ಭತ್ಯೆ ಹೆಚ್ಚಳ : ಪೊಲೀಸ್‌ ಸಿಬ್ಬಂದಿಯಲ್ಲಿ ಶುರುವಾಯ್ತು ಬೇಗುದಿ

ಪೊಲೀಸ್‌ ಇಲಾಖೆಯ ನಾನಾ ವೃಂದಗಳ ಸಿಬ್ಬಂದಿಯ ವಿಶೇಷ ಭತ್ಯೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಈ ಆದೇಶ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಇದೇ ಇಲಾಖೆಯ ಸಿಬ್ಬಂದಿ ಅಸಮಾಧಾನಕ್ಕೆ ಕಾರಣವಾಗಿದೆ.  ಏನಿದು ಅಸಮಾಧಾನ? 

Police allowance increased by Karnataka government but others express their dissatisfaction

ಗೋಪಾಲ್‌ ಯಡಗೆರೆ

ಶಿವಮೊಗ್ಗ [ಅ.24]:  ಪೊಲೀಸ್‌ ಇಲಾಖೆಯ ನಾನಾ ವೃಂದಗಳ ಸಿಬ್ಬಂದಿ ಕಷ್ಟ ಪರಿಹಾರ ಮತ್ತು ವಿಶೇಷ ಭತ್ಯೆಯನ್ನು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಈ ಆದೇಶ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಇದೇ ಇಲಾಖೆಯ ಸಿಬ್ಬಂದಿ ಅಸಮಾಧಾನಕ್ಕೆ ಕಾರಣವಾಗಿದೆ. ಇಲಾಖೆ ಸಿಬ್ಬಂದಿ ನಡುವೆ ಬೇಧ ಮಾಡಲಾಗಿದೆ ಎಂಬುದೇ ಈ ಅಸಮಾಧಾನಕ್ಕೆ ಕಾರಣ.

ರಾಘವೇಂದ್ರ ಔರಾದ್ಕರ್‌ ವರದಿ ಜಾರಿ ವಿಳಂಬದಿಂದ ಅಸಮಾಧಾನಗೊಂಡಿರುವ ಪೊಲೀಸ್‌ ಸಿಬ್ಬಂದಿ ಸಮಾಧಾನಪಡಿಸುವ ನಿಟ್ಟಿನಲ್ಲಿ ಸರ್ಕಾರ ಈ ಆದೇಶ ಕೈಗೊಂಡಿತ್ತು. ಆದರೆ ಪೇದೆಯಿಂದ ಹಿಡಿದು ಪೊಲೀಸ್‌ ಇನ್‌ಸ್ಪೆಕ್ಟರ್‌ವರೆಗೆ ಅನ್ವಯವಾಗುವಂತೆ ನಿಗದಿಪಡಿಸಿ ಹೊರಡಿಸಿರುವ ಮಾಸಿಕ ಕಷ್ಟಪರಿಹಾರ ಹಾಗೂ ವಿಶೇಷ ಭತ್ಯೆ ಹೆಚ್ಚಳ ಕುರಿತ ಆದೇಶವು ನಿಯೋಜನೆ ಮೇರೆಗೆ ವಿವಿಧ ಇಲಾಖೆ ಹಾಗೂ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಅನ್ವಯಯಿಸುವುದಿಲ್ಲ ಎಂಬ ಅಂಶಗಳನ್ನೊಳಗೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.

ಏನಿದು ಕಷ್ಟಪರಿಹಾರ ಭತ್ಯೆ: 

ಬದಲಾದ ಸನ್ನಿವೇಶ ಹಾಗೂ ಸಂದರ್ಭದಲ್ಲಿ ಪೊಲೀಸ್‌ ಇಲಾಖೆಯ ಕಾರ್ಯಾಚರಣೆ ಮಟ್ಟದ ಸಿಬ್ಬಂದಿ ಎದುರಿಸುತ್ತಿರುವ ತೊಂದರೆಗಳನ್ನು ಗಮನಿಸಿರುವ ಸರ್ಕಾರ ನಿರ್ದಿಷ್ಟವೃಂದಗಳಿಗೆ ಲಭ್ಯವಿದ್ದ ಕಷ್ಟಪರಿಹಾರ ಭತ್ಯೆಯನ್ನು ಪರಿಷ್ಕರಿಸಿದೆ. ಅಲ್ಲದೆ ಒಂದು ವೃಂದಕ್ಕೆ ವಿಶೇಷ ಭತ್ಯೆ ಮಂಜೂರು ಮಾಡುವುದು ಅವಶ್ಯವೆಂದು ಪರಿಗಣಿಸಿದೆ. ಇದರಿಂದಾಗಿ ಪೇದೆಯಿಂದ ಹಿಡಿದು ಪೊಲೀಸ್‌ ಇನ್‌ಸ್ಪೆಕ್ಟರ್‌ ತನಕ 1 ಸಾವಿರದಿಂದ 3 ಸಾವಿರ ರು. ತನಕ ಮಾಸಿಕ ಕಷ್ಟಪರಿಹಾರ ಭತ್ಯೆ ಹಾಗೂ ವಿಶೇಷ ಭತ್ಯೆಯನ್ನು ಹೆಚ್ಚಿಸಿದೆ.

ಇಲಾಖೆ/ಸಂಸ್ಥೆಗಳ ಸಿಬ್ಬಂದಿಗಿಲ್ಲ ಭತ್ಯೆ:

ಆದರೆ ಇದೇ ವೇಳೆ ಪೊಲೀಸ್‌ ಇಲಾಖೆಯಿಂದ ಹೊರತಾದ ಇತರೆ ಇಲಾಖೆ ಹಾಗೂ ಸಂಸ್ಥೆ ಅಂದರೆ ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ದಳ, ರಾಜ್ಯ ಗುಪ್ತಚರ ಇಲಾಖೆ, ಅರಣ್ಯ ಸಂಚಾರಿ ದಳ ಹಾಗೂ ವಿವಿಧ ವಿದ್ಯುತ್‌ ಕಂಪನಿಗಳ ಜಾಗೃತ ದಳಗಳಲ್ಲಿ ನಿಯೋಜನೆ ಮೇಲೆ ತೆರಳುವ ಮತ್ತು ನಿಯೋಜನೆ ಭತ್ಯೆ ಅಥವಾ ಸಂಬಂಧಿತ ಇಲಾಖೆ/ಸಂಸ್ಥೆಯ ಹುದ್ದೆಗೆ ಅನ್ವಯಿಸುವ ವಿಶೇಷ ಭತ್ಯೆ ಪಡೆಯುತ್ತಿರುವವರಿಗೆ ತನ್ನ ಆದೇಶ ಅನ್ವಯಿಸುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಇದು ಈ ಮೇಲ್ಕಂಡ ಇಲಾಖೆ ಹಾಗೂ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯಲ್ಲಿ ಅಸಮಾಧಾನ ಮೂಡಲು ಕಾರಣವಾಗಿದೆ. ಈ ಎಲ್ಲಾ ನಾಲ್ಕೂ ಇಲಾಖೆಗಳ ಸಿಬ್ಬಂದಿ ತಮ್ಮ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಕ್ಷೇತ್ರ ಮಟ್ಟದಲ್ಲಿ ಸಾಕಷ್ಟುಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಾರೆ. ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ಬರುವಂತಹ ಸನ್ನಿವೇಶ ನಿರ್ಮಾಣವಾಗುವುದೂ ಉಂಟು.

ವಿವಿಧ ಪ್ರಕರಣಗಳಲ್ಲಿ ಅದರಲ್ಲಿಯೂ ಮುಖ್ಯವಾಗಿ ಗುಪ್ತಚರ ಇಲಾಖೆಗಳು ನಿರ್ದಿಷ್ಟವ್ಯಕ್ತಿ, ಸಂಘ, ಸಂಸ್ಥೆ ಹಾಗೂ ಉದ್ಯಮಗಳ ಬಗ್ಗೆ ತಳಮಟ್ಟದಲ್ಲಿ ಮಾಹಿತಿ ಸಂಗ್ರಹಿಸಬೇಕಾಗುತ್ತದೆ. ಆಗ ಅನೇಕ ರೀತಿಯ ಸವಾಲುಗಳು ಎದುರಾಗುತ್ತದೆ. ಅಂತಹ ಸಂದರ್ಭದಲ್ಲಿ ಬಾತ್ಮೀದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮೇಲೆ ಅವಲಂಬಿತವಾಗಿ ಕೆಲಸ ಮಾಡಬೇಕಾಗುತ್ತದೆ.

ಇನ್ನು ವಿದ್ಯುತ್‌ ಕಳ್ಳತನ ತಡೆ, ಅರಣ್ಯ ಉತ್ಪನ್ನಗಳ ಕಳ್ಳ ಸಾಗಾಣಿಕೆ, ಮತೀಯವಾಗಿ ಸೂಕ್ಷ್ಮವಾದ ಸ್ಥಳ ಮತ್ತು ವಿಷಯಕ್ಕೆ ಸಂಬಂಧಿಸಿದಂತೆ ಕ್ಷೇತ್ರಮಟ್ಟದಲ್ಲಿ ಕಾರ್ಯಾಚರಣೆ ಹಾಗೂ ದಾಳಿ ನಡೆಸುವಾಗ ಸಂಬಂಧಪಟ್ಟವರಿಂದ ಸಾಕಷ್ಟುಪ್ರತಿರೋಧ ಎದುರಾಗುತ್ತದೆ. ಆಗ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡಬೇಕಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶದಿಂದ ಈ ಸಿಬ್ಬಂದಿ ಹೊರಗಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರೇತರ ಸಂಸ್ಥೆ ( ನಾನ್‌ ಎಕ್ಸಿಕ್ಯುಟೀವ್‌)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್‌ ಸಿಬ್ಬಂದಿ ಪ್ರಶ್ನಿಸುತ್ತಾರೆ.

ಸೀಮಿತ ಸಂಖ್ಯೆ ಸಿಬ್ಬಂದಿ:

ಹಾಗೆ ನೋಡಿದರೆ ಲೋಕಾಯುಕ್ತ ಸಂಸ್ಥೆ, ರಾಜ್ಯ ಗುಪ್ತಚರ ಇಲಾಖೆ, ಅರಣ್ಯ ಸಂಚಾರಿ ದಳ, ಎಸ್ಕಾಂಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಸಂಖ್ಯೆ 3 ಸಾವಿರ ದಾಟುವುದಿಲ್ಲ. ಈ ಸಂಸ್ಥೆಗಳಲ್ಲಿ ನಿಯೋಜನೆ ಮೇರೆಗೆ ಕೆಲಸ ಮಾಡುತ್ತಿರುವವರಿಗೆ ಕೆಲವು ಸಂದರ್ಭದಲ್ಲಿ ವಿಶೇಷ ಭತ್ಯೆಯನ್ನು ಸರ್ಕಾರ ಮಂಜೂರು ಮಾಡುತ್ತಿದ್ದರೂ ಅದನ್ನು ಆ ಸಂಸ್ಥೆ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳ ಬಳಸಿಕೊಳ್ಳುತ್ತಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಅದು ಕ್ಷೇತ್ರಮಟ್ಟದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಿಗುವುದೇ ಇಲ್ಲ. ಹಾಗಾಗಿ ವೇತನದಲ್ಲೇ ಖರ್ಚು ಮಾಡಿ ಮಾಹಿತಿ ಸಂಗ್ರಹ ಹಾಗೂ ಬಾತ್ಮೀದಾರರಿಗೆ ಹಣ ನೀಡಬೇಕಾಗಿದೆ ಎಂದು ಸಿಬ್ಬಂದಿ ಹೇಳುತ್ತಾರೆ.

ನಾವು ಸಮವಸ್ತ್ರ ಧರಿಸಿ ಪೊಲೀಸ್‌ ಕೆಲಸ ಮಾಡದಿದ್ದರೂ ರಾಜಕೀಯ ಬೆಳವಣಿಗೆ, ಭ್ರಷ್ಟಾಚಾರ, ದೇಶದ ಸಂಪತ್ತನ್ನು ಕದಿಯುವವರು, ಮತೀಯವಾದ, ಕೋಮುವಾದಿ ಸಂಘಟನೆಗಳು ಮತ್ತು ಶಕ್ತಿಗಳು, ದೇಶದ ಭದ್ರತೆ ಹಾಗೂ ಸಮಾಜದ ಸ್ವಾಸ್ಥ್ಯತೆಗೆ ಅಪಾಯ ತರಬಲ್ಲ ವ್ಯಕ್ತಿಗಳು, ಚುನಾಯಿತ ಸರ್ಕಾರವೊಂದನ್ನು ಅಸ್ಥಿರಗೊಳಿಸುವಂತಹ ಬೆಳವಣಿಗೆಗಳೂ ಸೇರಿದಂತೆ ಪ್ರತಿಯೊಂದು ವಿಷಯದ ಬಗ್ಗೆ ತಳಮಟ್ಟದಲ್ಲಿ ಕೆಲಸ ಮಾಡುತ್ತೇವೆ. ಹೀಗಿರುವಾಗ ರಾಜ್ಯ ಸರ್ಕಾರ ಹೊರಡಿಸಿರುವ ಕಷ್ಟಪರಿಹಾರ ಹಾಗೂ ವಿಶೇಷ ಭತ್ಯೆ ಹೆಚ್ಚಳ ಕುರಿತ ಆದೇಶದಿಂದ ನಮ್ಮನ್ನು ಹೊರಗಿಟ್ಟಿರುವುದು ಎಷ್ಟರಮಟ್ಟಿಗೆ ನ್ಯಾಯ ಎಂದು ಸಿಬ್ಬಂದಿ ಪ್ರಶ್ನಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios