ಬೆಂಗಳೂರು (ಮಾ. 14): ಪತಿಬೇಕು ಡಾಟ್ ಕಾಮ್ ಚಿತ್ರದ ಮೂಲಕ ಭರವಸೆಯ ನಿರ್ದೇಶಕರಾಗಿ ಹೊರ ಹೊಮ್ಮಿರುವವರು ರಾಕೇಶ್. ಈ ಸಿನಿಮಾ ಮೂಲಕ ನವಿರಾದ ಕಥೆ ಹೇಳಿದ್ದ ಶೈಲಿಗೆ ಜನ ಮಾರು ಹೋಗಿದ್ದರು. 

ಈ ಕಾರಣದಿಂದಲೇ ರಾಕೇಶ್ ಮುಂದೆ ಯಾವ ಚಿತ್ರವನ್ನು ನಿರ್ದೇಶನ ಮಾಡಬಹುದೆಂಬ ಬಗ್ಗೆಯೂ ಪ್ರೇಕ್ಷಕರು ಕಾತರ ಹೊಂದಿದ್ದರು. ಅದೀಗ ಜಾಹೀರಾಗಿದೆ! ರಾಕೇಶ್ ಅವರ ಮುಂದಿನ ಚಿತ್ರಕ್ಕೆ ಫ್ಯಾನ್ ಆಫ್ ರೆಬೆಲ್ ಸ್ಟಾರ್ ಎಂಬ ಟೈಟಲ್ ನಿಗಧಿಯಾಗಿದೆ.

ಹೆಸರೇ ಹೇಳುವಂತೆ ಇದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಭಿಮಾನಿಯೊಬ್ಬನ ಕಥೆ ಹೊಂದಿರೋ ಚಿತ್ರ. ಈ ಇಡೀ ಸಿನಿಮಾ ಅಂಬರೀಶ್ ಅವರ ಉಸಿರಿನಂತಿದ್ದ ಮಂಡ್ಯದ ಮಣ್ಣಲ್ಲಿಯೇ ನಡೆಯುತ್ತದೆ. ಅಲ್ಲಿಯೇ ಚಿತ್ರೀಕರಣ ಮಾಡಲೂ ರಾಕೇಶ್ ಯೋಜನೆ ಹಾಕಿಕೊಂಡಿದ್ದಾರೆ. ಆದರೆ ಈ ಸಿನಿಮಾದಲ್ಲಿ ಅಂಬಿ ಅಭಿಮಾನಿಯಾಗಿ ನಟಿಸುತ್ತಿರುವವರ್ಯಾರು ಎಂಬುದನ್ನು ಮಾತ್ರ ಗೌಪ್ಯವಾಗಿಟ್ಟಿದ್ದಾರೆ. 

ಅವರ್ಯಾರೆಂದು ಗೆಸ್ ಮಾಡೋ ಕೆಲಸವನ್ನು ಸದ್ಯಕ್ಕೆ ಜನರಿಗೇ ಬಿಟ್ಟಿದ್ದಾರೆ! ಈ ಚಿತ್ರದ ಹೀರೋ ಅಂಬರೀಶ್ ಆಪ್ತ ವಲಯದಲ್ಲಿದ್ದವರು ಅನ್ನೋದರ ಹೊರತಾಗಿ ಬೇರ್ಯಾವ ಸುಳಿವೂ ಇಲ್ಲ. ವಿಶೇಷ ಅಂದ್ರೆ ಈ ಸಿನಿಮಾವನ್ನು ಓರ್ವ ಉದ್ಯಮಿ ಸೇರಿದಂತೆ ಅಪ್ಪಟ ಅಂಬಿ ಅಭಿಮಾನಿಗಳೇ ಸೇರಿಕೊಂಡು ರೂಪಿಸುತ್ತಿದ್ದಾರೆ.

ಅಂಬರೀಶ್ ಅವರ ಅಂತಿಮ ದರ್ಶನ ನಡೆದಿದ್ದ ಮಂಡ್ಯ ಮೈದಾನದಲ್ಲಿಯೇ ಇದರ ಆರಂಭವಾಗಲಿದೆ. ಇದರ ಹೀರೋ ಯಾರೆಂಬುದರಿಂದ ಮೊದಲ್ಗೊಂಡು ಎಲ್ಲ ಮಾಹಿತಿಗಳನ್ನೂ ಕೂಡಾ ನಿರ್ದೇಶಕ ರಾಕೇಶ್ ಒಂದಾದ ಮೇಲೊಂದರಂತೆ ಜಾಹೀರು ಮಾಡಲಿದ್ದಾರೆ!