ಪುನೀತ್ ರಾಜ್‌ಕುಮಾರ್ 'ದ್ವಿತ್ವ'; ಈ ಚಿತ್ರದಲ್ಲಿ ಸ್ಪ್ಲಿಟ್ ಪರ್ಸನಾಲಿಟಿ ಡಿಸಾರ್ಡರ್ ಹೊಂದಿರುವ ವ್ಯಕ್ತಿಯೇ!
ನಟ ಪುನೀತ್ ರಾಜ್‌ಕುಮಾರ್ ಅಭಿನಯದ, ಪವನ್ ಕುಮಾರ್ ನಿರ್ದೇಶನದ, ಹೊಂಬಾಳೆ ಫಿಲಮ್‌ಸ್ನ ವಿಜಯ್ ಕಿರಗಂದೂರು ನಿರ್ಮಾಣದ ಹೊಸ ಚಿತ್ರದ ಹೆಸರು ‘ದ್ವಿತ್ವ’. ಚಿತ್ರದ ಪೋಸ್ಟರ್ ಸಿನಿ ಪ್ರಿಯರ ಮೆಚ್ಚುಗೆ ಗಳಿಸಿದೆ. ಆ ಮೂಲಕ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಒಂದು ಪ್ರಯೋಗಾತ್ಮಕ ಚಿತ್ರ ಒಪ್ಪಿಕೊಂಡಂತಿದೆ ಎಂಬುದು ಚಿತ್ರದ ಟೈಟಲ್ ಪೋಸ್ಟರ್ ನೋಡಿದರೆ ಗೊತ್ತಾಗುತ್ತದೆ.
ದ್ವಿತ್ವ ಎಂಬುದು ಸಂಸ್ಕೃತದಿಂದ ಬಂದಿರುವ ಪದ. ಎರಡು ರೀತಿಯ ವ್ಯಕ್ತಿತ್ವಗಳನ್ನು ತೋರುವ ಹೆಸರು ಇದು. ಪುನೀತ್ ರಾಜ್‌ಕುಮಾರ್ ಎರಡು ರೀತಿಯ ಪಾತ್ರಗಳಲ್ಲಿ ನಟಿಸುತ್ತಾರಾ ಅಥವಾ ಸ್ಪ್ಲಿಟ್ ಪರ್ಸನಾಲಿಟಿ ಡಿಸಾರ್ಡರ್ ಹೊಂದಿರುವ ವ್ಯಕ್ತಿಯೋ ಎಂಬುದು ಸದ್ಯದ ಕುತೂಹಲ. ಚಿತ್ರಕ್ಕೆ ಪ್ರೀತಾ ಜಯರಾಮ್ ಕ್ಯಾಮೆರಾ, ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಆದರ್ಶ್ ಮೋಹನ್‌ದಾಸ್ ಪೋಸ್ಟರ್ ವಿನ್ಯಾಸ ಮಾಡಿದ್ದಾರೆ.
ಈ ಸಿನಿಮಾ ಕುರಿತಾಗಿ ನಿರ್ದೇಶಕ ಪವನ್ ಕುಮಾರ್ ಮಾತುಗಳು ಹೀಗಿವೆ-
- ನನಗೆ ತುಂಬಾ ವರ್ಷಗಳಿಂದ ಕಾಡುತ್ತಿದ್ದ ಕತೆ. ತುಂಬಾ ಹಿಂದೆಯೇ ಬರೆದಿದ್ದೆ. ಗಾಳಿಪಟ 2 ಚಿತ್ರದ ಶೂಟಿಂಗ್‌ಗೆ ಹೋಗುವ ಮೊದಲು ಥಾಯ್‌ಲ್ಯಾಂಡ್‌ಗೆ ಹೋಗಿದ್ದೆ. ಅಲ್ಲಿ ಬಿಡುವು ಸಿಕ್ಕಾಗ ಚಿತ್ರಕಥೆ ಬರೆದೆ.
ಹೊಂಬಾಳೆ ಫಿಲಮ್‌ಸ್ ನನ್ನ ಎರಡನೇ ಮನೆ ಇದ್ದಂತೆ. ಮತ್ತೊಮ್ಮೆ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಪವನ್ ಕುಮಾರ್ ಸಿನಿಮಾಗಳನ್ನು ನಾನು ನೋಡುತ್ತಿದ್ದೆ. ಈಗ ಜತೆಯಾಗಿ ಕೆಲಸ ಮಾಡುತ್ತಿದ್ದೇವೆ. ಯೂನಿಕ್ ಕತೆಗಳನ್ನು ಹೇಳುತ್ತಾರೆ ಎನ್ನುವ ನಂಬಿಕೆ ಇದೆ. ಇದು ನನಗೆ ಹೊಸ ಪ್ರಯಾಣ. ದ್ವಿತ್ವ ಚಿತ್ರದಲ್ಲಿ ನನ್ನ ಹೊಸ ಅವತಾರವನ್ನು ನೋಡಲು ನಾನೇ ಕಾತುರದಿಂದ ಕಾಯುತ್ತಿದ್ದೇನೆ.- ಪುನೀತ್ ರಾಜ್‌ಕುಮಾರ್
- ಯಾವಾಗ ಚಿತ್ರಕಥೆ ಬರೆಯಲು ಆರಂಭಿಸಿದೆನೋ ಆಗಲೇ ಪುನೀತ್ ರಾಜ್‌ಕುಮಾರ್ ಅವರಿಗೆ ಈ ಕತೆ ಹೇಳುವ ಪ್ರಯತ್ನ ಮಾಡಿದೆ. ಕೊನೆಗೂ ಅದಕ್ಕೊಂದು ಸ್ಪಷ್ಟ ರೂಪ ಈಗ ಸಿಕ್ಕಿದೆ. ಚಿತ್ರದ ಹೆಸರು ಹಾಗೂ ಪೋಸ್ಟರ್ ಅನ್ನು ದೊಡ್ಡ ಮಟ್ಟದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಖುಷಿ ಆಗುತ್ತಿದೆ.
- ದ್ವಿತ್ವ ಪಕ್ಕಾ ಸೈಕಾಲಜಿಕಲ್, ಥ್ರಿಲ್ಲರ್ ಹಾಗೂ ಡ್ರಾಮಾ ಸಿನಿಮಾ. ದ್ವಿತ್ವ ಎನ್ನುವ ಹೆಸರೇ ಇರಲಿ ಎಂದು ಒಪ್ಪಿಗೆ ಸೂಚಿಸಿದ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಪುನೀತ್ ರಾಜ್‌ಕುಮಾರ್ ಅವರಿಗೆ ಧನ್ಯವಾದಗಳು.
- ಸೆಪ್ಟಂಬರ್ ತಿಂಗಳಲ್ಲಿ ಈ ಸಿನಿಮಾ ಶೂಟಿಂಗ್‌ಗೆ ಹೋಗಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ, 2022ಕ್ಕೆ ದ್ವಿತ್ವ ಸಿನಿಮಾ ತೆರೆ ಮೇಲೆ ಮೂಡಲಿದೆ.
ಪವನ್ ಕುಮಾರ್ ಅವರು ಪವರ್ ಸ್ಟಾರ್ ಅಭಿಮಾನಿಗಳಿಗೆ ಹೊಸ ಪುನೀತ್ ಅವರನ್ನು ತೋರಿಸುತ್ತಾರೆಂಬ ನಂಬಿಕೆ ಇದೆ. ಪವನ್ ಅವರ ಹಿಂದಿನ ಚಿತ್ರಗಳನ್ನು ನೋಡಿದರೆ ದ್ವಿತ್ವ ಚಿತ್ರದ ಮೂಲಕ ಹೊಸ ಅಪ್ಪು ನಮಗೆ ಕಾಣಿತ್ತಾರೆ ಎನ್ನುವ ಭರವಸೆ ಇದೆ. ಸಾಕಷ್ಟು ವಿಶೇಷತೆಗಳಿಂದ ಕೂಡಿದ ಒಂದು ಸೈಕಾಲಜಿಕಲ್ ಸಿನಿಮಾ ಮಾಡುತ್ತಿದ್ದೇವೆ.- ವಿಜಯ್ ಕಿರಗಂದೂರು, ನಿರ್ಮಾಪಕ