ರವಿ ಬಸ್ರೂರು ನಿರ್ದೇಶನದ ಮಕ್ಕಳ ಅಭಿನಯದಲ್ಲಿ ಮೂಡಿ ಬಂದಿರುವ ಗಿರ್ಮಿಟ್‌ ಚಿತ್ರದ ಡಬ್ಬಿಂಗ್ ಟ್ರೇಲರ್‌ ರಿಲೀಸ್ ಆಗಿದೆ. ವಿಶೇಷ ಅಂದರೆ ಇಲ್ಲಿ ಚಿತ್ರದ ಜೋಡಿಗೆ ಧ್ವನಿ ನೀಡಿರುವುದು ಯಶ್‌ ಹಾಗೂ ರಾಧಿಕಾ ಪಂಡಿತ್‌ ಅವರು.

 

ರವಿ ಬಸ್ರೂರು ನಿರ್ದೇಶಿಸಿ, ಎನ್‌ ಎಸ್‌ ರಾಜ್‌ಕುಮಾರ್‌ ನಿರ್ಮಾಣದ ಗಿರ್ಮಿಟ್ ಚಿತ್ರದ ಟ್ರೇಲರನ್ನು ನಟ ಪುನೀತ್‌ರಾಜ್‌ಕುಮಾರ್‌ ಕೆಲ ದಿನಗಳ ಹಿಂದೆ ಬಿಡುಗಡೆ ಮಾಡಿದ್ದರು.  ಉತ್ತರ ಕರ್ನಾಟಕದ ಭಾಗದಲ್ಲಿ ಮಂಡಕ್ಕಿಗೆ ಮೆಣಸಿನಕಾಯಿ, ಈರುಳ್ಳಿ, ಟೊಮ್ಯಾಟೋ ಮಿಕ್ಸ್‌ ಮಾಡಿಕೊಂಡು ತಿನ್ನುವ ಪದಾರ್ಥಕ್ಕೆ ಗಿರ್ಮಿಟ್‌ ಎನ್ನುತ್ತಾರೆ. ಅದೇ ಹೆಸರಿನಲ್ಲಿ ಮಾಡಿರುವ ಈ ಚಿತ್ರದಲ್ಲಿ ರಾಜ್‌, ರಶ್ಮಿ ಚಿತ್ರದ ಜೋಡಿ. ರಂಗಾಯಣ ರಘು, ಸಾಧು ಕೋಕಿಲಾ, ತಾರಾ, ಅಚ್ಯುತ್‌ ಕುಮಾರ್‌ ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಅಂದಹಾಗೆ ಈ ಚಿತ್ರ ಐದು ಭಾಷೆಗಳಲ್ಲಿ ಬರುತ್ತಿದೆಯಂತೆ. ಕನ್ನಡದ ಜತೆಗೆ ತೆಲುಗು, ಹಿಂದಿ, ತುಳು ಹಾಗೂ ಮಲಯಾಳಂ ಭಾಷೆಯಲ್ಲಿ ಈ ಸಿನಿಮಾ ಬರುತ್ತಿದೆ. ಇಲ್ಲಿ ಇಬ್ಬರು ಮಕ್ಕಳ ಪಾತ್ರಕ್ಕೆ ಯಶ್‌ ಹಾಗೂ ರಾಧಿಕಾ ಪಂಡಿತ್‌ ಧ್ವನಿ ನೀಡಿವುದು ಹೈಲೈಟ್‌. ಹೊಸ ರೀತಿಯ ಸಿನಿಮಾ ಎಂಬುದು ರವಿ ಬಸ್ರೂರು ಮಾತು.

ಪುಣಾಣಿಗಳು ನಾಯಕ, ನಾಯಕಿಯಾಗಿ ನಟಿಸಿರುವುದು ಸಂತಸ ತಂದಿದೆ. ಇಂತಹ ಪ್ರಯತ್ನಕ್ಕೆ ಹಣ ಹೂಡಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು. ಈ ಸಿನಿಮಾ ನೋಡುಗರಿಗೆ ಮನರಂಜನೆ ನೀಡಲಿ, ಇದರಿಂದ ಮಕ್ಕಳಿಗೆ ಅಭಿಮಾನಿಗಳು ಹುಟ್ಟಿಕೊಳ್ಳಲಿ ಎಂದು ಚಿತ್ರತಂಡಕ್ಕೆ ಶುಭ ಕೋರಿದ್ದು ನಟ ಪುನೀತ್‌ರಾಜ್‌ಕುಮಾರ್‌. ಈ ಚಿತ್ರಕ್ಕೆ ಸ್ಕ್ರೀನ್‌ ಪ್ಲೇ ಹಾಗೂ ಸಂಭಾಷಣೆ ಬರೆದಿರುವುದು ಪ್ರಮೋದ್‌ ಮರವಂತೆ, ಕಿನ್ನಾಳ್‌ ರಾಜ್‌, ಸಂದೀಪ್‌ಸಿರ್ಸಿ, ಬಿ.ಮಂಜುನಾಥ್‌ ಮತ್ತು ಸೂಚನ್‌ಶೆಟ್ಟಿ. ನಾಲ್ಕು ಗೀತೆಗಳನ್ನು ನವೀನ್‌ಸಜ್ಜು, ಪುನೀತ್‌ರಾಜ್‌ಕುಮಾರ್‌, ಸಂತೋಷ್‌ವೆಂಕಿ, ಆರುಂಧತಿ ಹಾಡಿದ್ದಾರೆ. ಕುಂದಾಪುರ, ಬಸ್ರೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.