ಬೆಂಗಳೂರು (ಮಾ. 20): ಕಿರಣ್‌ರಾಜ್ ನಿರ್ದೇಶನದ, ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಚಿತ್ರಕ್ಕೆ ಇಬ್ಬರು ಪುಟಾಣಿಗಳು ಸೇರಿಕೊಂಡಿದ್ದಾರೆ. ಅದರಲ್ಲಿ ಒಬ್ಬಳು ಶಾರ್ವರಿ. ಏಳು ವರ್ಷ ವಯಸ್ಸಿನ ಈ ಹುಬ್ಬಳ್ಳಿ ಹುಡುಗಿ ಡ್ರಾಮ ಜೂನಿಯರ್ಸ್ ರಿಯಾಲಿಟಿ ಶೋದಲ್ಲಿ ಜನಪ್ರೀತಿ ಗಳಿಸಿಕೊಂಡಿದ್ದಳು.

ಇನ್ನೊಬ್ಬಳು ಬೆಂಗಳೂರಿನ ಪ್ರಾಣ್ಯ ಪಿ. ರಾವ್. ಡಬ್‌ಸ್ಯ್ಮಾಶ್ ಆ್ಯಪ್ ಮೂಲಕವೇ ತನ್ನ ಪ್ರತಿಭಾ ಪ್ರದರ್ಶನ ಮಾಡಿದೆ ಬಾಲೆ. ಆಕೆಯ ಡಬ್‌ಸ್ಮ್ಯಾಶ್ ವಿಡಿಯೋ ನೋಡಿದ ನಿರ್ದೇಶಕ ಕಿರಣ್‌ರಾಜ್ ಮೆಚ್ಚಿಕೊಂಡು ಆಡಿ ನ್ ನಡೆಸಿ ಆಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಚಾರ್ಲಿ ಚಿತ್ರದಲ್ಲಿ ಚಾರ್ಲಿ ಎಂಬ ನಾಯಿಯೇ ಪ್ರಮುಖ ಪಾತ್ರಧಾರಿ. ಆ ಚಾರ್ಲಿಯ ಜೊತೆಗೆ ರಕ್ಷಿತ್ ಶೆಟ್ಟಿ, ಶಾರ್ವರಿ, ಪ್ರಾಣ್ಯ ಎಲ್ಲರ ಪಯಣವೂ ಸಾಗುತ್ತದೆ. ಅದರಲ್ಲಿ ಪ್ರಾಣ್ಯ ಬಾಲ್ಯದಲ್ಲಿ ರಕ್ಷಿತ್ ಶೆಟ್ಟಿಯವರ ತಂಗಿ ಪಾತ್ರದಲ್ಲಿ ನಟಿಸುತ್ತಿದ್ದಾಳೆ.

ಶಾರ್ವರಿ ಮುಂದೆ ರಕ್ಷಿತ್ ಶೆಟ್ಟಿ ಪಯಣದಲ್ಲಿ ಜತೆಯಾಗುತ್ತಾಳೆ. ಈ ಇಬ್ಬರದೂ ಪ್ರಮಖ ಪಾತ್ರಗಳು ಎನ್ನುತ್ತಾರೆ ನಿರ್ದೇಶಕರು. ಸದ್ಯ ರಕ್ಷಿತ್ ಶೆಟ್ಟಿ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಕಡೆಯ ಕೆಲವು ದಿನಗಳ ಚಿತ್ರೀಕರಣ ಬಾಕಿ ಇದೆ. ಅದನ್ನು ಮುಗಿಸಿಕೊಂಡು ‘777 ಚಾರ್ಲಿ’ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಇದೇ ತಿಂಗಳಾಂತ್ಯಕ್ಕೆ ಮೈಸೂರಿನಲ್ಲಿ ಮತ್ತೊಂದು ಹಂತದ ಚಿತ್ರೀಕರಣ ಶುರುವಾಗಲಿದೆ.

ಮೈಸೂರಿನ ನಂತರ ಚಿತ್ರತಂಡ ಉತ್ತರ ಭಾರತ ಪ್ರವಾಸ ಹೊರಡಲಿದೆ. ಈ ಚಿತ್ರವನ್ನು ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಿಸುತ್ತಿದ್ದಾರೆ.

ಚಾರ್ಲಿ ಮುದ್ದಿನ ನಾಯಿ. ಅದರ ಜೊತೆ ಚಿತ್ರೀಕರಣ ನಡೆಸುವುದು ತ್ರಾಸದಾಯಕ ಮತ್ತು ಅಷ್ಟೇ ಖುಷಿ ಕೂಡ. ಈಗ ಇಬ್ಬರು ಪುಟಾಣಿಗಳು ಚಿತ್ರತಂಡ ಸೇರಿಕೊಂಡಿದ್ದಾರೆ. ರಕ್ಷಿತ್ ಕೆಲವೇ ದಿನಗಳಲ್ಲಿ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಬೇಗ ಚಿತ್ರೀಕರಣ ಮುಗಿಸಿ ಡಿಸೆಂಬರ್‌ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂಬ ಆಸೆ ಇದೆ.

- ಕಿರಣ್‌ರಾಜ್