ಹೊಸ ಇತಿಹಾಸ, ಒಂದೇ ಫಾಲ್ಕನ್‌ 9 ರಾಕೆಟ್‌ನಲ್ಲಿ ಎರಡು ಖಾಸಗಿ ಮೂನ್‌ ಲ್ಯಾಂಡರ್‌ ಉಡಾವಣೆ ಮಾಡಿದ ಸ್ಪೇಸ್‌ಎಕ್ಸ್‌!

ಖಾಸಗಿ ಕಂಪನಿಗಳು ನಿರ್ಮಿಸಿದ ಬ್ಲೂ ಘೋಸ್ಟ್ ಮತ್ತು ರೆಸಿಲಿಯೆನ್ಸ್ ಎನ್ನುವ  ಎರಡು ಮೂನ್‌ ಲ್ಯಾಂಡರ್‌ಗಳನ್ನು ಫಾಲ್ಕನ್ 9 ರಾಕೆಟ್ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇದು ಚಂದ್ರನ ಪರಿಶೋಧನೆ ಮಾಡುವ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಿಸಿದೆ.
 

SpaceX Launches Two Private Moon Landers on Single Falcon 9 Rocket san

ಫ್ಲೋರಿಡಾ (ಜ.15): ಇಲ್ಲಿಯವರೆಗೂ ಸರ್ಕಾರಿ ಸ್ವಾಮ್ಯದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಮೂನ್‌ ಲ್ಯಾಂಡರ್‌ಅನ್ನು ಚಂದ್ರನಲ್ಲಿಗೆ ಕಳಿಸಿದ್ದವು. ಆದರೆ, ವಿಶ್ವದ ಶ್ರೀಮಂತ ವ್ಯಕ್ತಿ, ಟೆಸ್ಲಾ ಕಂಪನಿಯ ಮಾಲೀಕ ಎಲಾನ್‌ ಮಸ್ಕ್‌ ಅವರ ಸ್ಪೇಸ್‌ಎಕ್ಸ್‌ 2025 ರ ಆರಂಭದಲ್ಲಿ ಎರಡು ಹೊಸ ಮೂನ್‌ ಲ್ಯಾಂಡರ್‌ಗಳನ್ನು ಉಡಾವಣೆ ಮಾಡಿದೆ. ಈ ಎರಡೂ ಮೂನ್‌ಲ್ಯಾಂಡರ್‌ಗಳು ಖಾಸಗಿಯಾಗಿರುವುದು ವಿಶೇಷ. ಎರಡು ಖಾಸಗಿ ಕಂಪನಿಗಳ ಮಾನವರಹಿತ ಮೂನ್‌ ಲ್ಯಾಂಡರ್‌ಗಳ್ನು ನಾಸಾ ಸಹಯೋಗದೊಂದಿಗೆ ಅಮೇರಿಕನ್ ಕಂಪನಿ ಸ್ಪೇಸ್‌ಎಕ್ಸ್ ಇಂದು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂನ್‌ ಲ್ಯಾಂಡರ್‌ಗಳನ್ನು  ಬ್ಲೂ ಘೋಸ್ಟ್ ಮತ್ತು ರೆಸಿಲಿಯೆನ್ಸ್ ಎಂದು ಹೆಸರಿಸಲಾಗಿದೆ.

ನಾಸಾದ ವಾಣಿಜ್ಯ ಚಂದ್ರ ಪೇಲೋಡ್ ಸೇವಾ ಯೋಜನೆಯ ಭಾಗವಾಗಿರುವ ಬ್ಲೂ ಘೋಸ್ಟ್ ಮತ್ತು ರೆಸಿಲಿಯೆನ್ಸ್ ಎಂಬ ಮೂನ್‌ ಲ್ಯಾಂಡರ್‌ ಬಾಹ್ಯಾಕಾಶ ನೌಕೆಯನ್ನು ಸ್ಪೇಸ್‌ಎಕ್ಸ್ ಇಂದು ಉಡಾವಣೆ ಮಾಡಿದೆ. ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಪ್ರಬಲ ಫಾಲ್ಕನ್ 9 ರಾಕೆಟ್‌ನಲ್ಲಿ ಲ್ಯಾಂಡರ್‌ಗಳನ್ನು ಉಡಾವಣೆ ಮಾಡಲಾಯಿತು. ಭಾರತೀಯ ಕಾಲಮಾನ ಬೆಳಿಗ್ಗೆ 11.41ಕ್ಕೆ ಫಾಲ್ಕನ್ 9 ಚಿಮ್ಮಿದಾಗ, ಒಂದೇ ಉಡಾವಣೆಯಲ್ಲಿ ಎರಡು ಲ್ಯಾಂಡರ್‌ಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮೂಲಕ ಇತಿಹಾಸ ನಿರ್ಮಿಸಲಾಯಿತು. ಉಡಾವಣೆಯಾದ ಎಂಟು ನಿಮಿಷಗಳ ನಂತರ ಫಾಲ್ಕನ್ 9 ರ ಬೂಸ್ಟರ್ ಭಾಗವು ಸುರಕ್ಷಿತವಾಗಿ ಭೂಮಿಗೆ ಮರಳಿತು.

ಸ್ಪೇಸ್‌ಎಕ್ಸ್ ಉಡಾವಣೆ ಮಾಡಿದ ಬ್ಲೂ ಘೋಸ್ಟ್ ಲ್ಯಾಂಡರ್ ಅಮೆರಿಕದ ಫೈರ್‌ಫ್ಲೈ ಏರೋಸ್ಪೇಸ್ ಕಂಪನಿಯದ್ದಾಗಿದೆ ಮತ್ತು ರೆಸಿಲಿಯೆನ್ಸ್ ಜಪಾನ್‌ನ ಐಸ್ಪೇಸ್ ಕಂಪನಿಯದ್ದಾಗಿದೆ. ಎರಡೂ ಲ್ಯಾಂಡರ್‌ಗಳು ಚಂದ್ರನ ವಿವಿಧ ಸ್ಥಳಗಳಲ್ಲಿ ಇಳಿಯುತ್ತವೆ. ಬ್ಲೂ ಘೋಸ್ಟ್ ಮೇರ್ ಟ್ರಾಂಕ್ವಿಲಿಟಾಟಿಸ್‌ನ ಈಶಾನ್ಯಕ್ಕೆ ಮೇರ್ ಕ್ರಿಸಿಯಂನಲ್ಲಿ ಮತ್ತು ರೆಸಿಲಿಯೆನ್ಸ್ ಉತ್ತರ ಗೋಳಾರ್ಧದಲ್ಲಿರುವ ಮೇರ್ ಫ್ರಿಗೋರಿಸ್‌ನಲ್ಲಿ ಇಳಿಯುತ್ತದೆ. ರೆಸಿಲಿಯೆನ್ಸ್‌ನಲ್ಲಿ ಟೆನಾಸಿಟಿ ಎಂಬ ಸಣ್ಣ ರೋವರ್ ಕೂಡ ಹೊಂದಿದೆ. ಚಂದ್ರನ ಬಗ್ಗೆ ಅಧ್ಯಯನ ಮಾಡಲು ಲ್ಯಾಂಡರ್‌ಗಳಲ್ಲಿ 10 ವೈಜ್ಞಾನಿಕ ಉಪಕರಣಗಳಿವೆ.

ಫೆಬ್ರವರಿಯಲ್ಲೂ ಭೂಮಿಗೆ ಬರೋದಿಲ್ಲ ಸುನೀತಾ ವಿಲಿಯಮ್ಸ್‌, ಖಚಿತಪಡಿಸಿದ ನಾಸಾ! 

ಬ್ಲೂ ಘೋಸ್ಟ್ ಚಂದ್ರನ ಮೇಲೆ ಇಳಿಯಲು 45 ದಿನಗಳನ್ನು ತೆಗೆದುಕೊಳ್ಳಲಿದ್ದರೆ, ರೆಸಿಲಿಯೆನ್ಸ್ ಐದು ತಿಂಗಳ ಬಳಿಕ ಚಂದ್ರನ ಮೇಲೆ ಇಳಿಯಲಿದೆ.  ಬ್ಲೂ ಘೋಸ್ಟ್ ಚಂದ್ರನನ್ನು ಕೊರೆದು ಮಾದರಿಗಳನ್ನು ಸಂಗ್ರಹಿಸುತ್ತದೆ ಮತ್ತು ಅದರ ಕಾಂತಕ್ಷೇತ್ರದ ಎಕ್ಸ್-ರೇ ಚಿತ್ರವನ್ನು ಸೆರೆಹಿಡಿಯುತ್ತದೆ. ರೆಸಿಲಿಯೆನ್ಸ್‌ನಲ್ಲಿರುವ ರೋವರ್ ಚಂದ್ರನ ಮೇಲಿನ ರೆಗೋಲಿತ್ ಅನ್ನು ಸಂಗ್ರಹಿಸುತ್ತದೆ. ಬಾಹ್ಯಾಕಾಶ ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳ ನಡುವಿನ ಸಹಯೋಗ ಹೆಚ್ಚುತ್ತಿರುವುದಕ್ಕೆ ಇಂದಿನ ಉಡಾವಣೆಗಳು ಸಾಕ್ಷಿಯಾಗಿವೆ.. ಬ್ಲೂ ಘೋಸ್ಟ್ ಮತ್ತು ರೆಸಿಲಿಯೆನ್ಸ್ ಯಶಸ್ವಿಯಾದರೆ, ಇದುವರೆಗಿನ ಅತಿದೊಡ್ಡ ಖಾಸಗಿ ಚಂದ್ರ ಪರಿಶೋಧನಾ ಕಾರ್ಯಾಚರಣೆ ಎಂಬ ಇತಿಹಾಸ ನಿರ್ಮಾಣವಾಗಲಿದೆ.

3,39,46,44,00,00,000 ಕೋಟಿ ರೂಪಾಯಿ.. ಇದು ಇಂದಿಗೆ ಎಲಾನ್‌ ಮಸ್ಕ್‌ ಸಂಪತ್ತು!

 

 

Latest Videos
Follow Us:
Download App:
  • android
  • ios