475 ಕಿ.ಮೀ ಎತ್ತರದ ಬಾಹ್ಯಾಕಾಶದಲ್ಲಿ ಡಾಕಿಂಗ್ ಪ್ರಕ್ರಿಯೆಗೆ ಇಸ್ರೋ ಮತ್ತಷ್ಟು ಸನಿಹ
ಇಸ್ರೋ 475 ಕಿ.ಮೀ ಎತ್ತರದ ಬಾಹ್ಯಾಕಾಶದಲ್ಲಿ ಎರಡು ನೌಕೆಗಳನ್ನು ಜೋಡಿಸುವ ಐತಿಹಾಸಿಕ ಪ್ರಕ್ರಿಯೆಗೆ ಸನಿಹವಾಗಿದೆ. ಸ್ಪೇಡೆಕ್ಸ್ 1 ಮತ್ತು 2 ನೌಕೆಗಳನ್ನು 3 ಮೀಟರ್ ಅಂತರಕ್ಕೆ ತರುವ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ.
ಬೆಂಗಳೂರು: 475 ಕಿ.ಮೀ ಎತ್ತರದ ಬಾಹ್ಯಾಕಾಶದಲ್ಲಿ ಎರಡು ನೌಕೆಗಳನ್ನು ಪರಸ್ಪರ ಜೋಡಿಸುವ ಐತಿಹಾಸಿಕ ಪ್ರಕ್ರಿಯೆಗೆ ಉದ್ದೇಶಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ, ಈ ಹಾದಿಯಲ್ಲಿ ಭಾನುವಾರ ಮತ್ತೊಂದು ಮಹತ್ವದ ಹೆಜ್ಜೆ ಮುಂದಿಟ್ಟಿದೆ.
ತಲಾ 220 ಕೆಜಿ ತೂಗುವ ಸ್ಪೇಡೆಕ್ಸ್ 1 ಮತ್ತು ಸ್ಪೇಡೆಕ್ಸ್ 2 ನೌಕೆಗಳನ್ನು ಪರಸ್ಪರ ಕೇವಲ 3 ಮೀಟರ್ ಸನಿಹಕ್ಕೆ ತರುವ ಪರೀಕ್ಷೆಯನ್ನು ಇಸ್ರೋ ಭಾನುವಾರ ಯಶಸ್ವಿಯಾಗಿದೆ ನಡೆಸಿದೆ. ಇದರ ಮುಂದಿನ ಭಾಗವಾಗಿ ಎರಡೂ ನೌಕೆಗಳನ್ನು ಜೋಡಿಸುವ ಅಂದರೆ ಡಾಕಿಂಗ್ ಮಾಡುವ ಮತ್ತು ಬಳಿಕ ಬೇರ್ಪಡಿಸುವ (ಅನ್‌ಡಾಕಿಂಗ್) ಪ್ರಕ್ರಿಯೆ ನಡೆಸಲಿದೆ. ಈ ಕುರಿತು ಭಾನುವಾರ ಮಾಹಿತಿ ನೀಡಿರುವ ಇಸ್ರೋ, ‘ಎರಡು ನೌಕೆಗಳನ್ನು ಪರಸ್ಪರ 15 ಮೀಟರ್ ಅಂತರಕ್ಕೆ ತರುವ ಬಳಿಕ 3 ಮೀಟರ್ ಅಂತರಕ್ಕೆ ತರುವ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಬಳಿಕ ನೌಕೆಗಳನ್ನು ಸುರಕ್ಷತೆಯ ದೃಷ್ಟಿಯಿಂದ ಮತ್ತೆ ಸ್ವಲ್ಪ ದೂರದ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಭಾನುವಾರ ನಡೆಸಿದ ಪ್ರಯೋಗದ ಅಂಕಿ ಅಂಶಗಳನ್ನು ಪರಿಶೀಲಿಸಿ ಶೀಘ್ರ ಡಾಕಿಂಗ್ ಪ್ರಕ್ರಿಯೆ ನಡೆಸಲಾಗುವುದು’ ಎಂದು ಹೇಳಿದೆ.
ಒಂದು ವೇಳೆ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಪ್ರಕ್ರಿಯೆ ಯಶಸ್ವಿಯಾದರೆ, ಇಂಥ ಸಾಧನೆ ಮಾಡಿದ ವಿಶ್ವದ ನಾಲ್ಕನೇ ದೇಶವಾಗುವುದರ ಜೊತೆಗೆ ಅತ್ಯಂತ ಮಿತವ್ಯಯಿ ಉಡ್ಡಯನದ ದಾಖಲೆಗೂ ಇಸ್ರೋ ಪಾತ್ರವಾಗಲಿದೆ.
ಉಕ್ರೇನ್‌ಗೆ ನ್ಯಾಟೋ ದೇಶಗಳ ನೆರವಿಗೆ ರಷ್ಯಾ ಆಕ್ರೋಶ : ನಾರ್ವೆಯಲ್ಲಿ ಎಲ್ಲಾ ಕಟ್ಟಡಕ್ಕೆ ಬಾಂಬ್ ಶೆಲ್ಟರ್ ಕಡ್ಡಾಯ
ಒಸ್ಲೋ: ಉಕ್ರೇನ್‌ಗೆ ನ್ಯಾಟೋ ದೇಶಗಳ ನೆರವಿಗೆ ಆಕ್ರೋಶಗೊಂಡಿರುವ ರಷ್ಯಾ, ಯಾವುದೇ ಸಮಯದಲ್ಲಿ ತನ್ನ ಮೇಳೆ ಬಾಂಬ್ ದಾಳಿ ನಡೆಸಬಹುದು ಎಂದು ಆತಂಕಗೊಂಡಿರುವ ನಾರ್ವೆ ದೇಶ, ತನ್ನ ದೇಶದಲ್ಲಿ ನಿರ್ಮಾಣವಾಗಲಿರುವ ಎಲ್ಲಾ ಹೊಸ ಕಟ್ಟಡಗಳಲ್ಲಿ ಬಾಂಬ್ ಶೆಲ್ಟರ್ ನಿರ್ಮಾಣ ಕಡ್ಡಾಯಗೊಳಿಸಿದೆ.
ಒಂದು ವೇಳೆ ರಷ್ಯಾ ಭೀಕರ ಬಾಂಬ್ ದಾಳಿ ನಡೆಸಿದರೆ ನಾಗರಿಕರು ಪ್ರಾಣರಕ್ಷಣೆಗೆ ಮಾಡಿಕೊಳ್ಳಲು ಅನುವಾಗುವಂತೆ ನಾರ್ವೆ ಸರ್ಕಾರ ಈ ಆದೇಶ ಹೊರಡಿಸಿದೆ.
ಈ ಬಾಂಬ್ ಶೆಲ್ಟರ್‌ಗಳು ಹೊಸ ವಿನ್ಯಾಸ ಹೊಂದಿರಬೇಕು, ಯಾವುದೇ ಸಾಂಪ್ರದಾಯಿಕ ಅಸ್ತ್ರಗಳ ದಾಳಿ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರಬೇಕು. ವಿಕಿರಣಶೀಲ ವಸ್ತುಗಳು ಮತ್ತು ರಾಸಾಯನಿಕ ಅಸ್ತ್ರಗಳ ದಾಳಿಯಿಂದ ರಕ್ಷಣೆ ಕೊಡುವ ರೀತಿಯಲ್ಲಿ ಇರಬೇಕು ಎಂದು ಸರ್ಕಾರ ಸೂಚಿಸಿದೆ.
ಈ ಮೊದಲು ಕೂಡಾ ದೇಶದಲ್ಲಿ ಇಂಥ ನಿಯಮ ಇತ್ತು. ಆದರೆ 1998ರಲ್ಲಿ ಆಗಿನ ಸರ್ಕಾರ ಕಟ್ಟಡಗಳಲ್ಲಿ ಬಾಂಬ್ ಶೆಲ್ಟರ್ ನಿರ್ಮಾಣ ಕಡ್ಡಾಯ ಎಂಬ ನಿಯಮ ರದ್ದು ಮಾಡಿತ್ತು. ಹಾಲಿ ಇರುವ ಕಟ್ಟಡಗಳು ದೇಶದ ಒಟ್ಟು ಜನಸಂಖ್ಯೆಯ ಶೇ.45ರಷ್ಟು ಜನರ ರಕ್ಷಣೆಗೆ ಮಾತ್ರ ಸಾಕಾಗುವಷ್ಟಿದೆ. ಆದರೆ ನೆರೆಯ ಫಿನ್ಲೆಂಡ್‌ನಲ್ಲಿ ಈ ಪ್ರಮಾಣ ಶೇ.90, ಡೆನ್ಮಾರ್ಕ್‌ನಲ್ಲಿ ಶೇ.80 ಮತ್ತು ಸ್ವೀಡನ್‌ನಲ್ಲಿ ಶೇ.70ರಷ್ಟಿದೆ.