ಚೀನಾದಲ್ಲಿ ರೋಬೋ ಜಡ್ಜ್, ನ್ಯಾಯಾಂಗ ಕ್ಷೇತ್ರದಲ್ಲಿ ಕ್ರಾಂತಿಕಾರಕ ಪ್ರಯೋಗ!
ಚೀನಾದಲ್ಲಿ ರೋಬೋ ಜಡ್ಜ್!| ವಿಡಿಯೋ ಕಾಲ್ ಮೂಲಕ ವಿಚಾರಣೆ, ‘ವಿ ಚಾಟ್’ನಲ್ಲೇ ತೀರ್ಪು| ಫಟಾಫಟ್ ಪ್ರಕರಣಗಳ ವಿಚಾರಣೆಗೆ ಡಿಜಿಟಲ್ ಕೋರ್ಟ್ ತೆರೆದ ಚೀನಾ| ನ್ಯಾಯಾಂಗ ಕ್ಷೇತ್ರದಲ್ಲಿ ಕ್ರಾಂತಿಕಾರಕ ಪ್ರಯೋಗ
ಬೀಜಿಂಗ್[ಡಿ.17]: ನ್ಯಾಯದಾನ ವಿಳಂಬವಾಗುತ್ತಿದೆ ಎಂದು ಭಾರತೀಯರು ನಿರಂತರವಾಗಿ ದೂರುತ್ತಿದ್ದರೆ, ಅತ್ತ ನೆರೆಯ ಚೀನಾ ದೇಶ ಇದಕ್ಕೆ ಕ್ರಾಂತಿಕಾರಕ ಪರಿಹಾರವೊಂದನ್ನು ಕಂಡುಕೊಂಡಿದೆ. ಪ್ರಕರಣಗಳ ವಿಚಾರಣೆಗೆ ಸೈಬರ್ ಕೋರ್ಟ್‌ಗಳನ್ನು ತೆರೆದಿರುವ ಕಮ್ಯುನಿಸ್ಟ್ ದೇಶ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ರೋಬೋ ನ್ಯಾಯಾಧೀಶರನ್ನು ಸೃಷ್ಟಿಸಿದೆ.
‘ವಾಟ್ಸ್‌ಆ್ಯಪ್’ನಂತಹದ್ದೇ ಸಾಮಾಜಿಕ ಜಾಲತಾಣವಾಗಿರುವ ಚೀನಾದ ‘ವಿ ಚಾಟ್’ನಲ್ಲಿ ತೀರ್ಪುಗಳನ್ನು ಹೊರಡಿಸಿ, ತ್ವರಿತ ನ್ಯಾಯದಾನ ಮಾಡುವ ಮೂಲಕ ಪ್ರಪಂಚದ ಗಮನಸೆಳೆದಿದೆ. ಕಳೆದ ಮಾಚ್‌ರ್‍ನಿಂದ ಈವರೆಗೆ ವಿ ಚಾಟ್ ಮೂಲಕ 30 ಲಕ್ಷ ತೀರ್ಪುಗಳನ್ನು ರವಾನಿಸಿ ಗಮನಸೆಳೆದಿದೆ.
‘ವಿ ಚಾಟ್’ ಮೂಲಕವೇ ಜನರು ಪ್ರಕರಣ ದಾಖಲಿಸಲು, ವಿಚಾರಣೆಗೆ ಹಾಜರಾಗಲು, ಕೋರ್ಟಿಗೆ ಸಾಕ್ಷ್ಯ ಮಂಡಿಸಲು ಅವಕಾಶ ಕಲ್ಪಿಸಿದ್ದು, ಇದಕ್ಕೆ ‘ಮೊಬೈಲ್ ಕೋರ್ಟ್’ ಎಂಬ ಹೆಸರನ್ನು ಇಟ್ಟಿದೆ. ಪೂರ್ವ ಚೀನಾದ ಹ್ಯಾಂಗ್‌ಝೌನಲ್ಲಿ 2017ರಲ್ಲೇ ಸೈಬರ್ ಕೋರ್ಟ್ ತೆರೆದಿರುವ ಚೀನಾ, ಅದನ್ನು ಇದೀಗ ಪತ್ರಕರ್ತರಿಗೆ ತೋರಿಸಿದೆ.
ಹೇಗಿದೆ ನ್ಯಾಯಾಲಯ?:
ಇದು ಸಂಪೂರ್ಣ ಆನ್‌ಲೈನ್ ಕೋರ್ಟ್. ಕೃತಕ ಬುದ್ಧಿಮತ್ತೆಯಿಂದ ನಡೆಯುವಂತಹದ್ದು. ಕೃತಕ ಬುದ್ಧಿಮತ್ತೆಯ ವರ್ಚುವಲ್ ನ್ಯಾಯಮೂರ್ತಿ ಕಪ್ಪು ಬಣ್ಣದ ಪೋಷಾಕಿನಲ್ಲಿ ಇರುತ್ತಾರೆ. ವಿಡಿಯೋ ಚಾಟ್ ಮೂಲಕ ಆ ವರ್ಚುವಲ್ ನ್ಯಾಯಾಧೀಶರ ಎದುರು ಹಾಜರಾಗಬೇಕು. ಅರ್ಜಿದಾರರು ಸಲ್ಲಿಸಿರುವ ಸಾಕ್ಷ್ಯಕ್ಕೆ ಪ್ರತಿವಾದಿಯ ಆಕ್ಷೇಪ ಏನಾದರೂ ಇದೆಯೇ ಎಂದು ಕೃತಕ ಬುದ್ಧಿಮತ್ತೆಯ ವರ್ಚುವಲ್ ಜಡ್ಜ್ ಕೇಳುತ್ತಾರೆ. ಇಲ್ಲ ಎಂಬ ಉತ್ತರವನ್ನು ಪ್ರತಿವಾದಿ ನೀಡುತ್ತಾರೆ ಎಂದು ವಿಚಾರಣೆ ಗಮನಿಸಿರುವ ಪತ್ರಕರ್ತರು ತಿಳಿಸಿದ್ದಾರೆ.
ಮಾನವ ನ್ಯಾಯಮೂರ್ತಿಗಳ ಮೇಲೆ ಸಣ್ಣಪುಟ್ಟಪ್ರಕರಣಗಳ ಹೊರೆಯೂ ಸಾಕಷ್ಟಿದೆ. ಈ ರೋಬೋ ನ್ಯಾಯಾಧೀಶರಿಗೆ ಅಂತಹ ಸಣ್ಣ ಪ್ರಕರಣಗಳನ್ನು ವರ್ಗಾಯಿಸಬಹುದು. ರೋಬೋ ನ್ಯಾಯಾಧೀಶರ ವಿಚಾರಣೆ, ತೀರ್ಪು ನೀಡಿಕೆ ಮೇಲೆ ಮಾನವ ನ್ಯಾಯಮೂರ್ತಿಗಳು ನಿಗಾ ಇಟ್ಟಿರುತ್ತಾರೆ. ತಂತ್ರಜ್ಞಾನ ಆಧರಿತ ಈ ಕ್ರಮದಿಂದ ಪ್ರಕರಣಗಳ ವಿಚಾರಣೆ ಬೇಗನೆ ಪೂರ್ಣಗೊಂಡು ತೀರ್ಪು ಹೊರಬರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜಧಾನಿ ಬೀಜಿಂಗ್ ಹಾಗೂ ದಕ್ಷಿಣ ಚೀನಾದ ನಗರ ಗುವಾಂಗ್‌ಝೌನಲ್ಲಿ ಇದೇ ರೀತಿಯ ಕೋರ್ಟುಗಳನ್ನು ಚೀನಾ ತೆರೆದಿದೆ. ಆ ನ್ಯಾಯಾಲಯಗಳಲ್ಲಿ 1.18 ಲಕ್ಷ ಪ್ರಕರಣ ದಾಖಲಾಗಿವೆ. ಆ ಪೈಕಿ 88,401 ಪ್ರಕರಣಗಳ ವಿಚಾರಣೆ ಮುಕ್ತಾಯದ ಹಂತದಲ್ಲಿದೆ.