ಮೂರು ನಾಲ್ಕು ದಶಕಗಳ ಹಿಂದೆ, ಮುಂಜಾನೆ ಎದ್ದು ಒಂದು ಗಂಟೆ ಪತ್ರಿಕೆಗಳನ್ನು ಓದಿ, ಒಂದೂವರೆ ಗಂಟೆ ವಾಕಿಂಗ್ ಮಾಡಿ, ಗೆಳೆಯರ ಜತೆಗೆ ಮಾತನಾಡಿ, ತರಕಾರಿ ತೆಗೆದುಕೊಂಡು ಮನೆಗೆ ಬರುತ್ತಿದ್ದ ಅನೇಕರನ್ನು ಬೆಂಗಳೂರಲ್ಲಿ ನೋಡಬಹುದಾಗಿತ್ತು.

ಜೋಗಿ

ನಾನು ಚಿಕ್ಕವನಿದ್ದಾಗ ಬಸ್ಸುಗಳಲ್ಲಿ, ರಸ್ತೆ ಬದಿಯಲ್ಲಿ ಸಾಮಾನ್ಯವಾಗಿ ನಿಧಾನವೇ ಪ್ರಧಾನ ಎಂಬ ಬೋರ್ಡು ಕಣ್ಣಿಗೆ ಬೀಳುತ್ತಿತ್ತು. ಈ ವೇಗದ ರಸ್ತೆ ಮತ್ತು ವಾಹನಗಳ ಕಾಲದಲ್ಲಿ ನಿಂತು, ಹಿಂತಿರುಗಿ ನೋಡಿದರ, ಅದೀಗ ತಮಾಷೆಯಾಗಿ ಕಾಣುತ್ತದೆ. ಆಗ ಬರುತ್ತಿದ್ದ ವಾಹನಗಳಲ್ಲಿ, ಆ ಕಾಲಕ್ಕೆ ಇದ್ದ ರಸ್ತೆಗಳಲ್ಲಿ ಗಂಟೆಗೆ ಅರವತ್ತು ಕಿಲೋಮೀಟರ್ ವೇಗದಲ್ಲಿ ಹೋಗುವುದೇ ಅತಿ ವೇಗ ಅನ್ನಿಸಿಕೊಳ್ಳುತ್ತಿತ್ತು. ಈಗ ನಾವು, ಗಂಟೆಗೆ ನೂರೈವತ್ತು ಕಿಲೋಮೀಟರ್ ಸಾಗುವ ಕಾರುಗಳಲ್ಲಿ ಕುಳಿತು, ಬೆಂಗಳೂರಿನಿಂದ ಮೈಸೂರಿಗೆ ಒಂದೂವರೆ ಗಂಟೆಯಲ್ಲಿ ತಲುಪಿದೆ, ಹುಬ್ಬಳ್ಳಿಗೆ ನಾಲ್ಕೇ ಗಂಟೆಯಲ್ಲಿ ಮುಟ್ಟಿದೆ ಅಂತೆಲ್ಲ ಹೇಳುವಾಗ ಈ ಹಳೆಯ ನಿಧಾನವೇ ಪ್ರಧಾನ ಎಂಬ ಮಾತು ನೆನಪಾಗುತ್ತದೆ. ಆ ಮಾತು ಕೇವಲ ವಾಹನಗಳ ವೇಗಕ್ಕೆ ಮಾತ್ರ ಸಂಬಂಧಪಟ್ಟದ್ದಾಗಿರಲಿಲ್ಲ ಅನ್ನುವುದು ಕೂಡ ಹೊಳೆಯುತ್ತದೆ.

ಇದ್ದಕ್ಕಿದ್ದಂತೆ ವಾಹನಗಳ ವೇಗವೂ ಬದುಕಿನ ವೇಗವೂ ಅತಿಯಾಗಿಬಿಟ್ಟಿದೆ. ಮೂರು ನಾಲ್ಕು ದಶಕಗಳ ಹಿಂದೆ, ಮುಂಜಾನೆ ಎದ್ದು ಒಂದು ಗಂಟೆ ಪತ್ರಿಕೆಗಳನ್ನು ಓದಿ, ಒಂದೂವರೆ ಗಂಟೆ ವಾಕಿಂಗ್ ಮಾಡಿ, ಗೆಳೆಯರ ಜತೆಗೆ ಮಾತನಾಡಿ, ತರಕಾರಿ ತೆಗೆದುಕೊಂಡು ಮನೆಗೆ ಬರುತ್ತಿದ್ದ ಅನೇಕರನ್ನು ಬೆಂಗಳೂರಲ್ಲಿ ನೋಡಬಹುದಾಗಿತ್ತು. ಮನೆಗೆ ಬಂದ ನಂತರ ಅವರು ಸುಮಾರು ಎರಡು ಗಂಟೆಗಳ ಕಾಲ ದೇವರ ಪೂಜೆಯಲ್ಲಿ ತೊಡಗುತ್ತಿದ್ದರು. ತಿರುಪತಿಗೆ ಹೋಗಿ ಬರುವುದಕ್ಕೆ ಮೂರು ದಿನ ಬೇಕಾಗುತ್ತಿತ್ತು. ಈಗ ವಾಕಿಂಗ್ ಅರ್ಧಗಂಟೆಗೆ ಇಳಿದು, ಗೆಳೆಯರ ಜತೆಗಿನ ಮಾತು ಫೋನಿಗೆ ಸೀಮಿತಗೊಂಡು, ತರಕಾರಿ ಮನೆಗೆ ಬಂದು ಬೀಳುತ್ತಿದೆ. ದೇವರ ಪೂಜೆ ಹತ್ತೇ ನಿಮಿಷಕ್ಕೆ ಮುಗಿಯುತ್ತದೆ.

ಹಾಗಿದ್ದರೆ, ಆ ನಿಧಾನಪ್ರಜೆಯ ಮೂರು ಗಂಟೆಗಳು ಎಲ್ಲಿ ಹೋದವು? ಯಾರು ಅದನ್ನು ಕಸಿದುಕೊಂಡರು? ಎಷ್ಟೇ ವೇಗವಾಗಿ ಕೆಲಸ ಮಾಡಿದರೂ ಪುರಸೊತ್ತೇ ಇಲ್ಲ ಅಂತ ಎಲ್ಲರೂ ಯಾಕೆ ಹೇಳುತ್ತಿದ್ದಾರೆ? ದಿನಕ್ಕೆ ಒಂದೋ ಎರಡೋ ಫೋನು ಬರುತ್ತಿದ್ದ, ಮನೆಗೆ ಬಂದಾಗಲೋ ಆಫೀಸಿಗೆ ಹೋದ ನಂತರವೋ ಅಗತ್ಯವಿದ್ದಾಗ ಮಾತ್ರ ಫೋನಿನಲ್ಲಿ ಮಾತಾಡುತ್ತಿದ್ದ ನಾವು, ಈಗ ದ್ವಿಚಕ್ರ ವಾಹನದಲ್ಲಿ ಹೋಗುವಾಗಲೂ ಕತ್ತು ವಾಲಿಸಿಕೊಂಡು ಫೋನಿನಲ್ಲಿ ಮಾತಾಡುವಷ್ಟು ಅವಸರಶೂರರು ಆಗಿದ್ದು ಯಾಕೆ? ಈ ಅವಸರದಿಂದಾಗಿ ನಮ್ಮ ಮೆಟಬಾಲಿಸಮ್ ಜಾಸ್ತಿಯಾಗಿದೆಯೇ? ಬದುಕನ್ನು ಮತ್ತಷ್ಟು ತೀವ್ರವಾಗಿ ಬದುಕುತ್ತಿದ್ದೇವೆಯೇ? ಅನುಭವದ ಗುಣಮಟ್ಟ ಹೆಚ್ಚಿದೆಯೇ?

ವೇಗವಾಗಿ ಸಾಗುವ ಹೆದ್ದಾರಿಗಳು ದೇಶಕ್ಕೆ ಅಗತ್ಯ ಎಂಬ ಮಾತು ಬಂದಾಗ ಶಿವರಾಮ ಕಾರಂತರು ಕೇಳಿದ್ದರು: ಪುತ್ತೂರಿನಿಂದ ಮೈಸೂರಿಗೆ ಹೋಗಲು ಆರು ಗಂಟೆ ಬೇಕು. ಹೆದ್ದಾರಿ ಮಾಡಿದರೆ ನಾಲ್ಕು ಗಂಟೆ ಸಾಕು. ಉಳಿದ ಎರಡು ಗಂಟೆ ತಕ್ಕೊಂಡು ನೀವೇನು ಮಾಡುತ್ತೀರಿ? ಗಾಳ ಹಾಕಿಕೊಂಡು ಮೀನು ಹಿಡಿಯುವ ಸುಖದ ಬಗ್ಗೆ ಮಾತಾಡುತ್ತಾ ಪೂರ್ಣಚಂದ್ರ ತೇಜಸ್ವಿ ಹೇಳಿದ ಮಾತು ಇದು: ಮೆಷೀನು ದೋಣಿಗಳಲ್ಲಿ ಹೋಗಿ ಬಲೆಬೀಸಿ ಅರ್ಧಗಂಟೆಯಲ್ಲಿ ಲಕ್ಷಾಂತರ ಮೀನು ಹಿಡೀಬಹುದು. ಆದರೆ ಅರ್ಧ ದಿನ ಕಾದು ಒಂದು ಮೀನು ಗಾಳಕ್ಕೆ ಬೀಳೋದನ್ನೇ ಕಾದು, ಅದನ್ನು ಸವಿಯೋದರಲ್ಲಿ ಇರುವ ಸುಖವೇ ಬೇರೆ. ಒಂದು ಮೀನಿಗೆ ಅರ್ಧ ದಿನದ ಆಯಸ್ಸು ಕೊಡುವುದೇ ನಾವು ಅದಕ್ಕೆ ಸಲ್ಲಿಸುವ ಗೌರವ.

ಎಲ್ಲವೂ ಛಕ್ಕನೆ ಆಗಿಬಿಡಬೇಕು ಅನ್ನುವ ಧೋರಣೆಯೊಂದು ಉದಾರೀಕರಣದ ಜತೆಜತೆಯಲ್ಲೇ ಶುರುವಾಯಿತು. ತಿನ್ನುವುದನ್ನು ಕೂಡ ವೇಗವಾಗಿ ಮಾಡಬೇಕು ಅಂತ ನಾವು ಯಾವಾಗ ನಂಬಿದೆವೋ ಆಗ ನಿಜವಾದ ಅವನತಿ ಆರಂಭವಾಯಿತು ಎನ್ನಬಹುದು. ಆಗ ಫಾಸ್ಟ್ ಪುಡ್ ರೆಸ್ಟೊರೆಂಟುಗಳು ಹುಟ್ಟಿಕೊಂಡವು. ನಿಂತುಕೊಂಡೇ ಇಡ್ಲಿವಡೆ ನುಂಗಿ ಓಡುವುದು ಅಭ್ಯಾಸವಾಯಿತು. ಅರ್ಧಗಂಟೆ ಹೊತ್ತು ಆರಾಮವಾಗಿ ಕುಳಿತುಕೊಂಡು ತಿಂಡಿ ತಿಂದು, ಕಾಫಿ ಕುಡಿದು ಉಪಾಹಾರ ಮಾಡುವುದನ್ನು ಮರೆತೆವು.

ಮರಳಿ ಸಾವಧಾನದ ಕಡೆಗೆ: ಮರೆತುದನ್ನು ಮತ್ತೆ ಆರಂಭಿಸಿ. ಮತ್ತೆ ನಿಧಾನಕ್ಕೆ ಮರಳಿ, ಯಾವುದಕ್ಕೆ ಎಷ್ಟು ಕಾಲಾವಕಾಶ ಬೇಕೋ ಅಷ್ಟು ಕೊಟ್ಟುಕೊಳ್ಳಿ, ನಿಮ್ಮ ಸಮಯ ನಿಮ್ಮದೇ ಹೊರತು ಬೇರೆ ಯಾರದ್ದೂ ಅಲ್ಲ ತಿಳಿದುಕೊಳ್ಳಿ ಅನ್ನುವ ಮನೋಭಾವ ಮತ್ತೆ ಶುರುವಾಗಿದೆ. ಅದನ್ನೇ ಜಪಾನ್ ಯುಟೋರಿ ಎಂದು ಕರೆದಿದೆ. ಅದನ್ನು ಹೊಸ ಜೀವನಧರ್ಮವಾಗಿ ಸ್ವೀಕರಿಸುತ್ತಿದೆ. ಹೊಸ ತಲೆಮಾರು ಮತ್ತೆ ಎಲ್ಲವನ್ನೂ ಸಾವಕಾಶ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳುತ್ತಿದೆ.

ಯುಟೋರಿ ಅಂದರೆ ಜಪಾನಿ ಭಾಷೆಯಲ್ಲಿ ಸಾವಕಾಶ ಅಂತ ಅರ್ಧ. ಇಂಗ್ಲಿಷ್‌ನಲ್ಲಿ ಯುಟೋರಿಗೆ ಸಮನಾದ ಪದವಿಲ್ಲ. ಕನ್ನಡದಲ್ಲಿ ಸಾವಕಾಶ ಅಂದರೆ ನಿಧಾನ ಅಂತಲೂ ಒಂದು ಕೆಲಸ ಮಾಡಲು ಎಷ್ಟು ಸಮಯ ಮತ್ತು ವಿರಾಮ ಬೇಕಾಗುತ್ತದೆಯೋ ಅಷ್ಟನ್ನೂ ಬಳಸಿಕೊಳ್ಳಿ ಅಂತಲೂ ಅರ್ಥ. ಯುಟೋರಿಯ ತಾತ್ವಿಕತೆ ಅದೇ. ತಡೀರಿ, ಚೆನ್ನಾಗಿ ಉಸಿರಾಡಿ, ನಿಧಾನಿಸಿ, ಅತಿಯಾದ ಅವಸರ ಬೇಡ, ನಿಮ್ಮ ಸುತ್ತಲಿನ ಪರಿಸರವನ್ನು ಪೂರ್ತಿಯಾಗಿ ತುಂಬಿಕೊಳ್ಳಿ- ಹೀಗೆ ಹಲವು ಅರ್ಥಗಳನ್ನು ಯುಟೋರಿ ಮೂಲಕ ಹೇಳಲಾಗುತ್ತದೆ.

ಈಗಲೂ ಪಂಕ್ತಿಯಲ್ಲಿ ಕುಳಿತು ಊಟ ಮಾಡುವಾಗ ಮನೆಯ ಯಜಮಾನ ಬಂದು ಸಾವಕಾಶ ಆಗಲಿ, ನಿಧಾನವಾಗಿ ಆಗಲಿ ಅಂತ ಹೇಳುವುದಿದೆ. ಯುಟೋರಿ ತತ್ವಜ್ಞಾನ ಅದನ್ನೇ ಹೇಳುತ್ತದೆ. ಹಾಗಂತ ಯುಟೋರಿ ಅಂದರೆ ಕೆಲಸ ಕಡಿಮೆ ಮಾಡುವುದಲ್ಲ. ನಿಷ್ಕ್ರಿಯತೆ ಅಲ್ಲ. ಒಂದು ದಿನಕ್ಕೆ ಹತ್ತು ಕಾರು ರಿಪೇರಿ ಮಾಡುವವನು ಐದೇ ಕಾರು ರಿಪೇರಿ ಮಾಡುವುದಲ್ಲ. ಅದು ಹೊರಜಗತ್ತಿಗೆ ಸಂಬಂಧಿಸಿದ್ದು ಮಾತ್ರವಲ್ಲ, ಒಳಜಗತ್ತಿನಲ್ಲೂ ಮಾಡಿಕೊಳ್ಳಬೇಕಾದ ಬದಲಾವಣೆ.

ಕುವೆಂಪು ಮಲೆಗಳಲ್ಲಿ ಮದುಮಗಳು ಕಾದಂಬರಿಯ ಆರಂಭದಲ್ಲಿ ಬರೆಯುತ್ತಾರೆ: ಇಲ್ಲಿ ಅವಸರವೂ ಸಾವಧಾನದ ಬೆನ್ನೇರಿದೆ. ಸಾವಧಾನ ಎಂದರೂ ಯುಟೋರಿಯ ಇನ್ನೊಂದು ರೂಪ. ಅಥವಾ ಅದೇ ಯುಟೋರಿ. ಜಪಾನಿನಲ್ಲಿ ನಡೆದ ಅನೇಕ ಅಧ್ಯಯನಗಳ ಪ್ರಕಾರ ನಾವು ಮಾಡುವುದನ್ನು ಸಾವಕಾಶವಾಗಿ ಸಾವಧಾನವಾಗಿ ಮಾಡಿದಾಗ ಹೆಚ್ಚು ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಕೆಲಸ ಮಾಡಿದ ಒತ್ತಡ, ಸುಸ್ತು ನಮಗೆ ಅರಿವಾಗುವುದಿಲ್ಲ. ಉದಾಹರಣೆಗೆ ನಾವು ಸ್ಕೇಲಿನಲ್ಲಿ ಗೆರೆ ಹಾಕುವಾಗ ಮೇಷ್ಟರು ಹೇಳುತ್ತಿದ್ದರು. ನಿಧಾನವಾಗಿ ಹಾಕು, ಅವಸರ ಮಾಡಿದರೆ ಗೆರೆ ಓರೆಯಾಗುತ್ತದೆ. ಅದನ್ನು ಅಳಿಸಿ ಮತ್ತೆ ಮತ್ತೆ ಗೆರೆ ಹಾಕುವುದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಒಂದೇ ಮನಸ್ಸಿನಿಂದ ಪೆನ್ಸಿಲು, ರೂಲರ್ ಮತ್ತು ಕಾಗದವನ್ನಷ್ಟೇ ಮನಸ್ಸಿನಲ್ಲಿ ತುಂಬಿಕೊಂಡು ಗೆರೆ ಹಾಕುವುದು ಯುಟೋರಿ. ಜಗತ್ತಿನ ಜಂಜಡವನ್ನೆಲ್ಲ ತುಂಬಿಕೊಂಡು ಬೇಗ ಬರೆದುಬಿಡಬೇಕು ಅನ್ನುವ ಆತುರದಿಂದ ಗೆರೆ ಹಾಕಿದರೆ ಅದು ಅವಸರ.

ಪಿ. ಲಂಕೇಶರ ಒಂದು ಪ್ರಬಂಧ, ಸುಮ್ಮನೆ ಜೀವಿಸಿದ ಒಂದು ದಿನ. ಈ ಸುಮ್ಮನೆ ಜೀವಿಸಿದ ದಿನ ಅವರು ಅತಿ ಹೆಚ್ಚು ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ಮಿಕ್ಕ ದಿನಕ್ಕಿಂತ ಹೆಚ್ಚು ಕೆಲಸವನ್ನು ಕಡಿಮೆ ದಣಿವಿನಿಂದ ಮಾಡಿರುತ್ತಾರೆ. ಯಾವತ್ತೂ ಮಾಡದೇ ಉಳಿದ ಕೆಲಸಗಳನ್ನೆಲ್ಲ ಮಾಡಿ ಮುಗಿಸುತ್ತಾರೆ. ಸುಮ್ಮನೆ ಜೀವಿಸುವುದು ಕೂಡ ಒಂದು ಯೋಗ ಅನ್ನುವ ಸೂಚನೆಯನ್ನು ಕೊಡುತ್ತಾ ಲಂಕೇಶ್ ಆ ಪ್ರಬಂಧದಲ್ಲಿ ಹೇಳುವ ಸಂಗತಿಗಳು ಯುಟೋರಿಗೆ ಹತ್ತಿರವಾಗಿವೆ. ಝೆನ್ ತತ್ವಜ್ಞಾನದಲ್ಲೂ ಯುಟೋರಿಯನ್ನು ಹೋಲುವ ಒಂದು ಸಾಲಿದೆ. Sitting Quietly. Doing Nothing And the grass grows by itself. ಅಂದರೆ ನೀನು ಪ್ರಯತ್ನಪೂರ್ವಕ ಏನೂ ಮಾಡಬೇಕಾಗಿಲ್ಲ. ನಿನ್ನ ಕೆಲಸ ಗಮನಿಸುವುದು ಮಾತ್ರ, ಚಡಪಡಿಸುವುದಲ್ಲ, ಒದ್ದಾಡುವುದಲ್ಲ. ನಡೆಯಬೇಕಾದದ್ದು ನಡೆಯುತ್ತದೆ, ನೀನು ಒತ್ತಡ ಹಾಕುವುದರಿಂದ ಅದು ತನ್ನ ಸ್ವರೂಪವನ್ನಾಗಲೀ ವೇಗವನ್ನಾಗಲೀ ಬದಲಾಯಿಸಿಕೊಳ್ಳುವುದಿಲ್ಲ.

ಎಂಟು ಗಂಟೆಗೆ ತಲುಪುತ್ತೇನೆ ಎಂದಿರುತ್ತೀರಿ. ಹೊರಡುವಾಗಲೇ ಏಳೂವರೆ ಆಗಿರುತ್ತದೆ. ಮುಕ್ಕಾಲು ಗಂಟೆಯ ಹಾದಿ ಎಂದು ಗೊತ್ತಿರುತ್ತದೆ. ತಲುಪುವಾಗ ಕಾಲು ಗಂಟೆ ತಡವಾಗುತ್ತದೆ ಅಂತ ಖಾತ್ರಿಯಾಗಿರುತ್ತದೆ. ಆದರೆ ದಾರಿಯುದ್ದಕ್ಕೂ ಒತ್ತಡದಿಂದಲೇ ಆತಂಕದಿಂದಲೇ ಎಂದಿಗಿಂತ ಕೆಟ್ಟದಾಗಿ ಕಾರು ಓಡಿಸುತ್ತೀರಿ. ತಡವಾಗಿದೆ ಅನ್ನುವ ಒಂದೇ ಒಂದು ಆಲೋಚನೆ ನೀವು ಕಾರು ಓಡಿಸುವ ರೀತಿಯನ್ನೇ ಕೆಡಿಸಬಲ್ಲದು. ಇದರಿಂದ ಪಾರಾಗುವ ದಾರಿ ಯಾವುದು? ಒಂದೋ ಬೇಗನೇ ಹೊರಡುವುದು ಇಲ್ಲದೇ ಹೋದರೆ ತಡವಾಗಿ ಬರುತ್ತೇನೆ ಎಂದು ಹೇಳಿಬಿಡುವುದು. ಆದರೆ ನಾವು ಎರಡನ್ನೂ ಮಾಡದೇ ಕೆಟ್ಟದಾಗಿ ಡ್ರೈವ್ ಮಾಡುತ್ತೇವೆ. ನಮ್ಮ ಮೇಲಿನ ನಂಬಿಕೆ ಕಳಕೊಳ್ಳುತ್ತೇವೆ. ಜಪಾನಿನ ಸ್ಕೂಲುಗಳಲ್ಲಿ ಯುಟೋರಿಯನ್ನು ಒಂದು ಪಠ್ಯವಾಗಿ ಕಲಿಸಲು ಆರಂಭಿಸಿದ್ದಾರೆ. ಯುಟೋರಿ ಶಿಕ್ಷಣ ಅಂತ ಒಂದು ವಿಭಾಗವೇ ಆರಂಭವಾಗಿದೆ. ಒಂಬತ್ತು ವರ್ಷಗಳ ಹಿಂದೆ ಸಣ್ಣದಾಗಿ ಆರಂಭವಾದ ಯುಟೋರಿ ಇವತ್ತು ಅಲ್ಲಿಯ ಜನಜೀವನದ ನಿತ್ಯೋಪನಿಷತ್ತು ಆಗಿಬಿಟ್ಟಿದೆ.

ಯುಟೋರಿಯ ಮತ್ತೊಂದು ಅರ್ಥವೆಂದರೆ ಮನಸ್ಸಿನಲ್ಲೊಂದು ಕೋಣೆ ಮಾಡಿಕೋ. ಆ ಕೋಣೆಯಲ್ಲಿ ನೀನೊಬ್ಬನೇ ವಾಸ ಮಾಡು. ಇದನ್ನು ಡಿವಿಜಿ ಮಂಕುತಿಮ್ಮನ ಕಗ್ಗದಲ್ಲೂ ಹೇಳಿದ್ದಾರೆ:
ಎರಡು ಕೋಣೆಗಳ ನೀಂ ಮಾಡು ಮನದಾಲಯದಿ
ಹೊರಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ
ವರಯೋಗಸೂತ್ರವಿದು – ಮಂಕುತಿಮ್ಮ
ಯುಟೋರಿ ಕೂಡ ಅಂಥದ್ದೊಂದು ವರಯೋಗ ಸೂತ್ರ.