ರಕ್ಷಿತ್ ಶೆಟ್ಟಿ ಅಭಿಯನದ ಚಾರ್ಲಿ 777 ಸಿನಿಮಾ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಚಾರ್ಲಿ ಸಿನಿಮಾ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಿದ ಸಿಎಂ ಬೊಮ್ಮಾಯಿ
ಬೆಂಗಳೂರು(ಜೂ.18): ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಚಾರ್ಲಿ 777 ಸಿನಿಮಾಗೆ ಬಂಪರ್ ಗಿಫ್ಟ್ ಸಿಕ್ಕಿದೆ. ರಕ್ಷಿತ್ ಶೆಟ್ಟಿ ಅಭಿಯನದ ಚಾರ್ಲಿ 777 ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಈ ಮೂಲಕ ದಿ ಕಾಶ್ಮೀರ್ ಫೈಲ್ಸ್ ಚಿತ್ರದ ಬಳಿಕ ರಾಜ್ಯದಲ್ಲಿ ತೆರಿಗೆ ವಿನಾಯಿತಿ ಪಡೆದ ಎರಡನೇ ಚಿತ್ರ ಇದಾಗಿದೆ. ಸಿಎಂ ಬೊಮ್ಮಾಯಿ ರಾಜ್ಯದ ಜಿಎಸ್‌ಟಿ ಪಾಲಿನಿಂದ ವಿನಾಯಿತಿ ನೀಡಿದ್ದಾರೆ.
ಶ್ವಾನ ಪ್ರೀಯ ಬೊಮ್ಮಾಯಿ ಖುದ್ದು ಈ ಚಿತ್ರವನ್ನು ವೀಕ್ಷಿಸಿದ್ದರು. ಬಳಿಕ ಮಾತನಾಡಿದ್ದ ಸಿಎಂ ಬೊಮ್ಮಾಯಿ ತಮ್ಮ ಮುದ್ದಿನ ಶ್ವಾನವನ್ನು ನೆನೆದು ಭಾವುಕರಾಗಿದ್ದರು. ಚಿತ್ರ ವೀಕ್ಷಿಸಿದ ಬಳಿಕ ಎಲ್ಲರೂ ಈ ಚಿತ್ರ ವೀಕ್ಷಿಸಲು ಮನವಿ ಮಾಡಿದ್ದರು.
ನಾಯಿ ಮತ್ತು ಮನುಷ್ಯ ಪ್ರೀತಿಯನ್ನು ಅನಾವರಣಗೊಳಿಸಿರುವ ಚಾರ್ಲಿ 777 ಕನ್ನಡ ಸಿನಿಮಾವನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಮನೆಯಲ್ಲಿದ್ದ ಪ್ರೀತಿಯ ನಾಯಿ ‘ಸನ್ನಿ’ಯನ್ನು ನೆನೆದು ಭಾವುಕರಾಗಿ ದುಃಖ ತಡೆಯಲಾಗದೆ ಕಣ್ಣೀರು ಹಾಕಿದ್ದರು. ಮುಖ್ಯಮಂತ್ರಿಗಳು ಒರಾಯನ್ ಮಾಲ್‌ನಲ್ಲಿನ ಪಿವಿಆರ್ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದರು. ಈ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ್ದರು. ‘ಮನುಷ್ಯ ಮತ್ತು ನಾಯಿಯ ನಡುವಿನ ಪ್ರೀತಿ, ಯಾವುದೇ ಕಟ್ಟುಪಾಡಿಲ್ಲದ ಪ್ರೀತಿಗೆ ನಿದರ್ಶನ. ಅತ್ಯಂತ ಪರಿಶುದ್ಧ ಪ್ರೀತಿ ಇದು’ ಎಂದು ಗದ್ಗದಿತರಾಗಿ ನುಡಿದ್ದರು.
‘ನಿರ್ದೇಶಕ ಕಿರಣ್ ಮನೋಜ್ಞ ಕಥೆಯನ್ನು ಚಿತ್ರಿಸಿದ್ದಾರೆ. ಜತೆಗೆ ನಟ ರಕ್ಷಿತ್ ಶೆಟ್ಟಿಮನೋಜ್ಞವಾಗಿ ನಟಿಸಿದ್ದಾರೆ. ನಾಯಿ ಜತೆಗೆ ಪಾತ್ರ ಮಾಡುವುದು ಸುಲಭದ ಮಾತಲ್ಲ. ಅದರ ಭಾವನೆಯ ಮಟ್ಟಕ್ಕೆ ಹೋಗಿ ಪಾತ್ರ ನಿಭಾಯಿಸಬೇಕಾಗುತ್ತದೆ. ರಕ್ಷಿತ್ ಶೆಟ್ಟಿಆ ಕೆಲಸವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ರÜಕ್ಷಿತ್ ಶೆಟ್ಟಿಮತ್ತು ನಿರ್ದೇಶಕ ಕಿರಣ್ ಅದ್ಭುತ ಸಿನಿಮಾ ಮಾಡಿದ್ದಾರೆ’ ಎಂದು ಪ್ರಶಂಸಿಸಿದರು.
‘ಕನ್ನಡ ಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದ ಸಾಧನೆಯನ್ನು ಮಾಡುತ್ತಿದೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ. ಕೆಜಿಎಫ್2 ಹಿನ್ನೆಲೆಯಲ್ಲಿ ಒಂದು ಅರ್ಥಪೂರ್ಣ, ಮನೋಜ್ಞವಾಗಿರುವ ಚಿತ್ರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಬಹುದು ಎಂದು ನಿರೂಪಿಸಿದ್ದಾರೆ. ಚಾರ್ಲಿ ಚಿತ್ರ ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆದಿದೆ. ಚಿತ್ರವನ್ನು ಎಲ್ಲರೂ ವೀಕ್ಷಿಸಿ ಪ್ರಾಣಿಗಳ ಪ್ರೇಮಿಗಳಾಗಬೇಕು’ ಎಂದು ಕರೆ ನೀಡಿದರು.
‘ಈ ಸಿನಿಮಾ ನೋಡಲು ಜನರ ದಟ್ಟಣೆಯಿದೆ ಎಂಬ ಮಾಹಿತಿ ದೊರೆತಾಗ ಪ್ರಾಣಿ ಮತ್ತು ಮನುಷ್ಯನ ಸಂಬಂಧ ಇರುವ ಚಿತ್ರ ನೋಡಬೇಕು ಎಂದು ಅನಿಸಿತ್ತು. ಇದೇ ವೇಳೆ ರಕ್ಷಿತ್ ಶೆಟ್ಟಿಅವರು ಸಹ ಚಿತ್ರ ವೀಕ್ಷಣೆಗೆ ಆಹ್ವಾನಿಸಿದರು. ಹೀಗಾಗಿ ಚಿತ್ರ ನೋಡಿದಂತಾಯಿತು’ ಎಂದರು.
