ಆಪ್ತ ಗೆಳೆಯರು ಹಾಗೂ ಚಿತ್ರರಂಗದ ಸಹೋದ್ಯೋಗಿಗಳನ್ನು ಕಳೆದುಕೊಂಡ ಸ್ಯಾಂಡಲ್‌ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಈ ವರ್ಷ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದಾರೆ.
ಕೊರೋನಾ ವೈರಸ್ ಮೊದಲನೇ ಅಲೆ ಆರಂಭವಾದಾಗಿನಿಂದಲೂ ಸ್ಟಾರ್ ನಟ-ನಟಿಯರು ಅಭಿಮಾನಿಗಳ ಜೊತೆ ಅದ್ಧೂರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕುತ್ತಿದ್ದಾರೆ. ಜುಲೈ 2ರಂದು ಗಣೇಶ್ ಹುಟ್ಟುಹಬ್ಬವಿದ್ದು, ಪತ್ರದ ಮೂಲಕ ಆಚರಣೆ ಬೇಡವೆಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
14 ವರ್ಷವಾದರೂ ಐಶು- ಮಾದೇಶ ಇನ್ನೂ ಎವರ್ ಗ್ರೀನ್!
'ಎಲ್ಲರಿಗೂ ನಿಮ್ಮ ಗಣೇಶ್ ಮಾಡುವ ನಮಸ್ಕಾರಗಳು. ಮೊದಲಿಗೆ ನನಗೆ ಅರಿವಿದ್ದೋ, ಅರಿವಿಲ್ಲದೆಯೋ ಈ ಕೋವಿಡ್ ಸಮಯದಲ್ಲಿ ನನ್ನ ಹೆಸರಿನಲ್ಲಿ ಮಾಡಿರುವ ಕೆಲಸಗಳಿಗೆ ನಿಮಗೆ ಪ್ರಣಾಮಗಳು. ಈ ಮೂಲಕ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಪ್ರತಿ ವರ್ಷವೂ ನನ್ನ ಜನ್ಮದಿನವನ್ನು ಹಬ್ಬದಂತೆ ಆಚರಿಸಿ ಆಶೀರ್ವದಿಸುತ್ತಾ ಬಂದಿರುವಿರಿ. ಆದರೆ ಈ ವರ್ಷ ಆಚರಣೆ ಬೇಡ ಎಂದು ನಿರ್ಧರಿಸಿರುವೆ,' ಎಂದು ಗಣೇಶ್ ಬರೆದುಕೊಂಡಿದ್ದಾರೆ.
'ಈ ವರ್ಷ ಕೊರೋನಾ ಮಹಾಮಾರಿಯ ಆರ್ಭಟಕ್ಕೆ ಸಿಲುಕಿ ನನ್ನ ಹಲವು ಸಿನಿಮಾ ಸಹೋದ್ಯೋಗಿಗಳು, ಆತ್ಮೀಯರು, ಗೆಳೆಯರು ಬಲಿಯಾಗಿರುವುದು ನೋವು ತರಿಸಿದೆ. ಅದೆಷ್ಟೋ ಜನರ ಜೀವನ ನಲುಗಿ ಹೋಗಿದೆ. ಇಷ್ಟೆಲ್ಲಾ ನೋವುಗಳ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಸಮಯವಲ್ಲವೆಂದಿನಿಸಿ ಈ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ಇಚ್ಚಿಸಿರುತ್ತೇನೆ. ಅಲ್ಲದೇ ಜನ್ಮ ದಿನದಂದು ನಾನು ಹೊರಾಂಗಣ ಚಿತ್ರೀಕರಣಲ್ಲಿ ತೊಡಗಿರುತ್ತೇನೆ. ಪ್ರತಿ ವರ್ಷವೂ ಪ್ರೀತಿಯಿಂದ ಹುಟ್ಟು ಹಬ್ಬ ಆಚರಣೆಗೆ ನೀವು ಪ್ರೀತಿಯಿಂದ ತರುವ ಕೇಕ್, ಹಾರ, ಉಡುಗೊರೆ ಮುಂತಾದವುಗಳಿಗಾಗಿ ಈ ವರ್ಷ ಹಣ ವ್ಯಯಿಸದೇ, ಅದೇ ಖರ್ಚಿನ ಮೊತ್ತವನ್ನು ಕೊರೋನಾ ಸಂಕಷ್ಟದಲ್ಲಿರುವ ಮತ್ತಷ್ಟು ಜೀವಗಳಿಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಅದೇ ನನಗೆ ಶ್ರೀರಕ್ಷೆ,' ಎಂದು ಗಣೇಶ್ ತಿಳಿಸಿದ್ದಾರೆ.
