ಮೈಸೂರು ಮೂಲದ ರಥ ಕಿರಣ್‌, ವೃತ್ತಿಯಲ್ಲಿ ಡಾಕ್ಟರ್‌. ಆದರೆ, ಆ್ಯಕ್ಟರ್‌ ಆಗುವ ಕನಸು ಕಟ್ಟಿಕೊಂಡು ಚಿತ್ರರಂಗಕ್ಕೆ ಬಂದವರು ಮೊದಲ ಪ್ರಯತ್ನವಾಗಿ ‘ಅಲೆಯಾಗಿ ಬಾ’ ಹೆಸರಿನಲ್ಲಿ ಸುಂದರವಾದ ವಿಡಿಯೋ ಆಲ್ಬಂ ಮಾಡಿದ್ದಾರೆ. ಇದರ ಮತ್ತೊಂದು ಹೈಲೈಟ್‌ ಎಂದರೆ ಇದನ್ನು ನಟ ಪುನೀತ್‌ರಾಜ್‌ಕುಮಾರ್‌ ಅವರು ನೋಡಿ, ತಮ್ಮ ಪಿಆರ್‌ಕೆ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಮಾಡಿರುವುದು. ಆ ಮೂಲಕ ಹಾಡಿನ ಕಾನ್ಸೆಪ್ಟ್‌ ಮೆಚ್ಚಿ, ಪವರ್‌ ಸ್ಟಾರ್‌ ಸಾಥ್‌ ಕೊಟ್ಟಿದ್ದಾರೆ.

PRK ಆಡಿಯೋ ಸಂಸ್ಥೆಯ ಹೊಸ ದಾಖಲೆ; ಅಪ್ಪು ವಂದನೆಗಳು! 

ಇನ್ನೂ ವಿಡಿಯೋ ಆಲ್ಬಂ ನೋಡಿದವರು ಹೊಸಬರು ಅನಿಸುವುದಿಲ್ಲ. ಅಷ್ಟುಚೆನ್ನಾಗಿದೆ. ಹಾಡಿನ ಥೀಮು, ಫೋಟೋಗ್ರಫಿ, ನಾಯಕಿಯ ಮುಖವನ್ನು ತೋರಿಸದೆ ಇಡೀ ಹಾಡು ರೂಪಿಸಿರುವ ರೀತಿಗೆ ನೋಡುಗರು ಮೆಚ್ಚಿಕೊಳ್ಳುತ್ತಿದ್ದಾರಂತೆ. ಡಾ ಸಹನ ಸುಧಾಕರ ಈ ಹಾಡಿನ ಕತೆಯನ್ನು ಸೃಷ್ಟಿಸಿದ್ದಾರೆ. ಲೋಹಿತ್‌ ಕೀರ್ತಿ ನಿರ್ದೇಶನ ಮಾಡಿದ್ದಾರೆ.

PRK ಸಂಸ್ಥೆಯಲ್ಲಿ ಹೊಸಬರಿಗೆ ಅವಕಾಶ; ರಿಲೀಸ್ ಆದ ಸಾಂಗ್‌ ಸೂಪರ್ ಹಿಟ್! 

‘ನಾನು ನಟನಾಗಬೇಕೆಂದು ಸುಮ್ಮನೆ ಚಿತ್ರರಂಗಕ್ಕೆ ಬರಲಿಲ್ಲ. ನೀನಾಸಂನಲ್ಲಿ ತರಬೇತಿ ಮಾಡಿಕೊಂಡಿರುವ ಧನಂಜಯ್‌ ಅವರಿಂದ ತರಬೇತಿ ಮಾಡಿಕೊಂಡ ನಂತರ ಕ್ಯಾಮೆರಾ ಮುಂದೆ ನಿಂತವನು. ಹೊಸಬರ ವಿಡಿಯೋ ಆಲ್ಬಂ ಗೀತೆಯನ್ನು ಮೂರು ಲಕ್ಷಕ್ಕೂ ಅಧಿಕ ಜನ ನೋಡಿದ್ದಾರೆ ಎಂದರೆ ಅದು ನಮಗೆ ದೊಡ್ಡ ಯಶಸ್ಸು. ನನ್ನಂಥ ಹೊಸಬನ ಪಾಲಿಗೆ ಬೆನ್ನೆಲುಬಾಗಿ ನಿಂತು ಹಾಡು ಬಿಡುಗಡೆ ಮಾಡಿದ್ದು ಪುನೀತ್‌ರಾಜ್‌ಕುಮಾರ್‌. ಅವರ ಪಿಆರ್‌ಕೆ ಯೂಟ್ಯೂಬ್‌ನಲ್ಲಿ ವಿಡಿಯೋ ಆಲ್ಬಂ ಬಿಡುಗಡೆ ಆಗಿರುವುದು ನನ್ನದೇ ಮೊದಲು’ ಎನ್ನುತ್ತಾರೆ ರಥ ಕಿರಣ್‌.

 

ಕುಂದಾಪುರದ ಸುಂದರ ನಿಸರ್ಗದಲ್ಲಿ ಚಿತ್ರೀಕರಣಗೊಂಡಿರುವ ಈ ಹಾಡು, ಪ್ರೇಮ ಅರಸಿ ಹೋಗುವ ಹುಡುಗನ ಖುಷಿಯನ್ನು ಕಟ್ಟಿಕೊಡುತ್ತಿದೆ. ಹಾಡಿನ ಅಂತ್ಯದಲ್ಲಿ ಸಿಹಿ ನೋವನ್ನೂ ಉಳಿಸುತ್ತದೆ. ಸಿಂಪಲ್‌ ಸುನಿ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಮನು ಶಂಕರ್‌ ಕ್ಯಾಮೆರಾದಲ್ಲಿ ಇಡೀ ಹಾಡು ಸುಂದರವಾಗಿ ಸೆರೆಯಾಗಿದೆ. ರಾಜೇಶ್‌ ಕೃಷ್ಣನ್‌ ಹಾಗೂ ಆಶಾ ಭಟ್‌ ಈ ಹಾಡಿಗೆ ಧ್ವನಿಯಾಗಿದ್ದಾರೆ. ಭರತ್‌ ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.