ಚಂದ್ರಯಾನ 2ಕ್ಕೆ ಸಜ್ಜಾದ ನಮ್ಮ ಇಸ್ರೋ
ಇಸ್ರೋ ಚಂದ್ರಯಾನಕ್ಕೆ 2ಕ್ಕೆ ಸಂಪೂರ್ಣ ಸಜ್ಜಾಗಿದೆ. ಜು.15ರ ಸೋಮವಾರ ನಸುಕಿನ ಜಾವ 2.51ಕ್ಕೆ ಸರಿಯಾಗಿ ಚಂದ್ರಯಾನ ನೌಕೆ ಹೊತ್ತು ‘ಬಾಹುಬಲಿ’ ಎಂದೇ ಪ್ರಸಿದ್ಧಿಯಾಗಿರುವ ಇಸ್ರೋದ ಜಿಎಸ್‌ಎಲ್‌ವಿ- ಎಂಕೆ3 ರಾಕೆಟ್ ಆಂಧ್ರದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭೋಮಂಡಲದತ್ತ ಚಿಮ್ಮಲಿದೆ.
ಶ್ರೀಹರಿಕೋಟ [ಜು.13]: ಭೂಮಿಯ ನೈಸರ್ಗಿಕ ಉಪಗ್ರಹ ಚಂದಿರನ ಅಂಗಳದ ಕೌತುಕಗಳನ್ನು ಭೇದಿಸಲು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಸಜ್ಜಾಗಿದ್ದು, ಚಂದ್ರಯಾನ-2 ಯೋಜನೆಗೆ ಭಾನುವಾರ ಬೆಳಗ್ಗೆ 6.51ರಿಂದ 20 ತಾಸುಗಳ ಕ್ಷಣಗಣನೆ ಆರಂಭವಾಗಲಿದೆ. ಜು.15ರ ಸೋಮವಾರ ನಸುಕಿನ ಜಾವ 2.51ಕ್ಕೆ ಸರಿಯಾಗಿ ಚಂದ್ರಯಾನ ನೌಕೆ ಹೊತ್ತು ‘ಬಾಹುಬಲಿ’ ಎಂದೇ ಪ್ರಸಿದ್ಧಿಯಾಗಿರುವ ಇಸ್ರೋದ ಜಿಎಸ್‌ಎಲ್‌ವಿ- ಎಂಕೆ3 ರಾಕೆಟ್ ಆಂಧ್ರದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಭೋಮಂಡಲದತ್ತ ಚಿಮ್ಮಲಿದೆ.
11 ವರ್ಷಗಳ ಹಿಂದೆ ಚಂದ್ರನ ಕಕ್ಷೆಯಲ್ಲಿ ನೌಕೆಯನ್ನು ಸುತ್ತಿಸಿ, ಹಲವು ರಹಸ್ಯಗಳನ್ನು ಪತ್ತೆ ಹಚ್ಚಿದ್ದ ಇಸ್ರೋ, ಇದೇ ಮೊದಲ ಬಾರಿ ಲ್ಯಾಂಡರ್ ಹಾಗೂ ರೋವರ್‌ಗಳನ್ನು ಚಂದಿರನ ಅಂಗಳದಲ್ಲಿ ಇಳಿಸಿ ಸಂಶೋಧನೆ ನಡೆಸಲು ಉದ್ದೇಶಿಸಿದೆ. ಈ ಸಾಹಸವನ್ನು ಇಡೀ ಜಾಗತಿಕ ವೈಜ್ಞಾನಿಕ ಸಮುದಾಯವೇ ಕುತೂಹಲದಿಂದ ಎದುರು ನೋಡುತ್ತಿದೆ. ಈವರೆಗೆ ಯಾರೂ ಗಮನಹರಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ಇಸ್ರೋ ತನ್ನ ನೌಕೆ ಇಳಿಸುತ್ತಿರುವುದು ಇದಕ್ಕೆ ಒಂದು ಕಾರಣವಾದರೆ ಅಮೆರಿಕ, ರಷ್ಯಾ, ಚೀನಾದಂತಹ ದೈತ್ಯ ದೇಶಗಳು ಮಾಡುವುದಕ್ಕಿಂತ ಕಡಿಮೆ ಖರ್ಚಿನಲ್ಲಿ ಇಸ್ರೋ ಈ ಯಾನ ಕೈಗೊಂಡಿರುವುದು ಮತ್ತೊಂದು ಅಂಶ. ಈ ಯಾನದಲ್ಲಿ ಯಶಸ್ವಿಯಾದರೆ, ಚಂದ್ರನ ಅಂಗಳದಲ್ಲಿ ಅಮೆರಿಕ, ರಷ್ಯಾ, ಚೀನಾ ಬಳಿಕ ನೌಕೆ ಇಳಿಸಿದ ವಿಶ್ವದ 4ನೇ ದೇಶ ಎಂಬ ಹಿರಿಮೆ ಭಾರತದ್ದಾಗಲಿದೆ.
ಚಂದ್ರನ ಮೇಲೆ ಮೊದಲ ಬಾರಿಗೆ ಮಾನವ ಕಾಲಿಟ್ಟು ಜು.20ಕ್ಕೆ 50 ವರ್ಷ ತುಂಬಲಿದೆ. ಅದಕ್ಕೆ 5 ದಿನ ಮುನ್ನ ಅಂದರೆ ಜು.15ರಂದು ಇಸ್ರೋ ಚಂದ್ರನತ್ತ ಪ್ರಯಾಣ ಬೆಳೆಸುತ್ತಿರುವುದು ಗಮನಾರ್ಹ. ಒಟ್ಟಾರೆ ಈ ಯೋಜನೆಗೆ ಆಗುತ್ತಿರುವ ವೆಚ್ಚ 978 ಕೋಟಿ ರುಪಾಯಿ. ಸೋಮವಾರ ಉಡಾವಣೆಯಾಗಲಿರುವ ಚಂದ್ರಯಾನ ನೌಕೆ 3.84 ಲಕ್ಷ ಕಿ.ಮೀ.ಗಳಷ್ಟುದೂರವನ್ನು ಸಾಗಿ ಸೆ.6ರಂದು ಚಂದ್ರನ ಅಂಗಳಕ್ಕೆ ಪದಾರ್ಪಣೆ ಮಾಡಲಿದೆ.
ಚಂದ್ರಯಾನ- 2 ನೌಕೆಯಲ್ಲಿ ವಿಕ್ರಮ್ ಎಂಬ ಲ್ಯಾಂಡರ್ ಇದೆ. 1.4 ಟನ್ ತೂಕದ ಲ್ಯಾಂಡರ್ 27 ಕೆ.ಜಿ. ತೂಕದ ಪ್ರಜ್ಞಾನ್ ಎಂಬ ರೋವರ್ ಅನ್ನು ಒಡಲಲ್ಲಿ ಒಯ್ಯಲಿದೆ. ಚಂದ್ರನ ಅಂಗಳದ ಮೇಲೆ ಇಳಿದ ಬಳಿಕ ಈ ಎರಡೂ ಉಪಕರಣಗಳು ಪ್ರತ್ಯೇಕಗೊಳ್ಳಲಿವೆ. ಸೌರಶಕ್ತಿ ಆಧರಿಸಿ ಒಂದು ಚಂದ್ರನ ದಿವಸ (ಭೂಮಿಯ 14 ದಿವಸಗಳಿಗೆ ಸಮ) ರೋವರ್ ಕೆಲಸ ಮಾಡಲಿದೆ. ಚಂದ್ರನ ಅಂಗಳದಲ್ಲಿ 500 ಮೀಟರ್ ಸುತ್ತಾಡಿ ಅಲ್ಲಿರಬಹುದಾದ ನೀರು, ಪಳೆಯುಳಿಕೆ ದಾಖಲೆಗಳಿಗಾಗಿ ಶೋಧ ನಡೆಸಲಿದೆ.