ಕ್ಷುದ್ರಗ್ರಹ 2024 YR4 ಭೂಮಿಯತ್ತ ಧಾವಿಸುತ್ತಿದೆ. ಇದು ಭೂಮಿಗೆ ಅಪ್ಪಳಿಸಲಿದೆ ಎಂದು ನಾಸ ಇತ್ತೀಚೆಗೆ ಸೂಚನೆ ನೀಡಿತ್ತು. ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಸರ್ವನಾಶವಾಗಲಿದೆ. ಆದರೆ ಈ ಕ್ಷುದ್ರಗ್ರಹ ಕುರಿತು ಇದೀಗ ನಾಸಾ ಮತ್ತೊಂದು ಅಪ್‌ಡೇಟ್ ನೀಡಿದ್ದಾರೆ.
ಕ್ಯಾಲಿಫೋರ್ನಿಯಾ(ಫೆ.25) ಭೂಮಿ, ಚಂದ್ರ, ಸೂರ್ಯ, ಸೌರಮಂಡಲ, ಗ್ರಹಗಳಲ್ಲಿ ಪ್ರತಿನಿತ್ಯ ಹಲವು ಘಟನೆಗಳು ಘಟಿಸುತ್ತದೆ. ಈ ಪೈಕಿ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುತ್ತಿರುವುದು, ಇದನ್ನು ತಡೆಯಲು ವಿಜ್ಞಾನಿಗಳ ಪ್ರಯತ್ನಗಳು ಹಲವು ಬಾರಿ ನಡೆದಿದೆ. ಸಣ್ಣ ಗಾತ್ರದ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವುದನ್ನು ತಡೆದು ಭೂಮಿಯನ್ನು ಹಲವು ಬಾರಿ ಕಾಪಾಡಿದ್ದಾರೆ. ಇದೀಗ ಕ್ಷುದ್ರಗ್ರಹ 2024 YR4 ಭಾರಿ ಆತಂಕ ಸೃಷ್ಟಿಸಿದೆ. ಭೂಮಿಯತ್ತ ವೇಗವಾಗಿ ಧಾವಿಸುತ್ತಿರುವ ದೊಡ್ಡ ಗಾತ್ರದ ಈ ಕ್ಷುದ್ರಗ್ರಹ 2032ರಲ್ಲಿ ಭೂಮಿಗೆ ಅಪ್ಪಳಿಸಲಿದೆ ಎಂದು ನಾಸಾ ಸೂಚಿಸಿತ್ತು. ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಭೂಮಿ ಸರ್ವನಾಶವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸತತ ಅಧ್ಯಯನ ನಡೆಸುತ್ತಿರು ನಾಸಾ ವಿಜ್ಞಾನಿಗಳು ಇದೀಗ ಈ ಕುರಿತು ಮಹತ್ವದ ಅಪ್‌ಡೇಟ್ ನೀಡಿದ್ದಾರೆ.
ಭೂಮಿಗೆ ದೊಡ್ಡ ಅಪಾಯ ತಂದೊಡ್ಡಬಹುದು ಎಂದು ಭಾವಿಸಲಾಗಿದ್ದ 2024 ವೈಆರ್4 ಕ್ಷುದ್ರಗ್ರಹದ ಬಗ್ಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸಿಹಿ ಸುದ್ದಿ ನೀಡಿದೆ. 2032ರಲ್ಲಿ ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ 3.1%ವರೆಗೆ ಇತ್ತು. ಆದರೀಗ ಕೇವಲ 0.004% ಮಾತ್ರ. ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಶೂನ್ಯಕ್ಕೆ ಇಳಿದಿದೆ ಎಂದು ನಾಸಾ ಹೇಳಿದ್ದಾರೆ. ಆದರೂ ನಾಸಾದ ಪ್ಲಾನೆಟರಿ ಡಿಫೆನ್ಸ್ ಟೀಮ್ 2024 ವೈಆರ್4 ಕ್ಷುದ್ರಗ್ರಹವನ್ನು ಸೂಕ್ಷ್ಮವಾಗಿ ಗಮನಿಸಲಿದೆ. ಯಾವುದೇ ಬದಲಾವಣೆ ಇದ್ದರೂ ಎದುರಿಸಲು ಸಜ್ಜಾಗುತ್ತಿದೆ ಎಂದು ನಾಸಾ ಹೇಳಿದೆ.
ಕ್ಷುದ್ರಗ್ರಹ ಪತ್ತೆ ಹಚ್ಚಿದ 14 ವರ್ಷದ ನೋಯ್ಡಾ ವಿದ್ಯಾರ್ಥಿ,ಬಾಲಕನ ಹೆಸರಿಡಲು ನಾಸಾ ಸಿದ್ಧತೆ
2024ರ ಡಿಸೆಂಬರ್ 27ರಂದು ಚಿಲಿಯ ಎಲ್ ಸೋಸ್ ವೀಕ್ಷಣಾಲಯ 2024 ವೈಆರ್4 ಕ್ಷುದ್ರಗ್ರಹವನ್ನು ಪತ್ತೆ ಹಚ್ಚಿತು. ಈ ಕ್ಷುದ್ರಗ್ರಹ 2032ರ ಡಿಸೆಂಬರ್ 22ರಂದು ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು ಎಂದಿತ್ತು. ಇದಕ್ಕೆ ಪೂರಕವಾಗಿ ನಾಸಾ ವಿಜ್ಞಾನಿಗಳು ಈ ಕುರಿತು ಅಧ್ಯಯನ ನಡೆಸಿ ಆತಂಕದ ಪ್ರಮಾಣವನ್ನು ಹೇಳಿತ್ತು. ಇದು ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಗಿತ್ತು. ಸದ್ಯದ ಅಂದಾಜಿನ ಪ್ರಕಾರ, ಈ ಕ್ಷುದ್ರಗ್ರಹ ಸುಮಾರು 40ರಿಂದ 90 ಮೀಟರ್ ವ್ಯಾಸವನ್ನು ಹೊಂದಿದೆ. ಇದು ಒಂದು ಸಣ್ಣ ನಗರವನ್ನೇ ನಾಶಮಾಡುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಇದನ್ನು ಸಿಟಿ-ಕಿಲ್ಲರ್ ಎಂದು ಕರೆಯಲಾಗುತ್ತೆ. 2024 ವೈಆರ್4 ಕ್ಷುದ್ರಗ್ರಹ ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಮೊದಲು 1.2% ಇತ್ತು. ನಂತರ 2.3%, 2.6% ಮತ್ತು ಈ ತಿಂಗಳು 3.1%ಗೆ ಏರಿಕೆ ಆಗಿತ್ತು. ನಾಸಾ ದಾಖಲಿಸಿದ ಅತ್ಯಂತ ಹೆಚ್ಚಿನ ಡಿಕ್ಕಿ ಹೊಡೆಯುವ ಸಂಭವನೀಯತೆ ಇದಾಗಿತ್ತು.
ಆದರೆ ಫೆಬ್ರವರಿ 19ರಂದು 1.5% ಮತ್ತು ನಂತರ 0.28% ಹಾಗೂ ಈಗ 0.004%ಗೆ 2024 ವೈಆರ್4ರಿಂದ ಭೂಮಿಗಿರುವ ಅಪಾಯವನ್ನು ನಾಸಾ ಕಡಿಮೆ ಮಾಡಿದೆ. ಹೀಗಾಗಿ ಕ್ಷುದ್ರಗ್ರಹ ಭೂಮಿಗೆ ತೊಂದರೆ ಕೊಡದೆ 2032ರ ಡಿಸೆಂಬರ್‌ನಲ್ಲಿ ಸುರಕ್ಷಿತವಾಗಿ ಹಾದುಹೋಗುತ್ತದೆ ಎಂದು ಅಂದಾಜಿಸಲಾಗಿದೆ.
ಭೂಮಿಗೆ 2024 ವೈಆರ್4 ಕ್ಷುದ್ರಗ್ರಹ 2032ರಲ್ಲಿ ಡಿಕ್ಕಿ ಹೊಡೆಯುವ ಸಾಧ್ಯತೆ ಕಡಿಮೆ ಇದ್ದರೂ, ನಾಸಾದ ಜೇಮ್ಸ್ ವೆಬ್ ಟೆಲಿಸ್ಕೋಪ್ ವೀಕ್ಷಣೆ ಮುಂದುವರಿಸುತ್ತದೆ. 2024 ವೈಆರ್4ರ ಗಾತ್ರವನ್ನು ನಿಖರವಾಗಿ ಲೆಕ್ಕ ಹಾಕುವುದು ಒಂದು ಮುಖ್ಯ ಗುರಿ. ಸದ್ಯಕ್ಕೆ 2024 ವೈಆರ್4 ಭೂಮಿಯಿಂದ ಬಹಳ ದೂರದಲ್ಲಿದೆ. ಇದು ಏಪ್ರಿಲ್‌ನಲ್ಲಿ ರಾಡಾರ್‌ನಿಂದ ಮಾಯವಾಗಬಹುದು ಎಂದು ನಿರೀಕ್ಷಿಸಲಾಗಿದೆ. ನಂತರ 2028ರವರೆಗೆ 2024 ವೈಆರ್4 ಕ್ಷುದ್ರಗ್ರಹ ಕಾಣಿಸುವುದಿಲ್ಲ. ಹಾಗಾಗಿ ಕಡಿಮೆ ಸಮಯದಲ್ಲಿ ಈ ಕ್ಷುದ್ರಗ್ರಹದ ಚಲನೆಯನ್ನು ಗಮನಿಸಿ ಅಧ್ಯಯನ ಮಾಡುವುದು ವಿಜ್ಞಾನಿಗಳ ಉದ್ದೇಶ. ನಾಸಾ ಮಾತ್ರವಲ್ಲದೆ ಯುರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತು ಚೀನೀ ಬಾಹ್ಯಾಕಾಶ ಸಂಸ್ಥೆ ಕೂಡ 2024 ವೈಆರ್4 ಕ್ಷುದ್ರಗ್ರಹವನ್ನು ಹಿಂಬಾಲಿಸುತ್ತಿವೆ ಎಂದಿದೆ.
ಇನ್ನು ಐದೇ ವರ್ಷದಲ್ಲಿ ಭೂಮಿಗೆ ಕಾದಿದ್ಯಾ ಕ್ಷುದ್ರಗ್ರಹ ಕಂಟಕ: ಇಸ್ರೋ ಅಧ್ಯಕ್ಷ ಸೋಮನಾಥ್ ಹೇಳಿದ್ದೇನು?
