ಶ್ರೀಗಳ ಎಚ್ಚರಿಕೆಯಿಂದ ಕೋಣ ವಿವಾದ ಅಂತ್ಯ : ಒಲಿದಿದ್ಯಾರಿಗೆ?
ಆಣೆ ಪ್ರಮಾಣ ಹೀಗೆ ದಿನಕ್ಕೊಂದು ತಿರುವು ಪಡೆಯುತ್ತಿದ್ದ ದೇವರ ಕೋಣನ ವಿವಾದಕ್ಕೆ ಕೊನೆಗೂ ಸುಖಾಂತ್ಯ ಸಿಕ್ಕಿದೆ. ಈ ಕೋಣ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದವರಿಗೆ ಸೇರಿದ್ದು ಎಂದು ತೀರ್ಮಾನವಾಗಿದೆ.
ಶಿವಮೊಗ್ಗ [ಅ.19]: ಡಿಎನ್‌ಎ ಪರೀಕ್ಷೆ, ಆಣೆ ಪ್ರಮಾಣ ಹೀಗೆ ದಿನಕ್ಕೊಂದು ತಿರುವು ಪಡೆಯುತ್ತಿದ್ದ ದೇವರ ಕೋಣನ ವಿವಾದಕ್ಕೆ ಕೊನೆಗೂ ಸುಖಾಂತ್ಯ ಸಿಕ್ಕಿದೆ. ಈ ಕೋಣ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದವರಿಗೆ ಸೇರಿದ್ದು ಎಂದು ತೀರ್ಮಾನವಾಗಿದೆ.
"
ಡಿಎನ್‌ಎ ಪರೀಕ್ಷೆಗೆ ಗ್ರಾಮಸ್ಥರು ಉಲ್ಟಾಹೊಡೆದ ಬಳಿಕ ಶುಕ್ರವಾರ ಸಂಜೆ ಹೊನ್ನಾಳಿ ತಾಲೂಕಿನ ಹಿರೇಕಲ್ಮಠದಲ್ಲಿ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಸ್ವಾಮಿಗಳ ನೇತೃತ್ವದಲ್ಲಿ ವಿವಾದಕ್ಕೆ ಅಂತಿಮ ಪರಿಹಾರ ಕಂಡುಕೊಳ್ಳಲು ಎರಡೂ ಗ್ರಾಮದವರು ಸಭೆ ಸೇರಿ ಆಣೆ ಪ್ರಮಾಣಕ್ಕೆ ಮುಂದಾದರು. ಎರಡೂ ಗ್ರಾಮಗಳ ಮುಖಂಡರು ಈ ಕೋಣ ತಮ್ಮದೇ ಎಂದು ಗದ್ದುಗೆಯ ಎದುರು ಪ್ರಮಾಣವನ್ನೂ ಮಾಡಿದರು. ಆದರೆ ಕೊನೆಗೆ ಶ್ರೀಗಳು ಹೇಳಿದ ಕೆಲವು ಮಾತುಗಳಿಂದಾಗಿ ಹಾರನಹಳ್ಳಿ ಜನರು ಈ ಕೋಣವನ್ನು ಬೇಲಿ ಮಲ್ಲೂರು ಗ್ರಾಮದವರಿಗೆ ಬಿಟ್ಟುಕೊಟ್ಟು ಬರಿಗೈಯಲ್ಲಿ ಊರಿಗೆ ವಾಪಸ್ಸಾದರು.
ಶ್ರೀ ಮಠದಲ್ಲಿ ಗದ್ದುಗೆಯ ಎದುರು ಈ ಕೋಣ ತಮ್ಮದು ಎಂದು ಯಾರು ಬೇಕಾದರೂ ಪ್ರಮಾಣ ಮಾಡಿ ಕೋಣವನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಬಹುದು ಎಂದು ಶ್ರೀಗಳು ಪ್ರಕಟಿಸಿದಾಗ ಎರಡೂ ಗ್ರಾಮದವರು ಆಣೆ ಪ್ರಮಾಣಕ್ಕೆ ಮುಂದಾದರು. ಇಬ್ಬರೂ ಪ್ರಮಾಣ ಮಾಡಿಯೂ ಬಿಟ್ಟರು. ಪರಿಸ್ಥಿತಿ ಮತ್ತೆ ಗೊಂದಲಕ್ಕೆ ಸಿಲುಕಿತು. ಕೋಣದ ಸಮಸ್ಯೆಗೆ ಪರಿಹಾರವೇ ಸಿಗುವುದಿಲ್ಲವೇನೋ ಎಂಬ ಅನುಮಾನ ವ್ಯಕ್ತವಾಗಿತ್ತು.
ಹೆಜ್ಜಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಂತಿಮವಾಗಿ ಶ್ರೀಗಳು ಇಬ್ಬರೂ ಪ್ರಮಾಣ ಮಾಡಿದ್ದೀರಿ ಎಂದರೆ ಯಾರಾದರೊಬ್ಬರು ಸುಳ್ಳು ಹೇಳಿರಲಿಕ್ಕೇ ಬೇಕು. ಯಾರು ಸುಳ್ಳು ಹೇಳುತ್ತಾರೋ ಅವರಿಗೆ ತಕ್ಕ ಶಿಕ್ಷೆ ಕಾದಿರುತ್ತದೆ. ಈ ಕೋಣ ದೇವರಿಗೆ ಸೇರಿದ್ದು. ಇದರಲ್ಲಿ ಹುಡುಗಾಟ ಮಾಡಬಾರದು ಎಂದು ಎಚ್ಚರಿಕೆ ನೀಡಿದರು. ಇಷ್ಟರಲ್ಲಿ ಹಾರನಹಳ್ಳಿ ಗ್ರಾಮಸ್ಥರು ಇದು ತಮ್ಮ ಕೋಣವೇ ಎಂಬುದು ನಮ್ಮ ನಂಬಿಕೆ. ಆದರೆ ಬೇಲಿಮಲ್ಲೂರು ಗ್ರಾಮದವರು ಆಣೆ ಮಾಡಿದ್ದಾರೆ. ಹೀಗಾಗಿ ನಾವು ಈ ಕೋಣವನ್ನು ಅವರಿಗೆ ಬಿಟ್ಟುಕೊಡಲು ಸಿದ್ಧ ಎಂದು ಒಪ್ಪಿಕೊಂಡರು. ಅಲ್ಲಿಗೆ ವಿವಾದ ಸುಖಾಂತ್ಯವಾಯಿತು.
ಡಿಎನ್‌ಎ ಪರೀಕ್ಷೆಗೆ ನಿರಾಕರಣೆ: ಗುರುವಾರವಷ್ಟೇ ಕೋಣನ ಮಾಲೀಕತ್ವ ಸಾಬೀತುಪಡಿಸಲು ಡಿಎನ್‌ಎ ಪರೀಕ್ಷೆ ಒಪ್ಪಿಕೊಂಡಿದ್ದ ಗ್ರಾಮಸ್ಥರು ಬಳಿಕ ಉಲ್ಟಾಹೊಡೆದರು.
ಕೋಣನ ದೇಹದಿಂದ ರಕ್ತ ತೆಗೆದರೆ ಕೋಣ ಮುಕ್ಕಾದಂತೆ. ಇದು ದೇವರಿಗೆ ಅನರ್ಹಗೊಳ್ಳುತ್ತದೆ ಎಂಬ ವಾದ ಮುಂದಿಟ್ಟರು. ಹೀಗಾಗಿ ವಿವಾದ ಬಗೆಹರಿಸಲು ದೇವರ ಮುಂದೆ ಪ್ರಮಾಣ ಮಾಡಲು ಗ್ರಾಮಸ್ಥರು ಸಿದ್ಧರಾದರು. ಬಳಿಕ ಪೊಲೀಸರು ವಿವಾದವನ್ನು ಹೊನ್ನಾಳಿಯ ಹಿರೇಕಲ್ಮಠದ ಶ್ರೀಗಳ ಬಳಿಗೆ ತಂದರು.
ಈ ನಡುವೆ ವಿವಾದಕ್ಕೆ ಒಳಗಾಗಿದ್ದ ದೇವರ ಕೋಣವನ್ನು ಹಾರನಹಳ್ಳಿಯಿಂದ ಶಿವಮೊಗ್ಗ ನಗರದ ಮಹಾವೀರ ಗೋಶಾಲೆಗೆ ಕರೆ ತರಲಾಗಿದ್ದು, ಶನಿವಾರ ಇದನ್ನು ಬೇಲಿಮಲ್ಲೂರು ಗ್ರಾಮಸ್ಥರು ತಮ್ಮೂರಿಗೆ ಕರೆದೊಯ್ಯುವ ಸಾಧ್ಯತೆ ಇದೆ.