* ಚೀನಾ ಏಕಾಂಗಿಯಾಗಿ ನಿರ್ಮಿಸುತ್ತಿರುವ ತಿಯಾನ್‌ಗಾಂಗ್‌ ಬಾಹ್ಯಾಕಾಶ ಕೇಂದ್ರ* ಬಾಹ್ಯಾಕಾಶ ಕೇಂದ್ರ ನಿರ್ಮಾಣ ಪೂರ್ಣಕ್ಕೆ 3 ಯಾತ್ರಿಗಳ ಕಳಿಸಿದ ಚೀನಾ* ರಾಕೆಟ್‌ ಯಶಸ್ವಿಯಾಗಿ ಕಕ್ಷೆಯನ್ನು ತಲುಪಿದೆ ಎಂದ ಚೀನಾದ ಬಾಹ್ಯಾಕಾಶ ಸಂಸ್ಥೆ 

ಬೀಜಿಂಗ್‌(ಜೂ.06): ತಾನು ಏಕಾಂಗಿಯಾಗಿ ನಿರ್ಮಿಸುತ್ತಿರುವ ತಿಯಾನ್‌ಗಾಂಗ್‌ ಬಾಹ್ಯಾಕಾಶ ಕೇಂದ್ರದ ನಿರ್ಮಾಣವನ್ನು ಪೂರ್ಣಗೊಳಿಸುವ ಸಲುವಾಗಿ ಚೀನಾ, ಭಾನುವಾರ ಮೂವರು ಗಗನಯಾತ್ರಿಗಳನ್ನು ಹಾರಿಬಿಟ್ಟಿದೆ. ಗಗನಯಾತ್ರಿಗಳಾದ ಚೆನ್‌ ಡಾಂಗ್‌, ಲೆಯೋ ಯಾಂಗ್‌, ಕೈ ಶೀಚೌ ಅವರನ್ನು ಹೊತ್ತ ಶೆನ್‌ಝೌ-14 ರಾಕೆಟ್‌ ಯಶಸ್ವಿಯಾಗಿ ಕಕ್ಷೆಯನ್ನು ತಲುಪಿದೆ ಎಂದು ಚೀನಾದ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಈ ಮೂವರು ಗಗನಯಾತ್ರಿಗಳು, ಭೂಮಿಯಲ್ಲಿರುವ ವಿಜ್ಞಾನಿಗಳ ಜೊತೆ ಸಮನ್ವಯದ ಮೂಲ ಬಾಹ್ಯಾಕಾಶ ಕೇಂದ್ರದಲ್ಲಿ ಬಾಕಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸುವ ಮೂಲಕ ಅದನ್ನು ಪೂರ್ಣ ಪ್ರಮಾಣದ ಬಳಕೆಗೆ ಸಜ್ಜುಗೊಳಿಸಲಿದ್ದಾರೆ. ಹಾಲಿ ಅಮೆರಿಕ ಮತ್ತು ಇತರೆ ದೇಶಗಳ ನೆರವಿನಿಂದಿಗೆ ರಷ್ಯಾ ನಿರ್ಮಿಸಿರುವ ಇಂಟರ್‌ ನ್ಯಾಷನಲ್‌ ಸ್ಪೇಸ್‌ ಸ್ಟೇಷನ್‌ (ಐಎಸ್‌ಎಸ್‌) ವಿಶ್ವದ ಏಕೈಕ ಬಾಹ್ಯಾಕೇಂದ್ರ ಎಂಬ ಹಿರಿಮೆ ಹೊಂದಿದೆ.

ಆದರೆ ಇದೀಗ ಚೀನಾ ಏಕಾಂಗಿಯಾಗಿ ಅತ್ಯಾಧುನಿಕ ಬಾಹ್ಯಾಕಾಶ ಕೇಂದ್ರ ನಿರ್ಮಿಸುತ್ತಿದ್ದು, ಐಎಸ್‌ಎಸ್‌ನಿ ನಿವೃತ್ತಿಯ ಬಳಿಕ ವಿಶ್ವದ ಏಕೈಕ ಬಾಹ್ಯಾಕಾಶ ಕೇಂದ್ರವಾಗಿ ಹೊರಹೊಮ್ಮಲಿದ್ದು, ಜಗತ್ತಿನ ಎಲ್ಲಾ ದೇಶಗಳು ಚೀನಾವನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ.