ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ 9 ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದು, ಈಗ ಭೂಮಿಗೆ ಮರಳುತ್ತಿದ್ದಾರೆ. ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯ ತಾಂತ್ರಿಕ ಸಮಸ್ಯೆಗಳಿಂದಾಗಿ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡಿದ್ದರು.

ನವದೆಹಲಿ (ಮಾ.18): ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದು, ಈಗ ಭೂಮಿಗೆ ಬರುವ ಹಾದಿಯಲ್ಲಿದ್ದಾರೆ. ಮಾ.19ರ ಮುಂಜಾನೆ 3.27ಕ್ಕೆ ಅವರು ಭೂಮಿ ತಲುಪಲಿದ್ದಾರೆ. ಸುನೀತಾ ವಿಲಿಯಮ್ಸ್‌ ಜೊತೆ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್ ಕೂಡ ಜೂನ್ 2024 ರಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ(ISS) ಸಿಲುಕಿಕೊಂಡಿದ್ದರು. ಶನಿವಾರ ರಾತ್ರಿ ಬದಲಿ ಸಿಬ್ಬಂದಿ ಬಾಹ್ಯಾಕಾಶ ನಿಲ್ದಾಣಕ್ಕೆ ಬಂದ ನಂತರ, ಅನುಭವಿ ಗಗನಯಾತ್ರಿಗಳಾದ ವಿಲ್ಮೋರ್ ಮತ್ತು ವಿಲಿಯಮ್ಸ್ ಮತ್ತು ಇತರ ಇಬ್ಬರು ಗಗನಯಾತ್ರಿಗಳು ಮಂಗಳವಾರ ಬೆಳಿಗ್ಗೆ 1:05 AM ET (0505 GMT) ಕ್ಕೆ ISS ನಿಂದ ಅನ್‌ಡಾಕ್ ಮಾಡಿದ್ದಾರೆ.17 ಗಂಟೆಗಳ ಪ್ರಯಾಣದ ಬಳಿಕ ಅವರು ಭೂಮಿಯನ್ನು ತಲುಪಲಿದ್ದಾರೆ.

ಜೂನ್‌ನಲ್ಲಿ ನಡೆದ ಪ್ರಮುಖ ಪರೀಕ್ಷಾ ಹಾರಾಟದಲ್ಲಿ ಬೋಯಿಂಗ್‌ನ ಸ್ಟಾರ್‌ಲೈನರ್ ಬಾಹ್ಯಾಕಾಶ ನೌಕೆಯನ್ನು ಹಾರಿಸಿದ ಮೊದಲ ಸಿಬ್ಬಂದಿ ವಿಲ್ಮೋರ್ ಮತ್ತು ವಿಲಿಯಮ್ಸ್. ಆದರೆ ನೌಕೆಯ ಪ್ರೊಪಲ್ಷನ್ ಸಿಸ್ಟಮ್‌ನಲ್ಲಿನ ಸಮಸ್ಯೆಗಳ ನಂತರ, ಗಗನಯಾತ್ರಿ ಜೋಡಿಯನ್ನು ಅದೇ ನೌಕೆಯೊಂದಿಗೆ ಭೂಮಿಗೆ ಮರಳಿ ತರುವುದು ತುಂಬಾ ಅಪಾಯಕಾರಿ ಎಂದು ನಾಸಾ ಪರಿಗಣಿಸಿತು ಮತ್ತು ಸೆಪ್ಟೆಂಬರ್‌ನಲ್ಲಿ ಸ್ಟಾರ್‌ಲೈನರ್ ನೌಕೆ ಗಗನಯಾತ್ರಿಗಳಿಲ್ಲದೆ ಭೂಮಿಗೆ ಮರಳಿದಾಗ, ನಾಸಾ ಸುನೀತಾ ಹಾಗೂ ಬಚ್‌ ವಿಲ್ಮೋರ್‌ರನ್ನು ಕ್ರೂ-9 ಕಾರ್ಯಾಚರಣೆಯ ತಂಡವನ್ನಾಗಿ ಮಾಡಿತು.

ನಾಸಾ ಮತ್ತು ಸ್ಪೇಸ್‌ಎಕ್ಸ್ ಅಧಿಕಾರಿಗಳು ಭಾನುವಾರ ಹವಾಮಾನ ಮೌಲ್ಯಮಾಪನ ನಡೆಸಿ, ಮಾರ್ಚ್ 18 ರಂದು ಸಂಜೆ 5:57 ET (9:57 pm GMT, 3:27 am IST) ಭೂಮಿಗೆ ಬರೋದು ಉತ್ತಮ ಎಂದು ತಿಳಿಸಿದ್ದಾರೆ.ಈ ಮೊದಲು ಬುಧವಾರ ಇವರು ವಾಪಾಸ್‌ ಬರಲಿದ್ದಾರೆ ಎನ್ನಲಾಗಿತ್ತು. ಆದರೆ, ಸುರಕ್ಷಿತ ಲ್ಯಾಂಡಿಂಗ್ ಸ್ಥಿತಿಗಳು ಎದುರಾದ ಕಾರಣ ಮಂಗಳವಾರವೇ ಐಎಸ್‌ಎಸ್‌ಅನ್ನು ಸುನೀತಾ ವಿಲಿಯಮ್ಸ್‌ ತೊರೆದಿದ್ದಾರೆ.

ವಿಲಿಯಮ್ಸ್ ಬಾಹ್ಯಾಕಾಶದಲ್ಲಿ 608 ದಿನಗಳನ್ನು ಕಳೆದಿದ್ದು, ಪೆಗ್ಗಿ ವಿಟ್ಸನ್ ಅವರ 675 ದಿನಗಳ ನಂತರ ಎರಡನೇ ಅತ್ಯಂತ ಅನುಭವಿ ನಾಸಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಅತ್ಯಂತ ಅಪ್ರತಿಮ ಸಾಧನೆಯೆಂದರೆ ಅವರ ಬಾಹ್ಯಾಕಾಶ ನಡಿಗೆ ದಾಖಲೆ: ಅವರು 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಮಾಡುವ ಅತಿ ಹೆಚ್ಚು ಸಮಯ ಕಳೆದ ಮಹಿಳೆ ಎನ್ನುವ ಶ್ರೇಯ ಹೊಂದಿದ್ದಾರೆ.

ಯಾರೀಕೆ ಸುನೀತಾ ವಿಲಿಯಮ್ಸ್ : ಭಾರತೀಯ-ಅಮೇರಿಕನ್ ನಾಸಾ ಗಗನಯಾತ್ರಿ. 1965 ಸೆಪ್ಟೆಂಬರ್ 19 ರಂದು ಓಹಿಯೋದ ಯೂಕ್ಲಿಡ್‌ನಲ್ಲಿ ಡಾ. ದೀಪಕ್ ಪಾಂಡ್ಯ ಮತ್ತು ಬೋನಿ ಪಾಂಡ್ಯ ದಂಪತಿಗಳಿಗೆ ಜನಿಸಿದರು. ಕೊಲಂಬಿಯಾ ದುರಂತದಲ್ಲಿ ದುರಂತವಾಗಿ ಸಾವನ್ನಪ್ಪಿದ ಕಲ್ಪನಾ ಚಾವ್ಲಾ ನಂತರ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಭಾರತೀಯ ಪರಂಪರೆಯ ಎರಡನೇ ಅಮೇರಿಕನ್ ಗಗನಯಾತ್ರಿಯಾಗಿ, ವಿಲಿಯಮ್ಸ್ ಅಸಾಧಾರಣ ಸಾಧನೆ ಮಾಡಿದ್ದಾರೆ.. ಅವರು ಟೆಕ್ಸಾಸ್‌ನಲ್ಲಿ ಫೆಡರಲ್ ಮಾರ್ಷಲ್ ಆಗಿರುವ ಮೈಕೆಲ್ ಜೆ. ವಿಲಿಯಮ್ಸ್ ಅವರನ್ನು ವಿವಾಹವಾಗಿದ್ದಾರೆ.

ಸುನೀತಾ ವಿಲಿಯಮ್ಸ್‌, ಶಿಕ್ಷಣ ಹಾಗೂ ಆರಂಭಿಕ ಜೀವನ
ಶಿಕ್ಷಣ:

  • 1983 - ಮ್ಯಾಸಚೂಸೆಟ್ಸ್‌ನ ನೀಡ್‌ಹ್ಯಾಮ್‌ನ ನೀಡ್‌ಹ್ಯಾಮ್ ಪ್ರೌಢಶಾಲೆಯಿಂದ ಪದವಿ
  • 1987 - ಯುಎಸ್ ನೇವಲ್ ಅಕಾಡೆಮಿಯ ಭೌತಿಕ ವಿಜ್ಞಾನದಲ್ಲಿ ವಿಜ್ಞಾನ ಪದವಿ
  • 1995 - ಫ್ಲೋರಿಡಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಜಿನಿಯರಿಂಗ್ ನಿರ್ವಹಣೆಯಲ್ಲಿ ವಿಜ್ಞಾನ ಸ್ನಾತಕೋತ್ತರ ಪದವಿ


ನೌಕಾ ವೃತ್ತಿಜೀವನ:

  • 1983 - ಮೇರಿಲ್ಯಾಂಡ್‌ನ ಅನ್ನಾಪೊಲಿಸ್‌ನಲ್ಲಿರುವ US ನೇವಲ್ ಅಕಾಡೆಮಿಗೆ ಸೇರ್ಪಡೆ
  • 1987 - US ನೌಕಾಪಡೆಯಲ್ಲಿ ಎನ್‌ಸೈನ್ ಆಗಿ ನಿಯೋಜನೆ
  • 1989 - ನೇವಲ್‌ ಏವಿಯೇಟರ್‌ ಆಗಿ ಗೌರವ..
  • 1992 - ಮಿಯಾಮಿಯಲ್ಲಿ ಆಂಡ್ರ್ಯೂ ಚಂಡಮಾರುತ ಪರಿಹಾರ ಕಾರ್ಯಾಚರಣೆಗಳನ್ನು ಮುನ್ನಡೆಸಿದರು
  • 1993 - US ನೇವಲ್ ಟೆಸ್ಟ್ ಪೈಲಟ್ ಶಾಲೆಯಿಂದ ಪದವಿ
  • 1995 - ಬೋಧಕರಾಗಿ ಪರೀಕ್ಷಾ ಪೈಲಟ್ ಆಗಿ ಶಾಲೆಗೆ ಮರಳಿದರು
  • 2000 - USS ಸೈಪಾನ್ ದಾಳಿ ಹಡಗಿನಲ್ಲಿ ನಿಯೋಜಿಸಲ್ಪಟ್ಟಾಗ ಗಗನಯಾತ್ರಿ ಕಾರ್ಯಕ್ರಮಕ್ಕೆ ಆಯ್ಕೆ

ನಾಸಾ ವೃತ್ತಿಜೀವನ ಮತ್ತು ಬಾಹ್ಯಾಕಾಶ ಯಾತ್ರೆಗಳು

  • 1998 - ಜೂನ್‌ನಲ್ಲಿ ನಾಸಾದಿಂದ ಗಗನಯಾತ್ರಿಯಾಗಿ ಆಯ್ಕೆ ಮತ್ತು ಆಗಸ್ಟ್‌ನಲ್ಲಿ ಗಗನಯಾತ್ರಿ ಅಭ್ಯರ್ಥಿ ತರಬೇತಿ ಪ್ರಾರಂಭ.
  • 2002 - NEEMO2 ಸಿಬ್ಬಂದಿ ಸದಸ್ಯರಾಗಿ ಸೇವೆ, ಅಕ್ವೇರಿಯಸ್ ಆವಾಸಸ್ಥಾನದಲ್ಲಿ 9 ದಿನಗಳ ಕಾಲ ನೀರಿನ ಅಡಿಯಲ್ಲಿ ವಾಸ
  • 2006-2007 - ಎಕ್ಸ್‌ಪೆಡಿಶನ್ 14 ರಲ್ಲಿ ತನ್ನ ಮೊದಲ ಬಾಹ್ಯಾಕಾಶ ಯಾತ್ರೆ ಪೂರ್ಣಗೊಳಿಸಿದರು, 195 ದಿನಗಳು ಬಾಹ್ಯಾಕಾಶದಲ್ಲಿ ಮತ್ತು ನಾಲ್ಕು ಬಾಹ್ಯಾಕಾಶ ನಡಿಗೆ ಮಾಡಿದರು. ನಂತರ ಗಗನಯಾತ್ರಿ ಕಚೇರಿಯ ಉಪ ಮುಖ್ಯಸ್ಥರಾದರು
  • 2012 - ಎಕ್ಸ್‌ಪೆಡಿಶನ್ 32 ಗಾಗಿ ಫ್ಲೈಟ್ ಎಂಜಿನಿಯರ್ ಮತ್ತು ಎಕ್ಸ್‌ಪೆಡಿಶನ್ 33 ಗಾಗಿ ಕಮಾಂಡರ್ ಆಗಿ ಸೇವೆ, ಅವರ ಎರಡನೇ ಕಾರ್ಯಾಚರಣೆ, 127 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದರು ಮತ್ತು ಮೂರು ಹೆಚ್ಚುವರಿ ಬಾಹ್ಯಾಕಾಶ ನಡಿಗೆ ಮಾಡಿದರು.
  • ಜೂನ್ 2024 - ಬೋಯಿಂಗ್‌ನ ಸ್ಟಾರ್‌ಲೈನರ್‌ನ ಮೊದಲ ಸಿಬ್ಬಂದಿ ಹಾರಾಟಕ್ಕಾಗಿ ಉಡಾವಣೆ ಮಾಡಲಾಯಿತು, ತನ್ನ ಮೂರನೇ ಕಾರ್ಯಾಚರಣೆ ಪ್ರಾರಂಭಿಸಿದರು.
  • ಮಾರ್ಚ್ 2025 - ಸ್ಪೇಸ್‌ಎಕ್ಸ್ ಡ್ರ್ಯಾಗನ್‌ನಲ್ಲಿ ಭೂಮಿಗೆ ಮರಳಲು ಬರಲು ನಿರ್ಧರಿಸಲಾಗಿದೆ.

ಮನೆಗೆ ಮರಳಲು ಸಜ್ಜಾದ ಸುನಿತಾ ವಿಲಿಯಮ್ಸ್: ಸಾಗರದಲ್ಲಿ ಇಳಿದ ನಂತರದ ಹಂತಗಳೇನು?

ದಾಖಲೆಗಳು: ವಿಲಿಯಮ್ಸ್ ಮೂರು ಕಾರ್ಯಾಚರಣೆಗಳಲ್ಲಿ ಒಟ್ಟು 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ, ಪೆಗ್ಗಿ ವಿಟ್ಸನ್ ನಂತರ 675 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಕಳೆದ ದಾಖಲೆಯನ್ನು ಹೊಂದಿರುವ ಎರಡನೇ ಅತ್ಯಂತ ಅನುಭವಿ ನಾಸಾ ಗಗನಯಾತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 62 ಗಂಟೆ 6 ನಿಮಿಷಗಳ ಕಾಲ ಬಾಹ್ಯಾಕಾಶದಲ್ಲಿ ನಡೆದಾಡಿದ ಮಹಿಳೆ ಎಂಬ ದಾಖಲೆಯನ್ನು ಹೊಂದಿದ್ದಾರೆ.

ಪ್ರಾಣವನ್ನೇ ಪಣಕ್ಕಿಟ್ಟಿರೋ ಸುನಿತಾ ವಿಲಿಯಮ್ಸ್‌ಗೆ ಸಿಗಲ್ಲ ಓವರ್ ಟೈಮ್ ಭತ್ಯೆ: ದಿನಕ್ಕೆ ಸಿಗೋದು ಕೇವಲ 347 ರೂಪಾಯಿ