Asianet Suvarna News Asianet Suvarna News

ತುಕ್ಕು ನಿರೋಧಕ ಉಕ್ಕು: ಜನಜೀವನದಲ್ಲಿ ಸ್ಟೇನ್‌ಲೆಸ್ ಸ್ಟೀಲಿನ ಮಹತ್ವ

ಸರಳವಾಗಿ ವಿವರಿಸುವುದಾದರೆ, ಸ್ಟೇನ್‌ಲೆಸ್ ಸ್ಟೀಲನ್ನು ನಿರ್ಮಿಸಿರುವ ರೀತಿ ಅದರ ಒಳಗಿರುವ ಕಬ್ಬಿಣವನ್ನು ಆಮ್ಲಜನಕ ತಲುಪಲು ಸಾಧ್ಯವಾಗದಂತೆ ತಡೆಯುತ್ತದೆ. 

Corrosion resistant steel Importance of stainless steel in human life Article Written By Girish Linganna gvd
Author
First Published Sep 14, 2024, 4:22 PM IST | Last Updated Sep 14, 2024, 4:22 PM IST

ಗಿರೀಶ್ ಲಿಂಗಣ್ಣ, (ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕಬ್ಬಿಣಕ್ಕೆ ಅತ್ಯಂತ ಸಾಮಾನ್ಯವಾಗಿ ಕಾಡುವ ತೊಂದರೆ ಎಂದರೆ ಅದು ತುಕ್ಕು. ಕಬ್ಬಿಣ ಗಾಳಿ ಮತ್ತು ನೀರಿಗೆ ತೆರೆದುಕೊಂಡ ತಕ್ಷಣವೇ ಅದು ತುಕ್ಕು ಹಿಡಿಯಲಾರಂಭಿಸುತ್ತದೆ. ಇನ್ನು ಕಬ್ಬಿಣದ ಗಟ್ಟಿಯಾದ ಮಿಶ್ರಲೋಹವಾಗಿರುವ, ಇಂಗಾಲದ ಅಂಶದೊಡನೆ ಮಿಶ್ರಣ ಹೊಂದಿರುವ ಉಕ್ಕಿಗೂ ಸಹ ತುಕ್ಕು ಹಿಡಿಯುತ್ತದೆ. ಅಂದರೆ, ಕಟ್ಟಡಗಳು, ವಾಹನಗಳು, ಮತ್ತು ಗೃಹಬಳಕೆಯ ಉಪಕರಣಗಳಲ್ಲಿ ಬಳಸಿರುವ ಉಕ್ಕಿಗೂ ಆಕ್ಸಿಡೀಕರಣ ಪ್ರಕ್ರಿಯೆ ತೊಂದರೆ ಉಂಟುಮಾಡುವ ಸಾಧ್ಯತೆಗಳಿವೆ.

ಸ್ಟೇನ್‌ಲೆಸ್ ಸ್ಟೀಲ್ ಉಕ್ಕನ್ನು ನಿರೋಧಿಸುವ ಹಿಂದಿನ ರಹಸ್ಯವೇನು?: ಸರಳವಾಗಿ ವಿವರಿಸುವುದಾದರೆ, ಸ್ಟೇನ್‌ಲೆಸ್ ಸ್ಟೀಲನ್ನು ನಿರ್ಮಿಸಿರುವ ರೀತಿ ಅದರ ಒಳಗಿರುವ ಕಬ್ಬಿಣವನ್ನು ಆಮ್ಲಜನಕ ತಲುಪಲು ಸಾಧ್ಯವಾಗದಂತೆ ತಡೆಯುತ್ತದೆ. ಆ ಮೂಲಕ ಕಬ್ಬಿಣ ತುಕ್ಕು ಹಿಡಿಯುವುದರಿಂದ, ಮತ್ತು ಹಾನಿಗೊಳಗಾಗುವುದರಿಂದ ರಕ್ಷಿಸಲ್ಪಡುತ್ತದೆ. ಕಬ್ಬಿಣ ಆಮ್ಲಜನಕದೊಡನೆ ವರ್ತಿಸಿದಾಗ ಸಾಮಾನ್ಯ ಉಕ್ಕು ತುಕ್ಕು ಹಿಡಿಯುತ್ತದೆ. ಕೇವಲ ತುಕ್ಕು ಹಿಡಿಯುವುದು ಮಾನವರಿಗೆ ಅಪಾಯಕಾರಿ ಅಲ್ಲದಿದ್ದರೂ, ಅದು ಕ್ರಮೇಣ ಕಬ್ಬಿಣವನ್ನು ಬಹಳಷ್ಟು ದುರ್ಬಲಗೊಳಿಸಿ, ಅದನ್ನು ಅಸುರಕ್ಷಿತ ಮತ್ತು ಸೌಂದರ್ಯ ರಹಿತವನ್ನಾಗಿ ಮಾಡುತ್ತದೆ.

ಭಾರತದ ರಾಷ್ಟ್ರೀಯ ಬಾಹ್ಯಾಕಾಶ ದಿನ: ಚಂದ್ರನಂಗಳ ದಾಟಿ, ಜನಜೀವನದಲ್ಲಿ ಬದಲಾವಣೆ ತರುವ ಸಾಧನೆ

ಸಾಮಾನ್ಯ ಉಕ್ಕನ್ನು 99% ಕಬ್ಬಿಣ ಹಾಗೂ 0/2% ದಿಂದ 1% ಇಂಗಾಲವನ್ನು ಬಳಸಿ ನಿರ್ಮಿಸಲಾಗುತ್ತದೆ. ಆದರೆ ಇನ್ನೊಂದೆಡೆ ಸ್ಟೇನ್‌ಲೆಸ್ ಸ್ಟೀಲ್ ನಿರ್ಮಾಣದಲ್ಲಿ 62%ದಿಂದ 75% ಕಬ್ಬಿಣ, 1% ತನಕ ಇಂಗಾಲ ಹಾಗೂ 10.5%ಕ್ಕೂ ಹೆಚ್ಚು ಕ್ರೋಮಿಯಂ ಬಳಸಲಾಗುತ್ತದೆ. ಸ್ಟೇನ್‌ಲೆಸ್ ಸ್ಟೀಲ್ ಸಣ್ಣ ಪ್ರಮಾಣದಲ್ಲಿ ನಿಕ್ಕೆಲ್ ಅನ್ನೂ ಹೊಂದಿದ್ದು, ಇದು ಸ್ಟೇನ್‌ಲೆಸ್ ಸ್ಟೀಲನ್ನು ಇನ್ನಷ್ಟು ಗಟ್ಟಿಯಾಗಿಸಿ, ಅದರೊಡನೆ ಕೆಲಸ ಮಾಡುವುದನ್ನು ಸುಲಭವಾಗಿಸುತ್ತದೆ. ವಸ್ತು ವಿಜ್ಞಾನಿ ಮತ್ತು ವರ್ಲ್ಡ್ ಸ್ಟೀಲ್ ಅಸೋಸಿಯೇಶನ್ ಜೊತೆ ಸಂಬಂಧ ಹೊಂದಿರುವ ಬೆಲ್ಜಿಯಂ ಮೂಲದ ಲಾಭರಹಿತ ಸಂಸ್ಥೆ ವರ್ಲ್ಡ್ ಸ್ಟೇನ್‌ಲೆಸ್‌ನ ಪ್ರಧಾನ ಕಾರ್ಯದರ್ಶಿಯಾಗಿರುವ ಟಿಮ್ ಕಾಲಿನ್ಸ್ ಅವರು, ಸ್ಟೇನ್‌ಲೆಸ್ ಸ್ಟೀಲ್ ತುಕ್ಕು ಹಿಡಿಯದಂತೆ ತಡೆಯುವಲ್ಲಿ ಅದರಲ್ಲಿ ಬಳಕೆಯಾಗುವ ಕ್ರೋಮಿಯಂ ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ.

ಕ್ರೋಮಿಯಂ ಗಾಳಿಯಲ್ಲಾಗಲಿ, ಅಥವಾ ನೀರಿನಲ್ಲಾಗಲಿ ಆಮ್ಲಜನಕದ ಜೊತೆ ವರ್ತಿಸಿ, ಲೋಹದ ಮೇಲ್ಮೈಯಲ್ಲಿ ಕ್ರೋಮಿಯಂ ಆಕ್ಸೈಡ್‌ನ (Cr203) ಒಂದು ಪದರವನ್ನು ಸೃಷ್ಟಿಸುತ್ತದೆ. ಈ ಪದರ ಆಮ್ಲಜನಕವನ್ನು ಉಕ್ಕಿನ ಒಳಗಿರುವ ಕಬ್ಬಿಣವನ್ನು ತಲುಪದಂತೆ ತಡೆಯುತ್ತದೆ. ಆ ಮೂಲಕ ಸ್ಟೇನ್‌ಲೆಸ್ ಸ್ಟೀಲ್ ತುಕ್ಕು ಹಿಡಿಯದಂತೆ ರಕ್ಷಿಸುತ್ತದೆ ಎಂದು ಕಾಲಿನ್ಸ್ ವಿವರಿಸುತ್ತಾರೆ. ಸ್ಟೇನ್‌ಲೆಸ್ ಸ್ಟೀಲ್ ಮೇಲಿರುವ ಈ ಪದರ ಕೇವಲ ಕೆಲವು ನ್ಯಾನೋಮೀಟರ್‌ಗಳಷ್ಟು ಮಾತ್ರವೇ ದಪ್ಪಗಿದ್ದು, ಕಣ್ಣಿಗೆ ಕಾಣಿಸದಂತೆ ಇರುತ್ತದೆ. ಈ ಕ್ರೋಮಿಯಂ ಆಕ್ಸೈಡ್ ಪದರ ಏನಾದರೂ ಹಾನಿಗೊಳಗಾದರೆ, ಅದು ತನ್ನನ್ನು ತಾನು ದುರಸ್ತಿ ಮಾಡಿಕೊಳ್ಳಬಹುದು. ಇದು ಬೇರೆ ಯಾವುದೇ ವಸ್ತುಗಳೊಡನೆ ವರ್ತಿಸುವುದಿಲ್ಲ ಮತ್ತು ಲೋಹದ ಪದರದಿಂದ ಸೋರಿ ಹೋಗುವುದಿಲ್ಲ. ಈ ಮೂಲಕ ಸ್ಟೇನ್‌ಲೆಸ್ ಸ್ಟೀಲ್ ಆಹಾರ ಉತ್ಪಾದನೆ, ಶಸ್ತ್ರಚಿಕಿತ್ಸೆ, ಮತ್ತು ಇತರ ಉದ್ದೇಶಗಳಿಗೆ ಸೂಕ್ತವಾಗಿದೆ ಎಂದು ಕಾಲಿನ್ಸ್ ವಿವರಿಸುತ್ತಾರೆ.

ಉದ್ದೇಶ ರಹಿತ ಸಂಶೋಧನೆ: ಆಧುನಿಕ ಸ್ಟೇನ್‌ಲೆಸ್ ಸ್ಟೀಲ್ ಅನ್ನು ಇಂಗ್ಲಿಷ್ ಲೋಹಶಾಸ್ತ್ರಜ್ಞ ಹ್ಯಾರಿ ಬ್ರಿಯರ್ಲಿ 1912ರಲ್ಲಿ ನಿರ್ಮಿಸಿದ್ದರು. ಅವರು ಬಂದೂಕಿನ ಬ್ಯಾರಲ್‌ಗಳು ಸವೆಯುವುದನ್ನು ತಡೆಗಟ್ಟಲು ಉಕ್ಕಿನ ಮಿಶ್ರಲೋಹಗಳ ಕುರಿತು ಸಂಶೋಧನೆ ನಡೆಸುತ್ತಿದ್ದರು. ಬ್ರಿಯರ್ಲಿ ಕಬ್ಬಿಣ, ಇಂಗಾಲ, ಕ್ರೋಮಿಯಂ ಮತ್ತು ನಿಕ್ಕೆಲ್‌ಗಳನ್ನು ಬಳಸಿ ಒಂದು ಮಿಶ್ರಲೋಹವನ್ನು ನಿರ್ಮಿಸಿದರು. ಆದರೆ ಅದು ಬಂದೂಕಿನ ಬ್ಯಾರಲ್‌ಗೆ ಸೂಕ್ತವಾಗಿ ಕಾರ್ಯಾಚರಿಸಲಿಲ್ಲ. ಇದರಿಂದ ಯಾವುದೇ ಉಪಯೋಗವಿಲ್ಲ ಎಂದುಕೊಂಡ ಬ್ರಿಯರ್ಲಿ ಅದನ್ನು ಸುಮ್ಮನೆ ತನ್ನ ಹಿತ್ತಲಿಗೆ ಎಸೆದಿದ್ದರು. ಅದಾದ ಕೆಲವು ವಾರಗಳ ಬಳಿಕ, ತನ್ನ ಹಿತ್ತಲಿನಲ್ಲಿ ಬಿದ್ದಿದ್ದ ಹೊಳೆಯುತ್ತಿದ್ದ ಆ ಮಿಶ್ರಲೋಹ ಇನ್ನೂ ತುಕ್ಕು ಹಿಡಿಯದೆ, ಹಾಗೇ ಪಳಪಳ ಹೊಳೆಯುತ್ತಿದ್ದುದು ಬ್ರಿಯರ್ಲಿ ಗಮನಕ್ಕೆ ಬಂತು. ಅವರು ಅದರಲ್ಲಿ ಇನ್ನಷ್ಟು ಸುಧಾರಣೆ ತಂದು, 1915ರಲ್ಲಿ ಅದನ್ನು ಜಗತ್ತಿನ ಮುಂದಿಟ್ಟರು.

ಇಂದು ಜಗತ್ತಿನಾದ್ಯಂತ ವಾರ್ಷಿಕವಾಗಿ ಬಹುತೇಕ 2 ಬಿಲಿಯನ್ ಟನ್ ಉಕ್ಕಿನ ಉತ್ಪಾದನೆಯಾಗುತ್ತಿದ್ದು, ಅದರಲ್ಲಿ 4% ಪ್ರಮಾಣದಷ್ಟು ಪಾಲನ್ನು ಉಕ್ಕು ಹಿಡಿಯದ ಸ್ಟೇನ್‌ಲೆಸ್ ಸ್ಟೀಲ್ ಹೊಂದಿದೆ ಎಂದು ಕಾಲಿನ್ಸ್ ವಿವರಿಸಿದ್ದಾರೆ. ಆದರೆ, ಸ್ಟೇನ್‌ಲೆಸ್ ಸ್ಟೀಲ್ ಒಂದು ಸಂಕೀರ್ಣ ಉತ್ಪನ್ನವಾಗಿದ್ದು, ಇದರ ಉತ್ಪಾದನೆ ವೆಚ್ಚದಾಯಕವಾಗಿದೆ. ಸಾಮಾನ್ಯ ಉಕ್ಕಿನ ಉತ್ಪಾದನೆಗೆ ಹೋಲಿಸಿದರೆ, ಇದರ ಉತ್ಪಾದನಾ ವೆಚ್ಚ ಮೂರರಿಂದ ಐದು ಪಟ್ಟು ಹೆಚ್ಚಿರುತ್ತದೆ. ನೀರಿನಾಳದಲ್ಲಿ ಬಳಸುವ ನಿಟ್ಟಿನಲ್ಲಿ ಇದಕ್ಕೆ ಮಾಲಿಬ್ಡೆನಂ ನಂತಹ ವಿಶೇಷ ಲೋಹಗಳನ್ನು ಸೇರಿಸುವುದರಿಂದ, ಉತ್ಪಾದನಾ ವೆಚ್ಚ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ಇದೆಲ್ಲದರ ಪರಿಣಾಮವಾಗಿ, ಬಹುಪಾಲು ಉಕ್ಕಿನ ಬಳಕೆಯಲ್ಲಿ ಮಾಮೂಲಿ ಉಕ್ಕು ಅಥವಾ ಕಾರ್ಬನ್ ಸ್ಟೀಲ್ ಅನ್ನೇ ಬಳಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ತುಕ್ಕಿನಿಂದ ತೊಂದರೆಯಾಗದಂತೆ ತಡೆಯಲು ಪೇಂಟ್ ಅಥವಾ ಇತರ ಲೇಪನಗಳನ್ನು ಬಳಸಲಾಗುತ್ತದೆ. ಇಷ್ಟಾದರೂ, ಸ್ಟೇನ್‌ಲೆಸ್ ಸ್ಟೀಲನ್ನು ಹಿಂದೆಂದಿಗಿಂತಲೂ ಹೆಚ್ಚು ಇಂದಿನ ದಿನಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಬಳಸಲಾಗುತ್ತಿದೆ. ಇದರಲ್ಲಿ ಆಹಾರ ಉತ್ಪಾದನೆ ಮತ್ತು ಆಹಾರ ಸುರಕ್ಷತಾ ವಲಯಗಳೂ ಸೇರಿವೆ ಎನ್ನುತ್ತಾರೆ ಕಾಲಿನ್ಸ್. ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಆಹಾರ ವಿಜ್ಞಾನಿಯಾಗಿರುವ ಕಾಂತಾ ಶೆಲ್ಕೆ ಅವರ ಪ್ರಕಾರ, ಇತರ ಹಲವು ವಸ್ತುಗಳಿಗೆ ಹೋಲಿಸಿ ನೋಡಿದರೆ, ಸ್ಟೇನ್‌ಲೆಸ್ ಸ್ಟೀಲ್ ಬಹಳಷ್ಟು ಪ್ರಯೋಜನಗಳನ್ನು ಹೊಂದಿದೆ. 

ಬಂಗಾಳ ಕೊಲ್ಲಿಯಲ್ಲಿ ತಳಮಳ: ಸೈಂಟ್ ಮಾರ್ಟಿನ್ಸ್ ದ್ವೀಪ ಮತ್ತು ಶೇಖ್ ಹಸೀನಾ ಪದಚ್ಯುತಿ ನಡುವೆ ಒಳಸಂಚು?

ಅಲ್ಯುಮಿನಿಯಮ್ ಅಥವಾ ತಾಮ್ರದ ಪಾತ್ರೆಗಳು ಆಹಾರದ ಆಮ್ಲಗಳು ಮತ್ತು ಪಾತ್ರೆ ಸ್ವಚ್ಛಗೊಳಿಸುವ ರಾಸಾಯನಿಕಗಳೊಡನೆ ವರ್ತಿಸಿ ತುಕ್ಕು ಹಿಡಿಯುತ್ತವೆ. ಆದರೆ ಸ್ಟೇನ್‌ಲೆಸ್ ಸ್ಟೀಲ್‌ನಲ್ಲಿ ಇಂತಹ ಸಮಸ್ಯೆ ಕಂಡುಬರುವುದಿಲ್ಲ. ಅದರೊಡನೆ, ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳು ಆಹಾರವನ್ನು ಕಲುಷಿತಗೊಳಿಸುವುದಿಲ್ಲ. ಅಲ್ಯುಮಿನಿಯಂಗೆ ಹೋಲಿಸಿದರೆ ಸ್ಟೇನ್‌ಲೆಸ್ ಸ್ಟೀಲ್ ಹೆಚ್ಚು ಗಟ್ಟಿಮುಟ್ಟಾದ, ಆರೋಗ್ಯಯುತವಾಗಿದೆ. ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳ ಮೇಲ್ಮೈ ಬಹಳ ನಯವಾಗಿದ್ದು, ಅವುಗಳನ್ನು ಸ್ವಚ್ಛಗೊಳಿಸುವುದು ಸುಲಭವಾಗಿದೆ ಎಂದು ಕಾಂತಾ ಶೆಲ್ಕೆ ಅಭಿಪ್ರಾಯ ಪಡುತ್ತಾರೆ.

Latest Videos
Follow Us:
Download App:
  • android
  • ios