ಬಿಗ್ ಬಾಸ್ ವಿಜೇತ ರೂಪೇಶ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ 'ಜೈ' ಚಿತ್ರದ ಪ್ರಚಾರಕ್ಕೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ಆಗಮಿಸಿದ್ದರು. ಈ ವೇಳೆ ಅವರು ತಮ್ಮ ತುಳುನಾಡಿನ ಮೂಲವನ್ನು ಸ್ಮರಿಸಿ, ಕನ್ನಡ ಸಿನಿಮಾಗಳ ಯಶಸ್ಸಿನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು ಮತ್ತು ತಮ್ಮ ಫಿಟ್ನೆಸ್ ರಹಸ್ಯ ಹಂಚಿಕೊಂಡರು.
ಕನ್ನಡ ಬಿಗ್ ಬಾಸ್ ಸೀಸನ್ 9ರ ವಿಜೇತ ರೂಪೇಶ್ ಶೆಟ್ಟಿ ಅವರಿಂದಲೇ ನಿರ್ದೇಶನವಾಗಿರುವ, ಅವರೇ ನಟಿಸಿರುವ 'ಜೈ' ಚಿತ್ರವು ಇದೇ ನವೆಂಬರ್ 14 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ನಟಿಸಿದ್ದಾರೆ. ಮಂಗಳೂರು ಮೂಲದವರಾದ ಸುನೀಲ್ ಶೆಟ್ಟಿ ಈ ಚಿತ್ರದ ಪ್ರಚಾರಕ್ಕೆ ಬೆಂಗಳೂರಿಗೆ ಆಗಮಿಸಿದ್ದರು. ಆ ಸಮಯದಲ್ಲಿ ಕನ್ನಡದಲ್ಲಿಯೇ ಸ್ವಲ್ಪ ಮಾತನಾಡಿ, ಕೊನೆಗೆ ತುಳುವಿನಲ್ಲಿ ಸ್ಪಷ್ಟವಾಗಿ ಮಾತನಾಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಕನ್ನಡದಲ್ಲೇ ಮಾತು ಆರಂಭಿಸಿದ ನಟ ನನಗೆ ಸ್ವಲ್ಪ ಸ್ವಲ್ಪ ಕನ್ನಡ ಬರುತ್ತದೆ. ಆದರೆ ಕನ್ನಡ ಅರ್ಥ ಆಗುತ್ತೆ ಎನ್ನುತ್ತಲೇ ತುಳು ಭಾಷೆ ಚನ್ನಾಗಿ ಬರುತ್ತದೆ ಎಂದು ಕೊನೆಗೆ ತುಳುವಿನಲ್ಲಿಯೇ ಕೆಲವು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಚಿತ್ರದ ಕುರಿತು ಹೇಳುವುದಾದರೆ...
ಇನ್ನು ಈ ಚಿತ್ರದ ಕುರಿತು ಹೇಳುವುದಾದರೆ, ಇದಕ್ಕೂ ದಕ್ಷಿಣ ಕನ್ನಡದ ಕನ್ನಡದ ಟಚ್ ನೀಡಲಾಗಿದೆ. ಇದಕ್ಕೆ ಕಾರಣವೂ ಇದೆ. ಮಂಗಳೂರಿನ ಕನ್ನಡ ಭಾಷೆಯ ಚಿತ್ರಗಳೆಲ್ಲವೂ ಇತ್ತೀಚಿನ ವರ್ಷಗಳಲ್ಲಿ ಸೂಪರ್ ಡ್ಯೂಪರ್ ಆಗುತ್ತಿವೆ. ರಾಜ್ ಬಿ ಶೆಟ್ಟಿ ಅವರ ಸು ಫ್ರಂ ಸೋ ಮತ್ತು ಕಾಂತಾರಾ ಚಾಪ್ಟರ್ 1 ಎಲ್ಲವೂ ಯಾವ ಪ್ರಮಾಣದ ಖ್ಯಾತಿ ಗಳಿಸಿದೆ ಎಂದು ಹೇಳುವುದು ಬೇಡ. ಇದೀಗ ಜೈ ಚಿತ್ರದಲ್ಲಿಯೂ ಮಂಗಳೂರು ಭಾಷೆಯನ್ನೇ ಹೆಚ್ಚಿನ ಮಟ್ಟದಲ್ಲಿ ಸೇರಿಸಲಾಗಿದೆ. ಆದ್ದರಿಂದ ಈ ಚಿತ್ರದ ಬಗ್ಗೆ ತಂಡವು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದೆ.
ಕರ್ನಾಟಕದ ಬಗ್ಗೆ ಹೆಮ್ಮೆ
ಈ ಸಂದರ್ಭದಲ್ಲಿ ಸುನೀಲ್ ಶೆಟ್ಟಿ ಅವರು ಪ್ರಚಾರಕ್ಕೆ ಬಂದು ಚಿತ್ರ ರಸಿಕರು ಈ ಚಿತ್ರವನ್ನು ನೋಡುವತ್ತ ಉತ್ತೇಜನ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕರ್ನಾಟಕವನ್ನು ಅದರಲ್ಲಿಯೂ ಹೆಚ್ಚಾಗಿ ಮಂಗಳೂರು ಭಾಗವನ್ನು ಕಾಡಿ ಕೊಂಡಾಡಿದ್ದಾರೆ. ನಾನು ಹುಟ್ಟಿದ್ದು ತುಳುನಾಡಲ್ಲಿ ಎನ್ನುವುದು ಹೆಮ್ಮೆ ಎನ್ನುತ್ತಲೇ, ಕನ್ನಡದ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಮಾನ್ಯತೆ ಪಡೆಯುತ್ತಿವೆ ಎಂಬ ಸಂತೋಷ ಹಂಚಿಕೊಂಡಿದ್ದಾರೆ. ಇದೇ ವೇಳೆ ಚಿತ್ರದ ಬಗ್ಗೆಯೂ ಮಾತನಾಡಿದ್ದಾರೆ. ರೂಪೇಶ್ ಶೆಟ್ಟಿ ನನ್ನ ಸಹೋದರ. ನಾನು ತುಳು ಸಿನಿಮಾಗೆ ತುಂಬಾ ಸಪೋರ್ಟ್ ಮಾಡ್ತೀನಿ. ಕಾಂತಾರ ಸಿನಿಮಾ ಮೂಲಕ ಇಡೀ ವಿಶ್ವಕ್ಕೆ ನಮ್ಮ ತುಳು ನಾಡಿನ ಸಂಸ್ಕೃತಿ ಪರಿಚಯ ಆಗಿದೆ. ನಾನು ಕರ್ನಾಟಕದ ಒಂದು ಭಾಗ ಎಂದಿದ್ದಾರೆ.
ಡಾ.ರಾಜ್‌ಕುಮಾರ್ ನೆನಪು
ಈ ಸಂದರ್ಭದಲ್ಲಿ ಡಾ.ರಾಜ್‌ಕುಮಾರ್ ಅವರನ್ನೂ ಸ್ಮರಿಸಿರುವ ನಟ, ಕರ್ನಾಟಕ ಅಂದಾಕ್ಷಣ ನಮಗೆಲ್ಲ ರಾಜ್‌ಕುಮಾರ್ ಸರ್ ಅವರೇ ನೆನಪಾಗುವುದು. ನನಗೆ ಈಗ ವಯಸ್ಸು 65 ಆದರೂ ಫಿಟ್ ಆಗಿ ಕಾಣಲು ಕರ್ನಾಟಕದ ಮಣ್ಣು ಕಾರಣ ಎಂದಿದ್ದಾರೆ. ಅದರಲ್ಲಿಯೂ ನಮ್ಮ ತುಳುನಾಡು, ನಮ್ಮ ಮೀನು, ನಮ್ಮ ಸಂಸ್ಕೃತಿ, ನಮ್ಮ ಬೊಂಡ, ನಮ್ಮ ಮಂಗಳೂರು ಊಟವೇ ನನ್ನನ್ನ ಇಷ್ಟೊಂದು ಸುಂದರವಾಗಿ ಕಾಣುವಂತೆ ಮಾಡಿದೆ. ನಾನು ಕೂಡ ನಮ್ಮ ಸಂಸ್ಕೃತಿ, ಆಚಾರ, ಪರಂಪರೆಗಳನ್ನ ಪಾಲಿಸುವೆ ಎಂಟು ನಟ ಹೇಳಿದ್ದಾರೆ. ಒಟ್ಟಿನಲ್ಲಿ ಕನ್ನಡದ ಪ್ರೇಕ್ಷರನ್ನು ಸೆಳೆಯಲು ಏನು ಬೇಕೋ ಎಲ್ಲವನ್ನೂ ಮಾತನಾಡಿದ್ದಾರೆ ನಟ.
