ಹಾನ್ ಕಾಂಗ್ ಮಗನೊಂದಿಗೆ ಚಹಾ ಕುಡಿದು ನೋಬೆಲ್ ಪಶಸ್ತಿ ಬಂದಿದ್ದನ್ನು ಸಂಭ್ರಮಿಸಿದ್ದಾರೆ!
ನೊಬೆಲ್ ಪ್ರಶಸ್ತಿ ವಿಜೇತೆ ಹಾನ್ ಕಾಂಗ್, ಜೆನ್ನಿ ರೈಡನ್ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ, ಅವರ ಬರವಣಿಗೆಯ ಪ್ರೇರಣೆ, 'ದಿ ವೆಜಿಟೇರಿಯನ್' ಕಾದಂಬರಿಯ ಹಿಂದಿನ ಕಥೆ ಮತ್ತು ಪ್ರಶಸ್ತಿ ಗೆದ್ದ ಸುದ್ದಿ ತಿಳಿದಾಗಿನ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಹಲೋ.. ಹಾನ್ ಕಾಂಗ್ ಮಾತಾಡ್ತಿರೋದಾ?
-ಹೌದು
ನಾನು ಜೆನ್ನಿ ರೈಡನ್, ನೊಬೆಲ್ ಪ್ರೈಜ್‌ನಿಂದ. ಅಭಿನಂದನೆ.
-ಥ್ಯಾಂಕ್ಸ್
ಈಗ ಏನನ್ನಿಸುತ್ತಿದೆ?
-ಸಿಕ್ಕಾಪಟ್ಟೆ ಆಶ್ಚರ್ಯವಾಗಿದೆ, absolutely. I’m honoured.
ಬಹುಮಾನ ಬಂದಿದ್ದು ಹೇಗೆ ಗೊತ್ತಾಯ್ತು?
-ಯಾರೋ ಫೋನ್ ಮಾಡಿ ಹೇಳಿದ್ದರು. ಸುದ್ದಿ ಕೇಳಿದಾಗ ಆಶ್ಚರ್ಯವಾಯ್ತು. ನಾನು ಆಗಷ್ಟೇ ನನ್ನ ಮಗನ ಜತೆ ಊಟ ಮುಗಿಸಿದ್ದೆ. ಈಗಿನ್ನೂ ಕೊರಿಯಾದಲ್ಲಿ ರಾತ್ರಿ ಎಂಟು ಗಂಟೆ. ತಣ್ಣಗಿನ ಶಾಂತ ರಾತ್ರಿ. ನಿಜಕ್ಕೂ ಅಚ್ಚರಿ ನನಗೆ.
ನಿಮ್ಮನೆ ಸಿಯೋಲ್‌ನಲ್ಲಿದೆ ಅಲ್ವಾ.. ಇವತ್ತಿಡೀ ಏನು ಮಾಡಿದೆ?
-ಇವತ್ತೇನೂ ಕೆಲಸ ಮಾಡಲಿಲ್ಲ, ಒಂದಷ್ಟು ಓದು, ಒಂಚೂರು ವಾಕಿಂಗ್. ಸರಳವಾಗಿ ಸಾಗಿದ ದಿನ ಇದು.
ಈ ಸುದ್ದಿ ಕೇಳಿ ಮಗ ಏನಂದ?
-ಅವನಿಗೂ ಅಚ್ಚರಿಯಾಯಿತು. ನಾವು ಹೆಚ್ಚಿಗೇನೂ ಮಾತಾಡಿಕೊಳ್ಳಲಿಲ್ಲ. ಅಷ್ಟು ಸಮಯ ಇರಲಿಲ್ಲ.
ಈ ಪ್ರಶಸ್ತಿ ಪಡೆದ ಮೊದಲ ಕೊರಿಯನ್ ನೀವು, ಹೇಗನ್ನಿಸುತ್ತಿದೆ?
-ನಾನು ಪುಸ್ತಕ ಓದುತ್ತಾ ಬೆಳೆದವಳು. ಬಾಲ್ಯದಿಂದಲೂ ಕೊರಿಯನ್ ಮತ್ತು ಅನುವಾದಗೊಂಡ ಪುಸ್ತಕಗಳನ್ನು ಸಾಕಷ್ಟು ಓದಿದ್ದೀನಿ. ಕೊರಿಯನ್ ಸಾಹಿತ್ಯ ನನ್ನ ಮನಸ್ಸಿಗೆ ಹತ್ತಿರವಾಗಿದೆ. ಈ ಸುದ್ದಿ ನನ್ನಂತೆ ಕೊರಿಯನ್ ಸಾಹಿತ್ಯ ಓದುವ ಎಲ್ಲರಿಗೂ ಆಪ್ತವಾಗುತ್ತದೆ.
ನಿಮ್ಮ ಸ್ಫೂರ್ತಿಯ ಸೆಲೆ ಯಾವುದು?
-ಎಲ್ಲಾ ಲೇಖಕರೂ ಬಾಲ್ಯದಿಂದಲೇ ನನಗೆ ಸ್ಫೂರ್ತಿ. ಅವರು ಬದುಕಿನ ಅರ್ಥ ಅರಸುತ್ತಿರುತ್ತಾರೆ. ಕೆಲವೊಮ್ಮೆ ಸೋಲುತ್ತಾ, ಕೆಲವೊಮ್ಮೆ ಹಟಬಿಡದೇ ಮುನ್ನುಗ್ಗುತ್ತಾ ಇರುವ ಅವರ ಪ್ರಯತ್ನ ಮತ್ತು ಶಕ್ತಿಯೇ ನನಗೆ ಸ್ಫೂರ್ತಿ. ಕೆಲವು ಹೆಸರುಗಳನ್ನು ಹೇಳುವುದು ನನಗೆ ಸಾಧ್ಯವಿಲ್ಲ.
ಸ್ವೀಡಿಷ್ ಲೇಖಕಿ ಆಸ್ಟ್ರಿಡ್ ಲಿಂಡ್‌ಗ್ರೆನ್ ನಿಮಗೆ ಸ್ಫೂರ್ತಿ ಅಂತ ಕೇಳಿದ್ದೆ.
-ಬಾಲ್ಯದಲ್ಲಿ ಅವಳ ಪುಸ್ತಕ ಓದುತ್ತಿದ್ದೆ. ಲಯನ್‌ಹಾರ್ಟ್ ಬ್ರದರ್ಸ್ ನನ್ನಿಷ್ಟದ ಪುಸ್ತಕವಾಗಿತ್ತು. ಅವಳೊಬ್ಬಳೇ ನನಗೆ ಪ್ರೇರಣೆ ಆಗಿದ್ದಳು ಅಂತ ಈಗ ಹೇಳಲಾರೆ. ಆ ಪುಸ್ತಕ ಓದಿದಾಗ ನನ್ನಲ್ಲಿದ್ದ ಸಾವು ಬದುಕಿನ ಕುರಿತ ಪ್ರಶ್ನೆಗಳು ಅಲ್ಲೂ ಕಂಡವು.
ಈಗಷ್ಟೇ ನಿನ್ನ ಪುಸ್ತಕ ಓದಲು ಆರಂಭಿಸುವವರು ಯಾವುದರಿಂದ ಶುರುಮಾಡಬಹುದು?
-ಎಲ್ಲಾ ಲೇಖಕರೂ ತಮ್ಮ ಇತ್ತೀಚಿನ ಪುಸ್ತಕವನ್ನು ಹೆಚ್ಚು ಇಷ್ಟಪಡುತ್ತಾರೆ. ನನ್ನ ಹೊಸ ಪುಸ್ತಕ ವಿ ಡು ನಾಟ್ ಪಾರ್ಟ್. ಅದರಿಂದ ಓದು ಶುರುಮಾಡಬಹುದು ಅನ್ನಿಸುತ್ತೆ. ವೈಟ್ ಬುಕ್ ಕೂಡ ಓದಬಹುದು. ಅದು ನನ್ನ ಖಾಸಗಿ ಪುಸ್ತಕ, ಆತ್ಮಕಥನದ ಅಂಶವೂ ಇದೆ. ಹೇಗೂ ದಿ ವೆಜಿಟೇರಿಯನ್ ಇದ್ದೇ ಇದೆ.
ಹೊರನಾಡಿನವರಿಗೆ ಈಗ ದಿ ವೆಜಿಟೇರಿಯನ್ ಪರಿಚಯವಾಗುತ್ತಿದೆ. ಆ ಪುಸ್ತಕದ ಬಗ್ಗೆ ಏನಾದರೂ ಹೇಳಿ
-ಅದನ್ನು ನಾನು ಮೂರು ವರ್ಷ ಬರೆದೆ. ನನಗೆ ವೈಯಕ್ತಿಕವಾಗಿ ಬೇರೆ ಬೇರೆ ಕಾರಣಕ್ಕೆ ಅವು ಬಲು ಕಷ್ಟದ ವರ್ಷಗಳು. ಅದರ ನಾಯಕಿಯ ಚಿತ್ರ, ಅವಳ ಸುತ್ತಲಿನ ಮಂದಿ, ಸೂರ್ಯನ ಬೆಳಕು, ಮರಗಳ ಚಿತ್ರಗಳನ್ನೆಲ್ಲ ಕಟ್ಟಿಕೊಡಲು ಒದ್ದಾಡುತ್ತಿದ್ದೆ. ಆ ಮೂರು ವರ್ಷಗಳಲ್ಲಿ ಅವೆಲ್ಲವೂ ನನ್ನ ಮನಸ್ಸಿಗೆ ಸ್ಪಷ್ಟವಾಗಿದ್ದವು.
ಈ ಸಂಭ್ರಮವನ್ನು ಹೇಗೆ ಆಚರಿಸೋ ಯೋಚನೆಯಿದೆ?
-ಈ ಫೋನ್ ಮುಗಿದ ತಕ್ಷಣ ಟೀ ಕುಡೀತೀನಿ. ಸಾಮಾನ್ಯವಾಗಿ ನಾನು ಟೀ ಕುಡಿಯಲ್ಲ. ಈಗ ಮಗನ ಜತೆ ಟೀ ಕುಡೀತಾ ತಣ್ಣಗೆ ಇದನ್ನು ಸೆಲೆಬ್ರೇಟ್ ಮಾಡ್ತೀನಿ.
ಮಾಂಸಾಹಾರ ಬಿಟ್ಟವಳ ಕತೆ
ನೊಬೆಲ್ ಪುರಸ್ಕಾರ ಪಡೆದ The Vegetarian ಕಾದಂಬರಿಗೆ 2016ರಲ್ಲೇ ಬೂಕರ್ ಕೂಡ ಬಂದಿತ್ತು. ಇದು ಮಧ್ಯವಯಸ್ಕ ಕೊರಿಯನ್ ಮಹಿಳೆಯ ಕತೆ. ಒಂದು ರಾತ್ರಿ ಆಕೆ ಇದ್ದಕ್ಕಿದ್ದಂತೆ ಮಾಂಸಾಹಾರ ಬಿಟ್ಟು ಬಿಡುತ್ತಾಳೆ. ಇನ್ನು ಮೇಲೆ ಮಾಂಸ ತಿನ್ನೋದಿಲ್ಲ ಅಂತ ತೀರ್ಮಾನಿಸುತ್ತಾಳೆ. ಅವಳ ಈ ಕತೆಯಲ್ಲಿ ಆಕೆಯೇ ಪ್ರಮುಖ ಪಾತ್ರವಾಗಿದ್ದರೂ, ಕತೆ ಸಾಗುವುದು ಅವಳ ಗಂಡ, ಭಾವ ಮತ್ತು ದೊಡ್ಡಕ್ಕನ ಮಾತುಗಳಲ್ಲಿ. ಅವರ ಪ್ರತಿಕ್ರಿಯೆ, ಆಕ್ರೋಶ, ಆಕರ್ಷಣೆ, ಮತ್ಸರಗಳ ನಡುವೆಯೇ ತನ್ನ ನಿರ್ಧಾರದಿಂದ ಕುಟುಂಬದಲ್ಲಾದ ಆಘಾತಕ್ಕೆ ಮಣಿಯದೇ ಇರಲು ನಿರ್ಧರಿಸುವ ಆಕೆಯ ಛಲದ ಕತೆ ಇದು. ಈ ಮೂರು ಪಾತ್ರಗಳ ಪ್ರತಿಕ್ರಿಯೆಯಲ್ಲಿದೇ ಪಿತೃ ಪ್ರಧಾನ ಸಮಾಜದ ಕಟು ಚಿತ್ರ ದೊರಕುತ್ತಾ ಹೋಗುತ್ತದೆ. ಉದ್ಯೋಗದ ಬೆನ್ನುಹತ್ತಿದ ಸಮಾಜದ ನಿಲುವುಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.