Asianet Suvarna News Asianet Suvarna News

Breaking: ಭಾರತದ ಹಿರಿಮೆಯನ್ನು ಸೂರ್ಯನ ಎತ್ತರಕ್ಕೆ ಏರಿಸಿದ ಇಸ್ರೋ, ಸೂರ್ಯಯಾನ ಆರಂಭಿಸಿದ ADITYA-L1

ಸೂರ್ಯನ ಅಧ್ಯಯನಕ್ಕಾಗಿ ಭಾರತದ ತನ್ನ ಮೊಟ್ಟಮೊದಲ ಬಾಹ್ಯಾಕಾಶ ನೌಕೆಯನ್ನು ಕಳಿಸಿಕೊಟ್ಟಿದೆ. ಅದರೊಂದಿಗೆ ಭಾರತದ ಹಿರಿಮೆ ಸೂರ್ಯನ ಎತ್ತರಕ್ಕೆ ಏರಿಕೆಯಾದಂತಾಗಿದೆ.
 

Isro ADITYA-L1 Mission launched by PSLV C57 Rocket In sriharikota san
Author
First Published Sep 2, 2023, 11:51 AM IST

ಶ್ರೀಹರಿಕೋಟಾ (ಸೆ.2): ಚಂದ್ರಯಾನದ ದೊಡ್ಡಮಟ್ಟದ ಯಶಸ್ಸಿನ ಬಳಿಕ ಇಸ್ರೋದ ಸೌರಯಾನ ಆರಂಭವಾಗಿದೆ. ಬಾಹ್ಯಾಕಾಶದಲ್ಲಿ ಭಾರತದ ನೌಕೆಯ ಅತ್ಯಂತ ದೂರದ ಪ್ರಯಾಣವನ್ನು ಆದಿತ್ಯ ಎಲ್‌1 ಮಿಷನ್‌ ಆರಂಭ ಮಾಡಿದೆ. ಶ್ರೀಹರಿಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದ 2ನೇ ಉಡ್ಡಯನ ಕೇಂದ್ರದಿಂದ 11.50ಕ್ಕೆ ಸರಿಯಾಗಿ ಆದಿತ್ಯ ಎಲ್‌1 ನೌಕೆಯನ್ನು ಹೊತ್ತ ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ನಭಕ್ಕೆ ಹಾರಿತು. ಅದರೊಂದಿಗೆ ಭಾರತದ ಹಿರಿಮೆಯನ್ನು ಸೂರ್ಯನ ಎತ್ತರಕ್ಕೆ ಇಸ್ರೋ ಏರಿಸಿದೆ. ಇನ್ನು 126 ದಿನಗಳ ಪ್ರಯಾಣದ ಬಳಿಕ ಆದಿತ್ಯ ಎಲ್‌1 ನೌಕೆ ತನ್ನ ನಿಗದಿತ ಗಮ್ಯಸ್ಥಾನವಾದ ಭೂಮಿ ಹಾಗೂ ಸೂರ್ಯನ ನಡುವಿನ ಎಲ್‌1 ಅನ್ನು ತಲುಪಲಿದೆ. ಅದಕ್ಕೂ ಮುನ್ನ ಆದಿತ್ಯ ಎಲ್‌1 ಭೂಮಿಯ ಸುತ್ತ 16 ದಿನಗಳ ಕಾಲ ಸಂಚರಿಸಲಿದ್ದು, 5 ಕಕ್ಷೆ ಏರಿಸುವ ಕಾರ್ಯಾಚರಣೆಯಲ್ಲಿ ಭಾಗಿಯಾಗಲಿದೆ. ಆದಿತ್ಯ ಎಲ್‌1 ಮಿಷನ್‌ ಆರಂಭಿಸುವುದರೊಂದಿಗೆ ಸೂರ್ಯನ ಅಧ್ಯಯನಕ್ಕಾಗಿ ನೌಕೆಯನ್ನು ಕಳಿಸಿಕೊಟ್ಟ ಐದನೇ ದೇಶ ಹಾಗೂ 6ನೇ ಬಾಹ್ಯಾಕಾಶ ಸಂಸ್ಥೆ ಭಾರತವಾಗಿದೆ. ಇದಕ್ಕೂ ಮುನ್ನ ಅಮೆರಿಕ, ಜರ್ಮನಿ, ರಷ್ಯಾ ಹಾಗೂ ಚೀನಾ ದೇಶಗಳು ನೌಕೆಯನ್ನು ಕಳಿಸಿದ್ದವು. ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಕೂಡ ತನ್ನ ನೌಕೆಯನ್ನು ಕಳಿಸಿದೆ.

ಸರಿಯಾಗಿ 11.50ಕ್ಕೆ ಉಡಾವಣೆಗೊಂಡ ಪಿಎಸ್‌ಎಲ್‌ವಿ-ಸಿ57 ರಾಕೆಟ್‌ ನಿಗದಿಯ ಸಮಯದ ಪಥದಲ್ಲಿ ಸಾಗಿತು. ಅದರೊಂದಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದಂತಾಗಿದೆ.

ADITYA-L1: ಭೂಮಿಯ ಕಕ್ಷೆಯಲ್ಲಿ 16 ದಿನ ಇರಲಿದೆ ಆದಿತ್ಯ, ಆ ಬಳಿಕ ಸೂರ್ಯನತ್ತ!

ಸೌರಯಾನವನ್ನು ಆರಂಭಿಸುವ ಬಗ್ಗೆ ಸಹಕಾರ ನೀಡಿದ ಭಾರತ ಸರ್ಕಾರ ಹಾಗೂ ಇಡೀ ವಿಜ್ಞಾನಿಗಳ ಸಮೂಹಕ್ಕೆ ನಾನು ಮೊದಲು ಧನ್ಯವಾದ ಹೇಳಲು ಬಯಸುತ್ತೇನೆ. ಬಾಹ್ಯಾಕಾಶದಲ್ಲಿ ಎಷ್ಟು ಡೇಟಾ ನಿಮಗೆ ಸಿಗುತ್ತದೆಯೋ ಅಷ್ಟು ಉತ್ತಮ ರೀತಿಯಲ್ಲಿ ನಾವು ಸೌರಮಂಡಲವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಸೂರ್ಯ ಎನ್ನುವುದು ನಮ್ಮ ಆಪ್ತ ನಕ್ಷತ್ರ. ಸೂರ್ಯನನ್ನು ಎಷ್ಟು ಅರ್ಥ ಮಾಡಿಕೊಳ್ಳುತ್ತೇವೆಯೋ ನಮ್ಮ ದೈನಂದಿನ ಜೀವನ ಅಷ್ಟು ಉತ್ತಮವಾಗಿ ಇರುತ್ತದೆ. ಮೊದಲ ಬಾರಿಗೆ ಅದಿತ್ಯ ಎಲ್‌-1 ಯೋಜನೆ ಬಗ್ಗೆ ನಿರ್ಧಾರ ಮಾಡಿದಾಗ ಇದರಲ್ಲಿರುವ ಪೇಲೋಡ್‌ಗಳ ಬಗ್ಗೆಯೋ ಪ್ರಮುಖ ಚರ್ಚೆಯಾಗಿತ್ತು. ಇಲ್ಲಿಯವರೆಗೂ ಯಾವುದೇ ಯೋಜನೆಗಳಲ್ಲಿ ಇರದೇ ಇರುವಂಥ ಪೇಲೋಡ್‌ಗಳನ್ನು ನಾವು ಕಳಿಸಬೇಕು ಎಂದು ತೀರ್ಮಾನ ಮಾಡಿದ್ದೆವು ಎಂದು ಮಿಷನ್‌ನ ಪ್ರಧಾನ ವಿಜ್ಞಾನಿ ಡಾ ಶಂಕರಸುಬ್ರಮಣಿಯನ್ ಕೆ ಹೇಳಿದ್ದಾರೆ.



ಈ ನೌಕೆಯಲ್ಲಿ ಕಳಿಸಲಾಗಿರುವ ಏಳು ಪೇಲೋಡ್‌ಗಳು ಬಹಳ ಅಪರೂಪವಾದಂಥ ಡೇಟಾಗಳನ್ನು ನೀಡುತ್ತದೆ. ಇದು ವಿಶ್ವದ ಯಾವುದೇ ಇತರ ಯೋಜನೆಗಳಲ್ಲಿ ಇದರ ಮಾಹಿತಿಗಳಿಲ್ಲ. ಸೂರ್ಯನ ಕೆಲವು ಸೌರಜ್ವಾಲೆಗಳು ಭೂಮಿಗೆ ಬಹಳ ಪ್ರಮುಖವಾಗಿರುತ್ತದೆ ಎನ್ನುವ ಮಾಹಿತಿಗಳು ಇದರಲ್ಲಿ ಇರುತ್ತದೆ. ಸೂರ್ಯನನ್ನು ಅರ್ಥಮಾಡಿಕೊಳ್ಳುವುದು, ಸೂರ್ಯನ ಡೈನಾಮಿಕ್ಸ್‌ ಅಧ್ಯಯನ ಮಾಡೋದು ಈ ಮಿಷನ್‌ ಪ್ರಮುಖ ಗುರಿ ಎಂದು ಹೇಳಿದ್ದಾರೆ.

ಬೆಂಗಳೂರು ವಿವಿಯ ಪಿಎಚ್‌ಡಿ ಪದವೀಧರ ಇಸ್ರೋ 'ಸೂರ್ಯಯಾನ' ಪ್ರಾಜೆಕ್ಟ್‌ ಡೈರೆಕ್ಟರ್‌!

ಪಿಆರ್‌ಎಲ್‌ ನಿರ್ದೇಶಕ ಅನಿಲ್‌ ಭಾರದ್ವಾಜ್‌ ಮಾತನಾಡಿದ್ದು, ಆದಿತ್ಯ ಎಲ್‌ ಎನ್ನುವುದು ಮಲ್ಟಿ ವೇವ್‌ಲೆಂತ್‌, ಮಲ್ಟಿ ಇನ್‌ಸ್ಟ್ರುಮೆಂಟಲ್‌ ಹಾಗೂ ಮಲ್ಟಿ ಡೈರೆಕ್ಷನಲ್‌ ಯೋಜನೆ. ಸೂರ್ಯನನ್ನು ಮಾತ್ರವಲ್ಲ ಸೂರ್ಯ ಸುತ್ತಮುನ್ನ ಕೂಡ ಅಧ್ಯಯನ ಮಾಡಲಿದೆ. ಸೂರ್ಯ ಇನ್ನಷ್ಟು ಕ್ರೋಧಗೊಂಡಾಗ ಆತನಿಂದ ಹೊರಬರುವ ಸೌರಜ್ವಾಲೆ ಭೂಮಿಗೆ ಕೇವಲ 8 ನಿಮಿಷದಲ್ಲಿಯೇ ಬರುತ್ತದೆ. ಅದರೊಂದಿಗೆ ಪ್ಲಾಸ್ಮಾ ಕೂಡ ಹೊರಬರುತ್ತದೆ. ಇದು ಭೂಮಿಗೆ ಬರಲು 2 ರಿಂದ 4 ದಿನ ಬೇಕಾಗುತ್ತದೆ. ಇಂಥ ಸೌರಜ್ವಾಲೆಗಳು ಹಾಗೂ ಪ್ಲಾಸ್ಮಾಗಳು ಹೊರಬಂದಾಗ ಭೂಮಿಯ ಮೇಲೆ ಆಗುವ ಪರಿಣಾಮವೇನು ಅನ್ನೋದರ ಬಗ್ಗೆ ಆದಿತ್ಯ ಮಿಷನ್‌ ಅಧ್ಯಯನ ಮಾಡುತ್ತದೆ ಎಂದಿದ್ದಾರೆ.

 

Follow Us:
Download App:
  • android
  • ios