ಹಿರಿಯ ಪತ್ರಕರ್ತ, ಚೆಲುವಿನ ಚಿತ್ತಾರ ಖ್ಯಾತಿಯ ಸುರೇಶ್ ಚಂದ್ರ ಕೊರೋನಾಕ್ಕೆ ಬಲಿ
* ಕೊರೋನಾಗೆ ಹಿರಿಯ ನಟ ಸುರೇಶ್ ಚಂದ್ರ ಬಲಿ
* ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಸುರೇಶ್ ಚಂದ್ರ
* ಚೆಲುವಿನ ಚಿತ್ತಾರ ಸಿನಿಮಾದಿಂದ ಹೆಚ್ಚು ಖ್ಯಾತಿಗೆ ಬಂದಿದ್ದ ಸುರೇಶ್ ಚಂದ್ರ
* ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ ನೀಡಿದ ಕೊರೋನಾ
ಬೆಂಗಳೂರು(ಜೂ. 11) ಹಿರಿಯ ಪತ್ರಕರ್ತ, ನಟ ಸುರೇಶ್ ಚಂದ್ರ(69) ಕೊರೋನಾಕ್ಕೆ ಬಲಿಯಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಸುರೇಶ್ ಚಂದ್ರ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.
ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ನೆಲೆಸಿದ್ದ ಸುರೇಶ್ ಚಂದ್ರ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತುಮಕೂರಿನ ಮಧುಗಿರಿಯ ಲಿಂಗೇನಹಳ್ಳಿಯಲ್ಲಿ ನೆರವೇರಲಿದೆ .
ವೆಂಟಿಲೇಟರ್ ಸಿಗದೆ ಚಿತ್ರರಂಗ ಅಗಲಿದ ಹಿರಿಯ ಕಲಾವಿದ ರಾಜಾ ರಾಮ್
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚೆಲುವಿನ ಚಿತ್ತಾರ ಇವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ನಾಯಕಿ ಅಮೂಲ್ಯಾ ತಂದೆ ಪಾತ್ರದಲ್ಲಿ ಅಭಿನಯಿಸಿದ್ದರು. ಸುರೇಶ್ ಚಂದ್ರ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
80ರ ದಶಕದಿಂದ ಸಿನಿ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಚಂದ್ರ ಸಂಜೆವಾಣಿ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿ ಹೆಸರು ಮಾಡಿದ್ದರು. ಸುರೇಶ್ ಚಂದ್ರ ನಿಧನಕ್ಕೆ ಬೆಂಗಳೂರು ಪ್ರೆಸ್ ಕ್ಲಬ್ ಸಂತಾಪ ಸೂಚಿಸಿದೆ. ಅವರ ಆತ್ಮಕ್ಕೆ ಶಾಂತಿ ಮತ್ತು ಕುಟುಂಬದವರಿಗೆ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಪ್ರಧಾನ ಕಾರ್ಯದರ್ಶಿ ಎಚ್ ವಿ ಕಿರಣ್ , ಜಂಟಿ ಕಾರ್ಯದರ್ಶಿ ಆನಂದ್ ಬೈದನಮನೆ ಪ್ರಾರ್ಥಿಸಿದ್ದಾರೆ.
ಸಂಜೆವಾಣಿಯ ಸಂಪಾದಕರಾಗಿದ್ದ ಸುರೇಶ್ಚಂದ್ರ ರವರು ಇಂದು ನಮ್ಮನ್ನು ಆಗಲಿರುವುದು ಬಹಳ ದುಃಖದ ವಿಷಯವಾಗಿದೆ. ಅವರ ಮತ್ತು ನಮ್ಮ ಒಡನಾಟ ತುಂಬಾ ಚೆನ್ನಾಗಿತ್ತು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ನಟಿ ತಾರಾ ಅನುರಾಧ ಪ್ರಾರ್ಥಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಹ ಸಂತಾಪ ಸೂಚಿಸಿದ್ದಾರೆ.
ಕೊರೋನಾ ಸ್ಯಾಂಡಲ್ ವುಡ್ ಗೆ ಒಂದಾದ ಮೇಲೊಂದು ಪೆಟ್ಟು ನೀಡುತ್ತಿದೆ. ನರ್ಮಾಪಕ ಕೊಟಿ ರಾಮು, ನಟ ಶಂಖನಾದ ಅರವಿಂದ್, ಹಿರಿಯ ನಟ ಹಾಗೂ ರಂಗಭೂಮಿ ಕಲಾವಿದ ರಾಜಾರಾಂ, ಕೃಷ್ಣೇಗೌಡ ಕೊರೋನಾದಿಂದ ಅಗಲಿದ್ದರು.
ಲಿಂಗೇನಹಳ್ಳಿ ಸುರೇಶ್ಚಂದ್ರ ಅವರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿಎನ್.ಅಶ್ವತ್ಥನಾರಾಯಣ ತೀವ್ರ ಕಂಬನಿ ಮಿಡಿದ್ದಾರೆ. ಬಹುಮುಖ ಪ್ರತಿಭೆಯಾಗಿದ್ದ ಅವರು ಪತ್ರಿಕೋದ್ಯಮದ ಜತೆಗೆ, ನಾಟಕ, ಸಿನಿಮಾ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ʼಚೆಲುವಿನ ಚಿತ್ತಾರʼ ಸೇರಿ ಹಲವಾರು ಉತ್ತಮ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ್ದರು.
ಸುರೇಶ್ವಂದ್ರರ ಅಗಲಿಕೆ ಬಹಳ ನೋವುಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬ, ಸಹಪಾಠಿಗಳು, ಸಹೋದ್ಯೋಗಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಡಿಸಿಎಂ ಅವರು ಪ್ರಾರ್ಥನೆ ಮಾಡಿದ್ದಾರೆ.
"