ನಾನು ಕನ್ನಡ ಕಲಿಯಲು ಪುನೀತ್ ರಾಜ್‌ಕುಮಾರ್ ಕಾರಣ. ಭಾಷೆ ಗೊತ್ತಿದ್ದರೆ ಸನ್ನಿವೇಶಗಳಲ್ಲಿ ಸುಲಭವಾಗಿ ನಟಿಸಲು ಸಾಧ್ಯವಾಗುತ್ತದೆ ಎಂದಿದ್ದರು. ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದರು ನಟಿ ಪ್ರಿಯಾ ಆನಂದ್.
‘ಚಿತ್ರಗಳ ಹಾಡಿನ ಹಿನ್ನೆಲೆಯಲ್ಲಿ ಮೌನವಿದ್ದರೆ ಹೆಚ್ಚು ಪರಿಣಾಮಕಾರಿ. ಬಲರಾಮನ ದಿನಗಳು ಚಿತ್ರದ ‘ಶುರು ಶುರು’ ಹಾಡಿನಲ್ಲಿ ಅಂಥಾ ಮೌನವಿದೆ. ಜೊತೆಗೆ ಪದಬಂಧ ಅಂದರೆ ಕ್ರಾಸ್‌ವರ್ಡ್‌ನ ಗುಣ ಇದೆ. ಈ ಪ್ರಯೋಗಶೀಲತೆ ಬಹಳ ಇಷ್ಟವಾಯಿತು’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದ್ದಾರೆ. ಕೆ.ಎಂ. ಚೈತನ್ಯ ನಿರ್ದೇಶನದ ‘ಬಲರಾಮನ ದಿನಗಳು’ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ಕಾಯ್ಕಿಣಿ ಮಾತನಾಡಿದರು. ‘ಶುರು ಶುರು’ ಹಾಡು ಟಿ ಸೀರೀಸ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ ಮಾಡಿದ್ದಾರೆ.
ನಿರ್ದೇಶಕ ಚೈತನ್ಯ, ‘ ಬಲರಾಮನ ದಿನಗಳು ಸಿನಿಮಾ ನನ್ನ ನಿರ್ದೇಶನದ ‘ಆ ದಿನಗಳು’ ಚಿತ್ರದ ಎರಡನೇ ಭಾಗ ಅಲ್ಲ. ಈ ಚಿತ್ರದ್ದು ಕಾಲ್ಪನಿಕ ಕಥೆ. ಹಾಡು ಬಿಡುಗಡೆ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದ್ದೇವೆ’ ಎಂದರು. ನಾಯಕ ನಟಿ ಪ್ರಿಯಾ ಆನಂದ್, ‘ನಾನು ಕನ್ನಡ ಕಲಿಯಲು ಪುನೀತ್ ರಾಜ್‌ಕುಮಾರ್ ಕಾರಣ. ಭಾಷೆ ಗೊತ್ತಿದ್ದರೆ ಸನ್ನಿವೇಶಗಳಲ್ಲಿ ಸುಲಭವಾಗಿ ನಟಿಸಲು ಸಾಧ್ಯವಾಗುತ್ತದೆ ಎಂದಿದ್ದರು. ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಬಲರಾಮನ ದಿನಗಳು ಚಿತ್ರ ಚೆನ್ನಾಗಿ ಬಂದಿದೆ’ ಎಂದರು.
ನನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಆಡಿಯೋ ಹಕ್ಕುಗಳಿಗೆ ಅತ್ಯುನ್ನತ ಆಫರ್ ಸಿಕ್ಕಿದೆ. ನನ್ನ 25 ಚಿತ್ರಗಳಲ್ಲಿ ಆಡಿಯೋ ಒಪ್ಪಂದ ಇಷ್ಟೊಂದು ದೊಡ್ಡದಾಗಿರುವುದು ಇದೇ ಮೊದಲು. ಈ ಪಾತ್ರ ಅದ್ಭುತವಾಗಿ ರೂಪುಗೊಂಡಿದೆ' ಎಂದು ನಾಯಕ ನಟ ವಿನೋದ್ ಪ್ರಭಾಕರ್ ಹೇಳಿದರು. ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಮುಂದಿನ ವರ್ಷ ಫೆಬ್ರುವರಿಯಲ್ಲಿ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಭಾರಿ ಬೆಲೆಗೆ ಆಡಿಯೋ ರೈಟ್ಸ್ ಮಾರಾಟ
ಟಿ-ಸೀರೀಸ್ ಆಡಿಯೋ ಹಕ್ಕುಗಳನ್ನು ಸ್ವತಂತ್ರ ಒಪ್ಪಂದವಾಗಿ ಪಡೆದುಕೊಂಡಿದೆ. ವರದಿ ಪ್ರಕಾರ, ಚಿತ್ರದ ಬಜೆಟ್‌ಗೆ ಹೋಲಿಸಬಹುದಾದ ಮೊತ್ತವನ್ನು ಪಾವತಿಸಲಾಗಿದೆ ಎನ್ನಲಾಗಿದೆ. 'ಇದು ಸಂತೋಷ್ ನಾರಾಯಣನ್ ಅವರ ಮೊದಲ ಕನ್ನಡ ಚಿತ್ರ ಮತ್ತು ಪ್ರತಿಕ್ರಿಯೆಯ ಬಗ್ಗೆ ನಮಗೆ ವಿಶ್ವಾಸವಿದೆ. ಮ್ಯೂಸಿಕ್ ಲೇಬಲ್ ಕಚ್ಚಾ ದೃಶ್ಯಗಳು ಮತ್ತು ಸಂಗೀತವನ್ನು ನೋಡಿದೆ ಮತ್ತು ಆಫರ್ ನಮ್ಮ ನಿರೀಕ್ಷೆಗಳನ್ನು ಮೀರಿದೆ. ಕನ್ನಡದಲ್ಲಿ ಆಡಿಯೋ ರೈಟ್ಸ್‌ಗೆ ಇಷ್ಟು ಹೆಚ್ಚಿನ ಒಪ್ಪಂದ ನಡೆದಿರುವುದು ಇದೇ ಮೊದಲು' ಎಂದು ಚಿತ್ರದ ನಿರ್ಮಾಪಕ ಶ್ರೇಯಸ್ ಹೇಳುತ್ತಾರೆ.


