ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು(ಡಿ.03): ಬೆಂಗಳೂರಿನ ಕೆಂಪೇಗೌಡರ ಗೋಪುರ, ದೇವನಹಳ್ಳಿಯ ವೇಣುಗೋಪಾಲ ಸ್ವಾಮಿ ದೇವಾಲಯ, ದೊಡ್ಡಬಳ್ಳಾಪುರದ ಅಶುರ್‌ ಖಾನ್‌ ಮಸೀದಿ ಸೇರಿದಂತೆ ರಾಜ್ಯದ 844 ಪಾರಂಪರಿಕ ಕಟ್ಟಡಗಳ ‘ವರ್ಚುವಲ್‌ ಟೂರ್‌’ ಅನುಭವ ಪ್ರವಾಸಿಗರಿಗೆ ದೊರೆಯುವಂತೆ ಮಾಡಲು ಈ ಎಲ್ಲಾ ಕಟ್ಟಡಗಳ ಮಾಹಿತಿಯನ್ನು ‘3ಡಿ ಆಯಾಮ’ದಲ್ಲಿ ರೂಪಿಸಲು ಪುರಾತತ್ವ ಇಲಾಖೆ ಮುಂದಾಗಿದೆ.

ಇದೇ ಮೊದಲ ಬಾರಿಗೆ ಪಾರಂಪರಿಕ ಕಟ್ಟಡಗಳಿಗೆ ಅತ್ಯಾಧುನಿಕ ತಂತ್ರಜ್ಞಾನದ ಸ್ಪರ್ಶ ನೀಡಲು ರಾಜ್ಯ ಪುರಾತತ್ವ ಇಲಾಖೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಲ್ಲದೆ, 3ಡಿ ಆಯಾಮದ ವರ್ಚುವಲ್‌ ಟೂರ್‌ ಸೌಲಭ್ಯವನ್ನು ಪ್ರವಾಸೋದ್ಯಮ ಇಲಾಖೆ ವೆಬ್‌ಸೈಟ್‌ನಲ್ಲಿ ಕಲ್ಪಿಸುವ ಮೂಲಕ ಪಾರಂಪರಿಕ ತಾಣಗಳ ಮಾಹಿತಿ ಪ್ರವಾಸಿಗರಿಗೆ ಲಭ್ಯವಾಗುವಂತೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕಟ್ಟಡಗಳ ಕುರಿತ ವಿವರವನ್ನು 3ಡಿ ಆಯಾಮದಲ್ಲಿ ಸಂಗ್ರಹ ಮಾಡುವುದರಿಂದ ಅದರ ಸ್ವರೂಪವನ್ನು ಒಳಗೊಂಡಂತೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಬಹುದು. ಕಟ್ಟಡ ನಿರ್ಮಾಣವಾದ ವರ್ಷ, ಯಾವ ರಾಜ ಪ್ರಭುತ್ವ ನಿರ್ಮಾಣ ಮಾಡಿದೆ, ಅದಕ್ಕೆ ಬಳಸಿರುವ ಲೋಹಗಳು, ಕಲ್ಲು ಹಾಗೂ ಮಣ್ಣಿನ ಮಾಹಿತಿ ಕ್ರೋಢೀಕರಿಸಲಾಗುತ್ತದೆ. ಕಟ್ಟಡಗಳಲ್ಲಿನ ಶಾಸನಗಳಲ್ಲಿನ ವಿವರಣೆ ಸಂಗ್ರಹಿಸುವುದರ ಜೊತೆಗೆ ಆ ಕಟ್ಟಡಗಳನ್ನು ಯಾವ ರೀತಿ ಸಂರಕ್ಷಣೆ ಮಾಡಬೇಕು. ಅದಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ಸಿದ್ಧಪಡಿಸಲಾಗುತ್ತದೆ.

ಪಾರಂಪರಿಕ ಕಟ್ಟಡಗಳು ಮತ್ತು ಸ್ಮಾರಕಗಳ ವಿಸ್ತೀರ್ಣ, ವ್ಯಾಪ್ತಿ ಸಂಬಂಧಿಸಿದ ದತ್ತಾಂಶವನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆ ಸಾಫ್ಟ್‌ವೇರ್‌ಗೆ ಸಂಪರ್ಕ(ಲಿಂಕ್‌) ಮಾಡಲಾಗುತ್ತದೆ. ಈ ಲಿಂಕ್‌ ಮೂಲಕ ರಾಜ್ಯದ ಯಾವುದೇ ಭಾಗದಲ್ಲಿನ ಪಾರಂಪರಿಕ ಕಟ್ಟಡಗಳ 360 ಡಿಗ್ರಿ ಸುತ್ತಳತೆಯ ನೋಟ ಮತ್ತು ವಿವರಣೆಯನ್ನು ಪಡೆದುಕೊಳ್ಳಲು ನೆರವಾಗಲಿದೆ. ಜೊತೆಗೆ, ಆ ಕಟ್ಟಡ ಅಥವಾ ಸ್ಮಾರಕಕ್ಕೆ ಸಂಬಂಧಿಸಿದಂತೆ ಅಧ್ಯಯನ ನಡೆಸಲು ಸಾಧ್ಯವಾಗಲಿದೆ ಎಂದು ಪುರಾತತ್ವ ಇಲಾಖೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಾಹಿತಿ ಸಂಗ್ರಹ ಕಾರ್ಯ ಆರಂಭ

ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಭಾಗಿತ್ವದಲ್ಲಿ ರಾಜ್ಯದಲ್ಲಿ ಈಗಾಗಲೇ ಪಾರಂಪರಿಕ ಕಟ್ಟಡಗಳ ಮಾಹಿತಿ ಸಂಗ್ರಹ ಕಾರ್ಯ ಆರಂಭವಾಗಿದೆ. ಪ್ರಾರಂಭಿಕ ಹಂತದಲ್ಲಿ ಬೆಂಗಳೂರು ನಗರದಲ್ಲಿರುವ ಕೆಂಪೇಗೌಡ ನಿರ್ಮಿಸಿರುವ ನಾಲ್ಕು ಗೋಪುರಗಳು, ಸೇರಿದಂತೆ ಸುತ್ತಮುತ್ತಲ ತಾಲೂಕುಗಳಲ್ಲಿನ ಪುರಾತನ ಕಟ್ಟಡಗಳ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ನಂತರ ಇತರೆ ಜಿಲ್ಲೆಗಳಲ್ಲಿ ಸಂಗ್ರಹ ಕಾರ್ಯ ಪ್ರಾರಂಭಿಸಲಾಗುವುದು ಎಂದು ಮಂಡಳಿಯ ವೈಜ್ಞಾನಿಕ ಅಧಿಕಾರಿ ಯು.ಟಿ. ವಿಜಯ್‌ ‘ಕನ್ನಡ ಪ್ರಭ’ಕ್ಕೆ ವಿವರಿಸಿದರು.

ಅಲ್ಲದೆ, ಕೆಂಪೇಗೌಡ ಗೋಪುರಗಳ ನೈಜತೆಯನ್ನು ತಂತ್ರಜ್ಞಾನದ ಮೂಲಕ ಈಗಾಗಲೇ ಸೆರೆ ಹಿಡಿಯಲಾಗಿದೆ. ಜೊತೆಗೆ, ದೇವನಹಳ್ಳಿಯ ಕೋಟೆಯಲ್ಲಿರುವ ವೇಣುಗೋಪಾಲ ಸ್ವಾಮಿ ದೇವಾಲಯ, ಇದೇ ತಾಲೂಕಿನ ಗಂಗವಾರದಲ್ಲಿರುವ ಸೋಮೇಶ್ವರ ದೇವಾಲಯ, ಅರದೇಶಹಳ್ಳಿಯಲ್ಲಿರುವ ರಾಷ್ಟ್ರಕೂಟರ ಕಾಲದ ಶಿಲಾಶಾಸನ, ದೊಡ್ಡಬಳ್ಳಾಪುರದಲ್ಲಿರುವ 17ನೇ ಶತಮಾನದ ಅಶುರ್‌ಖಾನ್‌ ಮಸೀದಿಯ ದತ್ತಾಂಶ ಸಂಗ್ರಹಿಸಲಾಗಿದೆ.

ಇದೀಗ ಬೆಂಗಳೂರು ನಗರದಲ್ಲಿರುವ ಗವಿಗಂಗಾಧರೇಶ್ವರ ದೇವಾಲಯ, ದೊಡ್ಡ ಗಣಪತಿ ದೇವಾಲಯ, ಕಾಡು ಮಲ್ಲೇಶ್ವರ ದೇವಾಲಯಗಳಲ್ಲಿ ಮಾಹಿತಿ ಸಂಗ್ರಹಿಸುವ ಕಾರ್ಯ ಪ್ರಾರಂಭಿಸಲಾಗುವುದು. ಬಳಿಕ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದಲ್ಲಿರುವ ಭೋಗನಂದೀಶ್ವರ ದೇವಾಲಯ ಮತ್ತು ರಂಗಸ್ಥಳದಲ್ಲಿರುವ ಲಕ್ಷ್ಮೇನರಸಿಂಹ ಸ್ವಾಮಿ ದೇವಾಲಯದ ಮಾಹಿತಿ ಸಂಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.