ನಡತನವನ್ನು ಊಡಿದ ಮತ್ತು ಹೂಡಿದ ಘಟಾನುಘಟಿಗಳ (ಅಮುದ್ರಿತ ಅಂದರೆ ಪತ್ರಿಕೆಯಲ್ಲಿ ಬಂದಿರದ) ಪಟಗಳು... ಸುಧಾ, ತರಂಗ, ಪ್ರಜಾಮತದ ಪ್ರತಿಗಳು... ಪ್ರಜಾವಾಣಿ, ಕನ್ನಡಪ್ರಭ, ಸಂಯುಕ್ತ ಕರ್ನಾಟಕದ ಕಟಿಂಗುಗಳು... ಇವಿವೇ ಕಟಿಂಗುಗಳನ್ನು ಹಾಳೆ ಹಾಳೆಯ ಮೇಲೂ ಅಂಟಿಸಿ, ಕೈಬರಹದಲ್ಲಿ ಟಿಪ್ಪಣಿಸಿದ ರೆಜಿಸ್ಟರುಗಳು... ಕೊರವಂಜಿ, ಪಾಪಚ್ಚಿ, ಚಂದಮಾಮ... ಇತ್ಯಾದಿ ಸಂಗ್ರಹಗಳು... ನವಕರ್ನಾಟಕದಿಂದ ಹೊರಬಂದ ವಿಶ್ವಕಥಾಕೋಶದ ಇಪ್ಪತ್ತನಾಲ್ಕು ಪುಸ್ತಿಕೆಗಳ ಸಂಚಿಕೆ-ಸಂಪುಟಗಳು... ಹೀಗೆ ಒಂದೇ ಎರಡೇ? ಇವನ್ನೆಲ್ಲ ಏನು ಮಾಡುವುದು? ಏನನ್ನಿಟ್ಟುಕೊಳ್ಳುವುದು? ಯಾವುದನ್ನಂತ ಬಿಡುವುದು? ಬಿಟ್ಟುಬಿಡೋಣವಾದರೆ ಎಲ್ಲಿ ಬಿಡುವುದು? ಗಣೇಶ-ಗೌರಿಯರನ್ನು ಹೊಳೆಯಲ್ಲಿ ಮುಳುಗಬಿಡುವ ಹಾಗೆ ವಿಸರ್ಜಿಸಲಿಕ್ಕೆ ಜೇಡಿಮಣ್ಣೇ? ಅಥವಾ ಇವನ್ನು ಕುರಿತು ಬಾಯಿಮಾತಿನಲ್ಲಿ ಅನೂರ್ಜಿತವೆಂದಿದ್ದೇ ವಿಸರ್ಜನೆಯಾದಂತೆಯೇ?

ತಲೆಕೆಟ್ಟು ಹುಣ್ಣಾಗಿದೆ. ಹಳೆಮೊಸರಿನ ಹಾಗೆ ಹುಳಿತು ಬುರುಗುತ್ತಿದೆ. ನಾನು ಬಿಟ್ಟೇನೆಂದರೂ ತಾನು ಬಿಡೆನೆನ್ನುವ ಸೆಳೆತವಲ್ಲವೇ ಇದು? ದೇವರೇ... ಏನನ್ನುವುದು ಇದನ್ನು? ಮಾಯೆಯೆನ್ನುವುದು ಒಂದಾನೊಮ್ಮೆಯ ಮಾತು. ಇಪ್ಪತ್ತೊಂದನೇ ಶತಮಾನದ ಕಾಲು ಪಾಲನ್ನು ಜೈಜೈಯೆಂದು ವ್ಯಯಿಸಿರುವ ನನ್ನ ಅತ್ಯಾಧುನಿಕ ಹೊತ್ತುಗೊತ್ತಿನಲ್ಲಿ ಈ ಕುರಿತು ಏನಂತನ್ನುವುದು? ಮಾಯೆಯೋ, ಮೋಹವೋ, ಸುಖಾಸುಮ್ಮನಾದ ಮಮಕಾರದ ಆಮಿಷವೋ... ಅದೇನೇ ಇರಲಿ, ಈ ಪರಿಯ ಸೆಳವಿಗೊಂದು ಕಾರಣವಿದೆ. ಯಾಕೆಂದರೆ, ಮೇಲೆ ಹೇಳಿದ ಒಂದೊಂದೂ ಸರಕು-ಸಗಟಿನ ಮೇಲೆ ನನ್ನ ಮನೆಮನಸ್ಸುಗಳ ರಾಣಿಜೇನಾಗಿದ್ದ ಅಪರ್ಣೆಯು ಕೈಯಾರೆ ಪರಿಶೀಲಿಸಿ ಬರೆದ ಒಕ್ಕಣೆಗಳಿವೆ. ಚೊಕ್ಕವಾಗಿ ಗೀಚಿಟ್ಟ ರುಜುಗಳಿವೆ. ಹೆಸರು ಸಹಿತವಾದ ರುಜುವಾತುಗಳಿವೆ.

ಇವನ್ನೆಲ್ಲ ಒಂದೊಂದಾಗಿ ನೋಡಿದ್ದೇನೆ. ನೋಡಿಯೇ ನೋಡಿದ್ದೇನೆ. ಓದಬೇಕಾದ್ದನ್ನು ಓದಬಹುದಾದಷ್ಟನ್ನು ಓದಿ ನೋಡಿದ್ದೇನೆ. ಇನ್ನು ನನ್ನ ಮಟ್ಟಿಗೆ, ಈ ಹೊತ್ತಿನಲ್ಲಿ ನೋಡಿದಷ್ಟೂ ನಂಬಲಾಗದ್ದೇನೆಂದರೆ, ಹೆಣ್ಣು ಈ ಎರಡೂ ಗೋಡ್ರೇಜಿನ ಒಂದೊಂದೂ ಕಂಪಾರ್ಟ್ಮೆಂಟಿನ ಮೇಲಿನ ಅಡ್ಡಪಟ್ಟಿಯಲ್ಲಿ ಒಳಗಿರುವುದೇನೆಂದು ಅಚ್ಚುಕಟ್ಟಾಗಿ ಬರೆದಂಟಿಸಿದ್ದಾಳೆ. ಮುದ್ದಾದ ಕೈಬರಹದಲ್ಲಿ ಒಂದೊಂದನ್ನು ಕುರಿತೂ ಸೂಚ್ಯವಾಗಿ ವಿವರಿಸಿದ್ದಾಳೆ. ಸಾಲದುದಕ್ಕೆ ಅಲಮಾರಿಯ ಎರಡೂ ಕದಗಳ ಒಳಬದಿಯಲ್ಲಿ ಎಲ್ಲೆಲ್ಲಿ ಏನೇನುಂಟೆನ್ನುವ ಪರಿವಿಡಿಯುಳ್ಳ ಹಾಳೆಯನ್ನೂ ಹಚ್ಚಿರಿಸಿದ್ದಾಳೆ.

ನಿಜ ಹೇಳುತ್ತೇನೆ... ನಿಜಕ್ಕಾದರೆ ಇದು ನನ್ನದೇ ಸಮಸ್ಯೆಯೇನೋ, ಅವಳಿಲ್ಲದ ಈ ಏಳನೇ ತಿಂಗಳಿನಲ್ಲಿ ಈ ಹೊತ್ತಿಗೂ ನನಗೆ ಅವಳದೆನ್ನುವ, ಅವಳಿಗೆ ಸೇರಿದ್ದೆನ್ನುವ, ಒಂದಾನೊಮ್ಮೆ ಅವಳು ಹೊಂದಿದ್ದಳೆನ್ನುವ... ಇಂಥವೇನೇ ಕಾಣಸಿಕ್ಕರೂ, ನನಗೇ ಗೊತ್ತಿರದೆ ನನ್ನ ಮನಸ್ಸು ಧುಮುಕುತ್ತದೆ. ಧಾರೆಧಾರೆ ಸುರಿದಿಳಿಯುತ್ತದೆ. ಇರಲಿ... ಮೇಲೆ ಹೇಳಿದ್ದಷ್ಟೂ ಒಂದು ಅಲಮಾರಿಯ ಕತೆಯಾದರೆ, ಇನ್ನೊಂದರಲ್ಲೂ ಇಂಥದೇ ಮತ್ತೊಂದು ಕತೆಯಿದೆ. ಅಲ್ಲಲ್ಲ, ಕತೆಗಳಿವೆ. ಒಂದು ಕತೆ ಅಪರ್ಣೆಯ ಅಣ್ಣ ಚೈತನ್ಯರನ್ನು ಕುರಿತಾಗಿದೆ. ಇನ್ನೊಂದು ಅಪರ್ಣೆಯನ್ನೇ ಕುರಿತವುದರಾಗಿದೆ.

ಹ್ಞಾಂ, ಅಣ್ಣತಂಗಿಯರ ಕೆಲಸದ ವಿವರಗಳಿರುವ ಕಡತವೆಲ್ಲ ಅಲ್ಲಿವೆ. ಚೈತನ್ಯರ ತಿಂಗಳ ಸಂಬಳದ ರಸೀತಿಗಳಿವೆ. ಮನೆಬಾಡಿಗೆ ಕಟ್ಟಿದ ದಾಖಲೆಗಳಿವೆ. ಟೇಲಿಫೋನ್ ಬಿಲ್ಲು, ಲೈಟಿನ ಬಿಲ್ಲು, ವಾಟರ್ಬಿಲ್ಲು... ಇಂಥವಿರುವ ಫೈಲುಗಳಿವೆ. ಅಪರ್ಣೆ ದೂರದರ್ಶನದ ಕಾಲದಿಂದ ಮೊನ್ನೆ ಮೊನ್ನೆವರೆಗೆ ಪಾಲುಗೊಂಡ ಒಂದೊಂದೂ ಚಾನಲುಗಳ ಪೇಸ್ಲಿಪ್ಪುಗಳಿವೆ. ವೇದಿಕೆಯ ಕಾರ್ಯಕ್ರಮಗಳಿಗೆ ಮಾಡಿಕೊಂಡ ಸ್ಕ್ರಿಪ್ಟುಗಳಿವೆ. ಕೆಲವನ್ನು ಟೈಪು ಮಾಡಲಾಗಿದೆ. ಬಹಳಷ್ಟು ಇವಳದೇ ಕೈಬರಹದಲ್ಲಿದೆ.

ಆಕಾಶವಾಣಿ, ಎಫ್ಫೆಮ್ ರೇನ್ಬೋದಲ್ಲಿ ನಡೆಸಿಕೊಟ್ಟ ಕಾರ್ಯಕ್ರಮದ ವಿವರಗಳಿವೆ. ‘ಮುನ್ನೋಟ’ದ ಕಾಲದಿಂದ ಈಮೇಲು, ಮೊಬೈಲು ಬರುವವರೆಗೂ ಅಭಿಮಾನಿಗಳು ಬರೆಯುತ್ತಿದ್ದ ಪತ್ರಗಳಿವೆ. ಬಣ್ಣಬಣ್ಣದ ಸುತ್ತುಚಿತ್ತಾರಗಳ ನಡುವೆ ಇವಳಿಗೊಪ್ಪಿಸಿದ ಬಣ್ಣಬಣ್ಣದ ತಾರೀಫಿನ ಅಹವಾಲುಗಳಿವೆ. ಒಂದಷ್ಟು ಗಂಡುಮಂದಿಯ ಪ್ರೇಮನಿವೇದನೆಗಳೂ ಇವೆ. ಇವೊತ್ತು ನಮ್ಮೊಡನಿರುವ ಕೆಲವು ಮುಪ್ಪಿನ ಧುರೀಣರ ಅತ್ಯಾರ್ದ್ರ ಅಪೀಲಿನರಿಕೆಗಳೂ ಅಲ್ಲಿವೆ. ಅಲ್ಲದೆ, ಹಲವಾರು ನಾಟಕ, ಪಟಕತೆ, ಚಿತ್ರಕತೆಗಳ ಒಕ್ಕಣೆಗಳಿವೆ. ಇವಳನ್ನು ಕುರಿತು ಪತ್ರಿಕೆಗಳಲ್ಲಿ ಬಂದ ಪುಟಗಳೂ ದಂಡಿದಂಡಿಯಿವೆ.

ನೆನಪಾಗುತ್ತದೆ.

‘ಏನು ಮಾಡುತಿದ್ದೀ, ಅಪರ್ಣೇ?’ ಎಂದು ನಾನು ಫೋನಿನಲ್ಲಿ ಕೇಳಿದಾಗಲೆಲ್ಲ, ‘ಏನಿಲ್ಲರೀ, ಏನೋ ಸಾರ್ಟೌಟ್ ಮಾಡುತಿದೀನಿ ಬಿಡಿ...’ ಎಂದು ಅವಳು ಎಂದಿನಂತೆ ದನಿ ಮೆಲುವಾಗಿಸಿ ಹೇಳುತ್ತಿದ್ದುದು ಮತ್ತೆ ಮತ್ತೆ ಮರುಕಳಿಸಿ ಕೇಳಿಸುತ್ತದೆ. ‘ಎಷ್ಟು ಮಾಡಿದರೂ ಮುಗಿಯೋದೇ ಇಲ್ಲ, ವಸ್ತಾರೆ... ಇವನ್ನೆಲ್ಲ ಎತ್ತಿಡೋಕಂತಲೇ ಇನ್ನೊಮ್ಮೆ ಹುಟ್ಟಿಬರಬೇಕೇನೋ.’ ಹೆಣ್ಣಿನ ಈ ನಲುದನಿಯು ಹೀಗೊಮ್ಮೆ ಕಿವಿಗಳಲ್ಲಿ ಅನುರಣಿಸಿದ್ದೇ ನನ್ನೆರಡೂ ಕಣ್ಣು ತೇವಗೊಳ್ಳುತ್ತವೆ. ಸರಭರನೆ ಹರಿದು ನನ್ನಂಚನ್ನೆಲ್ಲ ಕೊಚ್ಚಿ ಕೊಂಡೊಯ್ಯುತ್ತವೆ.

ಆನೆಯೇ ಹೋದಮೇಲೆ ಅದರ ಬಾಲ ಹಿಡಕೊಂಡೇನು ಜಗ್ಗಾಡುತೀಯೋ ನೀನು... ಬಿಟ್ಟುಬಿಡಬಾರದೇನು, ಹೇಳು- ಎಂದು ಶಾಂತಾಮಣಿ ಆಗಿಂದಾಗ ಹೇಳುತ್ತಿದ್ದುದೂ, ಏತನ್ಮಧ್ಯೆ ಕಿವಿಗಳಲ್ಲಿ ಕಟ್ಟಿ ಕೇಳಿಸುತ್ತದೆ. ಒನ್ನಮೂನೆ ಝಣತ್ಕಾರಕ್ಕೆ ತೊಡಗುತ್ತದೆ.

ಅದೂಯಿದೂ ಪಟ್ಟುಹಿಡಿದು (ಸತ್ತರೂ) ಬಿಟ್ಟುಕೊಡೆನೆಂದು ಹಠಕ್ಕೆ ಬೀಳುತ್ತಿದ್ದ ತನ್ನ ಮೂರೂ ಮಕ್ಕಳಿಗೆ ಸದಾ ಹೀಗೊಂದು ಬುದ್ಧಿವಾದವನ್ನರುಹುತ್ತಿದ್ದ ಶಾಂತಾಮಣಿ, ಇವೊತ್ತು ಒಮ್ಮೆಗೇ ನನ್ನೆದುರು ತೆರೆದು ಹಿಂದೆಂದಿಗೂ ಹೆಚ್ಚು ಪ್ರಸ್ತುತಳೆನಿಸುತ್ತಾಳೆ. ಇನ್ನು ನನ್ನ ಅಪ್ಪನಿಗಾದಾದರೂ ಅಷ್ಟೇ, ಇದೇ ಮಾತನ್ನು ‘ವಚನ’ ಬದಲಿಸಿ, ‘ಬಾಲ ಹಿಡಕೊಂಡೇನು ಜಗ್ಗಾಡುತೀರ್ರೀ?’ ಎಂದು ತಿಳಿಹೇಳುತ್ತಿದ್ದ ಈ ನನ್ನಮ್ಮ ನನಗಿಂತ ಹೆಚ್ಚು ಪ್ರಗತಿಪರಳಿದ್ದಳೆನಿಸಿ ತೋರುತ್ತಾಳೆ.

ನನಗೆ ನೆನಪಿರುವ ಹಾಗೆ, ಬಾಳೇಹೊನ್ನೂರಿನ ಆಸುಪಾಸಿನಲ್ಲಿ ಭದ್ರಾದಂಡೆಗೆ ಆತುಕೊಂಡಂತಿದ್ದ ಅರವತ್ತೆಪ್ಪತ್ತು ಎಕರೆ ಪಿತ್ರಾರ್ಜಿತ ಜಮೀನು ಭೂಸುಧಾರಣೆಯ ಸುಮಾರಿನಲ್ಲಿ ಕೊಚ್ಚಿಕೊಂಡು ಹೋದ ಮೇಲೆ- ಅಲ್ಲಿದ್ದ ಅಳಿದುಳಿದ ಗದ್ದೆನೆಲದ ಮೇಲೆ ದಾವೆ ಹೂಡಿ ಕೋರ್ಟುಕಟ್ಟಳೆಯೆಂದು ಪಟ್ಟುಮಾಡಿದ ನನ್ನಪ್ಪ ಚಿಕ್ಕಪ್ಪಂದಿರಿಗೂ ಇದೇ ಮಾತನ್ನು ಹೇಳಿ ಸುಮ್ಮನಾಗಿಸಿದ್ದ ಅಮ್ಮ, ಈ ಬದುಕನ್ನು ಕುರಿತೆಂದೂ ಪಟ್ಟುಮಾಡಲೊಲ್ಲದೆ, ಅದಕ್ಕೆ ತಕ್ಕುನಾಗಿ ಬಿಟ್ಟುಕೊಡುತ್ತಿದ್ದಳೆಂಬುದೇ ಅವಳ ನಿಜಘನತೆಯೆಂದು, ಇವೊತ್ತು ಮನಸಾರೆ ನನಗನ್ನಿಸಿದೆ.

ಇದೇ ಮೇರೆಗೇನೋ, ಕಳೆದ ಎರಡು ಮೂರು ವಾರಗಳಿಂದ ನನ್ನಮ್ಮನ ಈ ‘ಆನೆಬಾಲ’ದ ಮಾತನ್ನು ನಾನು ಸುಮಾರು ಸಾರಿ ನೆನೆದಿದ್ದೇನೆ. ನಿಂತಲ್ಲಿ ಕುಂತಲ್ಲಿ ಕೆಲವೊಮ್ಮೆ ಕಿವಿಯೆದುರು ಅಶರೀರವಾಣಿಯ ಹಾಗೆ ಮೂಡಿಬರುವ ಇದರ ಅರ್ಥವೇನೆಂದು ತಲೆಕೆಡಿಸಿಕೊಂಡಿದ್ದೇನೆ. ಹೀಗಿರಬಹುದೇ ಹಾಗಿರಬಹುದೇ ಇದಿರಬಹುದೇ ಅದಿರಬಹುದೇ... ಎಂದೆಲ್ಲ ನನ್ನ ತೋಚಿನ ಸಮಕ್ಕೂ ಯೋಚಿಸಿದ್ದೇನೆ. ಆನೆಬಾಲದ ಬಗ್ಗೆ ಬಾರಿ ಬಾರಿ ಸಾರಿ ಸಾರಿ ನುಡಿದ ಶಾಂತಾಮಣಿಯೇ- ನಿನ್ನೀ ಮಾತಿನಂತೆ ನಡೆಯುವ ಚಿತ್ತವನ್ನಿತ್ತ ಕೊಡು ಕಿಂಚಿತ್ತು... ಎಂದು ಅವಳ ಪಟದೆದುರು ನಿಂತು ಪ್ರಾರ್ಥಿಸಿದ್ದೇನೆ.

ಇಪ್ಪತ್ತನಾಲ್ಕನೇ ಇಸವಿಯ ಮಾರ್ಚ್ ಮೂವತ್ತೊಂದು ಅಪರ್ಣೆಯ ವೃತ್ತಿಬದುಕಿನ ಕಟ್ಟಕಡೆಯ ದಿವಸ. ಅವೊತ್ತು, ಇನ್ನಿರದ ಬೇನೆಯ ನಡುವೆ ಹೆಣ್ಣು ಬಸವನಗುಡಿಯ ಬ್ಯೂಗಲ್ರಾಕ್ ಪಾರ್ಕಿನಲ್ಲೊಂದು ವೇದಿಕೆಯನ್ನೇರಿದ್ದಳು. ಎಡಗಾಲಿನ ತೊಡೆಯೆಲುವಿನಲ್ಲಿ ಸಿಕ್ಕಾಪಟ್ಟೆ ನೋವಿದ್ದ ಕಾರಣ ಕುಂಟುತ್ತಲೇ ಮೈಸಂಬಳಿಸಿಕೊಂಡು ಕಾರ್ಯಕ್ರಮ ನಡೆಸಿದ್ದಳು. ‘ಇನ್ನು ಮೇಲೆ ಇದೆಲ್ಲ ಆಗುಲ್ಲಾನಿಸುತ್ರೀ...’ ಇಳಿರಾತ್ರಿಯಲ್ಲಿ ವಾಪಸು ಬಂದಿದ್ದೇ ಅಳುಮುಂದು ಮಾಡಿಕೊಂಡು ಹೇಳಿದ್ದಳು.

ಇದಾದ ಮಾರನೇ ದಿವಸ ಆಂಕಾಲೊಜಿಸ್ಟರನ್ನು ಹೋಗಿ ಕಂಡಿದ್ದಾಯಿತು. ಒಳಗಿರುವ ಮಾರಿ ಬೆಳೆದಿದೆಯೆಂದೂ ಔಷಧ ಬದಲಿಸುವುದೆಂದೂ ಮಾತಾಯಿತು. ‘ಈವಾಗ್ಗಿನದು ಫಲಿಸುತ್ತಿಲ್ಲ. ಇದಕ್ಕಿಂತ ಪರಿಣಾಮಕಾರಿಯಾದ ಇನ್ನೊಂದಿದೆ. ಅದನ್ನು ಪ್ರಯೋಗಿಸಬೇಕು. ಅಲ್ಲದೆ, ಈ ಸಾರಿ ಖೀಮೋ ಆಗಲೇಬೇಕು.’ ವೈದ್ಯರು ಹೇಳುತ್ತಿದ್ದಂತೆ ನಮ್ಮಿಬ್ಬರ ಕೇಡು ಉಲ್ಬಣಿಸಿದೆಯೆಂದು ಅರ್ಥವಾಯಿತು. ನಿಜಕ್ಕೂ ಮನದಟ್ಟಾಯಿತು. ತಿಂಗಳಿಗೆ ಒಂದೂವರೆ ಲಕ್ಷವಿದ್ದ ಖರ್ಚು ಮೂರು ವಾರಕ್ಕೆ ನಾಲ್ಕು ಲಕ್ಷವಾಯಿತೆಂದ ಮೇಲೆ ನಮ್ಮ ಕೇಸು ತೇರ್ಗಡೆಯಾಯಿತೆಂತಲೇ ಅರ್ಥವಷ್ಟೆ?

ನಿಜವಾಗಿ ಅದಾಗಿತ್ತು.

ಇಷ್ಟಾಗುವುದಕ್ಕೆ ಒಂದು ವಾರ ಮುನ್ನವಷ್ಟೇ, ಅಪರ್ಣೆ, ‘ಚೇತೂ... ನಾನು ಹೇಳೋದನ್ನ ಕೇಳಿಸಿಕೊಳ್ಳೋ. ಸುಮ್ಮನೆ ವಸ್ತಾರೆಗೆ ತೊಂದರೆಯಾಗೋದು ಬೇಡ. ನನ್ನನ್ನ ನೋಡಿಕೊಂಡಾರ ಇಲ್ಲಾ ನಿನ್ನನ್ನ ನೋಡಿಕೊಂಡಾರ? ಯಾವುದಕ್ಕೂ ಯೋಚನೆ ಮಾಡು’ ಎಂದೆಲ್ಲ ಅಂಗಲಾಚಿ ಚೈತನ್ಯರನ್ನು ಒಪ್ಪಿಸಿದ ಮೇರೆಗೆ- ಆತನನ್ನು ತಲಘಟ್ಟಪುರದ ಬಳಿಯಿರುವ ಸಹಾಯಕೇಂದ್ರವೊಂದರಲ್ಲಿ ದಾಖಲಿಸಿದ್ದಾಗಿತ್ತು. ‘ಇಲ್ಲೇ ಇರು ಅಂತಲ್ಲ ಕಣೋ... ನಾನು ಸ್ವಲ್ಪ ಸುಧಾರಿಸಿದ ಮೇಲೆ ವಾಪಸು ಬರುವಿಯಂತೆ.’ ಅಪರ್ಣೆ ಕಾರುದಾರಿಯುದ್ದಕ್ಕೂ ಅಣ್ಣನ ಮನವೊಲಿಸಿದ್ದಳು. ‘ಹುಷಾರು ಕಣೋ... ವಸ್ತಾರೆಗೆ ಕಷ್ಟ ಕೊಡಬೇಡ ಅಷ್ಟೆ.’ ಬೀಳ್ಕೊಳ್ಳುವಾಗ ಆತನನ್ನು ಅಪ್ಪಿಕೊಂಡು ಹೇಳಿದ್ದಳು.

ಒಬ್ಬರನ್ನೊಬ್ಬರು ವಿಪರೀತವಾಗಿ ನೆಚ್ಚಿದ್ದ ಈ ಅಣ್ಣತಂಗಿಯರಿಗೆ ಇದೇ ಕಟ್ಟಕಡೆಯ ಮುಖತಃ ಭೇಟಿಯಾಗಿತ್ತು. ವಾಪಸುದಾರಿಯುದ್ದಕ್ಕೂ ಅಪರ್ಣೆ ಬಿಕ್ಕುತ್ತಲೇ ಇದ್ದಳು. ‘ನಮ್ಮಿಬ್ಬರದ್ದು ಏನು ಋಣಾನುಬಂಧವೋ ಏನೋ- ಗೊತ್ತಿಲ್ಲ, ವಸ್ತಾರೆ... ನಮ್ಮನೆಯ ಪ್ರತಿಯೊಂದಕ್ಕೂ ತಲೇ ಕೊಡೋದಾಯಿತು ನಿಮಗೆ. ನನ್ನನ್ನು ಕ್ಷಮಿಸಿಬಿಡು, ಕಂದ...’ ಮನೆ ತಲುಪಿದ್ದೇ ಹೇಳಿದಳು.

‘ಅದೇಕೆ ಹಾಗನ್ನುತೀ, ಅಪರ್ಣೇ?’

‘ಇನ್ನೇನು ಹೇಳಲಿ, ವಸ್ತಾರೆ? ಎಲ್ಲವನ್ನೂ ಅಳೆದಳೆದು ಕೊಟ್ಟ ದೇವರು ಅದೃಷ್ಟ ಕೊಡಲಿಲ್ಲ ನೋಡಿ- ನನಗೂ, ನನಗಿಂತ ಹೆಚ್ಚಾಗಿ ನಿಮಗೂ’ ಎಂದು ಹೇಳಿದ ಅಪರ್ಣೆ, ಕೊರಳಿನಲ್ಲಿ ಕಟ್ಟಿದ ಗದ್ಗದವನ್ನು ಒತ್ತಾಯದಿಂದ ಹತ್ತಿಕ್ಕಿ, ‘ನಾನು ಮಾಡಬೇಕಾದ ಇನ್ನೊಂದು ಕೆಲಸವಿದೆ, ವಸ್ತಾರೆ... ಅಲ್ಲೀವರೆಗಾದರೂ ನಾನು ಗಟ್ಟಿಯಾಗಿರಬೇಕು...’ ಎಂದು ಸ್ವಗತದಂತಹ ಮಾತು ಹೇಳಿದಳು.

‘....?’

‘ಏನಿಲ್ಲ... ಚೈತನ್ಯನ ಮನೇಲಿ ಸಾರ್ಟೌಟ್ ಮಾಡಬೇಕಾದ್ದು ಸಾಕಷ್ಟಿದೆ. ಇನ್ನೊಂದೆರಡು ತಿಂಗಳು ಚೆನ್ನಾಗಿದ್ದರೆ ಅದನ್ನೂ ಮಾಡಿಬಿಡುತೀನಿ. ಸುಮ್ಮನೆ ನನ್ನ ಪೂರ್ವಾಶ್ರಮದ ಹೊಣೆಯನ್ನೂ ನಿಮ್ಮ ಮೇಲೆ ಹೊರೆಸೋದು ಸರಿಯಲ್ಲ.’

‘ಅಂದರೆ?’

‘ಅವನ ಮನೇಲಿ ಎರಡು ಬೀರು ಭರ್ತಿ ಏನೇನೋ ಪೇಪರುಗಳಿವೆ. ಅವನ್ನೆಲ್ಲ ಅವನು ನೋಡಿಕೊಳ್ಳಲಾರ. ಒಂದೊಂದಕ್ಕೂ ನನ್ನ ಮೇಲೆ ಡಿಪೆಂಡಾಗಿದ್ದೋನು ಅವನು. ಅವುಗಳಲ್ಲಿ ಯಾವುದು ಬೇಕು ಯಾವುದು ಬೇಡ ಅಂತ ನೋಡಿಬಿಟ್ಟರೆ ನಿಮ್ಮ ಮೇಲಿನ ಹೊರೆ ಕಮ್ಮಿಯಾದೀತು.’ ಅವೊತ್ತು ಆಂಕಾಲೊಜಿಸ್ಟರನ್ನು ಕಂಡುಬಂದ ದಿವಸದ ಇಳಿಸಂಜೆಯಲ್ಲಿ ಅಪರ್ಣೆ ಇವಿವೇ ಮಾತುಗಳನ್ನು ಪುನರುಚ್ಚರಿಸಿದ್ದಳು. ‘ಇನ್ನೊಂದೆರಡು ತಿಂಗಳು ನೋವಿಲ್ಲಾಂದರೆ ಅವೊತ್ತು ಹೇಳಿದ್ದೆನಲ್ಲ, ವಸ್ತಾರೆ- ಚೈತನ್ಯನ ಮನೆಯ ವಿಷಯ ಅದನ್ನ ಇತ್ಯರ್ಥ ಮಾಡಿಬಿಡುತೀನಿ. ಆಗುತ್ತಲ್ಲವಾ?’

ಕಡೆಗೂ ಆ ಇತ್ಯರ್ಥ ಜರುಗಲಿಲ್ಲವೆನ್ನುವುದು ಇನ್ನೊಂದು ಮಾತು.

ಇನ್ನು, ಇಪ್ಪತ್ತನಾಲ್ಕರ ಜುಲೈಯಿಯಲ್ಲಿ ಮೈಕಳಚಿ ಇಲ್ಲವಾದ ಅಪರ್ಣೆಯ ಮರಣೋತ್ತರದ ಕ್ರಿಯೆಯನ್ನೆಲ್ಲ ಮುಗಿಸಿದ್ದೆನಷ್ಟೆ, ಅವಳ ಅಣ್ಣ ನನ್ನ ಮೇಲೆ ಇನ್ನಿರದ ಹಕ್ಕೊತ್ತಾಯ ಹೇರಿ, ಆಗಸ್ಟಿನ ಮೊದಲವಾರಕ್ಕೆಲ್ಲ- ಸಹಾಯಕೇಂದ್ರದಿಂದ ವಾಪಸಾದರು. ಕೆಲವರ್ಷಗಳಿಂದ ನೆಲೆಸಿದ್ದ ಮತ್ತು ತನ್ನ ಒಡಹುಟ್ಟಿದಾಕೆಯೇ ಹೀಗೊಂದು ನೆಲೆ ಕಲ್ಪಿಸಿದ್ದ, ತೀರಾ ಎದುರುಮನೆಯಲ್ಲದಿದ್ದರೂ ನನ್ನ ಮನೆಗೇಟಿನಿಂದ ಕಣ್ಣಳತೆಯಲ್ಲಿ ಕಾಣಬಹುದಾದ ಮತ್ತು ಕೂಗಳತೆಯಲ್ಲಿ ಕರೆಯಬಹುದಾದ ಬಾಡಿಗೆಮನೆಯಲ್ಲಿ ಮತ್ತೊಮ್ಮೆ ಊರಿಕೊಂಡರು.

ಮತ್ತೊಮ್ಮೆ ಸುರುವಿನಲ್ಲಿ ಹೇಳಿದ ನನ್ನಮ್ಮ ಶಾಂತಾಮಣಿಯ ವಿಚಾರಕ್ಕೆ ವಾಪಸಾಗುತ್ತೇನೆ. ತನ್ನ ತರುವಾಯಕ್ಕೆಂದು ಹೆಚ್ಚೇನೂ ಮಿಗಿಸದೆ ತಣ್ಣಗೆ ಹೊರಟಳೆಂದು ಹೇಳಿದೆನಷ್ಟೆ, ಆ ಕುರಿತೊಂದಿಷ್ಟು ವಿಸ್ತರಿಸುತ್ತೇನೆ. ಇವೊತ್ತು ಚೈತನ್ಯರ ಮನೆಯಲ್ಲಿದ್ದ ಎರಡೂ ಅಲಮಾರಿಗಳನ್ನು ನನಗೆ ತೋಚಿದ ಮಟ್ಟಿಗೆ ‘ಸಾರ್ಟೌಟ್’ ಮಾಡಿದ ಮೇಲೆ ನನ್ನ ಮನಸ್ಸಿನಲ್ಲಿ ಶಾಂತಾಮಣಿಯ ‘ತರುವಾಯ’ವು ಸ್ಪಷ್ಟ ಚಿತ್ರಿಕೆಯೊಂದಾಗಿ ನಿಚ್ಚಳಿಸಿದೆ. ಅಚ್ಚುಕಟ್ಟಾಗಿ ನಿಚ್ಚಟಿಸುತ್ತಿದೆ.

ಅಂದರೆ ನನ್ನ ಅಮ್ಮ ತನ್ನ ಸಾವಿಗೆ ಅಣಿಗೊಂಡಿದ್ದಳೆಂತಲೇ? ಹೀಗೊಂದು ಪ್ರಶ್ನೆ ತಲೆಯೆತ್ತುತ್ತದೆ. ಅಂದರೆ... ಅಂದರೆ... ತನ್ನ ಸಾವಿನ ತರುವಾಯವನ್ನು ತಾನೇ ಯೋಜಿಸಿಟ್ಟಿದ್ದಳೆಂತಲ್ಲವೇ? ಸಾವಿನ ಬಳಿಕದ ಬಟವಾಡೆಗೆಂದು ಏನೆಂದರೆ ಏನನ್ನೂ ಬಿಟ್ಟಿದ್ದಿರದ ಅವಳು ತನ್ನ ಸಾವಿನೊಡನೆ ಅದರ ತರುವಾಯವನ್ನೂ ಅನುವಿಟ್ಟಿದ್ದಳೆಂತಲೇ ಅರ್ಥ ತಾನೇ? ಅಪರ್ಣೆಯೂ ಹೀಗೊಂದನ್ನು ಮಾಡಬೇಕೆಂದು ಎಣಿಸಿದ್ದಳೆಂಬುದೂ ಸತ್ಯವಷ್ಟೆ? ವಿಧಿಯೆಂಬುದರ ತನ್ನದೇ ವಿಧಾನವು ಹೀಗೊಂದನ್ನು ಮಾಡಗೊಡಲಿಲ್ಲವೆಂಬುದೂ ಅಷ್ಟೇ ನಿಜವಷ್ಟೆ?

ನನ್ನ ಈವರೆಗಿನ ಬದುಕನ್ನು ಅತ್ಯಂತ ಪ್ರಭಾವಿಸಿದ ಈ ಎರಡು ಹೆಣ್ಣುಗಳಿಂದ ನಾನು ಕಲಿಯಬೇಕಾದ್ದು ಇದೇ ಹವುದಷ್ಟೆ- ಸಾವಿಗೆ ಅಣಿಯಾಗುವಷ್ಟೇ ಅದರ ತರುವಾಯವನ್ನೂ ಅಣಿಯಿಡುವುದು. ಹಿಂದಿರದೆ ಮುಂದಿರದೆ ಏಕಾಏಕಿ ಒಬ್ಬಂಟಿಯಾದ, ಒಂದರ್ಥದಲ್ಲಿ ಬೇವಾರಸಿಯಾದ ಅಂದರೆ ‘ಸರಿ’ವಾರಸಿಲ್ಲದೆ ಉಳಿದ ನಾನು ಇನ್ನೇನು ತಾನೇ ಮಾಡಬಲ್ಲೆ... ಸಾವನ್ನೂ ತರುವಾಯವನ್ನೂ ಈಗ್ಗಿನಿಂದಲೇ ಅನುವಾಗಿಸಿ ಅಣಿಯಿರುವುದನ್ನು ಬಿಟ್ಟು... ಇಷ್ಟಾಗಿ ಆನೆಯೇ ಹೊರಟ ಮೇಲೆ ಬಾಲ ಹಿಡಿದುಕೊಂಡೇನು ಮಾಡುವುದು?