‘ದಿ ವಿಲನ್‌’ ಚಿತ್ರದ ನಂತರ ಪ್ರೇಮ್‌ ಎಲ್ಲಿ ಹೋದರು ಎಂದು ಹುಡುಕುತ್ತಿದ್ದವರಿಗೆ ಉತ್ತರ ಸಿಕ್ಕಿದೆ. ಅವರು ರಕ್ಷಿತಾ ಪ್ರೇಮ್‌ ಸಹೋದರ ಅಭಿಷೇಕ್‌ ರಾವ್‌ ಹೀರೋ ಆಗಿ ನಟಿಸುತ್ತಿರುವ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮಾರ್ಚ್ 31ಕ್ಕೆ ಈ ಚಿತ್ರ ಮುಹೂರ್ತ ಫಿಕ್ಸ್‌ ಎನ್ನಲಾಗಿದೆ.

ಇಷ್ಟಕ್ಕೂ ಅಂದೇ ಆ ಚಿತ್ರದ ಮುಹೂರ್ತಕ್ಕೆ ದಿನ ನಿಗದಿ ಆಗಿರುವುದಕ್ಕೂ ಕಾರಣವಿದೆ. ಸುಂಟರಗಾಳಿ ನಟಿ ರಕ್ಷಿತಾ ಅವರಿಗೆ ಮಾಚ್‌ರ್‍ 31 ಹುಟ್ಟುಹಬ್ಬ. ಹಾಗಾಗಿ ಸಹೋದರ ಅಭಿಷೇಕ್‌ ಬೆಳ್ಳಿತೆರೆ ಪ್ರವೇಶಕ್ಕೆ ಕಾರಣವಾಗುತ್ತಿರುವ ಪ್ರೇಮ್‌ ನಿರ್ದೇಶನದ ಚಿತ್ರಕ್ಕೆ ಅಂದೇ ಮುಹೂರ್ತ ನಡೆಯಲಿದೆ. ಅಭಿಷೇಕ್‌ ರಾವ್‌ ಈಗಾಗಲೇ ಬಣ್ಣ ಹಚ್ಚಿದ್ದು ಆಗಿದೆ. ‘ವಿಲನ್‌’ ಚಿತ್ರದಲ್ಲಿನ ಒಂದು ಹಾಡಿನಲ್ಲೂ ಕಾಣಿಸಿಕೊಂಡಿದ್ದರು. ಆದರೂ ಗ್ರಾಂಡ್‌ ಆಗಿಯೇ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಬೇಕೆನ್ನುವ ಆಸೆ ರಕ್ಷಿತಾ ಅವರಿಗೂ ಇದೆ. ಹಾಗಾಗಿ ಆ ಚಿತ್ರಕ್ಕೆ ಅವರೇ ನಿರ್ಮಾಪಕರು. ಈಗಾಗಲೇ ಅವರು ಹೇಳಿಕೊಂಡಂತೆ ಅದ್ಧೂರಿಯಾಗಿ ಆ ಚಿತ್ರ ಮೂಡಿ ಬರಲಿದೆಯಂತೆ.