ಶಿವಮೊಗ್ಗ [ಅ.18]:  ವಾಹನ ಚಲಾಯಿಸುತ್ತಿದ್ದ ವೇಳೆ ಚಾಲಕ ಮೃತಪಟ್ಟರೆ ವಾಹನ ವಿಮೆ ಮೂಲಕವೂ ಅವಲಂಬಿತರಿಗೆ ದೊಡ್ಡ ಮೊತ್ತದ ವಿಮೆ ಸಿಗುತ್ತದೆ. ಆದರೆ ಇದಕ್ಕೆ ಒಮ್ಮೆ ವಿಮೆ ಮಾಡಿಸುವಾಗ ಕನಿಷ್ಠ ಐದು ವರ್ಷದ ಅವಧಿಗೆ ಮಾಡಿಸಬೇಕು. 

ಹೀಗೆಂದು ಪತ್ರಿಕಾಗೋಷ್ಠಿಯಲ್ಲಿ ಓರಿಯಂಟಲ್‌ ವಿಮಾ ಕಂಪನಿಯ ಹಿರಿಯ ವಿಭಾಗೀಯ ಪ್ರಬಂಧಕ ಗಿರೀಶ್‌ ಎಚ್‌. ಜೋಷಿ ವಿವರಣೆ ನೀಡಿದರು.

ಈ ಮೊದಲು ವ್ಯಕ್ತಿಯೊಬ್ಬ ವಾಹನ ಚಲಾಯಿಸುತ್ತಿದ್ದಾಗ ಅಪಘಾತಕ್ಕೆ ಸಿಲುಕಿ ಮೃತಪಟ್ಟರೆ 1 ಲಕ್ಷ ರು. ವಿಮಾ ಪರಿಹಾರ ದೊರಕುತ್ತಿತ್ತು. 3 ಚಕ್ರದ ವಾಹನಕ್ಕಿಂತ ಹೆಚ್ಚಿನದಾಗಿದ್ದರೆ 2 ಲಕ್ಷ ರು. ಸಿಗುತ್ತಿತ್ತು. ಈಗ ಅದನ್ನು 15 ಲಕ್ಷ ರು. ಗಳಿಗೆ ಹೆಚ್ಚಳ ಮಾಡಲಾಗಿದೆ. ಇದರಿಂದ ಮೃತ ಕುಟುಂಬದವರಿಗೆ ಹೆಚ್ಚಿನ ನೆರವು ದೊರಕುತ್ತಿದೆ ಎಂದು ಹೇಳಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ ವಾಹನ ಮಾಲೀಕರು ವಿಮೆ ಪಾವತಿ ಮಾಡುವಾಗ ಕಡ್ಡಾಯವಾಗಿ ಕೆಲವು ಸಂಗತಿಗಳನ್ನು ತಿಳಿದುಕೊಳ್ಳಬೇಕು. ಕೆಲವರು ಪಾಲಿಸಿ ಹಣ ಕಡಿಮೆಯಾಗಲಿ ಎಂದು ಒಂದೇ ವರ್ಷಕ್ಕೆ ಕಟ್ಟಿಸಿಕೊಳ್ಳುತ್ತಾರೆ. ಆದರೆ ಇದು 5 ವರ್ಷದವರೆಗೆ ರಿಸ್ಕ್‌ ಇರುವಂತೆ ವಿಮೆ ಮಾಡಿಸಬೇಕು. ಅನೇಕರಿಗೆ ಈ ಬಗ್ಗೆ ಮಾಹಿತಿ ಇರುವುದಿಲ್ಲ. ಒಂದೇ ವರ್ಷಕ್ಕೆ ವಿಮೆ ಮಾಡಿಸಿದರೆ ವರ್ಷದ ನಂತರ ಅಪಘಾತದಲ್ಲಿ ಮೃತಪಟ್ಟರೆ 15 ಲಕ್ಷ ರು. ಸಿಗುವುದಿಲ್ಲ. ಹಾಗಾಗಿ ಇನ್ಸುರೆನ್ಸ್‌ ಮಾಡಿಸುವಾಗ ಸ್ವಲ್ಪ ಹಣ ಹೆಚ್ಚಾದರೂ ಚಿಂತೆ ಇಲ್ಲ. 5 ವರ್ಷದವರೆಗೆ ಇರುವಂತೆ ಪಾಲಿಸಿ ಮಾಡಿಸಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕಳೆದ ವರ್ಷ ದ್ವಿಚಕ್ರ ವಾಹನ ಅಪಘಾತದಲ್ಲಿ ಮೃತಪಟ್ಟ ಡೇವಿಸ್‌ ಎಂಬುವರ ಕುಟುಂಬಕ್ಕೆ ಓರಿಯಂಟಲ್‌ ಇನ್ಸುರೆನ್ಸ್‌ ಕಂಪನಿಯಿಂದ 15 ಲಕ್ಷ ರು. ಮೊತ್ತದ ಪರಿಹಾರ ಚೆಕ್‌ನ್ನು ಕಂಪನಿಯಿಂದ ಗುರುವಾರ ವಿತರಿಸಲಾಯಿತು.

ಗೋಷ್ಠಿಯಲ್ಲಿ ಕಂಪೆನಿಯ ಪ್ರಬಂಧಕ ಎಸ್‌.ವಿ.ಸುರೇಶ್‌, ಜಿ.ಎಸ್‌.ಓಂಕಾರ್‌ ಮತ್ತು ದಿ: ಡೇವಿಸ್‌ ಅವರ ಪತ್ನಿ ಶರೀಮತಿ ರೋಸಿ ಇದ್ದರು.