ಗೋಪಾಲ್‌ ಯಡಗೆರೆ

ಶಿವಮೊಗ್ಗ (ಅ.13): ಯಾವುದೇ ಬಿಗಿ ಕ್ರಮಕ್ಕೂ ಬಗ್ಗದೆ ಕಾನೂನನ್ನು ಉಲ್ಲಂಘಿಸುವುದೇ ತಮ್ಮ ಹಕ್ಕು ಎಂದು ಓಡಾಡುತ್ತಿದ್ದ ಒಂದಿಷ್ಟು ಸಂಚಾರಿ ನಿಯಮ ಉಲ್ಲಂಘಿತರ ಗುಂಪು ಇದೀಗ ಸ್ವಲ್ಪ ದಾರಿಗೆ ಬಂದಂತಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ ಭಾರೀ ದಂಡದ ಪ್ರಯೋಗ ಈ ನಿಯಮ ಉಲ್ಲಂಘಿತರ ಗುಂಪಿಗೆ ಸರಿಯಾದ ಬಿಸಿ ತಾಗಿದಂತಿದೆ. ಇದೀಗ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದಲ್ಲಿ ಭಾರೀ ಇಳಿಕೆ ಕಾಣಿಸಿದೆ.

ಕೇಂದ್ರ ಸರ್ಕಾರ ಜಾರಿಗೊಳಿಸಿದ ಭಾರೀ ದಂಡದ ನಿಯಮವನ್ನು ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆ ಕಟ್ಟುನಿಟ್ಟಿನಲ್ಲಿ ಜಾರಿಗೊಳಿಸಿದೆ. ಹೀಗಾಗಿ ಕಳೆದೊಂದು ತಿಂಗಳ ಅಂಕಿ ಅಂಶ ನೋಡಿದಾಗ ಉಲ್ಲಂಘನೆಯ ಪ್ರಕರಣದ ಸಂಖ್ಯೆಯಲ್ಲಿ ಮಾತ್ರವಲ್ಲ, ದಂಡ ಸಂಗ್ರಹದ ಪ್ರಮಾಣದಲ್ಲಿಯೂ ಇಳಿಕೆ ಕಾಣಿಸಿದೆ.

ಸೆಪ್ಟೆಂಬರ್‌ 1ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ ವಿವಿಧ ರೀತಿಯ ಸಂಚಾರ ನಿಯಮ ಉಲ್ಲಂಘನೆಗೆ ಈ ಮೊದಲು ವಿಧಿಸುತ್ತಿದ್ದ ದಂಡಕ್ಕೆ ಹೋಲಿಸಿದರೆ ಭಾರೀ ಪ್ರಮಾಣದ ದಂಡ ನಿಗದಿಗೊಳಿಸಿ ಆದೇಶ ಹೊರಡಿಸಿತ್ತು. ಅದರಂತೆ ರಾಜ್ಯದಲ್ಲಿಯೂ ಜಾರಿಯಾಗಿದ್ದು, ಶಿವಮೊಗ್ಗ ಪೊಲೀಸರೂ ತಕ್ಷಣವೇ ಜಾರಿಗೊಳಿಸಿದ್ದರು. ಆದರೆ ಇದರ ಬಗ್ಗೆ ಆಕ್ಷೇಪ ವ್ಯಕ್ತವಾದಾಗ ರಾಜ್ಯ ಸರ್ಕಾರ ದಂಡದ ಪ್ರಮಾಣವನ್ನು ಇಳಿಸಿತು. ಇದೇನೇ ಆದರೂ ಈ ನಿಯಮ ಜಾರಿಯ ಬಳಿಕ ಜಿಲ್ಲೆಯಲ್ಲಿ ಸಂಚಾರಿ ನಿಯಮದ ಉಲ್ಲಂಘನೆಯ ಪ್ರಮಾಣದಲ್ಲಿ ಕಡಿಮೆಯಾಗಿದೆ ಎಂದು ಅಂಕಿ ಅಂಶ ಹೇಳುತ್ತಿದೆ.

ಇದಕ್ಕೆ ನಿದರ್ಶನ ಎಂಬಂತೆ ಆಗಸ್ಟ್‌ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್‌ ತಿಂಗಳಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ಸಂಖ್ಯೆ ಹಾಗೂ ಸಂಗ್ರಹಿಸಲಾಗಿರುವ ದಂಡದ ಮೊತ್ತದಲ್ಲಿ ಇಳಿಕೆಯಾಗಿದೆ.

ಆಗಸ್ಟ್‌ನಲ್ಲಿ ಜಿಲ್ಲಾದ್ಯಂತ ಒಟ್ಟು 14,814 ಪ್ರಕರಣ ದಾಖಲಾಗಿ 18,84,200 ರು. ದಂಡ ಸಂಗ್ರಹಿಸಲಾಗಿತ್ತು. ಈ ಪೈಕಿ ಹೆಲ್ಮಟ್‌ ರಹಿತ ವಾಹನ ಸವಾರಿಯ 7218 ಪ್ರಕರಣದಿಂದ 7,31,200 ರು., ಸೀಟ್‌ ಬೆಲ್ಟ್ ರಹಿತ ಸವಾರಿಯ 2405 ಪ್ರಕರಣದಿಂದ 2,43,000 ರು., ಪರವಾನಗಿ ರಹಿತ ಚಾಲನೆಯ 174 ಪ್ರಕರಣದಿಂದ 60,700 ರು. ಹಾಗೂ ಇತರೆ ನಿಯಮ ಉಲ್ಲಂಘನೆಯ 4529 ಪ್ರಕರಣದಿಂದ 6,21,200 ರು. ದಂಡ ಸಂಗ್ರಹವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಅಡ್ಡಾದಿಡ್ಡಿ ವಾಹನ ಚಾಲನೆಯ 324 ಪ್ರಕರಣದಿಂದ 1,72,800 ರು. ದಂಡ ಸಂಗ್ರಹವಾಗಿತ್ತು.

ಆದರೆ ಸೆಪ್ಟೆಂಬರ್‌ 1ರಿಂದ ಪರಿಷ್ಕೃತ ದಂಡ ಜಾರಿಯಾಗಿದ್ದು, ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟು 3872 ಪ್ರಕರಣ ದಾಖಲಿಸಿ 10,69, 000 ರು. ದಂಡ ಸಂಗ್ರಹವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದರಲ್ಲಿ ಪ್ರಮುಖವಾಗಿ ಅಡ್ಡಾದಿಡ್ಡಿ ವಾಹನ ಚಾಲನೆಯ 250 ಪ್ರಕರಣದಿಂದ 83,200 ರು., ಹೆಲ್ಮಟ್‌ ರಹಿತ ವಾಹನ ಚಾಲನೆಯ 1632 ಪ್ರಕರಣದಿಂದ 2,92,800 ರು., ಸೀಟ್‌ ಬೆಲ್ಟ್ ರಹಿತ ವಾಹನ ಚಾಲನೆಯ 308 ಪ್ರಕರಣದಿಂದ 1,23,600 ರು. ಹಾಗೂ ಇತರೆ ಸಂಚಾರ ನಿಯಮ ಉಲ್ಲಂಘನೆಯ 1489 ಪ್ರಕರಣದಿಂದ 4,87,400 ರು. ದಂಡ ಸಂಗ್ರಹವಾಗಿದೆ. ಪರವಾನಗಿ ರಹಿತ ವಾಹನ ಚಾಲನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 16 ಪ್ರಕರಣ ದಾಖಲಾಗಿ 12,000 ರು. ದಂಡ ವಸೂಲಾಗಿದೆ.

ಕುಡುಕರು ಮಾತ್ರ ಬದ್ದಿ ಕಲಿತಿಲ್ಲ

ಉಳಿದೆಲ್ಲ ನಿಯಮಗಳ ಉಲ್ಲಂಘನೆ ಹಾಗೂ ದಂಡ ಪಾವತಿ ಪ್ರಮಾಣ ಕಡಿಮೆಯಾಗಿದ್ದರೂ ಕುಡಿದು ವಾಹನ ಚಲಾಯಿಸಿದ ಪ್ರಕರಣದಲ್ಲಿ ಸಂಗ್ರಹವಾದ ದಂಡದ ಮೊತ್ತ ಆಗಸ್ಟ್‌ಗಿಂತ ಸೆಪ್ಟೆಂಬರ್‌ನಲ್ಲಿ ಹೆಚ್ಚಾಗಿದೆ. ಆಗಸ್ಟ್‌ನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದ 26 ಪ್ರಕರಣದಿಂದ 11,500 ರು. ದಂಡ ಸಂಗ್ರಹವಾಗಿದ್ದರೆ ಸೆಪ್ಟೆಂಬರ್‌ಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ 20 ಪ್ರಕರಣ ದಾಖಲಾಗಿ 25,400 ರು. ದಂಡ ವಸೂಲಾಗಿದೆ. ಅಂದರೆ ಆರು ಪ್ರಕರಣಗಳು ಮಾತ್ರ ಕಡಿಮೆಯಾಗಿದೆ.

ಆಗಸ್ಟ್‌ಗೆ ಹೋಲಿಸಿದರೆ ಸೆಪ್ಟೆಂಬರ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣ ಸಂಖ್ಯೆ ಹಾಗೂ ವಸೂಲಿಯಾಗಿರುವ ದಂಡದ ಪ್ರಮಾಣ ಕಡಿಮೆ ಇದೆ. ಹಾಗೆಂದ ಮಾತ್ರಕ್ಕೆ ಹೊಸ ದಂಡಕ್ಕೆ ಹೆದರಿ ವಾಹನ ಸವಾರರು ಸಂಚಾರಿ ನಿಯಮ ಪಾಲಿಸುತ್ತಿದ್ದಾರೆ ಎಂಬ ಅರ್ಥವಲ್ಲ. ಬದಲಿಗೆ ಸೆಪ್ಟೆಂಬರ್‌ನಲ್ಲಿ ಜಿಲ್ಲೆಯ ವಿವಿಧೆಡೆ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಗೆ ಸಂಬಂಧಿಸಿದಂತೆ ಬಂದೋಬಸ್ತ್ ವ್ಯವಸ್ಥೆ ಮತ್ತಿತರ ಕಾರಣದಿಂದ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣದಲ್ಲಿ ಇಳಿಕೆಯಾಗಿದೆ ಎಂಬ ವಾದವೂ ಇದೆ.

ಅದೇನೇ ಇದ್ದರೂ ಸದ್ಯಕ್ಕಂತೂ ಸಂಚಾರಿ ನಿಯಮದ ಉಲ್ಲಂಘನೆ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಾಣಿಸಿದೆ. ಮುಂದಿನ ತಿಂಗಳ ಅಂಕಿ ಅಂಶ ಇದಕ್ಕೆ ಸರಿಯಾದ ದಾಖಲೆಯನ್ನು ಒದಗಿಸಲಿದೆ.

ಈ ಸಂಚಾರಿ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಸ್ಥಳಗಳಲ್ಲಿ, ಪ್ರಮುಖ ರಸ್ತೆಗಳಲ್ಲಿ ತಪಾಸಣೆ ನಡೆಸುತ್ತಿದ್ದಾರೆ. ಆದರೆ ಬಡಾವಣೆಗಳಲ್ಲಿ ಮಾತ್ರ ಈಗಲೂ ಶೇ. 90 ರಷ್ಟುಸಂಚಾರ ನಿಮಯಗಳನ್ನು ಉಲ್ಲಂಘಿಸುತ್ತಲೇ ಇದ್ದಾರೆ. ಕಾನೂನು ಎಷ್ಟೇ ಬಿಗಿಗೊಳಿಸಿದರೂ, ಸವಾರರು ವೈಯಕ್ತಿಕವಾಗಿ ಕಾನೂನು ಪಾಲಿಸಬೇಕೆಂಬ ಮನಃಸ್ಥಿತಿ ರೂಪಿಸಿಕೊಳ್ಳುವವರೆಗೂ ಎಲ್ಲವೂ ಸರಿಯಾಗುವುದಿಲ್ಲ.