'ನಾಗಮಂಡಲ', 'ಸೂರ್ಯವಂಶ' ಚಿತ್ರಗಳಲ್ಲಿ ನಟಿಸಿರುವ ವಿಜಯಲಕ್ಷ್ಮಿ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕಿಚ್ಚ ಸುದೀಪ್ ಇವರ ನೆರವಿಗೆ ಬಂದಿದ್ದಾರೆ. ಆದರೆ, ಸಂಕಷ್ಟದಲ್ಲಿರುವ ನಟಿ ಮತ್ತೆ ಹಣಕಾಸಿನ ನೆರವು ಬೇಕೆಂದು ಸಂಕಟ ತೋಡಿಕೊಂಡಿದ್ದಾರೆ.

 

ಕಷ್ಟ ಎಂದಾಗ ಬಲು ಬೇಗ ಸ್ಪಂದಿಸಿದ ಕಿಚ್ಚ ಸುದೀಪ್ ನಟಿ ವಿಜಯಲಕ್ಷ್ಮಿ ಅವರನ್ನು ಖುದ್ದು ಭೇಟಿಯಾಗಿ, 1 ಲಕ್ಷ ರೂ. ನೆರವು ನೀಡಿದರು. ಆದರೂ ಅರ್ಥಿಕ ಸಂಕಟಗಳಿಂದ ಹೊರ ಬರಲಾಗದ ನಟಿ, ಈ ಕಷ್ಟ ಕಾಲದಲ್ಲಿ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಅವರು ಇದ್ದಿದ್ದರೆ ನೆರವಿಗೆ ಬರುತ್ತಿದ್ದರೆಂದು, ಸ್ಮರಿಸಿಕೊಂಡಿದ್ದಾರೆ.

 

‘ನನ್ನ ಆರೋಗ್ಯ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಆದರೆ, ಮಾತ್ರೆಗಳನ್ನು ಬದಲಾಯಿಸಿದ ಕಾರಣ ಇನ್ನೂ ಸಮಯ ಬೇಕು. ಕೆಲಸದಲ್ಲಿ ತೊಡಗಿಕೊಳ್ಳಲು ಇನ್ನು ಸಮಯ ಬೇಕು. ನನ್ನ ಮನಸ್ಸಲ್ಲಿ ಒಂದು ಸಣ್ಣ ಕೊರಗಿದೆ. ಮಾಧ್ಯಮ ನನ್ನ ಕುಟುಂಬವಿದ್ದ ಹಾಗೆ. ನನಗೆ ವಾಸ ಮಾಡಲು ಮನೆಯೂ ಇಲ್ಲ. ಒಂದು ಮನೆ ಮಾಡಲೂ ಹಣವಿಲ್ಲ. ಸಹಾಯ ಮಾಡುತ್ತೇವೆ ಎಂದು ಒಂದು ಸಲ ಕಾಲ್ ಮಾಡುತ್ತಾರೆ. ಆದರೆ ಮತ್ತೊಮ್ಮೆ ಕಾಲ್ ಮಾಡಿದರೆ ಪಿಕ್ ಮಾಡುವುದಿಲ್ಲ..' ಎಂದು ಮನನೊಂದು ಮಾತನಾಡಿದ್ದಾರೆ.

 

'ಮನೆ ಇಲ್ಲದ ಕಾರಣ ಮನೆ ಊಟ ತಿನ್ನುತ್ತಿಲ್ಲ. ಅದರಿಂದಲೂ ನನ್ನ ಆರೋಗ್ಯ ಹದಗೆಡುತ್ತಿದೆ. ಸುದೀಪ್ ಸರ್ ಬಿಟ್ಟರೆ ಇನ್ನು ಯಾರೂ ನನ್ನ ಸಹಾಯಕ್ಕೆ ಬಂದಿಲ್ಲ. ಶಿವಣ್ಣ, ರಾಘಣ್ಣ, ಪುನೀತ್, ಯಶ್, ದರ್ಶನ್ ಯಾರೂ ಮಾತನಾಡಿಸಿಲ್ಲ,’ ಎಂದು ನೊಂದು, ವೀಡಿಯೋವೊಂದನ್ನು ರಿಲೀಸ್ ಮಾಡಿದ್ದಾರೆ.

"