Asianet Suvarna News Asianet Suvarna News

ಐನ್‌ಸ್ಟೀನ್‌ರ ಸಾಪೇಕ್ಷತಾ ಸಿದ್ಧಾಂತ ಬದಲಿಸಬೇಕು: ಪ್ರೊ.ಸಿ.ಎಸ್‌.ಉನ್ನಿಕೃಷ್ಣನ್‌

ಭೌತಶಾಸ್ತ್ರದ ಮೂಲಾಧಾರವಾದ ಐನ್‌ಸ್ಟೀನ್‌ರ ಸಾಪೇಕ್ಷತಾ ಸಿದ್ಧಾಂತಕ್ಕೆ ಸವಾಲಾಗಿ ಭಾರತೀಯ ವಿಜ್ಞಾನಿಯಾದ ಉನ್ನಿಕೃಷ್ಣನ್‌ ಅವರು ಹೊಸ ಸಿದ್ಧಾಂತ ಮಂಡಿಸಿದ್ದಾರೆ. ಈ ಕುರಿತಾಗಿ ಕನ್ನಡಪ್ರಭದ ಸೋದರ ಸಂಸ್ಥೆ ಏಷ್ಯಾನೆಟ್‌ ನ್ಯೂಸ್‌ ಜೊತೆ ನಡೆಸಿದ ಸಂವಾದದಲ್ಲಿ ಅವರು ವಿಸ್ತೃತವಾದ ಮಾಹಿತಿ ಹಂಚಿಕೊಂಡಿದ್ದಾರೆ.

Einsteins theory of relativity must be replaced Prof CS Unnikrishnan akb
Author
First Published Jan 17, 2023, 12:07 PM IST

ಭೌತಶಾಸ್ತ್ರದ ಮೂಲಾಧಾರವಾದ ಐನ್‌ಸ್ಟೀನ್‌ರ ಸಾಪೇಕ್ಷತಾ ಸಿದ್ಧಾಂತಕ್ಕೆ ಸವಾಲಾಗಿ ಭಾರತೀಯ ವಿಜ್ಞಾನಿಯಾದ ಉನ್ನಿಕೃಷ್ಣನ್‌ ಅವರು ಹೊಸ ಸಿದ್ಧಾಂತ ಮಂಡಿಸಿದ್ದಾರೆ. ಈ ಕುರಿತಾಗಿ ಕನ್ನಡಪ್ರಭದ ಸೋದರ ಸಂಸ್ಥೆ ಏಷ್ಯಾನೆಟ್‌ ನ್ಯೂಸ್‌ ಜೊತೆ ನಡೆಸಿದ ಸಂವಾದದಲ್ಲಿ ಅವರು ವಿಸ್ತೃತವಾದ ಮಾಹಿತಿ ಹಂಚಿಕೊಂಡಿದ್ದಾರೆ.

ನೀವು ಐನ್‌ಸ್ಟೀನ್‌ರ ಸಾಪೇಕ್ಷತಾ ಸಿದ್ಧಾಂತವನ್ನು ಬದಲಾಯಿಸಲು ಬಯಸಿದ್ದೀರಿ. ಸಾಮಾನ್ಯ ಜನರಿಗೆ ಅರ್ಥವಾಗುವಂತೆ ನಿಮ್ಮ ಸಿದ್ಧಾಂತವನ್ನು ವಿವರಿಸಿ.

ಐನ್‌ಸ್ಟೀನ್‌ರ ವಿಶೇಷ ಸಾಪೇಕ್ಷತಾ ಸಿದ್ಧಾಂತ ಇಂದಿನ ಎಲ್ಲಾ ಭೌತಶಾಸ್ತ್ರದ ಸಿದ್ಧಾಂತಗಳ ಮೂಲವಾಗಿದೆ. ಈ ಸಿದ್ಧಾಂತ ಬಹಳ ನಿರ್ಣಾಯಕವಾದ ಊಹೆಯನ್ನು ಹೊಂದಿದೆ. ಬೆಳಕಿನ ವೇಗ ಮೂಲ ವೇಗ ಅಥವಾ ವೀಕ್ಷಕನ ವೇಗದಿಂದ ಸ್ವತಂತ್ರವಾಗಿದೆ ಎಂದು ಈ ಸಿದ್ಧಾಂತ ಹೇಳುತ್ತದೆ. ಆದರೆ 15 ವರ್ಷಗಳ ಹಿಂದೆ ನಾನು ಮಾಡಿದ ಪ್ರಯೋಗದಿಂದ ತಿಳಿದುಬಂದದ್ದು ಏನೆಂದರೆ, ನೀವು ನೇರವಾಗಿ ಇದನ್ನು ಪ್ರಯೋಗಕ್ಕೆ ಒಳಪಡಿಸಿದರೆ ಈ ಸಿದ್ಧಾಂತ ಸಂಪೂರ್ಣ ನಿಜವಲ್ಲ ಎಂದು ತಿಳಿದುಬರುತ್ತದೆ. ಬೆಳಕಿನ ವೇಗದ ಪ್ರಮಾಣ ವೀಕ್ಷಕನ ವೇಗವನ್ನು ಅವಲಂಬಿಸಿರುತ್ತದೆ. ಧ್ವನಿ ವೀಕ್ಷಕನ ವೇಗವನ್ನು ಅವಲಂಬಿಸಿರುವಂತೆ ಬೆಳಕೂ ಸಹ ಒಂದು ನಿರ್ದಿಷ್ಟತರಂಗದಲ್ಲಿ ಚಲಿಸುತ್ತದೆ. ಧ್ವನಿಯಂತೆಯೇ ವರ್ತಿಸುತ್ತದೆ. ಹಾಗಿದ್ದಲ್ಲಿ ಐನ್‌ಸ್ಟೀನ್‌ರ ಸಿದ್ಧಾಂತ ಸಂಪೂರ್ಣ ಸತ್ಯವಲ್ಲ. ಹಾಗಾಗಿ ಅದನ್ನು ವಿಭಿನ್ನ ಮತ್ತು ಹೊಸ ಸಿದ್ಧಾಂತದಿಂದ ಬದಲಾಯಿಸಬೇಕಿದೆ. ಇಡೀ ವಿಶ್ವದಲ್ಲಿ ಎಲ್ಲವೂ ಗುರುತ್ವಾಕರ್ಷಣೆಯಿಂದ ನಿಯಂತ್ರಿಸಲ್ಪಡುತ್ತಿದೆ. ಎಲ್ಲಾ ಭೌತಿಕ ಸಂಶೋಧನೆಗಳನ್ನು ಈ ವಿಶ್ವ ನಿಯಂತ್ರಿಸುತ್ತದೆ ಅಥವಾ ಇದರ ಆಧಾರದಲ್ಲಿಯೇ ಎಲ್ಲವೂ ನಡೆಯುತ್ತಿದೆ. ಆದರೆ ಸಾಪೇಕ್ಷ ಸಿದ್ಧಾಂತ ಇದನ್ನು ಬದಿಗಿಟ್ಟು ಬೆಳಕಿನ ವೇಗ ಸ್ವತಂತ್ರ ಎಂದು ಹೇಳುತ್ತದೆ. ಹಾಗಾಗಿ ಈ ಸಿದ್ಧಾಂತವನ್ನು ಸಂಪೂರ್ಣವಾಗಿ ಬದಲಾಯಿಸಬೇಕಿದೆ. ಅಲ್ಲದೇ ಡೈನಾಮಿಕ್ಸ್‌, ಸಾಪೇಕ್ಷತೆ ಮತ್ತು ಕ್ವಾಂಟಮ್‌ ಮೆಕಾನಿಕ್ಸ್‌ಗಳನ್ನು ಒಳಗೊಂಡ ಭೌತಶಾಸ್ತ್ರದ ಮೂಲ ಮಾದರಿಯಲ್ಲಿ ಬದಲಾವಣೆ ಮಾಡಬೇಕಿದೆ.

ಈಗಾಗಲೇ ಇರುವ ಸಿದ್ಧಾಂತಗಳ ಬಗ್ಗೆ ಹೊಸತು ಕಂಡುಬಂದಾಗ ನಿಮ್ಮ ಸಂಶೋಧನೆ ಹೇಗಿತ್ತು?

ನೀವು ನಿಜವಾದ ಭೌತಶಾಸ್ತ್ರದ ವಿದ್ಯಾರ್ಥಿಯನ್ನು ಅಥವಾ ಜೀವನಕ್ಕಾಗಿ ಭೌತಶಾಸ್ತ್ರವನ್ನೇ ಅಳವಡಿಸಿಕೊಂಡಿರುವವರನ್ನು ಕೇಳಿದರೆ, ಬೆಳಕಿನ ಸಿದ್ಧಾಂತ ಸೇರಿದಂತೆ ಬಳಕೆ ಮಾಡುತ್ತಿರುವ ಎಲ್ಲಾ ಸಿದ್ಧಾಂತಗಳ ಬಗ್ಗೆ ಒಂದು ಸಣ್ಣ ಅನುಮಾನ ಹೊಂದಿದ್ದಾರೆ. ಅಲ್ಲದೇ ಇವುಗಳನ್ನು ಒಂದು ನಂಬಿಕೆಯ ಮೇಲೆ ಒಪ್ಪಿಕೊಂಡಿದ್ದೇವೆ. ಯಾವುದೇ ಒಂದು ಸಿದ್ಧಾಂತವನ್ನು ಮಂಡಿಸಿದಾಗ ಅದನ್ನು ಸಂಪೂರ್ಣವಾಗಿ ವೈಜ್ಞಾನಿಕವಾಗಿ ದೃಢಪಡಿಸಿರುವುದಿಲ್ಲ. ಹಾಗಾಗಿ ಒಂದಷ್ಟುಅನುಮಾನಗಳು ಇದ್ದೇ ಇರುತ್ತವೆ. ಬಹಳಷ್ಟುಬಾರಿ ನೇರವಾಗಿ ಈ ಸಿದ್ಧಾಂತಗಳನ್ನು ಪರೀಕ್ಷೆ ಮಾಡಲು ನಿಮಗೆ ಜೀವನ ಪೂರ್ತಿ ಅವಕಾಶ ಸಿಗುವುದಿಲ್ಲ. ಆದರೆ ಅವಕಾಶ ಸಿಕ್ಕರೆ ನೀವು ಅದನ್ನು ಮಾಡಲೇಬೇಕು. ನಾನು ಇದನ್ನು ಮಾಡಿದಾಗ ಬೆಳಕಿನ ಸಿದ್ಧಾಂತ ಸಂಪೂರ್ಣ ಸತ್ಯವಲ್ಲ ಎಂಬುದು ತಿಳಿದುಬಂದಿತು. ಈಗ ನನ್ನ ಸಿದ್ಧಾಂತ ಪೂರ್ಣವಾಗಿದೆ. ಈ ಕುರಿತಾಗಿ ಪುಸ್ತಕವನ್ನು ಬರೆದಿದ್ದೇನೆ.

ಹಿಂದಿನ ಸಿದ್ಧಾಂತಗಳು ಸಂಪೂರ್ಣವಾಗಿಲ್ಲ ಎಂದು ನಿಮಗೆ ಅನ್ನಿಸಿದ್ದು ಹೇಗೆ?

ಎಲ್ಲಾ ಮೂಲಭೂತ ಸಿದ್ಧಾಂತಗಳು 1930ಕ್ಕೂ ಮೊದಲೇ ಸಿದ್ಧವಾದಂತಹವು. ಈಗಲೂ ಇವುಗಳನ್ನೇ ಬಳಸುತ್ತಿದ್ದೇವೆ. ಆದರೆ ನಮಗೆ ಕಾಸ್ಮೋಲಜಿ ಹೆಚ್ಚಿನ ಅರಿವಿಗೆ ಬಂದದ್ದೇ 1930ರ ಬಳಿಕ. ಇದಕ್ಕೂ ಮೊದಲು ಕಾಸ್ಮೋಸ್‌ ಬಗ್ಗೆ ನಮಗೆ ಹೆಚ್ಚಿನದ್ದೇನು ತಿಳಿದಿರಲಿಲ್ಲ. ಮಿಲ್ಕಿ ವೇ, ಕೆಲವೊಂದು ನಕ್ಷತ್ರಗಳ ಬಗ್ಗೆ ಅಷ್ಟೇ ತಿಳಿದಿತ್ತು. 1930ರ ಬಳಿಕ, ಹಬಲ್‌ ದೂರದರ್ಶಕ ಉಡ್ಡಯನದ ಬಳಿಕ ವಿಸ್ತಾರವಾದ ಬಾಹ್ಯಾಕಾಶ ಅರಿವಿಗೆ ಬಂದಿತು. ಆಗ ಈ ವಿಶ್ವ ನಾವು ತಿಳಿದಿದ್ದಕ್ಕಿಂತ ಸಾವಿರಪಟ್ಟು ದೊಡ್ಡದಾಗಿದೆ ಎಂಬುದು ತಿಳಿಯಿತು. ಗುರುತ್ವಾಕರ್ಷಣೆ ಎಲ್ಲಾ ಭೌತ ಪರಿಮಾಣಗಳ ಮೇಲೆ ಪ್ರಭಾವ ಹೊಂದಿದೆ ಎಂಬುದು ತಿಳಿಯಿತು. ನಾನು ಇದೆಲ್ಲವನ್ನು ಅಧ್ಯಯನ ಮಾಡಿದಾಗ ಒಂದಷ್ಟುಹೊಸ ಅಂಶಗಳು ಬೆಳಕಿಗೆ ಬಂದವು. ಹೊಸ ಸಾಪೇಕ್ಷತಾ ಸಿದ್ಧಾಂತ ಈ ಗುರುತ್ವಾಕರ್ಷಣೆ ಫ್ರೇಮ್‌ ಬಿಟ್ಟು ವಿಷಯ ತಿಳಿಸುತ್ತಿದೆ ಎಂಬುದು ತಿಳಿಯಿತು. ಹಾಗಾಗಿ ಈ ಸಿದ್ಧಾಂತಗಳು ಬದಲಾಗಬೇಕು. ಇವುಗಳು ತಪ್ಪು ಎಂದು ನಾನು ಹೇಳುತ್ತಿಲ್ಲ. ಬದಲಾಗಿ ಇವು ಸಂಪೂರ್ಣವಾಗಿಲ್ಲ. ಇದನ್ನು ನಾವು ಪೂರ್ಣಗೊಳಿಸಬೇಕು.

ಈ ಹಿಂದೆ ಮಂಡನೆಯಾಗಿದ್ದ ಸಾಪೇಕ್ಷತಾ ಸಿದ್ಧಾಂತಗಳು ಐನ್‌ಸ್ಟೀನ್‌ರ ಸಿದ್ಧಾಂತವನ್ನು ಪ್ರಶ್ನಿಸಿರಲಿಲ್ಲ. ಆದರೆ ನಿಮ್ಮ ಸಿದ್ಧಾಂತ ಕ್ವಾಂಟಮ್‌ ಮೆಕಾನಿಕ್ಸ್‌ನಲ್ಲಿ ಹೇಗೆ ಬದಲಾವಣೆ ತರಲಿದೆ?

ಈ ಮೊದಲು ಭಾರತೀಯ ವಿಜ್ಞಾನಿ ತಾಣು ಪದ್ಮನಾಭನ್‌ ಮಂಡಿಸಿದ ಸಿದ್ಧಾಂತ ಗುರುತ್ವಾಕರ್ಷಣೆ ಸಿದ್ಧಾಂತವನ್ನು ಮತ್ತೊಮ್ಮೆ ವಿವರಿಸಿತು ಅಷ್ಟೇ. ಅವರು ಯಾವುದನ್ನೂ ಸ್ಪಷ್ಟಪಡಿಸಿರಲಿಲ್ಲ. ಈ ಕುರಿತಾಗಿ ಒಂದು ಯೋಚನೆಯನ್ನಷ್ಟೇ ಬಿತ್ತಿದರು. ಇದು ಈಗಾಗಲೇ ಇರುವ ಸಿದ್ಧಾಂತಗಳಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ. ಆದರೆ ನಾನು ಹೇಳುತ್ತಿರುವುದು ಎಲ್ಲಾ ಮೂಲಭೂತ ಭೌತ ಸಿದ್ಧಾಂತಗಳು ಬದಲಾಗಬೇಕು. ಪ್ರತಿಯೊಂದು ಗುರುತ್ವಾಕರ್ಷಣೆಯನ್ನೇ ಅವಲಂಬಿಸಿರುವುದರಿಂದ ಈ ಕುರಿತಾಗಿ ಸಂಶೋಧನೆಗಳನ್ನು ನಡೆಸಿದ್ದೇನೆ. ಹಾಗಾಗಿ ಸಾಪೇಕ್ಷತಾ ಸಿದ್ಧಾಂತ ಅಷ್ಟೇ ಅಲ್ಲದೇ ಕ್ವಾಂಟಂ ಮೆಕಾನಿಕ್ಸ್‌ ಸಿದ್ಧಾಂತದಲ್ಲೂ ಬದಲಾವಣೆಯಾಗಬೇಕು ಎಂಬುದರ ಪರವಾಗಿ ನಾನು ವಾದ ಮಾಡುತ್ತೇನೆ.

ಬೆಳಕಿನ ವೇಗಕ್ಕಿಂತ ಹೆಚ್ಚಿನ ವೇಗ ಯಾವುದೂ ಇಲ್ಲ. ಆದರೆ ನಿಮ್ಮ ಸಿದ್ಧಾಂತದ ಪ್ರಕಾರ ಇದು ಏನು?

ಐನ್‌ಸ್ಟೀನ್‌ ಸಿದ್ಧಾಂತದ ಪ್ರಕಾರ ಬೆಳಕಿಗಿಂತ ವೇಗವಾಗಿ ಯಾವುದು ಚಲಿಸುವುದಿಲ್ಲ. ಏಕೆಂದರೆ ಆ ಸಿದ್ಧಾಂತದ ಗಣಿತದ ಲೆಕ್ಕಚಾರಗಳನ್ನು ಅವಲಂಬಿಸಿ ಇದನ್ನು ಹೇಳಲಾಗುತ್ತದೆ. ಆದರೆ ನನ್ನ ಕಾಸ್ಮಿಕ್‌ ರಿಲೇಟಿವಿಟಿ ಸಿದ್ಧಾಂತದ ಪ್ರಕಾರ, ಗುರುತ್ವಾಕರ್ಷಣೆ ಎಲ್ಲವನ್ನು ನಿಯಂತ್ರಿಸುತ್ತದೆ. ಹಾಗಾಗಿ ಈ ಗುರುತ್ವಾರ್ಷಣೆಯಿಂದಾಗಿಯೇ ಬೆಳಕು ಇಷ್ಟೊಂದು ವೇಗವಾಗಿ ಚಲಿಸುತ್ತಿದೆ. ಪ್ರಸ್ತುತ ಬೆಳಕಿನ ಕಿರಣಗಳು ವೇಗವಾಗಿ ಚಲಿಸುತ್ತಿವೆ ಎಂದ ಮಾತ್ರಕ್ಕೆ ಬೇರೆಯದ್ದು ಬೆಳಕಿಗಿಂತ ವೇಗವಾಗಿ ಚಲಿಸಲು ಸಾಧ್ಯವಿಲ್ಲ ಎಂದು ಅರ್ಥವಲ್ಲ. ಬೆಳಕಿನ ವೇಗದ ಪ್ರಮಾಣಕ್ಕಿಂತ ಆಚೆಗೆ ಐನ್‌ಸ್ಟೀನ್‌ ಯಾವುದೇ ವಿಚಾರಗಳನ್ನು ಮಂಡಿಸಿಲ್ಲ. ಹಾಗಾಗಿ ಬೆಳಕು ವೇಗವಾಗಿ ಚಲಿಸುತ್ತದೆ ಎಂಬ ನಿರ್ಣಯಕ್ಕೆ ಬಂದಿದ್ದಾರೆ. ಆದರೆ ನನ್ನ ಸಿದ್ಧಾಂತದಲ್ಲಿ ಬೆಳಕಿಗಿಂತ ವೇಗವಾಗಿ ಚಲಿಸುವ ಪರಿಮಾಣದ ಬಗ್ಗೆ ವಿವರಿಸಿಲ್ಲವಾದರೂ, ಸಿದ್ಧಾಂತವನ್ನು ಬೆಳಕಿಗೆ ಮಿತಗೊಳಿಸಿಲ್ಲ.

ಲೈಗೋ ಯೋಜನೆಯ ಮೂಲಕ ವಿಶ್ವದ ರಹಸ್ಯದ ಬಗ್ಗೆ ತಿಳಿದುಕೊಳ್ಳಲಿದ್ದೇವೆ. ಏನಿದು ಲೈಗೋ?

ಲೈಗೋ ಬಾಹ್ಯಾಕಾಶದ ಬಗ್ಗೆ ಇನ್ನೂ ಹೆಚ್ಚಿನದ್ದನ್ನು ತಿಳಿದುಕೊಳ್ಳಲು ಸಹಕಾರ ಒದಗಿಸುತ್ತದೆ. ಇದೊಂದು ಗುರುತ್ವಾಕರ್ಷಣೆಯ ಅಲೆಗಳನ್ನು ಅಧ್ಯಯನ ಮಾಡುವ ವಿಧಾನವಾಗಿದೆ. ಇದರಿಂದಾಗಿ ಬ್ಲಾಕ್‌ ಹೋಲ್‌ ಮುಂತಾದವುಗಳ ಕುರಿತಾಗಿ ಈಗ ಹೆಚ್ಚಿನ ಅಧ್ಯಯನ ನಡೆಸಲು ಸಾಧ್ಯವಾಗಿದೆ. ಈ ಮೊದಲು ನಾವು ನೋಡಲಾಗಿಲ್ಲದ ಆಕಾಶಕಾಯಗಳನ್ನು ಈಗ ನೋಡಲು ಸಾಧ್ಯವಾಗಿದೆ. ಇದೊಂದು ಹೊಸ ಬಾಹ್ಯಾಕಾಶ ವಿಜ್ಞಾನವಾಗಿದೆ. ಹಾಗಾಗಿ ಭಾರತದಲ್ಲಿ 3ನೇ ಲೈಗೋ ಡಿಕೆಕ್ಟರ್‌ಗಾಗಿ ನಾವು 10 ವರ್ಷಗಳ ಹಿಂದೆ ಬೇಡಿಕೆ ಇಟ್ಟಿದ್ದೆವು. ಸರ್ಕಾರ ನಮಗೆ ಹೆಚ್ಚು ಬೆಂಬಲ ನೀಡಿದ್ದು, ಈಗ ಅದನ್ನು ಒದಗಿಸಿಕೊಟ್ಟಿದೆ. ಹೀಗಾಗಿ ನಮಗೆಲ್ಲಾ ಬಹಳ ಸಂತೋಷವಾಗಿದೆ.

ಮಕ್ಕಳಲ್ಲಿ ವಿಜ್ಞಾನವನ್ನು ತುಂಬುತ್ತಿರುವುದರ ಕುರಿತಾಗಿ ಭಾರತದ ಶಿಕ್ಷಣದ ಬಗ್ಗೆ ನಿಮಗೇನನ್ನಿಸುತ್ತದೆ?

ನಾವೆಲ್ಲರೂ ಭಾರತದ ಶಿಕ್ಷಣದಿಂದಲೇ ಈ ಮಟ್ಟಕ್ಕೆ ಬೆಳೆದಿದ್ದೇವೆ. ನಮಗೆ ಉತ್ತಮ ಶಿಕ್ಷಕರಿದ್ದರು. ಹಾಗಾಗಿ ವಿಜ್ಞಾನದ ಬಗ್ಗೆ ಅಧ್ಯಯನ ನಡೆಸಲು ಕಷ್ಟವಾಗಲಿಲ್ಲ. ನಮ್ಮಲ್ಲಿ ಸಾಕಷ್ಟುಮೂಢನಂಬಿಕೆಗಳಿವೆ. ನಾವು ಅವುಗಳಿಂದ ಹೊರಬಂದು ಸಂಶೋಧನೆಗಳನ್ನು ನಡೆಸಬೇಕಿದೆ. ಪ್ರಾರಂಭಿಕ ಹಂತದಲ್ಲಿ ನಮ್ಮ ಶಿಕ್ಷಣ ತುಂಬಾ ಚೆನ್ನಾಗಿದೆ. ಆದರೆ ವಿಶ್ವವಿದ್ಯಾಲಯದ ಮಟ್ಟದಲ್ಲಿ ವಿದೇಶಿಗರು ನಡೆಸಿದ ಸಂಶೋಧನೆ ಮುಂತಾದವುಗಳನ್ನು ಅಧ್ಯಯನ ಮಾಡಲು ಒಂದಷ್ಟುಬದಲಾವಣೆ ಬೇಕಿದೆ. ವೈಜ್ಞಾನಿಕ ಶಿಕ್ಷಣವೆಂದರೆ ಕೇವಲ ಪಾಶ್ಚಿಮಾತ್ಯರು ಮಾತ್ರ ನೀಡಿದ್ದು ಎಂಬ ನಂಬಿಕೆ ಇದೆ. ಇದು ಬದಲಾಗಬೇಕು. ನಾವು ಕೊಡುಗೆ ನೀಡಿದ್ದೇವೆ. ಹಾಗಾಗಿ ವಿಜ್ಞಾನ ಎಂಬುದು ಜಾಗತಿಕವಾಗಬೇಕು. ನಾವು ಪಾಶ್ಚಿಮಾತ್ಯರ ಶಿಕ್ಷಣವನ್ನು ಕಲಿಯಲು ಹೊರಟರೆ ಮೂಲ ತತ್ವಗಳ ಕುರಿತಾಗಿ ನಮಗೆ ಯಾವುದೇ ಪ್ರಶ್ನೆ ಮೂಡುವುದಿಲ್ಲ.

ಮೂಲ ಸಿದ್ಧಾಂತಗಳ ವಿರುದ್ಧವಾಗಿ ಮೂಡುತ್ತಿರುವ ಹೊಸ ಸಿದ್ಧಾಂತಗಳ ಬಗ್ಗೆ ಪಾಶ್ಚಿಮಾತ್ಯರ ನಿಲುವೇನು?

ಇದೊಂದು ಸತ್ಯ. ಹಾಗಾಗಿ ಎಲ್ಲರೂ ಒಪ್ಪಲೇಬೇಕು. ಈಗಾಗಲೇ ಇರುವ ಸಿದ್ಧಾಂತಗಳನ್ನು ನಾವು ಮಾಡಿದ್ದು, ಉಳಿದವರು ಅನ್ನು ಅನುಸರಿಸುತ್ತಿದ್ದಾರೆ ಎಂಬ ನಂಬಿಕೆ ಪಾಶ್ಚಿಮಾತ್ಯರಲ್ಲಿ ಇದೆ. ಇದು ಕೆಲವೊಮ್ಮೆ ನಿಜ. ಏಕೆಂದರೆ ನಾವು ನಮ್ಮ ಸಿದ್ಧಾಂತಗಳನ್ನು ಸರಿಯಾದ ಸಮಯದಲ್ಲಿ ಜಗತ್ತಿನ ಎದುರು ಮಂಡಿಸಿಲ್ಲ. ಹಾಗೆಯೇ ನಾವು ಮಂಡಿಸಿದಾಗ ಅದನ್ನು ಒಪ್ಪಿಕೊಳ್ಳಲೇಬೇಕು ಎಂದೂ ಸಹ ನಾನು ಹೇಳುತ್ತಿಲ್ಲ. ಹೊಸ ಸಿದ್ಧಾಂತಗಳ ಕುರಿತಾಗಿ ಅನುಮಾನಗಳಿದ್ದರೆ, ಆ ಕುರಿತು ಚರ್ಚೆ ಮಾಡಿ ಎಂದು ಹೇಳುತ್ತಿದ್ದೇನೆ. ನಿಮಗೆ ಯಾವುದೇ ಗೊಂದಲಗಳಿಲ್ಲದಿದ್ದರೆ ಈ ಸಿದ್ಧಾಂತವನ್ನು ಒಪ್ಪಿಕೊಳ್ಳಿ. ಗುರುತ್ವಾಕರ್ಷಣೆ ಪ್ರತಿಯೊಂದನ್ನು ನಿಯಂತ್ರಿಸುತ್ತಿದೆ ಎಂದು ನಾನು ಹೇಳುತ್ತಿರುವುದು ಲಾಜಿಕಲ್‌ ಆಗಿಯೂ ಸಹ ಸರಿಯಾಗಿದೆ. ಹಾಗಾಗಿ ಅನುಮಾನಗಳಿದ್ದರೆ ಚರ್ಚಿಸಿ ಎಂದು ನಾನು ಹೇಳುತ್ತೇನೆ. ವಿಜ್ಞಾನದ ಕುರಿತಾಗಿ ಜವಾಹರಲಾಲ್‌ ನೆಹರು ಅವರ ಸರ್ಕಾರ ಹೆಚ್ಚಿನ ನೆರವು ನೀಡಿತು. ನೆಹರು ಅವರಿಗೆ ಹಲವು ವಿಜ್ಞಾನಿಗಳ ಜೊತೆ ನೇರವಾದ ಸಂಬಂಧ ಇತ್ತು. ಇದಾದ ಬಳಿಕವೂ ಹಲವು ಸರ್ಕಾರಗಳು ವಿಜ್ಞಾನದ ಪರವಾಗಿ ನೀತಿಗಳನ್ನು ಹೊಂದಿವೆ.

Follow Us:
Download App:
  • android
  • ios