ನಮ್ಮ ಕಣ್ಣ ಮುಂದೆ ಬೆಳೆದ ಮಕ್ಕಳಿಗೆ ಹೀಗಾಯ್ತಲ್ಲ... ಸ್ಪಂದನಾ ನಿಧನಕ್ಕೆ ಜಗ್ಗೇಶ್ ಸಂತಾಪ
ನಟಿ ನಿರ್ಮಾಪಕಿ, ಚಿನ್ನಾರಿ ಮುತ್ತ ವಿಜಯ್ ಮುದ್ದಿನ ಮಡದಿ ಸ್ಪಂದನಾ ನಿಧನದ ಸುದ್ಧಿ ಕನ್ನಡ ಚಿತ್ರರಂಗವನ್ನು ಮತ್ತೊಮ್ಮೆ ತೀವ್ರ ಶೋಕಕ್ಕೆ ದೂಡಿದೆ. ಎಳೆಯ ವಯಸ್ಸಿನ ಸ್ಪಂದನಾ ಸಾವನ್ನು ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ, ಅನೇಕ ಚಿತ್ರನಟರು ಗಣ್ಯರು ಅವರೊಂದಿಗಿನ ಒಡನಾಟ ನೆನೆದು ಶೋಕ ವ್ಯಕ್ತಪಡಿಸುತ್ತಿದ್ದಾರೆ
ಬೆಂಗಳೂರು: ನಟಿ ನಿರ್ಮಾಪಕಿ, ಚಿನ್ನಾರಿ ಮುತ್ತ ವಿಜಯ್ ಮುದ್ದಿನ ಮಡದಿ ಸ್ಪಂದನಾ ನಿಧನದ ಸುದ್ಧಿ ಕನ್ನಡ ಚಿತ್ರರಂಗವನ್ನು ಮತ್ತೊಮ್ಮೆ ತೀವ್ರ ಶೋಕಕ್ಕೆ ದೂಡಿದೆ. ಎಳೆಯ ವಯಸ್ಸಿನ ಸ್ಪಂದನಾ ಸಾವನ್ನು ಯಾರಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ, ಅನೇಕ ಚಿತ್ರನಟರು ಗಣ್ಯರು ಅವರೊಂದಿಗಿನ ಒಡನಾಟ ನೆನೆದು ಶೋಕ ವ್ಯಕ್ತಪಡಿಸುತ್ತಿದ್ದಾರೆ.
ಸುದ್ದಿ ಕೇಳಿ ಆಘಾತವಾಯ್ತು
ವಿಷಯ ತಿಳಿದಾಗ ನಾನು ದೆಹಲಿಯಲ್ಲಿದ್ದೆ. ಸುದ್ದಿ ಕೇಳಿ ಆಘಾತವಾಯ್ತು. ಬಾಳಿ ಬದುಕಬೇಕಾದ ಮಕ್ಕಳಿಗೆ ಈ ಥರ ಆಗೋಯ್ತಲ್ಲಾ ಅಂತ. ಆತ್ಮಕ್ಕೆ ಶಾಂತಿ ಸಿಗಲಿ ಅಂತಷ್ಟೇ ಈಗ ಹೇಳಲು ಸಾಧ್ಯ. ನನ್ನ ಮಗ ಮತ್ತು ರಾಘು ಇಬ್ಬರೂ ಸ್ನೇಹಿತರು. ನಮ್ಮ ಕಣ್ಣಮುಂದೆ ಆಡಿ ಬೆಳೆದ ಮಕ್ಕಳಿಗೆ ಹೀಗೆ ಆಗ್ತಿದೆ ಎಂಬುದನ್ನು ಜೀರ್ಣಿಸಿಕೊಳ್ಳೋದು ಕಷ್ಟವಾಗ್ತಿದೆ ಎಂದು ನಟ ಜಗ್ಗೇಶ್ ಸ್ಪಂದನಾ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಊಹಿಸಲೂ ಆಗುತ್ತಿಲ್ಲ
ನನ್ನ ಚಿನ್ನಾರಿಮುತ್ತನ ಬೆಳವಣಿಗೆಯನ್ನು ಕಾಣುತ್ತ ಬಂದವನು ನಾನು. ಭಾನುವಾರ ಅವನ ಮಗ ಶೌರ್ಯನ ಜೊತೆ ನನ್ನ ಕ್ಲಾಸ್ ನಡೆಯುತ್ತಿತ್ತು. ಅದನ್ನು ಮುಗಿಸಿಕೊಂಡು ವಿಜಯ್ ಸಂಜೆ ಮಗನನ್ನು ಕರೆದುಕೊಂಡು ಹೋದ. ಈಗ ಆತನ ಸ್ಥಿತಿ ಊಹಿಸುವುದಕ್ಕೂ ಸಾಧ್ಯವಿಲ್ಲ. ಆ ಕುಟುಂಬದ ಸುತ್ತ ನಿರಂತರವಾಗಿ ಇಂಥ ಛಾಯೆ ಆವರಿಸುತ್ತಿರುವುದು ಬಹಳ ದುಃಖದ ಸಂಗತಿ. ಅಪ್ಪು ಇದ್ದಿದ್ದರೆ? ಸ್ಪಂದನಾ ಇದ್ದಿದ್ದರೆ? ಬಹಳ ಚಿಕ್ಕ ವಯಸ್ಸಿಗೆ ಅವರಿಗೆಲ್ಲ ಹೀಗೆ ಆಗಿದೆ. ಆ ಕುಟುಂಬದಲ್ಲೇ ಈ ರೀತಿ ಆಗುತ್ತಿದೆ ಎಂಬುದು ನೋವಿನ ಸಂಗತಿ ಎಂದು ನಿರ್ದೇಶಕ ಟಿ.ಎಸ್.ನಾಗಾಭರಣ ಶೋಕ ವ್ಯಕ್ತಪಡಿಸಿದ್ದಾರೆ.
ರಾಘು ಹೇಗೆ ಬದುಕುತ್ತಾನೆ?
ಸ್ಪಂದನಾ ಮತ್ತು ವಿಜಯ್ ರಾಘವೇಂದ್ರ ನಮ್ಮ ಕುಟುಂಬದವರಿದ್ದಂತೆ. ಇವರಿಬ್ಬರನ್ನು ನೋಡುವಾಗಲೆಲ್ಲ ಆದರ್ಶ ದಂಪತಿ ಅನ್ನೋದೇ ಮನಸ್ಸಿಗೆ ಬರೋದು. ಎಷ್ಟುಅನ್ಯೋನ್ಯತೆ, ಎಷ್ಟು ಪ್ರೀತಿ! ಸ್ಪಂದನಾ ತಾಯಿ ಈಗ ನನ್ನ ಬಳಿ ಹೇಳಿದ್ರು, ನನಗೆ ದುಃಖ ಆಗ್ತಿರೋದು ಮಗಳು ಹೋಗಿದ್ದಾಳೆ ಅನ್ನೋದಕ್ಕಿಂತಲೂ ರಾಘು ಹೇಗೆ ಬದುಕ್ತಾನೆ ಅನ್ನೋದು. ಅವಳಿಲ್ಲದೇ ಅವನು ಬದುಕಲ್ಲ ಅಂತ ಆ ತಾಯಿ ಹೇಳಿದ್ದು ಕರುಳು ಕತ್ತರಿಸಿದ ಹಾಗಿದೆ. ಯಾವತ್ತೂ ಯಾರಿಗೂ ತೊಂದರೆ ಕೊಡದ ಮಗು ಅವಳು. ದೇವರಿಗೆ ಒಳ್ಳೆಯವರೇ ತುಂಬ ಇಷ್ಟಆಗ್ತಾರೇನೋ. ಅದಕ್ಕೆ ಅಂಥವರನ್ನು ಬೇಗ ಕರೆಸ್ಕೊಳ್ತಾನೆ ಎಂದು ಹಿರಿಯ ನಟಿ ಜಯಾಮಾಲ ಬೇಸರ ವ್ಯಕ್ತಪಡಿಸಿದ್ದಾರೆ.
ಇಡೀ ಚಿತ್ರರಂಗಕ್ಕೆ ಆಘಾತ
ಸ್ಪಂದನಾ ಇನ್ನಿಲ್ಲ ಅನ್ನುವ ಸುದ್ದಿ ನಂಬುವುದೇ ಅಸಾಧ್ಯ. ಅವಳು ನನ್ನ ಸ್ವಂತ ಮಗಳಿದ್ದ ಹಾಗೆ. ಕಲಾವಿದರೆಲ್ಲ ಒಂದೇ ಕುಟುಂಬದವರು ಅಂತ ಅಣ್ಣಾವ್ರು ಹೇಳುತ್ತಿದ್ದರು. ವಿಜಯ್ ರಾಘವೇಂದ್ರ ಯಾರಿಗೂ ನೋವು ಕೊಟ್ಟವರಲ್ಲ. ಅವರಿಗೆ ಹೀಗೆ ಆಗುತ್ತೆ ಅಂದರೆ ಇಡೀ ಚಿತ್ರರಂಗಕ್ಕೆ ಆಘಾತವಾದ ಹಾಗೆ ಎಂದು ಹಿರಿಯ ನಟ ದೊಡ್ಡಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಸಂತೋಷದ ಜೋಡಿ
ವಿಜಯ್ ರಾಘವೇಂದ್ರ ಮತ್ತು ಸ್ಪಂದನಾ ಸಂತೋಷದ ಜೋಡಿಯಾಗಿದ್ದರು. ಇದೀಗ ಸೃಷ್ಟಿಯಾಗಿರುವ ಶೂನ್ಯವನ್ನು ಎದುರಿಸುವ ಮತ್ತು ಅದನ್ನು ದಾಟಿ ಬರುವ ಶಕ್ತಿ ವಿಜಯ್ ರಾಘವೇಂದ್ರಗೆ ದಕ್ಕಲಿ ಎಂಬುದೇ ನಮ್ಮ ಪ್ರಾರ್ಥನೆ. ವಿಜಯ್ ರಾಘವೇಂದ್ರ ಕುಟುಂಬಕ್ಕೆ ಸಂತಾಪಗಳು ಎಂದು ನಟ ರಮೇಶ್ ಅರವಿಂದ್ ಬೇಸರ ವ್ಯಕ್ತಪಡಿಸಿದ್ದಾರೆ.
3 ವರ್ಷದಲ್ಲಿ ಹೃದಯಾಘಾತಕ್ಕೆ ಚಿತ್ರರಂಗದ 7 ಜನ ಬಲಿ
ಕನ್ನಡ ಚಿತ್ರರಂಗದಲ್ಲಿ ಅತೀ ಚಿಕ್ಕ ವಯಸ್ಸಿನಲ್ಲೇ ಹೃದಯಾಘಾತಕ್ಕೆ ತುತ್ತಾಗಿ ನಿಧನರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಇತ್ತೀಚಿನ ವರ್ಷಗಳಲ್ಲಿಯೇ ಕನ್ನಡ ಚಿತ್ರರಂಗ ಹಲವು ಬಹುಮುಖ್ಯರನ್ನು ಕಳೆದುಕೊಂಡಿದೆ. 2020ರ ಜೂನ್ 7ರಂದು ನಟ ಚಿರಂಜೀವಿ ಸರ್ಜಾ, 2021 ಅಕ್ಟೋಬರ್ 29ರಂದು ಪುನೀತ್ ರಾಜ್‌ಕುಮಾರ್, 2023 ಜೂನ್ 2ರಂದು ನಿತಿನ್ ಗೋಪಿ ತೀರಿಕೊಂಡಿದ್ದರು. ಇದೀಗ ಸ್ಪಂದನಾ ಕೂಡ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಬಾಲಿವುಡ್‌ನಲ್ಲಿ ಕೆಕೆ, ರಾಜು ಶ್ರೀವಾಸ್ತವ, ಸಿದ್ಧಾಥ್‌ರ್ ಶುಕ್ಲಾ ಸೇರಿದಂತೆ ಹಲವಾರು ಮಂದಿ ಹೃದಯಾಘಾತದಿಂದ ತೀರಿಕೊಂಡಿದ್ದಾರೆ.
ನಟಿ, ನಿರ್ಮಾಪಕಿಯಾಗಿದ್ದ ಸ್ಪಂದನಾ
ಬೆಂಗಳೂರಿನ ಮಲ್ಲೇಶ್ವರದ ಎಂಇಎಸ್ ಕಾಲೇಜಿನಲ್ಲಿ ಪದವಿ ಪಡೆದಿರುವ ಸ್ಪಂದನಾ ಕುಟುಂಬದ ಹಿನ್ನೆಲೆ ತುಂಬಾ ವಿಶೇಷವಾದದ್ದು. ತಂದೆ ಬಿ.ಕೆ.ಶಿವರಾಂ ಪೊಲೀಸ್ ಅಧಿಕಾರಿ ಆಗಿದ್ದವರು. ದೊಡ್ಡಪ್ಪ ಬಿ.ಕೆ. ಹರಿಪ್ರಸಾದ್ ಹಾಗೂ ಸೋದರ ರಕ್ಷಿತ್ ಶಿವರಾಂ ಅವರದ್ದು ರಾಜಕೀಯ ಕ್ಷೇತ್ರ. ಪತಿ ವಿಜಯ್ ರಾಘವೇಂದ್ರ ಸಿನಿಮಾ ರಂಗದವರು. ಹೀಗೆ ರಾಜಕೀಯ, ಪೊಲೀಸ್ ಹಾಗೂ ಸಿನಿಮಾ ನೆರಳಿನಲ್ಲಿ ಬದುಕು ಕಟ್ಟಿಕೊಂಡವರು ಸ್ಪಂದನಾ.
ಸ್ಪಂದನಾ ಅವರು ರವಿಚಂದ್ರನ್ ನಟನೆ, ನಿರ್ದೇಶನದ ‘ಅಪೂರ್ವ’ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರದ ನಂತರ ಬಹಳಷ್ಟು ಸಿನಿಮಾ ಕಾರ್ಯಕ್ರಮಗಳಲ್ಲಿ ಹಾಗೂ ವಾಹಿನಿಗಳು ನಡೆಸುವ ರಿಯಾಲಿಟಿ ಶೋಗಳಲ್ಲಿ ಪತಿ ವಿಜಯ್ ರಾಘವೇಂದ್ರ ಜತೆಗೆ ಭಾಗವಹಿಸಿದ್ದರು. ಅಲ್ಲದೆ 2018ರಲ್ಲಿ ತೆರೆಗೆ ಬಂದಿದ್ದ ವಿಜಯ್ ರಾಘವೇಂದ್ರ ನಟನೆ ಮತ್ತು ನಿರ್ದೇಶನದ ‘ಕಿಸ್ಮತ್’ ಚಿತ್ರಕ್ಕೆ ಸ್ಪಂದನಾ ಅವರೇ ನಿರ್ಮಾಪಕಿ ಆಗುವ ಮೂಲಕ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದರು.
ಭಾವುಕರಾದ ಮೈದುನ ಶ್ರೀಮುರಳಿ
ವಿಜಯ್ ರಾಘವೇಂದ್ರ ಅವರ ಸೋದರ, ನಟ ಶ್ರೀಮುರಳಿ ಮಾಧ್ಯಮಗಳ ಜತೆಗೆ ಮಾತನಾಡಿ, ಅತ್ತಿಗೆ ನಿಧನರಾದ ಬಗ್ಗೆ ಅಣ್ಣ ರಾಘು ನನಗೆ ಫೋನ್ ಕರೆ ಮಾಡಿ ತಿಳಿಸಿದರು. ಅತ್ತಿಗೆ ಕುಟುಂಬಸ್ಥರ ಜತೆ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಶೂಟಿಂಗ್ ಇದ್ದ ಕಾರಣ ವಿಜಯ್ ಇಲ್ಲಿಯೇ ಇದ್ದರು. ನಂತರ ರಾಘು ಅವರು ಕೂಡ ಅತ್ತಿಗೆ ಜತೆಗೆ ಪ್ರವಾಸಕ್ಕೆ ಜತೆಯಾಗಿದ್ದರು. ಆಗಸ್ಟ್ 6 ರರಾತ್ರಿ ಮಲಗಿದ್ದ ಅತ್ತಿಗೆ ಮತ್ತೆ ಏಳಲೇ ಇಲ್ಲ. ಲೋ ಬಿಪಿಯಿಂದ ಹೀಗೆ ಆಯಿತು ಎಂದು ತಿಳಿದು ಬಂದಿದೆ. ನಮ್ಮ ಕುಟುಂಬಕ್ಕೆ ದೊಡ್ಡ ದುಃಖದ ಸಂಗತಿ ಇದು ಎನ್ನುತ್ತಲೇ ಭಾವುಕರಾದರು.
ಸ್ನೇಹಮಯಿ ಸ್ಪಂದನಾ
ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಸ್ನೇಹಮಯಿ ವ್ಯಕ್ತಿತ್ವ ಹೊಂದಿದ್ದರು. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ವಿಜಯ ರಾಘವೇಂದ್ರ ಪತ್ನಿಯ ಬಗ್ಗೆ ಭಾವುಕವಾಗಿ ಮಾತುಗಳನ್ನಾಡಿದ್ದರು. ನಾನು ಹೊರನಾಡ ಅನ್ನಪೂರ್ಣೇಶ್ವರಿ ದೇವಿಯನ್ನು ಬೇಡಿಕೊಂಡಿದ್ದೆ. ನಾನು ಮದುವೆ ಆದರೆ ನಿನ್ನ ಥರ ಇರೋಳನ್ನೇ ಮದುವೆ ಆಗಬೇಕು ಅಂತ. ಸ್ಪಂದನಾಳನ್ನು ನೋಡಿದಾಗ ನಾನಂದು ದೇವಿ ಎದುರು ಹೇಳಿದ್ದ ಮಾತು ನೆನಪಾಗಿತ್ತು. ನನ್ನ ಹೆಂಡತಿ ನನ್ನ ಶಕ್ತಿ. ಕುಗ್ಗಿದಾಗ ಮೇಲೆತ್ತುವ ಗೆಳತಿ. ಅವಳನ್ನು ಹೃದಯದಲ್ಲಿ ಜೋಪಾನವಾಗಿ ಇಟ್ಟುಕೊಂಡಿದ್ದೇನೆ ಎಂದು ವಿಜಯ್ ಪತ್ನಿ ಬಗ್ಗೆ ಹೇಳಿದ್ದರು. ಆ ಮಾತುಗಳನ್ನು ಈಗ ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸ್ಪಂದನಾ ಅವರನ್ನು ಬಹಳ ಕಾಲದಿಂದ ಬಲ್ಲವರು, ಆಪ್ತರು ಸ್ಪಂದನಾ ಅವರ ಸ್ನೇಹಮಯಿ ವ್ಯಕ್ತಿತ್ವವನ್ನು ನೆನೆಸಿಕೊಂಡಿದ್ದಾರೆ. ಈ ಮಧ್ಯೆ ದಂಪತಿಯ ಹಳೇ ರೀಲ್ಸ್‌ಗಳು ಮತ್ತೆ ಟ್ರೆಂಡ್ ಆಗಿವೆ. ಜನ ಆ ರೀಲ್ಸ್ ನೋಡಿ ಭಾವುಕರಾಗುತ್ತಿದ್ದಾರೆ.