1 ಟನ್‌ ತೂಕದ ಉಪಗ್ರಹ ಬೀಳಿಸಲು ಇಂದು ಇಸ್ರೋ ಸಾಹಸ ನಡೆಸಲಿದೆ. ನಿರುಪಯುಕ್ತ ಉಪಗ್ರಹದಲ್ಲಿ 125 ಕೇಜಿ ಇಂಧನವಿದ್ದು, ಪೆಸಿಫಿಕ್‌ ಸಾಗರದಲ್ಲಿ ಇದನ್ನು ಪತನಗೊಳಿಸಲು ಕಸರತ್ತು ನಡೆಯುತ್ತಿದೆ.

ಬೆಂಗಳೂರು (ಮಾರ್ಚ್‌ 7, 2023): ಅಂತರಿಕ್ಷದಲ್ಲಿ ನಿರುಪಯುಕ್ತವಾಗಿರುವ ಉಪಗ್ರಹವೊಂದನ್ನು ಮರಳಿ ಭೂ ವಾತಾವರಣಕ್ಕೆ ತಂದು ಸಾಗರದಲ್ಲಿ ಬೀಳಿಸುವ ಅತ್ಯಂತ ಸವಾಲಿನ ಪ್ರಯೋಗವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ನಡೆಸಲಿದೆ.

Add Asianetnews Kannada as a Preferred SourcegooglePreferred

ಉಷ್ಣ ವಲಯದ ವಾತಾವರಣ ಹಾಗೂ ಹವಾಮಾನ ಅಧ್ಯಯನ ನಡೆಸಲು ಫ್ರಾನ್ಸ್‌ನ ಬಾಹ್ಯಾಕಾಶ ಸಂಸ್ಥೆ ಸಿಎನ್‌ಇಎಸ್‌ (CNES) ಜತೆಗೂಡಿ ಇಸ್ರೋ (ISRO) 2011ರ ಅಕ್ಟೋಬರ್‌ 12ರಂದು ಮೇಘ ಟ್ರಾಪಿಕ್ಸ್‌-1 (Megha-Tropiques-1) (MT1) ಎಂಬ ಕೆಳ ಭೂಕಕ್ಷೆ ಉಪಗ್ರಹವನ್ನು ಉಡಾವಣೆ ಮಾಡಿತ್ತು. ಅದರ ಜೀವಿತಾವಧಿ ಮೂರು ವರ್ಷಗಳಾಗಿತ್ತಾದರೂ, ಉಪಗ್ರಹ (Satellite) ಒಂದು ದಶಕ ಸೇವೆ ಸಲ್ಲಿಸಿದೆ. ಇದೀಗ ನಿರುಪಯುಕ್ತವಾಗಿರುವ 1 ಟನ್‌ ತೂಕದ ಉಪಗ್ರಹವನ್ನು ಮರಳಿ ಭೂಮಿಗೆ ತರಲು ಇಸ್ರೋ ಉದ್ದೇಶಿಸಿದೆ.

ಇದನ್ನು ಓದಿ: ಚಂದ್ರಯಾನ - 3ಗೆ ಬಲ: ಪ್ರಮುಖ ರಾಕೆಟ್ ಎಂಜಿನ್ ಪರೀಕ್ಷೆಯಲ್ಲಿ ISROಗೆ ಯಶಸ್ಸು

ಈ ಉಪಗ್ರಹದಲ್ಲಿ 125 ಕೆಜಿ ಇಂಧನವಿದ್ದು, ಮರಳಿ ಭೂಮಿಗೆ ಬರುವಾಗ ಎಡವಟ್ಟಾದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಆದಾಗ್ಯೂ ಪೆಸಿಫಿಕ್‌ ಸಾಗರದಲ್ಲಿ (Pacific Ocean) ಜನವಸತಿ ಇಲ್ಲದ ಕಡೆ ಈ ಉಪಗ್ರಹವನ್ನು ಬೀಳಿಸಲು ಇಸ್ರೋ ಸಕಲ ಸಿದ್ಧತೆಗಳನ್ನೂ ಕೈಗೊಂಡಿದೆ.

ಉಪಗ್ರಹದಲ್ಲಿರುವ ಇಂಧನವು ಅದನ್ನು ಭೂ ವಾತಾವರಣಕ್ಕೆ ಮರುಪ್ರವೇಶ ಮಾಡಿಸಿ, ನಿಯಂತ್ರಿತ ರೀತಿಯಲ್ಲಿ ಉದ್ದೇಶಿತ ಸ್ಥಳದಲ್ಲಿ ಬೀಳಿಸಲು ಸಹಕಾರಿಯಾಗಲಿದೆ. ಮಂಗಳವಾರ ಸಂಜೆ 4.30ರಿಂದ ರಾತ್ರಿ 7.30ರವರೆಗೆ ಈ ಕಾರ್ಯಾಚರಣೆಯನ್ನು ನಡೆಸಲು ಇಸ್ರೋ ಉದ್ದೇಶಿಸಿದೆ.

ಇದನ್ನೂ ಓದಿ: ಇಂಚಿಂಚೂ ಭೂಮಿ ಜಾಲಾಡುವ ‘ನಿಸಾರ್‌’ ಉಪಗ್ರಹ ಸಿದ್ಧ: ಇಸ್ರೋ ಸಾಧನೆ