ಭಾರತಕ್ಕೆ ಕತ್ತಲು ಆವರಿಸುತ್ತಿರುವ ಸುಂದರ ವಿಡಿಯೋ ಸೆರೆ ಹಿಡಿದ ಆದಿತ್ಯ ಎಲ್1 ನೌಕೆ!
ಭೂಮಿ ಹಾಗೂ ಸೂರ್ಯನ ನಡುವಿನ ಎಲ್1 ಪಾಯಿಂಟ್‌ನತ್ತ ಪ್ರಯಾಣ ಬೆಳೆಸಿರುವ ಇಸ್ರೋದ ಆದಿತ್ಯ ಎಲ್1 ನೌಕೆ, ತನ್ನಲ್ಲಿರುವ ಕ್ಯಾಮೆರಾದಿಂದ ಭೂಮಿ ಹಾಗೂ ಚಂದ್ರನ ಸೆರೆ ಮಾಡಿದೆ. ಇದರಲ್ಲಿ ಭಾರತದ ಮೇಲೆ ಕತ್ತಲು ಆವರಿಸುತ್ತಿರುವ ಸುಂದರ್ ಕ್ಷಣಗಳು ದಾಖಲಾಗಿವೆ.
ಬೆಂಗಳೂರು (ಸೆ.7): ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ ಆದಿತ್ಯ-ಎಲ್ 1 ನಲ್ಲಿ ಅಳವಡಿಸಲಾದ ಕ್ಯಾಮೆರಾದಿಂದ ತೆಗೆದ ಸೆಲ್ಫಿ ಜೊತೆಗೆ ಭೂಮಿ ಮತ್ತು ಚಂದ್ರನ ಚಿತ್ರಗಳನ್ನು ಹಂಚಿಕೊಂಡಿದೆ. ಈ ಫೋಟೋಗಳನ್ನು ಸೆಪ್ಟೆಂಬರ್ 4 ರಂದು ತೆಗೆದುಕೊಳ್ಳಲಾಗಿದೆ. ಸೆಲ್ಫಿಯಲ್ಲಿ, ಆದಿತ್ಯ ನೌಕೆನ ಮೇಲಿರುವ ವೆಲ್ಕ್ ಹಾಗೂ ಮತ್ತು ಸ್ಯೂಟ್ ಎಂಬ ಎರಡು ಪೇಲೋಡ್‌ಗಳು ಸ್ಪಷ್ಟವಾಗಿ ಗೋಚರವಾಗುತ್ತಿದೆ. ಆದಿತ್ಯ ಸೆಪ್ಟೆಂಬರ್ 2 ರಂದು ಬೆಳಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪಿಎಸ್‌ಎಲ್‌ವಿ-ಸಿ57 ನ ಎಕ್ಸ್‌ಎಲ್ ಆವೃತ್ತಿಯ ರಾಕೆಟ್ ಮೂಲಕ ಉಡಾವಣೆ ಮಾಡಲಾಗಿತ್ತು. ಬಾಹ್ಯಾಕಾಶ ನೌಕೆಯನ್ನು ಉಡಾವಣೆಯಾದ ನಂತರ 235 ಕಿಮೀ x 19,500 ಕಿಮೀ 63 ನಿಮಿಷ 19 ಸೆಕೆಂಡುಗಳ ಭೂಮಿಯ ಕಕ್ಷೆಯಲ್ಲಿ ಇರಿಸಲಾಗಿದೆ. ಉಡಾವಣೆಯಾದ ನಂತರ ಆದಿತ್ಯನ ಕಕ್ಷೆಯನ್ನು ಎರಡು ಬಾರಿ ಎತ್ತರಿಸಲಾಗಿದೆ. ಇದಕ್ಕಾಗಿ ನೌಕೆಯಲ್ಲಿನ ಥ್ರಸ್ಟರ್‌ಗಳನ್ನು ಸ್ಟಾರ್ಟ್ ಮಾಡಲಾಗಿದೆ. ಸುಮಾರು 4 ತಿಂಗಳ ನಂತರ 15 ಲಕ್ಷ ಕಿ.ಮೀ ದೂರದ ಎಲ್1 ಅಥವಾ ಲಾಂಗ್ರೇಜ್ ಪಾಯಿಂಟ್-1 ತಲುಪಲಿದೆ. ಈ ಹಂತದಲ್ಲಿ ಗ್ರಹಣದ ಸಮಯದಲ್ಲೂ ಸೂರ್ಯನ ಕುರಿತಾಗಿ ಸಂಪೂರ್ಣ ಗಮನ ನೀಡಲು ಸಾಧ್ಯವಾಗುತ್ತದೆ. ಇದರಿಂದಾಗಿ ಸೂರ್ಯನ ಬಗ್ಗೆ ಸಂಶೋಧನೆಯನ್ನು ಇಲ್ಲಿಂದ ಸುಲಭವಾಗಿ ಮಾಡಬಹುದು.
ಇನ್ನು ಆದಿತ್ಯ ಎಲ್1 ನೌಕೆ ಕಳಿಸಿರುವ ವಿಡಿಯೋದಲ್ಲಿ ಭೂಮಿಯ ಮೇಲೆ ಅದರಲ್ಲೂ ಭಾರತ ಹಾಗೂ ಸಂಪೂರ್ಣ ಏಷ್ಯಾದ ರಾಷ್ಟ್ರಗಳ ಮೇಲೆ ಕತ್ತಲು ಆವರಿಸುತ್ತಿರುವುದು ಸ್ಪಷ್ಟವಾಗಿ ಕಂಡಿವೆ. ಅದರೊಂದಿಗೆ ಸೌದಿ ಅರೇಬಿಯಾ, ಹಾರ್ನ್ ಆಫ್ ಆಫ್ರಿಕಾ ಕೂಡ ಸ್ಪಷ್ಟವಾಗಿ ದಾಖಲಾಗಿದೆ. ವಿಡಿಯೋದ ಬಲಭಾಗದಲ್ಲಿ ಚಿಕ್ಕ ಬಿಂದುವಿನಂತೆ ಇರುವುದು ಚಂದ್ರ ಎಂದು ಇಸ್ರೋ ತಿಳಿಸಿದೆ.
ಲ್ಯಾಗ್ರೇಂಜ್ ಪಾಯಿಂಟ್‌ಗೆ ಈ ಹೆಸರು ಬಂದಿದ್ದು ಇಟಾಲಿಯನ್-ಫ್ರೆಂಚ್ ಗಣಿತಜ್ಞ ಜೋಸೆಫ್-ಲೂಯಿಸ್ ಲಾಗ್ರೇಂಜ್ ಅವರಿಂದ. ಇದನ್ನು ಆಡುಮಾತಿನಲ್ಲಿ L1 ಎಂದು ಕರೆಯಲಾಗುತ್ತದೆ. ಭೂಮಿ ಮತ್ತು ಸೂರ್ಯನ ನಡುವೆ ಅಂತಹ ಐದು ಬಿಂದುಗಳಿವೆ, ಅಲ್ಲಿ ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆಯ ಬಲವು ಸಮತೋಲನಗೊಳ್ಳುತ್ತದೆ ಮತ್ತು ಕೇಂದ್ರಾಪಗಾಮಿ ಬಲವನ್ನು ರಚಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಒಂದು ವಸ್ತುವನ್ನು ಈ ಸ್ಥಳದಲ್ಲಿ ಇರಿಸಿದರೆ, ಅದು ಸುಲಭವಾಗಿ ಆ ಬಿಂದುವಿನ ಸುತ್ತ ಸುತ್ತಲು ಪ್ರಾರಂಭಿಸುತ್ತದೆ. ಮೊದಲ ಲ್ಯಾಗ್ರೇಂಜ್ ಪಾಯಿಂಟ್ ಭೂಮಿ ಮತ್ತು ಸೂರ್ಯನ ನಡುವೆ 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿದೆ. ಅಂತಹ ಒಟ್ಟು 5 ಲಾಗ್ರೇಂಜ್ ಪಾಯಿಂಟ್‌ಗಳಿವೆ.
Aditya-L1 Mission: ನಿಗದಿತ ಕಕ್ಷೆ ಸೇರಿದ ಆದಿತ್ಯ ಎಲ್1, ನೌಕೆಯಿಂದ ಬೇರ್ಪಟ್ಟ ಉಪಗ್ರಹ!
L1 ಬಿಂದುವಿನ ಸುತ್ತ ಹಾಲೋ ಕಕ್ಷೆಯಲ್ಲಿ ಇರಿಸಲಾದ ಉಪಗ್ರಹವು ಯಾವುದೇ ಗ್ರಹಣವಿಲ್ಲದೆ ಸೂರ್ಯನನ್ನು ನಿರಂತರವಾಗಿ ನೋಡಬಹುದು ಎಂದು ಹೇಳುತ್ತಾರೆ. ಇದರೊಂದಿಗೆ, ನೈಜ-ಸಮಯದ ಸೌರ ಚಟುವಟಿಕೆಗಳು ಮತ್ತು ಬಾಹ್ಯಾಕಾಶ ಹವಾಮಾನವನ್ನು ಸಹ ಮೇಲ್ವಿಚಾರಣೆ ಮಾಡಬಹುದು. ಆದಿತ್ಯ ಎಲ್ 1 ನೌಕೆ 2024ರ ಜನವರಿ 6 ರಂದು ಎಲ್1 ಪಾಯಿಂಟ್‌ಗೆ ತಲುಪುತ್ತದೆ.
ಇಸ್ರೋ ಸೂರ್ಯಶಿಕಾರಿಯ ಕಂಪ್ಲೀಟ್ ಡೀಟೇಲ್ಸ್ ಹೀಗಿದೆ: ಅಧ್ಯಯನದ ಬಗ್ಗೆ ಇಲ್ಲಿದೆ ವಿವರ..