ಆಬ್ರಕಡಾಬ್ರದ ಏಕೈಕ ಸ್ಟಾರ್ ಅನಂತನಾಗ್: ಶಿಶಿರ್ ರಾಜಮೋಹನ್
ರಕ್ಷಿತ್ ಶೆಟ್ಟಿನಿರ್ಮಾಣದ ಆಬ್ರಕಡಾಬ್ರ ಚಿತ್ರದ ನಿರ್ದೇಶಕ ಶಿಶಿರ್ ರಾಜಮೋಹನ್ ಜತೆ ನಾಲ್ಕು ಮಾತು.
ನಿಮ್ಮ ಹಿನ್ನಲೆ ಏನು ?
ಆರ್ ವಿ ಇಂಜನಿಯರಿಂಗ್ ಕಾಲೇಜಿನಲ್ಲಿ ಎಂಜನಿಯರಿಂಗ್ ಮುಗಿಸಿ ಟಿಸಿಎಸ್ ಕಂಪನಿಯಲ್ಲಿ ನಾಲ್ಕು ವರ್ಷ ಕೆಲಸ ಮಾಡಿದೆ. ನಂತರ ಸ್ನೇಹಿತರೊಂದಿಗೆ ಮಲ್ಟಿಮೀಡಿಯಾ ಕಂಪನಿಯೊಂದನ್ನು ಕಟ್ಟಿ, ಕಾರ್ಪೋರೇಟ್ ಕಂಪನಿಗಳಿಗೆ ಆ್ಯಡ್, ಗ್ರಾಫಿಕ್ ಡಿಸೈನ್ ಮಾಡುತ್ತಿದ್ದೆ. ನಂತರ ಕಿರುಚಿತ್ರಗಳ ನಿರ್ಮಾಣ ನಿರ್ದೇಶನ ಮಾಡಿ ಈಗ ‘ಆಬ್ರಕಡಾಬ್ರ’ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕನಾಗುತ್ತಿದ್ದೇನೆ.
ಆಬ್ರಕಡಾಬ್ರ ಸಿನಿಮಾಗೆ ಸ್ಫೂರ್ತಿ ಏನು ? ಈ ಕತೆ ನಿಮ್ಮಲ್ಲಿ ಬೆಳೆದ ಬಗೆ ಬಗ್ಗೆ ಹೇಳಿ.
ನಾನು ಪಿಯುಸಿ ಮುಗಿಸಿ ಉಡುಪಿ ಬಿಟ್ಟು ಬೆಂಗಳೂರಲ್ಲಿ ಓದು ಉದ್ಯೋಗದಲ್ಲಿ ತೊಡಗಿಕೊಂಡು ಹತ್ತು ವರ್ಷದ ಬಳಿಕ ಊರಿಗೆ ವಾಪಾಸು ಬಂದಾಗ ನಾನು ನೋಡಿದಾಗ ಉಡುಪಿ ಸಂಪೂರ್ಣ ಬದಲಾಗಿತ್ತು. ನಾನಿದ್ದ ಪರಿಸರ ಪಾತ್ರಗಳು ನನಗೇ ಅಪರಿಚಿತ ಅನ್ನಿಸುವಂತ ಕ್ಷಣಗಳಲ್ಲಿ ಈ ಕತೆ ಬೆಳೆಯುತ್ತಾ ಹೋಯಿತು. ಒಂದು ಸಣ್ಣ ಪರಿಸರದಲ್ಲಿರುವ ಜನರನ್ನ ಧರ್ಮ, ರಾಜಕೀಯದ ಸುಳಿಯಲ್ಲಿ ಸಿಲುಕಿಸಿ ಪಾತ್ರಗಳಾಗಿಸುವ ಈ ಕತೆ ಇವತ್ತಿನ ಜಗತ್ತಿನ ಕತೆಯನ್ನ ಹೇಳುತ್ತದೆ ಎಂಬ ನಂಬಿಕೆ ನನಗಿದೆ.
ನಿಮ್ಮ ಮತ್ತು ರಕ್ಷಿತ್ ಒಡನಾಟದ ಬಗ್ಗೆ ಹೇಳಿ.
ರಕ್ಷಿತ್ ನನಗೆ ‘ಸಿಂಪಲ್ಲಾಗೊಂದು ಲವ್ ಸ್ಟೋರಿ’ಗಿಂತ ಮೊದಲೇ ಪರಿಚಯ. ಈ ಕತೆಯನ್ನ ಕಿರುಚಿತ್ರದ ಶೈಲಿಯಲ್ಲಿ ಬರೆದುಕೊಂಡು ಹೋದಾಗ ಇದಕ್ಕೆ ಪೂರ್ಣ ಪ್ರಮಾಣದ ಸಿನಿಮಾ ಆಗುವ ಎಲ್ಲಾ ಸಾಧ್ಯತೆಗಳಿವೆ ಅಂತ ಹೇಳಿ ಪ್ರೋತ್ಸಾಹಿಸಿದ್ದೇ ರಕ್ಷಿತ್. ಈ ಸಿನಿಮಾ ಆಗುತ್ತಿರುವುದಕ್ಕೆ ಮೊದಲ ಕಾರಣ ಅವರೇ. ಎರಡನೆಯ ಕಾರಣ ಛಾಯಾಗ್ರಾಹಕ ಜಿ ಎಸ್ ಭಾಸ್ಕರ್ ಅವರ ಭರವಸೆಯ ಮಾತುಗಳು ಮತ್ತು ಕೊನೆಯದಾಗಿ ಅನಂತನಾಗ್ ಅವರು ಈ ಸ್ಕಿ್ರಪ್ಟ್ ಓದಿ ಮೆಚ್ಚಿಕೊಂಡು ಬೆನ್ನುತಟ್ಟಿ ನಟಿಸಲು ಒಪ್ಪಿಕೊಂಡಿದ್ದು.
ಅನಂತನಾಗ್ ನೀವು ಸಿನಿಮಾಗೆ ಆರಿಸಿಕೊಂಡಿರುವ ವಿಷಯದ ತುಂಬಾ ಖುಷಿಯಿಂದ ಮಾತಾಡುತ್ತಿದ್ದರು. ಅವರ ಪಾತ್ರದ ಬಗ್ಗೆ ಹೇಳಿ.
ಈ ಸಿನಿಮಾದಲ್ಲಿರುವ ಏಕೈಕ್ ಸ್ಟಾರ್ ಅನಂತ್ ಸಾರ್. ಅವರು ಇಲ್ಲಿ ಹೆರಾಲ್ಡ್ ಎನ್ನುವ ಕ್ರಿಶ್ಚಿಯನ್ ಪಾದ್ರಿಯ ಪಾತ್ರವೊಂದನ್ನ ಮಾಡುತ್ತಿದ್ದಾರೆ. ಸದ್ಯಕ್ಕೆ ಇಷ್ಟೇ ಹೇಳಬಲ್ಲೆ.
ಏನಿದು ‘ಆಬ್ರಕಡಾಬ್ರ’? ಯಾಕೀ ಈ ಶೀರ್ಷಿಕೆ?
ಈ ಸಿನಿಮಾದ ಕತೆಗೆ ಈ ಶಿರ್ಷಿಕೆಯೇ ಸೂಕ್ತ ಅನಿಸಿತು. ಆಬ್ರಕಡಾಬ್ರ ಎಂಬ ಪದಕ್ಕೆ ಅನೇಕ ಅರ್ಥಗಳಿವೆ. ನಾನು ಲೆಟ್ ದೇರ್ ಬಿ ಲೈಟ್ ಎಂಬ ಅರ್ಥವನ್ನು ಮುಂದಿಟ್ಟುಕೊಂಡಿದ್ದೇನೆ.
ಅನಂತ್‌ನಾಗ್ ಹೊಸ ಸಿನಿಮಾ ಆಬ್ರಕಡಾಬ್ರಉತ್ಸಾಹಿ ಹುಡುಗನ ಕನಸು: ಅನಂತನಾಗ್
ಶಿಶಿರ್ ರಾಜ್‌ಮೋಹನ್ ಶೂಟಿಂಗು ಮಾಡುತ್ತಿರುವ ಕ್ರಮವೇ ಹೊಸತು. ಐದು ಎಳೆಗಳು ಒಂದು ಕೂಡಿಕೊಂಡು ಒಂದು ಕತೆಯಾಗುವಂಥ ಚಿತ್ರಕತೆಯನ್ನು ಅವರು ಬರೆದಿದ್ದಾರೆ. ಈ ಕತೆಯಲ್ಲಿ ನಾನು ಹೆರಾಲ್ಡ್ ಎಂಬ ಧರ್ಮಭೀರು ಕ್ರಿಶ್ಚಿಯನ್ ಪಾತ್ರ ಮಾಡುತ್ತಿದ್ದೇನೆ. ಈ ಚಿತ್ರದಲ್ಲಿ ನನಗೆ ಮಾತು ಹೆಚ್ಚಿಗೆ ಇಲ್ಲ. ನಾನು ಚಿತ್ರಕತೆ ಓದಿಕೊಂಡು ನನ್ನ ಮಾತುಗಳನ್ನು ಮನಸ್ಸಿನಲ್ಲೇ ಮೆಲುಕು ಹಾಕುತ್ತಾ, ಆ ಮಾತುಗಳು ನನ್ನಲ್ಲಿ ಹುಟ್ಟಿಸುವ ಭಾವನೆಯನ್ನು ಪಾತ್ರ ಮುಖದ ಮೇಲೆ ತೋರ್ಪಡಿಸಬೇಕು. ಮಾತಿನ ಮೂಲಕ ಅಲ್ಲ, ಮುಖಭಾವದ ಮೂಲಕ ಮಾತಾಡಬೇಕು. ಇದು ನನಗೂ ಹೊಸದು. ಅದು ಹೇಗೆ ಬರುತ್ತದೆ ಅಂತ ನನಗೆ ಗೊತ್ತಾಗುತ್ತಿಲ್ಲ. ಹೀಗಾಗಿ ಪ್ರತಿಯೊಂದು ದೃಶ್ಯದಲ್ಲೂ ಮಾತು ಮತ್ತು ಮುಖಭಾವ ಎರಡನ್ನೂ ಶೂಟ್ ಮಾಡುವಂತೆ ಹೇಳಿದ್ದೇನೆ.
ಶಿಶಿರ್ ತುಂಬ ಆಳವಾಗಿ ಅಭ್ಯಾಸ ಮಾಡಿ ಈ ಕತೆಯನ್ನು ಬರೆದಿದ್ದಾರೆ. ತುಂಬ ಡೆಪ್‌್ತ ಇರುವಂಥ ಕತೆಯಿದು. ಉತ್ಸಾಹಿ ಹುಡುಗರ ಜೊತೆ ಕೆಲಸ ಮಾಡುವ ನಮಗೂ ಉತ್ಸಾಹ ಬರುತ್ತದೆ. ಸಿಂಕ್ ಸೌಂಡ್ ಬಳಸುತ್ತಿದ್ದಾರೆ. ಆಯಾ ಪಾತ್ರಕ್ಕೆ ಹೊಂದುವ ಸ್ಥಳೀಯ ಕಲಾವಿದರನ್ನೇ ಬಳಸುತ್ತಿದ್ದಾರೆ. ಬ್ರಿಜ್ ಸಿನಿಮಾ ಅಂತ ಕರೀತಾರಲ್ಲ, ಆ ಮಾದರಿಯ ಸಿನಿಮಾ ಇದು.