ಅಂಗಾರಕನಲ್ಲಿ ಒಂದಲ್ಲ, ಎರಡು ಸೂರ್ಯಗ್ರಹಣ: ವಿಡಿಯೋ!

ಅಂಗಾರಕನ ಅಂಗಳದಲ್ಲಿ ಎರಡೆರಡು ಪ್ರಕೃತಿ ವಿಸ್ಮಯ| ಮಂಗಳ ಗ್ರಹಕ್ಕೆ ಎರಡು ನೈಸರ್ಗಿಕ ಉಪಗ್ರಹಗಳು| ಪೋಬೋಸ್, ಡಿಮೋಸ್ ಉಪಗ್ರಹಗಳಿಂದ ಎರಡೆರಡು ಸೂರ್ಯಗ್ರಹಣ| ಮಾರ್ಚ್ 17, ಮಾರ್ಚ್ 26ರಂದು ನಡೆದ ಸೂರ್ಯಗ್ರಹಣ| ನಾಸಾದ ಕ್ಯೂರಿಯಾಸಿಟಿ ರೋವರ್ ನೌಕೆಯ ಕ್ಯಾಮರಾದಲ್ಲಿ ಸೆರೆಯಾದ ಅಪರೂಪದ ಕ್ಷಣ|

Curiosity Rover Captures 2 Solar Eclipses on Mars

ವಾಷಿಂಗ್ಟನ್(ಏ.06): ಇದು ನಿಜಕ್ಕೂ ಸೃಷ್ಟಿಕರ್ತನ ಅನ್ಯಾಯ. 700 ಕೋಟಿಗೂ ಅಧಿಕ ಮನುಷ್ಯರನ್ನು, 84 ಲಕ್ಷಕ್ಕೂ ಅಧಿಕ ಜೀವ ಪ್ರಪಂಚವನ್ನು ಸಲಹುತ್ತಿರುವ  ವಸುಧೆಗೆ ಒಂದೇ ಒಂದು ಚಂದ್ರ. ತನ್ನನ್ನು ನೋಡಲು ಯಾರೂ ಇಲ್ಲದ  ಮಂಗಳ ಗ್ರಹಕ್ಕೆ ಎರಡು ಚಂದ್ರ.

ಆದರೆನಂತೆ, ಯಾರೂ ಇಲ್ಲದ ಮಂಗಳ ಗ್ರಹಕ್ಕೆ ನಾವಿದ್ದೀವಿ ಎಂಬ ಅಭಯ ನೀಡಿರುವ ಮಾನವ ಮಂಗಳ ಗ್ರಹಕ್ಕೆ ಕಾಲಿಟ್ಟು ಅದರ ಒಂಟಿತನವನ್ನು ದೂರ ಮಾಡುವ ದಿನ ದೂರವೇನಿಲ್ಲ ಬಿಡಿ.

ಅದರಂತೆ ಏಕೈಕ ನೈಸರ್ಗಿಕ ಉಪಗ್ರಹ ಹೊಂದಿರುವ ಭೂಮಿಗೆ ಸೂರ್ಯಗ್ರಹಣ, ಚಂದ್ರಗ್ರಹಣ ನೋಡುವ ಭಾಗ್ಯವಿದೆ. ಆದರೆ ಎರಡು ಉಪಗ್ರಹಗಳನ್ನು ಹೊಂದಿರುವ ಮಂಗಳ ಗ್ರಹದಲ್ಲಿ ಎರಡೆರೆಡು ಸೂರ್ಯಗ್ರಹಣ ಸಂಭವಿಸುತ್ತವೆ.

ಎಲ್ಲರಿಗೂ ತಿಳಿದಿರುವಂತೆ ಮಂಗಳ ಗ್ರಹಕ್ಕೆ ಪೋಬೋಸ್ ಮತ್ತು ಡಿಮೋಸ್ ಎಂಬ ಎರಡು ನೈಸರ್ಗಿಕ ಉಪಗ್ರಹಗಳಿವೆ. ಗಾತ್ರದಲ್ಲಿ ತುಂಬ ಚಿಕ್ಕದಾಗಿರುವ ಈ ಉಪಗ್ರಹಗಳು ಮಂಗಳ ಗ್ರಹವನ್ನು ಅತ್ಯಂತ ಹತ್ತಿರದ ಕಕ್ಷೆಯಲ್ಲಿ ಸುತ್ತುತ್ತವೆ.

ಈ ಪ್ರಕ್ರಿಯೆಯಲ್ಲಿ ಮಂಗಳ ಮತ್ತು ಸೂರ್ಯನ ಮಧ್ಯೆ ಎರಡೂ ಉಪಗ್ರಹಗಳು ಬೇರೆ ಬೇರೆ ಅವಧಿಯಲ್ಲಿ ಹಾದು ಹೋಗುತ್ತವೆ. ಆಗ ಮಂಗಳ ಗ್ರಹಕ್ಕೆ ಸೂರ್ಯಗ್ರಹಣದ ಸೌಭಾಗ್ಯ ದೊರೆಯುವುದುಂಟು.

ಮಂಗಳ ಗ್ರಹದ ಅಧ್ಯಯನದಲ್ಲಿ ನಿರತವಾಗಿರುವ ನಾಸಾದ ಕ್ಯೂರಿಯಾಸಿಟಿ ರೋವರ್ ನ ಕ್ಯಾಮರಾಗೆ ಪೋಬೋಸ್ ಮತ್ತು ಡಿಮೋಸ್ ನಿಂದ ಉಂಟಾಗುವ ಸೂರ್ಯಗ್ರಹಣ ಸೆರೆಯಾಗಿದೆ.

ಕೇವಲ 2.3 ಕಿ.ಮೀ ಸುತ್ತಳತೆಯ ಡಿಮೋಸ್ ಕಳೆದ ಮಾರ್ಚ್ 17 ರಂದು ಮಂಗಳ ಮತ್ತು ಸೂರ್ಯನ ಮಧ್ಯೆ ಹಾದು ಹೋಗಿದ್ದು, ಈ ವೇಳೆ ಸೂರ್ಯಗ್ರಹಣ ಉಂಟಾಗಿದೆ.  ಅಲ್ಲದೇ 11.5 ಕಿ.ಮೀ. ಸುತ್ತಳತೆಯ ಪೋಬೋಸ್ ಕಳೆದ ಮಾರ್ಚ್ 26ರಂದು ಮಂಗಳ ಮತ್ತು ಸೂರ್ಯನ ಮಧ್ಯೆ ಹಾದು ಹೋಗಿದ್ದು, ಸೂರ್ಯಗ್ರಹಣಕ್ಕೆ ಕಾರಣವಾಗಿದೆ.

ಆದರೆ ಭೂಮಿಯ ನೈಸರ್ಗಿಕ ಉಪಗ್ರಹ ಚಂದ್ರನಿಗೆ ಹೋಲಿಸಿದರೆ ಗಾತ್ರದಲ್ಲಿ ತುಂಬ ಚಿಕ್ಕದಾಗಿರುವ ಮಂಗಳ ಗ್ರಹದ ಉಪಗ್ರಹಗಳಾದ ಪೋಬೋಸ್ ಮತ್ತು ಡಿಮೋಸ್, ಸೂರ್ಯನನ್ನು ಸಂಪೂರ್ಣವಾಗಿ ಕವರ್ ಮಾಡುವುದಿಲ್ಲ.

Latest Videos
Follow Us:
Download App:
  • android
  • ios