ಬಾಲಣ್ಣ ಕುಟುಂಬ ಅವಮಾನಿಸಿದೆ, ಅಮ್ಮ ಕಣ್ಣೀರು ಸುರಿಸಿದ್ದಾರೆ; ಬೇಸರ ಹೊರಹಾಕಿದ ನಟ ಅನಿರುದ್ಧ್
ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ತೆರುವು ಮಾಡಲಾಗಿತ್ತಾ? ಎನ್ನುವ ಗೊಂದಲದ ಬಗ್ಗೆ ಅನಿರುದ್ಧ್ ಪ್ರತಿಕ್ರಿಯೆ ನೀಡಿದ್ದಾರೆ. ಬಾಲಣ್ಣ ಕುಟುಂಬ ಅವಮಾನ ಮಾಡಿದೆ, ಅಮ್ಮ ತುಂಬಾ ಕಣ್ಣೀರು ಸಿರಿಸಿದ್ದಾರೆ ಎಂದು ಅನಿರುದ್ಧ ಬೇಸರ ಹೊರಹಾಕಿದ್ದಾರೆ.
ವಿಷ್ಣುದಾದ, ಸಾಹಾಸಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮಾರಕ ಕೊನೆಗೂ ಉದ್ಘಾಟನೆಯಾಗುತ್ತಿದೆ. ಸಾಕಷ್ಟು ವಿವಾದಗಳ ಬಳಿಕ ಡಾ. ವಿಷ್ಣುವರ್ಧನ್ ಸ್ಮಾರಕ ಮೈಸೂರಿನಲ್ಲಿ ಉದ್ಘಾಟನೆಯಾಗುತ್ತಿದೆ. ಈ ಸಮಯದಲ್ಲಿ ನಟ, ವಿಷ್ಣುವರ್ಧನ್ ಅಳಿಯ ಅನಿರುದ್ಧ ಹಾಕಿದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿ ಬಗ್ಗೆ ಮಾತನಾಡಿದ್ದಾರೆ. ಅಭಿಮಾನ್ ಸ್ಟುಡಿಯೋದ ವಿಷ್ಣು ಸಮಾಧಿ ಜಾಗ ಈಗ ಕೋರ್ಟ್ ನಲ್ಲಿದೆ. ಈ ಬಗ್ಗೆ ಅನಿರುದ್ಧ ಬಹಿರಂಗ ಪಡಿಸಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸಮಾಧಿ ತೆರುವು ಮಾಡಲಾಗಿತ್ತಾ?
ಬಾಲಣ್ಣ ಕುಟುಂಬ ಈ ಬಗ್ಗೆ ನೀಡಿದ್ದ ಹೇಳಿಕೆ ವಿರುದ್ಧ ಅನಿರುದ್ಧ ಬೇಸರ ಹೊರಹಾಕಿದ್ದಾರೆ. 'ಕೇವಲ 200 ಜನ ಅಭಿಮಾನಿಗಳು ಮಾತ್ರ ಸೇರುತ್ತಾರೆ ಎಂದು ಹೇಳಿದ್ದಾರೆ. ವಿಷ್ಣುವರ್ಧನ್ ಅವರ ಹುಟ್ಟುಹಬ್ಬ ಹಾಗೂ ಪುಣ್ಯತಿಥಿ ಆಚರಿಸಲು ಅವಕಾಶ ಮಾಡಿ ಕೊಡಬೇಡಿ ಎಂದು ಭಾರತಿ ಅಮ್ಮ ಫೋನ್ ಮಾಡಿ ಹೇಳಿದ್ದಾರೆ ಅಂತ ಹೇಳಿದ್ರಂತೆ. ನ್ಯಾಯಾಲಯವು ಕುಟುಂಬದ ಅನುಮತಿ ಇದ್ದಲ್ಲಿ ಬಾಲಣ್ಣ ಕುಟುಂಬದವರು ಸಮಾಧಿ ತೆರವು ಗೊಳಿಸಬಹುದು ಎಂದು ಹೇಳಿದೆ. ಆದರೆ ನಮ್ಮ ಅನುಮತಿ ಯಾಕೆ, ಆ ಜಾಗ ಬಾಲಣ್ಣ ಅವರದ್ದು. ಅನುಮತಿ ಕೊಡಬೇಕಾಗಿದ್ದು ಬಾಲಣ್ಣ ಕುಟುಂಬ. 2016ರಿಂದ ಅಭಿಮಾನಿಗಳು ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆ ಆಚರಣೆ ಮಾಡಿಕೊಂಡು ಬಂದಿದ್ದಾರೆ. ನಮ್ಮ ಅಭ್ಯಂತರ ಇರಲಿಲ್ಲ, ಇರುವುದಿಲ್ಲ. ಹಾಗಿದ್ದ ಮೇಲೆ ನಮ್ಮ ಅನುಮತಿ ಯಾಕೆ' ಎಂದು ಅನಿರುದ್ಧ್ ಪ್ರಶ್ನೆ ಮಾಡಿದ್ದಾರೆ.
ಅಮ್ಮ ತುಂಬಾ ಅವಮಾನ ಎದುರಿಸಿದ್ದಾರೆ, ಕಣ್ಣೀರು ಸುರಿಸಿದ್ದಾರೆ
'ಕೇವಲ 200 ಜನ ಮಾತ್ರ ಬರ್ತಾರೆ ಅಂತ ಹೇಳಿದ್ರು, ಆದರೆ ಕಟೌಟ್ ಜಾತ್ರೆ ಮಾಡಿದಾಗ ಅಪಾರ ಸಂಖ್ಯೆಯ ಅಭಿಮಾನಿಗಳು ಬಂದಿದ್ದರು. ಪೊಲೀಸ್ ಹೇಳಿಕೆ ಪ್ರಕಾರ ಎರಡು ಕಾಲು ಲಕ್ಷ ಜನ ಬಂದಿದ್ದರು. ಸಾವಿರಾರು ಜನ ಬರ್ತಾರೆ. 200 ಜನ ಎಲ್ಲಿ. ಇಲ್ಲಿ ಆಗಬಾರದು ಅಂತ ಅಮ್ಮ ಯಾಕೆ ಹೇಳುತ್ತಾರೆ. ಅವರ ವ್ಯಕ್ತಿತ್ವ ಗೊತ್ತಿಲ್ವಾ, ಅವರ ಯಜಮಾನರ ಬಗ್ಗೆ ಇರುವ ಪ್ರೀತಿ, ಗೌರವ ಯಾರಿಗೂ ಇಲ್ಲ. ಅವರು ತುಂಬಾ ನೊಂದಿದ್ದಾರೆ. ಬೆಂಗಳೂರಿನಲ್ಲೇ ಆಗಬೇಕೆಂದು 6 ವರ್ಷಗಳ ಕಾಲ ಹೋರಾಡಿದ್ದಾರೆ. ಬಾಲಣ್ಣ ಕುಟುಂಬದ ಮುಂದೆ ಕಣ್ಣೀರು ಸುರಿಸಿದ್ದಾರೆ, ಅವಮಾನ ಎದುರಿಸಿದ್ದಾರೆ. ಇಲ್ಲಿ ಆಗೋದೆ ಇಲ್ಲ ಎಂದು ಗೊತ್ತಾದ ಮೇಲೆ ಸರ್ಕಾರನೇ ಹೇಳಿತು. ಇಲ್ಲಿ ಆಗಲ್ಲ ಬೇರೆ ಕಡೆ ಹೋಗಿ ಅಂತ. ಬಳಿಕ ಮೈಸೂರಿಗೆ ಹೋದೆವು' ಎಂದು ಹೇಳಿದರು.
ಜನವರಿ 29ಕ್ಕೆ ಲೋಕಾರ್ಪಣೆ
ಇದೇ ತಿಂಗಳು ಜನವರಿ 29ರಂದು ಸ್ಮಾರಕ ಲೋಕಾರ್ಪಣೆ ಆಗುತ್ತಿದೆ. ಮುಖ್ಯಮಂತ್ರಿ ಅವರೇ ಲೋಕಾರ್ಪಣೆ ಮಾಡುತ್ತಿದ್ದಾರೆ. ಎಲ್ಲಾ ಅಭಿಮಾನಿಗಳು ಬನ್ನಿ. ಅವರ ಚಿತಾಭಸ್ಮವನ್ನು ಪ್ರತಿಷ್ಠಾಪನೆ ಮಾಡಿ ವಿಷ್ಣುವರ್ಧನ್ ಪ್ರತಿಮೆ ಸ್ಥಾಪಿಸಲಾಗಿದೆ. ಅಪ್ಪ ಅವರು ಅಲ್ಲಿ ಇರುತ್ತಾರೆ. ಅವರಿಗೆ ತುಂಬಾ ಇಷ್ಟವಾದ ಊರು. ಸ್ಮಾರಕವನ್ನು ಅವರೇ ಮಾಡಿಸಿದ್ದು' ಎಂದು ಅನಿರುದ್ಧ ಹೇಳಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲೂ ಅಭಿಮಾನಿಗಳಿಗೆ ಅವಕಾಶ ಕೊಡಿ
'ಅಭಿಮಾನ್ ಸ್ಟುಡಿಯೋದ ಬಗ್ಗೆ ಬಾಲಣ್ಣ ಕುಟುಂಬದವರಿಗೆ ಎರಡು ಸಮಯದಲ್ಲಿ ಹುಟ್ಟುಹಬ್ಬ ಮತ್ತು ಪುಣ್ಯತಿಥಿ ಸಮಯದಲ್ಲಿ ಅಭಿಮಾನಿಗಳಿಗೆ ಅವಕಾಶ ಕೊಡಿ ಎಂದು ಕೇಳಿಕೊಳ್ಳುತ್ತೇನೆ. ಆ ಜಾಗ ಇರುವುದು ಬಾಲಣ್ಣ ಕುಟುಂಬದವರದ್ದು. ಹಾಗಾಗಿ ಅವರು ಅನುಮತಿ ಕೊಟ್ಟರೆ ಅಲ್ಲಿ ಅವಕಾಶ ಸಿಗುತ್ತದೆ' ಎಂದು ಹೇಳಿದರು.