Asianet Suvarna News Asianet Suvarna News

ಚಂದ್ರಯಾನದ ಕ್ಲೈಮ್ಯಾಕ್ಸ್ ವಿಕ್ರಂ ಲ್ಯಾಂಡಿಂಗ್ ಬಳಿಕ ಏನೇನಾಗುತ್ತೆ? ಚಂದ್ರಯಾನ1, 2 ಹೇಗಿತ್ತು ಗೊತ್ತಾ?

ಜುಲೈ 14ರಂದು ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದ್ದ ಇಸ್ರೋದ ಚಂದ್ರಯಾನ- 3ನೌಕೆಯ  ಭಾಗವಾದ ವಿಕ್ರಂ ಲ್ಯಾಂಡರ್ ಸಂಜೆ 6.04 ಗಂಟೆಗೆ ಚಂದ್ರನ ಮೇಲಿಳಿಯಲು ಸನ್ನದ್ಧವಾಗಿದೆ. ಈ ಸಂದರ್ಭದಲ್ಲಿ ಲ್ಯಾಂಡ್ ಆದ ಬಳಿಕ ಏನೇನಾಗುತ್ತೆ? ಚಂದ್ರಯಾನ 1 ಹಾಗೂ 2 ಹೇಗಿತ್ತು ಎಂಬ ಡಿಟೇಲ್ ಇಲ್ಲಿದೆ

Climax of Chandrayaan 3 What will happen after Vikram landing? Do you know how Chandrayaan 1 and 2 were akb
Author
First Published Aug 23, 2023, 11:16 AM IST

ಬೆಂಗಳೂರು: ಇಡೀ ಜಗತ್ತೇ ಕಾತರದಿಂದ ಕಾಯುತ್ತಿದ್ದ ಗಳಿಗೆ ಸಮೀಪಿಸಿದೆ. ಜುಲೈ 14ರಂದು ಶ್ರೀಹರಿಕೋಟಾದಿಂದ ಉಡಾವಣೆಗೊಂಡಿದ್ದ ಇಸ್ರೋದ ಚಂದ್ರಯಾನ- 3ನೌಕೆಯ  ಭಾಗವಾದ ವಿಕ್ರಂ ಲ್ಯಾಂಡರ್ ಸಂಜೆ 6.04 ಗಂಟೆಗೆ ಚಂದ್ರನ ಮೇಲಿಳಿಯಲು ಸನ್ನದ್ಧವಾಗಿದೆ. ಭೂಮಿ ಮತ್ತು ಚಂದ್ರನ ಗುರುತ್ವಾಕರ್ಷಣೆಯನ್ನು ಬಳಸಿಕೊಂಡು 3.84 ಲಕ್ಷ ಕಿ.ಮೀ. ಸಾಗಿರುವ ಈ ನೌಕೆಯನ್ನು ಚಂದ್ರನ ದಕ್ಷಿಣ ಧ್ರವದ ಮೇಲೆ ಸಾಫ್ಟ್ ಲ್ಯಾಂಡಿಂಗ್ (Soft Landing)ಮಾಡಲು ವಿಜ್ಞಾನಿಗಳು ಸಜ್ಜಾಗಿದ್ದಾರೆ. ಯಾವುದೇ ತಾಂತ್ರಿಕ  ವೈಫಲ್ಯವಾದರೂ ಲ್ಯಾಂಡರ್ ಅನ್ನು ಸುಗಮವಾಗಿ ಇಳಿಸಲು ಇಸ್ರೋ ಈ ಬಾರಿ ವೈಫಲ್ಯದ ಮಾಡೆಲ್ ಅಳವಡಿಸಿಕೊಂಡಿದೆ. ದಕ್ಷಿಣ ಧ್ರುವದಲ್ಲಿನ ರಹಸ್ಯ ಅರಿಯುವ ಈ  ಯೋಜನೆ ಯಶಸ್ವಿಯಾದರೆ, ಅಲ್ಲಿಗೆ ಕಾಲಿಟ್ಟ ವಿಶ್ವದ ಮೊದಲ ದೇಶ ಎಂಬ ಹಿರಿಮೆ ಭಾರತಕ್ಕೆ ದಕ್ಕಲಿದೆ.

ಸಾಫ್ಟ್ ಲ್ಯಾಂಡಿಂಗ್ ಅಂದರೆ ನಾವಂದುಕೊಂಡಷ್ಟು ಮೆತ್ತಗೇನೂ ಇಳಿಯುವುದಿಲ್ಲ. ಆಗ ಲ್ಯಾಂಡರ್ ಸೆಕೆಂಡ್‌ಗೆ ಕನಿಷ್ಠ 2 ಮೀ ನಿಂದ, ಗರಿಷ್ಠ 3 ಮೀ ವೇಗದಲ್ಲಿರುತ್ತದೆ. ಅಂದರೆ, ಗಂಟೆಗೆ 7.2ರಿಂದ 10.8 ಕಿ.ಮೀ. ವೇಗ. ಈ ವೇಗದಲ್ಲಿ ನಾವೇನಾದರೂ ಬಿದ್ದರೆ ಮೂಳೆ ಮುರಿತಕ್ಕೊಳಗಾಗಬಹುದು!

ಉಡಾವಣೆಯಿಂದ ಇಲ್ಲಿವರೆಗಿನ ಹಾದಿ
ಜುಲೈ 14ರಂದು ಉಡಾವಣೆಗೊಂಡು ಭೂಮಿಯ ಕಕ್ಷೆಯನ್ನು ಸೇರಿದ ಚಂದ್ರಯಾನ-3 ನೌಕೆ, ಧೀರ್ಘವೃತ್ತಾಕಾರದಲ್ಲಿ ಸುತ್ತುತ್ತಾ ಮೊದಲ ಬಾರಿ ಜು.15ರಂದು ಕಕ್ಷೆ ಎತ್ತರಿಸುವ ಕಾರ್ಯಕ್ಕೆ ಒಳಗಾಯಿತು. ಬಳಿಕ ಜು.17, 18, 20ರಂದು ನಿರಂತರವಾಗಿ ಕಕ್ಷೆ ಎತ್ತರಿಸುವ  ಕಾರ್ಯವನ್ನು ಕೈಗೊಳ್ಳಲಾಯಿತು.  ಆ.1ರಂದು ನೌಕೆಯಲ್ಲಿರುವ ಎಂಜಿನ್ ಬಳಸಿ ಅದನ್ನು ಚಂದ್ರನತ್ತ ಕಳುಹಿಸಲಾಯಿತು. ಯಶಸ್ವಿಯಾಗಿ ಚಂದ್ರನ ಕಕ್ಷೆಯನ್ನು (Moon Orbitor) ತಲುಪಿದ ನೌಕೆ ಚಂದ್ರನ ಗುರುತ್ವಾಕರ್ಷಣೆಗೆ ಒಳಗಾಗಿ ನೌಕೆ ಸುತ್ತಲು ಆರಂಭಿಸಿತು. ಬಳಿಕ ಆ.6,9,14 ಮತ್ತು 16ರಂದು ನೌಕೆಯ ಕಕ್ಷೆಯನ್ನು ಇಳಿಸುವ ಕಾರ್ಯ  ಕೈಗೊಳ್ಳುವ ಮೂಲಕ ಚಂದ್ರನ ಅತ್ಯಂತ ಸಮೀಪಕ್ಕೆ ಕೊಂಡೊಯ್ಯಲಾಯಿತು.  ಬಳಿಕ ಆ.17ರಂದು ನೌಕೆಯನ್ನು ಲ್ಯಾಂಡರ್‌ನಿಂದ ಬೇರ್ಪಡಿಸಲಾಯಿತು. ಇದಾದ ಬಳಿಕ ಲ್ಯಾಂಡರ್ ಚಂದ್ರನನ್ನು  ಸುತ್ತುತ್ತಿರುವ ಕಕ್ಷೆಯನ್ನು 2 ಬಾರಿ ಕುಗ್ಗಿಸಿ ಲ್ಯಾಂಡ್ ಮಾಡಲು ಸಿದ್ಧತೆ ಮಾಡಲಾಗಿದೆ.

ಶಶಾಂಕನ ಮೇಲೆ ವಿಕ್ರಮನ ಸವಾರಿಗೆ ಕ್ಷಣಗಣನೆ: ಚಂದ್ರನ ಮೇಲಿಳಿದ ಮೊದಲ ಭಾರತೀಯನ ಸಂದರ್ಶನ

ವಿಕ್ರಂ ಲ್ಯಾಂಡಿಂಗ್ ಬಳಿಕ ಏನೇನಾಗುತ್ತೆ?
ಇಳಿವ ಮುನ್ನ ಲ್ಯಾಂಡರ್‌ನಲ್ಲಿನ ಸೆನ್ಸರ್‌ಗಳ ಮೂಲಕ ಸ್ಥಳ ಪರಿಶೀಲನೆ. ಜಾಗ ಸೂಕ್ತವಾಗಿದ್ದರೆ ಮಾತ್ರ ಲ್ಯಾಂಡಿಂಗ್. ಇಲ್ಲವೇ ಬೇರೆ ಜಾಗದಲ್ಲಿ ಇಳಿವ ಪ್ರಯತ್ನ.ಸಾಫ್ಟ್‌ ಲ್ಯಾಂಡಿಂಗ್ ಬಳಿಕ, ಲ್ಯಾಂಡಿಂಗ್ ಸೆನ್ಸರ್‌ಗಳಿಂದ  (Landing censor) ವಿಕ್ರಂನೊಳಗಿರುವ ಕಂಪ್ಯೂಟರ್‌ಗಳಿಗೆ ಸಂದೇಶ ರವಾನೆ. ಈ ಮೂಲಕ ಒಳಗಿನ ವ್ಯವಸ್ಥೆ ಜಾಗೃತಕ್ಕೆ ಕ್ರಮ. ಲ್ಯಾಂಡರ್ ಇಳಿದ 4 ಗಂಟೆಗಳ ಬಳಿಕ ಅದರ ಬಾಗಿಲು ತೆರೆದು, ಅದರೊಳಗಿಂದ ಪ್ರಗ್ಯಾನ್ ರೋವರ್ (Pragyan Rover) ಹೊರಬಂದು ಚಂದ್ರನ ಮೇಲೆ ನಿಧಾನವಾಗಿ ಇಳಿಯಲಿದೆ ಹೀಗೆ ರೋವರ್ ಕೆಳಗೆ ಇಳಿದ ಬಳಿಕ ರೋವರ್ ಮತ್ತು ಲ್ಯಾಂಡರ್ ಪರಸ್ಪರ ಚಿತ್ರಗಳನ್ನು ತೆಗೆದು ಬೆಂಗಳೂರಿನಲ್ಲಿ ಇರುವ ಇಸ್ರೋ ಕೇಂದ್ರಕ್ಕೆ ರವಾನಿಸಲಿದೆ. ಪ್ರಜ್ಞಾನ್ ರೋವರ್‌ನ ಚಕ್ರದ ಮೇಲೆ ಇಸ್ರೋ ಮತ್ತು ಭಾರತದ ರಾಷ್ಟ್ರ ಲಾಂಛನದ ಅಚ್ಚು ಇದೆ. ರೋವರ್ ಸಾಗಿದ ಹಾದಿಯಲ್ಲಿ ಅವುಗಳ ಚಿತ್ರಣ ಮೂಡಲಿದೆ. ಲ್ಯಾಂಡರ್ ಮತ್ತು ರೋವರ್ ಎರಡೂ ಸುರಕ್ಷಿತವಾಗಿದೆ ಎಂದು ಇಸ್ರೋಗೆ ಖಚಿತವಾದ ಬಳಿಕ ಅದರೊಳಗಿನ ಉಪಕರಣಗಳನ್ನು ಬಳಸಿ ಸಂಶೋಧನೆ ಆರಂಭ. 

ರೋವರ್‌ನ ಜೀವಿತಾವಧಿ 1 ಚಂದ್ರನ ದಿನ. ಅಂದರೆ  ಭೂಮಿಯ ಲೆಕ್ಕಾಚಾರದಲ್ಲಿ 14 ದಿನ. ಅಷ್ಟು ದಿನಗಳ ಕಾಲ ಅದು ಅಲ್ಲಿ ಸಂಶೋಧನೆ ನಡೆಸಿ ಮಾಹಿತಿ ನೀಡಲಿದೆ. 

ಚಂದ್ರಯಾನ 3ಗೆ ಏಕಿಷ್ಟು  ಜಾಗತಿಕ ಮಹತ್ವ
ಇದುವರೆಗೂ ಯಾವುದೇ ದೇಶ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿಲ್ಲ. ಅಲ್ಲಿ ಇಳಿವ ರಷ್ಯಾದ ಪ್ರಯತ್ನ  ಇತ್ತೀಚೆಗೆ ವಿಫಲವಾಗಿದೆ. ಹೀಗಾಗಿ ಚಂದ್ರಯಾನ 3 ನೌಕೆಯ ಮೂಲಕ ಲಭ್ಯವಾಗಬಹುದಾದ ಅಮೂಲ್ಯ ಮಾಹಿತಿಯು ಭಾರತಕ್ಕೆ ಮಾತ್ರವಲ್ಲದೇ, ಮುಂದಿನ ದಿನಗಳಲ್ಲಿ ಜಾಗತಿಕ ಬಾಹ್ಯಾಕಾಶ ಉಡ್ಡಯನ ಕ್ಷೇತ್ರ, ರಾಕೆಟ್‌ಗಳ ಇಂಧನ, ಬೇರೆ ಬೇರೆ ಗ್ರಹಗಳಲ್ಲಿ ಸುಸ್ಥಿರ ಜೀವನಕ್ಕೆ ನೆರವಾಗಬಲ್ಲದು. ಹೀಗಾಗಿಯೇ ಈ  ಯೋಜನೆಯ ಮೇಲೆ ಇಡೀ ವಿಶ್ವದ ಕಣ್ಣು ನೆಟ್ಟಿದೆ.

ಇಂದು ಭಾರತದ ಐತಿಹಾಸಿಕ ಚಂದ್ರಚುಂಬನಕ್ಕೆ ಕ್ಷಣಗಣನೆ : ವಿಶ್ವದ ಕಣ್ಣು ಭಾರತದತ್ತ

ರೋವರ್ ಕೆಲಸವೇನು?

6 ಚಕ್ರಗಳ ರಚನೆ ಹೊಂದಿರುವ ಪ್ರಜ್ಞಾನ್ ರೋವರ್,  ಲ್ಯಾಂಡರ್‌ನಿಂದ ಹೊರ ಬಂದ ಬಳಿಕ ಚಂದ್ರನಲ್ಲಿರುವ ಖನಿಜಗಳು ಮತ್ತು ರಾಸಾಯನಿಕ ಸಂಶೋಧನೆಗಳನ್ನು ಅಧ್ಯಯನ ಮಾಡಲಿದೆ. ಚಂದ್ರನ ಮಣ್ಣಿನಲ್ಲಿರುವ ಮೆಗ್ನೀಷಿಯಂ, ಅಲ್ಯುಮಿನಿಯಂ, ಕ್ಯಾಲ್ಸಿಯಂ, ಟೈಟಾನಿಯಂ ಮತ್ತು ಕಬ್ಬಿಣದ ಅದಿರು ಹಾಗೂ  ಹೀಲಿಯಂ-3 ಇರುವ ಬಗ್ಗೆ ಅಧ್ಯಯನ ನಡೆಸಲಿದೆ.  ರೋವರ್ ಸುಮಾರು 500 ಮೀ. ದೂರ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ

ಈ ಬಾರಿ ಫೇಲ್ಯೂರ್ ಆಧರಿತ ವಿನ್ಯಾಸ
2019ರಲ್ಲಿ ನಡೆದ ಚಂದ್ರಯಾನ-2 ವೈಫಲ್ಯಕ್ಕೆ ಕಾರಣ ಕಂಡುಕೊಂಡ ಇಸ್ರೋ, ಈ ಬಾರಿ ವಿನೂತನ ವೈಫಲ್ಯ ನಿಗ್ರಹ ವಿನ್ಯಾಸ ಮಾಡಿದೆ. ಅಂದರೆ ಸೆನ್ಸರ್ ವೈಫಲ್ಯ, ಎಂಜಿನ್ ವೈಫಲ್ಯ, ಅಲ್ಗಾರಿದಮ್ ವೈಫಲ್ಯ, ಲೆಕ್ಕಾಚಾರ ವೈಫಲ್ಯ ಹೀಗೆ ಲ್ಯಾಂಡರ್‌ನಲ್ಲಿ ಏನೇನು ವೈಫಲ್ಯ ಆಗಬಹುದು? ವಿಫಲವಾದರೆ ಅದರ ಪರಿಣಾಮ  ಏನು? ಅದನ್ನು ಸರಿಪಡಿಸುವುದು ಹೇಗೆ? ಎಂಬುದನ್ನು ಪ್ರಯೋಗ ಸಹಿತ ಅಧ್ಯಯನ ಮಾಡಿ ಸಂಭವನೀಯ ವೈಫಲ್ಯಗಳನ್ನು ಲೆಕ್ಕಾಚಾರ ಮಾಡಿ ಅವುಗಳಿಗೆ ಪರಿಹಾರ ಕಂಡುಕೊಂಡು ವಿನ್ಯಾಸ ಮಾಡಿದೆ. ಹೀಗಾಗಿ ಯಾವುದೇ ವೈಫಲ್ಯ ಆದರೂ ಸಾಫ್ಟ್ ಲ್ಯಾಂಡಿಂಗ್ ಖಚಿತ ಎಂಬ ವಿಶ್ವಾಸದಲ್ಲಿದ್ದಾರೆ ವಿಜ್ಞಾನಿಗಳು.

ಇಂದು ಲ್ಯಾಂಡಿಂಗ್ ಸಾಧ್ಯವಾಗದಿದ್ರೆ 27ಕ್ಕೆ  ಮತ್ತೆ ಯತ್ನ
ಯಾವುದೇ ತಾಂತ್ರಿಕ ಅಥವಾ ಇನ್ಯಾವುದೇ ಕಾರಣಗಳಿಂದ ಬುಧವಾರ ಸಂಜೆ ಲ್ಯಾಂಡರ್ ನೌಕೆಯ ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗದೇ ಹೋದರೆ ಆ.27ರಂದು ಮತ್ತೆ ಪ್ರಯತ್ನ ಮಾಡಲಾಗುವುದು. ಕಡೆಯ ಹಂತದಲ್ಲಿ ನೌಕೆಯ ವೇಗ ಇಳಿಕೆಯಾಗದೇ ಹೋದಲ್ಲಿ ಅದು 2019ರಲ್ಲಿ ಆದಂತೆ ಕ್ರ್ಯಾಷ್ ಲ್ಯಾಂಡಿಂಗ್ ಆಗಲಿದೆ.  ಹೀಗಾದರೆ ಒಳಗಿನ ಉಪಕರಣಗಳು ವಿಫಲವಾಗಲಿವೆ. ಹೀಗಾಗಿ ಅಂಥ ಸಾಧ್ಯತೆ ಕಂಡುಬಂದಲ್ಲಿ ಲ್ಯಾಂಡಿಂಗ್ ಅನ್ನು 4 ದಿನ ಮುಂದೂಡಲಾಗುವುದು

ಚಂದ್ರಯಾನ-1ರಲ್ಲಿ ಏನಿತ್ತು?
2008ರ ಅ.22ರಂದು ಮೊದಲ ಬಾರಿ ಚಂದ್ರಯಾನ ಯೋಜನೆಯನ್ನು ಭಾರತ ಕೈಗೊಂಡಿತು. ಚಂದ್ರನ ಅಧ್ಯಯನಕ್ಕಾಗಿ ಭಾರತವೇ ಸಂಶೋಧಿಸಿದ ತಂತ್ರಜ್ಞಾನವನ್ನು ಹೊಂದಿದ್ದ ಈ ಯೋಜನೆ ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗುವ ಮೂಲಕ ಮುಂದಿನ ಯೋಜನೆಗಳಿಗೆ ಪುಷ್ಠಿ ನೀಡಿತು. 2008ರ ನ.8ರಂದು ಈ ಉಪಗ್ರಹ  ಯಶಸ್ವಿಯಾಗಿ ಚಂದ್ರನ ಕಕ್ಷೆ ಸೇರಿ ಅಧ್ಯಯನವನ್ನು ಆರಂಭ ಮಾಡಿತು. ಬಳಿಕ ಇದರಲ್ಲಿ ಅಳವಡಿಸಿದ್ದ ‘ಮೂನ್ ಇಂಪ್ಯಾಕ್ಟ್ ಪೊರೀಬ್’ ಉಪಗ್ರಹದಿಂದ ಬೇರ್ಪಟ್ಟು ಚಂದ್ರನ  ದಕ್ಷಿಣ ಧ್ರುವದ ಮೇಲೆ ಬಿದ್ದಿತು. ಈ ವೇಳೆ ಚಂದ್ರನ ಮೇಲ್ಮೈನಿಂದ ಧೂಳು ಎದ್ದಿದ್ದನ್ನು ಚಂದ್ರಯಾನ-1 ಉಪಗ್ರಹ ಸೆರೆ ಹಿಡಿಯಿತು. ಈ ಮೂಲಕ ಚಂದ್ರನ ಗರ್ಭದಲ್ಲಿ ಘನೀಕೃತ ಮಾದರಿಯಲ್ಲಿ ನೀರಿದೆ ಎಂಬುದನ್ನು ಮೊದಲ ಬಾರಿಗೆ ಪತ್ತೆ ಹಚ್ಚಿತು

ಚಂದ್ರಯಾನ- 2ರಲ್ಲಿ ಏನಿತ್ತು?
ಚದ್ರನ ದಕ್ಷಿಣ ಧ್ರುವದಲ್ಲಿ ನೀರಿದೆ ಎಂಬುದನ್ನು ಮೊದಲ ಯೋಜನೆ ಪತ್ತೆ ಹಚ್ಚಿದ್ದೇ ಚಂದ್ರಯಾನ-2 ಯೋಜನೆ ಕೈಗೊಳ್ಳಲು ಪ್ರೇರಪಣೆ ನೀಡಿತು. ಈ ಬಾರಿ ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆ ಇಳಿಸಿ ಅಧ್ಯಯನ ಕೈಗೊಳ್ಳಲು ಇಸ್ರೋ ಯೋಜಿಸಿತ್ತು. 2019ರ ಜು.22ರಂದು ಉಡಾವಣೆಗೊಂಡ ಚಂದ್ರಯಾನ-2 ನೌಕೆ 2019ರ ಆ.20ರಂದು ಯಶಸ್ವಿಯಾಗಿ ಆರ್ಬಿಟರನ್ನು ಚಂದ್ರನ ಕಕ್ಷೆಯಲ್ಲಿ ಕೂರಿಸಿತು. ಈ  ಯೋಜನೆ ಆರ್ಬಿಟರ್, ಲ್ಯಾಂಡರ್ ಮತ್ತು ರೋವರ್‌ಗಳನ್ನು ಒಳಗೊಂಡಿತ್ತು. ಇದರಲ್ಲಿ ಆರ್ಬಿಟರ್ ಮಾತ್ರ ಸಫಲವಾಗಿದ್ದು, ಲ್ಯಾಂಡರ್ ಚಂದ್ರನ ಅಂಗಕ್ಕೆ ಅಪ್ಪಳಿಸುವ ಮೂಲಕ ವಿಫಲವಾಗಿತ್ತು. ಇಸ್ರೋ ಯೋಜಿಸಿದ್ದಂತೆ 55 ಡಿಗ್ರಿ ಓರೆಯಾಗುವ ಬದಲು 410 ಡಿಗ್ರಿ ಓರೆಯಾದ ಕಾರಣ ಲ್ಯಾಂಡರ್ ಚಂದ್ರನ ನೆಲಕ್ಕೆ ಅಪ್ಪಳಿಸಿತು.

4ನೇ ದೇಶವಾಗಲಿದೆ ಭಾರತ
ಈವರೆಗೆ ಕೇವಲ ಮೂರು ದೇಶಗಳು ಮಾತ್ರ ಚಂದ್ರನ ಮೇಲೆ ಸುರಕ್ಷಿತವಾಗಿ ತಮ್ಮ ನೌಕೆಗಳನ್ನು ಇಳಿಸಿವೆ. ಚಂದ್ರಯಾನ-3 ಯಶಸ್ವಿಯಾದರೆ ಚಂದ್ರನ ಮೇಲೆ ಸುರಕ್ಷಿತವಾಗಿ ನೌಕೆ ಇಳಿಸಿದ 4ನೇ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಲಿದೆ. ಅಮೆರಿಕ, ಚೀನಾ, ರಷ್ಯಾ ಈವರೆಗೆ ನೌಕೆಯನ್ನು ಇಳಿಸಿವೆ. ಆದರೆ ಈ ದೇಶಗಳು ದಕ್ಷಿಣ ಧ್ರುವದಲ್ಲಿ ತಮ್ಮ ನೌಕೆಯನ್ನು ಇಳಿಸಿಲ್ಲ. ಹಾಗಾಗಿ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಲಿದೆ. ನೌಕೆ ಇಳಿಸಲು ಈವರೆಗೆ ಒಟ್ಟು 44 ಪ್ರಯತ್ನಗಳು ನಡೆದಿದ್ದು 20 ಮಾತ್ರ ಯಶಸ್ವಿಯಾಗಿವೆ. ಈವರೆಗೆ  ಅಮೆರಿಕ 11, ರಷ್ಯಾ 7 ಮತ್ತು ಚೀನಾ 2 ಬಾರಿ ನೌಕೆಗಳನ್ನು ಇಳಿಸಿವೆ.

Follow Us:
Download App:
  • android
  • ios