ರಾಜ್ ಬಿ ಶೆಟ್ಟಿಗೆ ಜೋಡಿಯಾದ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಅಪರ್ಣಾ; ಯಾವ ಸಿನಿಮಾ, ಏನ್ ಕಥೆ? ಇಲ್ಲಿದೆ ವಿವರ
ರಾಜ್ ಬಿ ಶೆಟ್ಟಿ ಮುಂದಿನ ಸಿನಿಮಾದಲ್ಲಿ ಜೋಡಿಯಾಗಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ನಟಿಸುತ್ತಿದ್ದಾರೆ.
ಸ್ಯಾಂಡಲ್ ವುಡ್ ಖ್ಯಾತ ನಟ ಮತ್ತು ನಿರ್ದೇಶಕರಲ್ಲಿ ರಾಜ್ ಬಿ ಶೆಟ್ಟಿ ಕೂಡ ಒಬ್ಬರು. ತಮ್ಮ ಮೊದಲ ಸಿನಿಮಾ ಒಂದು ಮೊಟ್ಟೆಯ ಕಥೆ ಚಿತ್ರದ ಮೂಲಕವೇ ಭರವಸೆ ಮೂಡಿಸಿದ್ದರು. ತಾವೆ ನಿರ್ದೇಶಿಸಿ, ನಟನೆ ಕೂಡ ಮಾಡಿದ್ದ ರಾಜ್ ಬಿ ಶೆಟ್ಟಿ ಅವರ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿತ್ತು. ವಿಭಿನ್ನ ಕಾನ್ಸೆಪ್ಟ್ ಮೂಲಕ ಕನ್ನಡ ಸಿನಿರಸಿಕರ ಹೃದಯ ಗೆದ್ದಿದ್ದರು. ಈ ಸಿನಿಮಾ ಸ್ಯಾಂಡಲ್ ವುಡ್‌ನಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಹೊಸಬರ ಹೊಸ ಪ್ರಯತ್ನಕ್ಕೆ ಕನ್ನಡಿಗರು ಬಹುಪರಾಕ್ ಹೇಳಿದ್ದರು. ಸ್ಯಾಂಡಲ್‌ವುಡ್‌ನ ಶೆಟ್ಟಿ ಗ್ಯಾಂಗ್‌ನಲ್ಲಿ ಒಬ್ಬರಾಗಿರುವ ರಾಜ್ ಬಿ ಶೆಟ್ಟಿ ಕಡೆಯಿಂದ ಇಂಟ್ರಸ್ಟಿಂಗ್ ವಿಚಾರ ಬಹಿರಂಗವಾಗಿದೆ. ರಾಜ್ ಬಿ ಶೆಟ್ಟಿಗೆ ಜೋಡಿಯಾಗಿ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಅಪರ್ಣಾ ಬಾಲಮುರಳಿ ನಟಿಸುತ್ತಿದ್ದಾರೆ.
ಅರ್ರೇ ಇದ್ಯಾವ ಸಿನಿಮಾ ಅಂತೀರಾ? ಇಲ್ಲಿದೆ ನೋಡಿ ವಿವರ. ರಾಜ್ ಬಿ ಶೆಟ್ಟಿ ಸೈಲೆಂಟ್ ಆಗಿ ಮಲಯಾಳಂ ಸಿನಿಮಾರಂಗಕ್ಕೆ ಹಾರಿದ್ದಾರೆ. ಸದ್ದಿಲ್ಲದೆ ಅಲ್ಲಿ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ರಾಜ್ ಬಿ ಶೆಟ್ಟಿ ಮಲಯಾಳಂ ಸಿನಿಮಾಗೆ ಸೂರರೈ ಪೊಟ್ರು ಖ್ಯಾತಿಯ ನಟಿ ಅಪರ್ಣಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜಿಶೋ ಲೋನ್ ಆಂಟೋನಿ ನಿರ್ದೇಶನದ 'ರುಧಿರಂ' ಸಿನಿಮಾ ಮೂಲಕ ರಾಜ್ ಬಿ ಶೆಟ್ಟಿ ಮಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲಸಿನಿಮಾದ ಪೋಸ್ಟರ್ ರಿಲೀಸ್ ಆಗಿದ್ದು ರಾಜ್ ಬಿ ಶೆಟ್ಟಿ ಮತ್ತು ಅಪರ್ಣಾ ಇಬ್ಬರೂ ಪೋಸ್ಟರ್ ಶೇರ್ ಮಾಡಿದ್ದಾರೆ.
ಚಿತ್ರದ ಫಸ್ಟ್ ಲುಕ್ ಶೇರ್ ಮಾಡಿರುವ ಅಪರ್ಣಾ, 2023ರಿಂದ ರುಧಿರಂ ಚಿತ್ರೀಕರಣ ಪ್ರಾರಂಭ ಎಂದು ಬರೆದುಕೊಂಡಿದ್ದಾರೆ. ಇನ್ನು ರಾಜ್ ಬಿ ಶೆಟ್ಟಿ ತೆರೆಹಂಚಿಕೊಳ್ಳಲು ಉತ್ಸುಕಳಾಗಿದ್ದೀನಿ ಎಂದು ಹೇಳಿದ್ದಾರೆ. ಅಪರ್ಣಾ ಪೋಸ್ಟ್‌ಗೆ ರಾಜ್ ಬಿ ಶೆಟ್ಟಿ ಕಾಮೆಂಟ್ ಮಾಡಿ ತಾನು ಕೂಡ ಉತ್ಸುಕರಾಗಿರುವುದಾಗಿ ಹೇಳಿದ್ದಾರೆ. ಸದ್ಯ ರಿಲೀಸ್ ಆಗಿರುವ ಪೋಸ್ಟರ್ ಪೇಂಟಿಂಗ್ ರೂಪದಲ್ಲಿದೆ. ರಾಜ್ ಬಿ ಶೆಟ್ಟಿ ಮತ್ತು ಅಪರ್ಣಾ ಜೋಡಿಯಾಗಿ ತೆರೆ ಬರ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಅಂದಹಾಗೆ ಈ ಸಿನಿಮಾಗೆ ಕನ್ನಡದ ಸಂಗೀತ ನಿರ್ದೇಶಕ ಮಿಧುನ್ ಮುಕುಂದನ್ ಸಂಗೀತ ನೀಡುತ್ತಿದ್ದಾರೆ. ಸದ್ಯ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿರುವ ಸಿನಿಮಾತಂಡ ಮುಂದಿನ ವರ್ಷದಿಂದ ಚಿತ್ರೀಕರಣ ಪ್ರಾರಂಭ ಮಾಡುತ್ತಿದೆ. ಈ ಸಿನಿಮಾ ಮಲಯಾಳಂ ಜೊತೆಗೆ ಕನ್ನಡ, ತೆಲುಗು ಮತ್ತು ತಮಿಳಿನಲ್ಲೂ ರಿಲೀಸ್ ಆಗುತ್ತಿದೆ.
ಇನ್ನು ನಟಿ ಅಪರ್ಣಾ ಬಗ್ಗೆ ಹೇಳಬೆಂದರೆ, 2015ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ತಮಿಳು ಸಿನಿಮಾರಂಗದಲ್ಲಿ ಖ್ಯಾತಿಗಳಿಸಿದ್ದಾರೆ. ಮಲಯಾಳಂನ ಒರು ಸೆಕೆಂಡ್ ಕ್ಲಾಸ್ ಯಾತ್ರ ಸಿನಿಮಾ ಮೂಲಕ ಮೊದಲ ಬಾರಿಗೆ ತೆರೆಮೇಲೆ ಮಿಂಚಿದರು. ಬಳಿಕ ಮಲಯಾಳಂನ ಕೆಲವು ಸಿನಿಮಾಗಳ ಜೊತೆಗೆ ತಮಿಳಿನಲ್ಲೂ ಬ್ಯುಸಿಯಾದರು. ಆದರೆ ಅಪರ್ಣಾಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದ್ದು ಸೂರರೈ ಪೊಟ್ರು ಸಿನಿಮಾ. ನಟ ಸೂರ್ಯಗೆ ಜೋಡಿಯಾಗಿ ನಟಿಸಿದ್ದ ಅಪರ್ಣಾ ದೊಡ್ಡ ಮಟ್ಟದ ಖ್ಯಾತಿ ಪಡೆದರು. ಈ ಸಿನಿಮಾದ ಅತ್ಯುತ್ತಮ ನಟನೆಗೆ ರಾಷ್ಟ್ರಪ್ರಶಸ್ತಿಯನ್ನು ಗೆದ್ದು ಬೀಗಿದರು. ಈ ಸಿನಿಮಾ ಬಳಿಕ ಅಪರ್ಣಾಗೆ ಸಿನಿಮಾಗಳು ಹೆಚ್ಚಾಯಿತು. ಸದ್ಯ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
Puneeth Parva ಡಾ.ರಾಜ್‌ಕುಮಾರ್ ಓಡಾಡಿರುವ ಜಾಗದಲ್ಲಿ ನನಗೆ ಓಡಾಡಲು ಅವಕಾಶ ಕೊಟ್ಟಿದ್ದು ಅಪ್ಪು: ರಾಜ್ ಬಿ ಶೆಟ್ಟಿ
ರಾಜ್ ಬಿ ಶೆಟ್ಟಿ ಕೂಡ ಅನೇಕ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಕೊನೆಯದಾಗಿ ರಾಜ್ ಬಿ ಶೆಟ್ಟಿ 777 ಚಾರ್ಲಿ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇನ್ನು ಸದ್ಯ ದೇಶದಾದ್ಯಂತ ಸದ್ದು ಮಾಡುತ್ತಿರುವ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದಲ್ಲೂ ಕೆಲಸ ಮಾಡಿದ್ದರು. ಸದ್ಯ ಅವರ ಬಳಿ ರಾಮನ ಅವತಾರ, ಸ್ವಾತಿ ಮುತ್ತಿನ ಮಳೆಹನಿಯೇ ಸೇರಿದಂತೆ ಅನೇಕ ಸಿನಿಮಾಗಳಿವೆ.