ಈ ಸಂಗತಿಯನ್ನು ಚಿತ್ರತಂಡ ಇದೀಗ ಬಹಿರಂಗಪಡಿಸಿದೆ. ಇಷ್ಟಕ್ಕೂ ‘ಅಮ್ಮನ ಮನೆ’ ಚಿತ್ರಕ್ಕೂ, ಸಿಂಗಾಪುರ್ ಪ್ರಧಾನಿಗೂ ಅದೇನು ನಂಟು? ಅವರಿಗ್ಯಾಕೆ ಈ ಸಿನಿಮಾದ ಮೇಲೆ ಪ್ರೀತಿ? ಅದಕ್ಕೆ ಕಾರಣ ರಾಘವೇಂದ್ರ ರಾಜ್‌ಕುಮಾರ್. 

ಈ ಹಿಂದೆ ರಾಘವೇಂದ್ರ ರಾಜ್‌ಕುಮಾರ್ ಅನಾರೋಗ್ಯಕ್ಕೊಳಗಾಗಿದ್ದ ಸಂದರ್ಭದಲ್ಲಿ ಚಿಕಿತ್ಸೆಗಾಗಿ ಸಿಂಗಾಪುರ್‌ಗೆ ತೆರಳಿದ್ದರು. ಆ ಸಂದರ್ಭದಲ್ಲಿ ಅವರು ಸುಮಾರು ನಾಲ್ಕೈದು ತಿಂಗಳ ಕಾಲ ಸಿಂಗಾಪುರ್‌ನಲ್ಲಿ ಉಳಿದುಕೊಂಡಿದ್ದರು. ಅವರೊಂದಿಗೆ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ಸೇರಿದಂತೆ ಕುಟುಂಬದವರು ಇದ್ದರು. ಈ ಸಂದರ್ಭದಲ್ಲಿ ಅಲ್ಲಿನ ಸಾಕಷ್ಟು ಮಂದಿ ಅನಿವಾಸಿ ಕನ್ನಡಿಗರು ರಾಘವೇಂದ್ರ ರಾಜ್‌ಕುಮಾರ್ ಅವರನ್ನು ಭೇಟಿ ಮಾಡಿ ಆರೋಗ್ಯ
ವಿಚಾರಿಸಿದ್ದರು. ಹಲವರ ಮೂಲಕ ರಾಘವೇಂದ್ರ ರಾಜ್‌ಕುಮಾರ್ ಅಲ್ಲಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ ಸಂಗತಿ ಸರ್ಕಾರದ ಮಟ್ಟಕ್ಕೂ ತಲುಪಿತ್ತು.

ಆ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿ ಶುಭ ಹಾರೈಸಿದ್ದ ಅಲ್ಲಿನ ಪ್ರತಿಯೊಬ್ಬರ ಜತೆಗೂ ರಾಘವೇಂದ್ರ ರಾಜ್‌ಕುಮಾರ್ ಈಗಲೂ ಒಳ್ಳೆಯ ಒಡನಾಟ ಹೊಂದಿದ್ದಾರೆ. ಅವರೆಲ್ಲರಿಗೂ ಈಗ ‘ಅಮ್ಮನ ಮನೆ’ ಚಿತ್ರ ಬಿಡುಗಡೆ ಆಗುತ್ತಿರುವ ಸಂಗತಿ ಗೊತ್ತಾಗಿದೆ. ಮಾರ್ಚ್ 8 ರಂದು ಚಿತ್ರ ಇಲ್ಲಿ ಬಿಡುಗಡೆ ಆದ ಮೂರ್ನಾಲ್ಕು ದಿನಗಳ ನಂತರ ಸಿಂಗಾಪುರದಲ್ಲೂ ತೆರೆ ಕಾಣುತ್ತಿದೆ. ಅದರ ಮೊದಲ ದಿನದ ಮೊದಲ ಪ್ರದರ್ಶನಕ್ಕೆ ಸಿಂಗಾಪುರ್ ಪ್ರಧಾನಿಗಳೇ ಮುಖ್ಯ ಅತಿಥಿ.

ರಾಘವೇಂದ್ರ ರಾಜ್‌ಕುಮಾರ್ ಸತತ 14 ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಿರುವ ಚಿತ್ರವಿದು. ರಾಜ್ಯಾದ್ಯಂತ ತೆರೆ ಕಂಡ ಮೂರ್ನಾಲ್ಕು ದಿನಗಳ ನಂತರ ಈ ಚಿತ್ರ ವಿದೇಶದಲ್ಲೂ ರಿಲೀಸ್ ಆಗುತ್ತಿದೆ. ಆಸ್ಟ್ರೇಲಿಯಾ, ಅಮೆರಿಕ, ಕೆನಡಾದ ಹಲವೆಡೆಗಳಲ್ಲಿ ಚಿತ್ರ ರಿಲೀಸ್ ಆಗುವುದು ಗ್ಯಾರಂಟಿ ಆಗಿದೆ. ಹಾಗೆಯೇ ಸಿಂಗಾಪುರ್ದಲ್ಲೂ ತೆರೆ ಕಾಣುತ್ತಿದೆ.