ಕಿಚ್ಚನ ವಿರುದ್ಧ ದೂರು ಕೊಟ್ಟ ಅಧ್ಯಕ್ಷನಿಗೆ ಫ್ಯಾನ್ಸ್‌ನಿಂದ ಜೀವ ಬೆದರಿಕೆ ಕರೆ!
ಕಿಚ್ಚ ಸುದೀಪ್ ಜೂಟಾಟ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಜನರನ್ನು ತಪ್ಪು ದಾರಿಗೆ ತಳ್ಳುವಂಥ ಇಂಥ ಕೆಲಸಗಳಿಂದ ದೂರವಾಗಬೇಕೆಂದು ಆಗ್ರಹಿಸಿದ ಸಂಘಟನೆ ಅಧ್ಯಕ್ಷನಿಗೆ ಅಭಿಮಾನಿಗಳಿಂದ ಜೀವ ಬೇದರಿಕೆ ಕರೆ ಬರುತ್ತಿದೆಯಂತೆ!
ಸ್ಯಾಂಡಲ್‌ವುಡ್ 'ಪೈಲ್ವಾನ್' ಕಿಚ್ಚ ಸುದೀಪ್ ಇತ್ತೀಚಿಗೆ ಜೂಜಾಟದ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀ ಸಾಮಾನ್ಯನಿಗೆ ಜೂಜಾಟ ಆಡಲು ಈ ಆ್ಯಡ್ ಪ್ರಜೋದಿಸುತ್ತದೆ ಎಂದು ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಆರೋಪಿಸಿ, ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು.
ಜನರನ್ನು ದುಶ್ಚಟಗಳೆಡೆಗೆ ಆಕರ್ಷಿಸುವಂತ ಕೆಲಸವನ್ನು ಸುದೀಪ್ ಮಾಡಬಾರದು, ಇಲ್ಲವಾದರೆ ಅವರನ್ನು ಚಿತ್ರರಂಗದಿಂದ ದೂರ ಇರಿಸಬೇಕೆಂದು ಫಿಲ್ಮ್ ಚೇಂಬರ್‌ನಲ್ಲಿ ದೂರು ದಾಖಲಿಸಿದ್ದರು. ಕಿಚ್ಚ ಜಾಹೀರಾತಿನಿಂದ ಹೊರ ಬರದಿದ್ದರೆ, ಅವರ ಮನೆ ಮುಂದೆಯೂ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಕಿಚ್ಚ ಜಾಹೀರಾತು ಬ್ಯಾನ್ ಮಾಡಿ: ಸರ್ವ ಸಂಘಟನೆಗಳ ಒಕ್ಕೂಟ
ದೂರು ಸಲ್ಲಿಸಿದ ಬಳಿಕ ಶಿವಕುಮಾರ್ ಅವರಿಗೆ ವಾಟ್ಸ್ಯಾಪ್ ಮೆಸೇಜ್ ಹಾಗೂ ಕರೆಗಳ ಮೂಲಕ ಬೆದರಿಕೆ ಕರೆಗಳು ಬರುತ್ತಿವೆ. ಕರ್ನಾಟಕದಲ್ಲಿ ಮಾತ್ರವಲ್ಲದೇ, ಆಸ್ಟ್ರೇಲಿಯಾ. ಥೈಲ್ಯಾಂಡ್ ಹಾಗೂ ಸಿಂಗಾಪುರಗಳಿಂದಲೂ ಜೀವ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗುತ್ತಿದೆ. ಸುದೀಪ್ ಅಭಿಮಾನಿಗಳ ವಿರುದ್ಧ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಶಿವಕುಮಾರ್ ಅವರು ತಮಗೆ ಬರುತ್ತಿರುವ ಬೆದರಿಕೆ ಕರೆಗಳ ಬಗ್ಗೆ ದೂರು ದಾಖಲಿಸಿದ್ದಾರೆ.
'ನನಗೆ ಮಾನಸಿಕ, ದೈಹಿಕ ಹಲ್ಲೆಯಾದರೆ ಅದಕ್ಕೆ ಸುದೀಪ್ ಅವರೇ ನೇರ ಹೊಣೆ ಆಗುತ್ತಾರೆ' ಎಂದು ಶಿವಕುಮಾರ್ ಹೇಳಿದ್ದಾರೆ.